ನಕ್ಕೋಂತ ಇರಲು ಕಲಿಸಿದ ಸಿದ್ಧೇಶ್ವರ ಶ್ರೀ, ‘ಶಾಶ್ವತ ಇರುವಿಕೆ’ಯ ಇಲ್ಲವಾಗಿಸಿ ಹೋದರು!

3 years ago

ನಕ್ಕೋಂತ ಇರಲು ಕಲಿಸಿದ ಸಿದ್ಧೇಶ್ವರ ಶ್ರೀ, ‘ಶಾಶ್ವತ ಇರುವಿಕೆ’ಯ ಇಲ್ಲವಾಗಿಸಿ ಹೋದರು!

ಎಂ.ಬಿ. ಪಾಟೀಲರಿಗೆ ಇವರೇ ನಿಜ ಪ್ರೇರಣೆ..

ರಾಜಕಾರಣ ಏನೇ ಇರಲಿ ಈ ಮೂರು ದಿನಗಳಲ್ಲಿ ಇವರುಗಳು ತೋರಿದ ನಡುವಳಿಕೆ ಮಾತ್ರ ನಿಜಕ್ಕೂ ಮಾದರಿ. ಎಂ.ಬಿ.ಪಾಟೀಲ್ ಅವರಂತೂ ಒಂದಿನಿತೂ ಪ್ರಚಾರ ಬಯಸದೇ ತಮ್ಮೊಳಗಿನ ನೋವಿನೊಂದಿಗೇ ಇಡೀ ಅಂತಿಮ ಯಾತ್ರೆಯ ಕಾರ್ಯಗಳು ಸುಗಮವಾಗುವಂತೆ ಶ್ರಮಿಸಿದರು. ಇವರ ನೀರಾವರಿ ಕಾರ್ಯಗಳನ್ನು ಸಿದ್ದೇಶ್ವರ ಶ್ರೀ ತುಂಬ ಮೆಚ್ಚಿದ್ದರು. ‘ನಮ್ಮ ಬಿಜಾಪುರ ಮಂದೀಗಿ ಒಂದು ಬೊಗಸೆ ನೀರು ಕೊಡ್ರಿ.. ಇದು ಕ್ಯಾಲಿಫೋರ್ನಿಯಾ ಆಗುತ್ತದೆ. ಇಲ್ಲಿನವರು ಹೊಲಗಳಿಗೆ ನೀರು ಹರಿಸುವುದಿಲ್ಲ, ಉಣ್ಣಿಸುತ್ತಾರೆ. ಅವನ್ನು ಸದುಪಯೋಗ ಪಡಿಸಿಕೊಳ್ಳುತ್ತಾರೆ.. ಬೆಳೆಯುತ್ತಾರೆ’ ಎಂದು ಸಿದ್ದೇಶ್ವರ ಶ್ರೀ ಎಂಬಿ ಪಾಟೀಲರಿಗೆ ಹೇಳುತ್ತಿದ್ದರು.
ಹಾಗೆ ಎಂಬಿ ಅವರೂ ಬಿಜಾಪುರ ಅಷ್ಟೇ ಅಲ್ಲದೇ ರಾಜ್ಯದ ತುಂಬ ಕೆಲಸ ಮಾಡಿದರು. ಈ ಭಾಗ ಎಂದೂ ಕಾಣದಷ್ಟು ನೀರೂ ಕಂಡಿತು. ಸಿದ್ದೇಶ್ವರ ಶ್ರೀಗಳು ಹೇಳಿದಂತೆ ಎಲ್ಲೆಡೆ ಹಸಿರಿನ ಚಿತ್ರಣ ಈಗ ನಮ್ಮ ಮುಂದಿದೆ. ಶ್ರೀಗಳಿಗೆ ಕೃಷಿ, ರೈತನ ಸ್ಥಿತಿ ಬಗ್ಗೆ ಬಹಳ ಕಳಕಳಿ. ಬಿಜಾಪುರದ ರೈತಾಪಿ ಜನಗಳ ಬಗ್ಗೆ ಎಲ್ಲಿಲ್ಲದ ಪ್ರೇಮ. ಅದೆಲ್ಲ ಅವರ ಪ್ರವಚನದಲ್ಲಿ ಹೇಳುತ್ತಲೇ ಇದ್ದರು. ಅವರು ರಾಜಕಾರಣಿಗಳನ್ನು ಕೂಡಿಸಿಕೊಂಡು ಅಭಿವೃದ್ಧಿ ಪರ ಚಿಂತನೆ ಬಿತ್ತುತ್ತಿದ್ದರು. ನೀವೊಂದಿಷ್ಟೇ ಕೆಲಸ ಮಾಡಿ, ಜನ ಸುಧಾರಿಸುತ್ತಾರೆ ಅಂತ ಅವರದೇ ರೀತಿಯಲ್ಲಿ ಮನಕ್ಕೆ ತಾಗಿಸುತ್ತಿದ್ದರು.
ಇಂಡಿಯಲ್ಲಿ ನಡೆದ ಪ್ರವಚನ ವೇಳೆ ಸಂಜೆ ನಡೆವ ಸತ್ಸಂಗದಲ್ಲಿ ಅಲ್ಲಿನ ಶಾಸಕ, ಅಧಿಕಾರಿಗಳನ್ನು ಒಳಗೊಂಡು ಏನೇನು ಕೆಲಸ ನಡೆದಿವೆ ಅಂತ ಚರ್ಚೆಯಾಗಿದ್ದನ್ನು ನಾನೇ ಕಂಡಿದ್ದೇನೆ. ಹಾಗೆ ಅವರು ಪ್ರತಿ ಊರಲ್ಲಿ ಸಣ್ಣಗೆ ಹರಿವ ತಿಳಿ ನೀರಿನಂತೆ ಯಾರಿಗೂ ಗೊತ್ತಾಗದ ಹಾಗೆ ಇದೆಲ್ಲ ಮಾಡುತ್ತಲೇ ಇದ್ದರು. ಬದುಕನ್ನು ಸರಳಗೊಳಿಸಿಕೊಂಡು ಬದುಕುವ ಪರಿಗೆ ಅವರು ಗುಬ್ಬಿ, ಕಾಗೆ, ಪ್ರಕೃತಿಯ ಉದಾಹರಿಸಿ ಹೇಳುತ್ತಿದ್ದರು. ಅವರು ಅಬ್ಬರವಿಲ್ಲದೆ ಹರಿವ ನೀರಾಗಿ ದಂಡೆ ಮುಟ್ಟುವ ‘ಮಹಾ ಮನುಜ’ರಾಗಿದ್ದರು.
ಹಾಗೆ ತಣ್ಣಗೆ ಹರಿಯುತ್ತ ನಡೆಯುತ್ತ ಹಣ್ಣಾಗುತ್ತಲೇ ಹೋದರು. ಕೆಲವರು ಇವರಿಂದ ‘ಇನ್ನಷ್ಟು’ ಬಯಸಿದ್ದರೂ ಇವರು ಮಾತ್ರ ಜುಳು ಜುಳು ಹರಿವ ನದಿಯಾಗೇ ಉಳಿದರು; ಯಾವ ಅಬ್ಬರವೂ ಇರಲಿಲ್ಲ. ಇದೆಲ್ಲವನ್ನೂ ನಾನೀಗ ಅವರು ಬಯಲಾದ ಜಾಗದಲ್ಲಿ, ಅವರ ಮುಂದೇ ಕುಂತು ಬರೆಯುತ್ತಿದ್ದೇನೆ. ಸಿದ್ದೇಶ್ವರ ಶ್ರೀಯಿಂದ ನಾನು ನನಗೆ ಏನು ಅಗತ್ಯವಿತ್ತೋ ಅದನ್ನು ಕಲಿತಿದ್ದೇನೆ, ಅರಿತಿದ್ದೇನೆ. ಬಾಳನ್ನು ಸುಂದರ-ಸ್ವಚ್ಛ-ಸರಳಗೊಳಿಸಿಕೊಂಡಿದ್ದೇನೆ. ಆ ಪ್ರಯತ್ನ ಇನ್ನೂ ಜಾರಿಯಲ್ಲಿದೆ.. ‘ನೀವು ಛೊಲೊ ಬರೀತೀರಿ ಬರೆಯೋದು ನಿಲ್ಲಿಸಬ್ಯಾಡ್ರಿ ಬರಕೋಂತ ಇರ್ರಿ’ ಅಂತ ನನಗೆ ಹೇಳಿದ್ದರು. ಮೊನ್ನೆಯೂ ಅವರು ಇದನ್ನು ಕೊನೆಯದಾಗಿ ನೆನಪು ಮಾಡಿದ್ದರು.
..
ಅವರು ಬಸವಾದಿ ಶರಣರನ್ನು ಆರಾಧಿಸಿದ್ದಾರೆ, ಪ್ರವಚನದಲ್ಲೂ ಮತ್ತೆ ಮತ್ತೆ ಹೇಳಿದ್ದಾರೆ. ಅಲ್ಲಮರನ್ನು ಒಂದುಗೊಳಿಸಿಕೊಂಡಿದ್ದಾರೆ. ಅವರ ಕಠಿಣ ವಚನಗಳನ್ನು ಬಿಡಿಸಿದ್ದಾರೆ. ಬರೆದು, ಜನಕ್ಕೂ ಕೊಟ್ಟಿದ್ದಾರೆ. ಅಲ್ಲಮರು ಹೇಳಿದಂತೇ ಕೊನೆಗೆ ಶೂನ್ಯವೇ ತಾವಾಗಿದ್ದಾರೆ. ಬಯಲಲ್ಲೇ ಬಯಲಾಗಿದ್ದಾರೆ. ಇದಕ್ಕಿನ್ನ ಏನು ಬೇಕು?
“ಎಲ್ಲರಿಂದಲೂ ಎಲ್ಲವನ್ನೂ ಎಲ್ಲ ಕಾಲಕ್ಕೂ ನಿರೀಕ್ಷೆ ಮಾಡಬಾರದು” ಎನ್ನೋದು ನನ್ನ ಭಾವ. ಸಿದ್ದೇಶ್ವರ ಶ್ರೀ ನಮಗೆ ‘ಸಿಕ್ಕಷ್ಟು’ ಅವರು ದಕ್ಕುತ್ತಾರೆ!
ತಮಗೆ ಈ ಅಕ್ಷರಗಳ ಅಂತಿಮ ನಮನ ಬಿಜಾಪುರ ನೆಲದ ಮಣ್ಣಿನ ಗುರುವೇ.
..
ಇನ್ನೊಂದು; ಹಾಗೆಯೇ ಶಾಸಕ ಬಸವನಗೌಡ ಪಾಟೀಲ ಯತ್ನಾಳರು ಅಂತಿಮ ಕಾರ್ಯಗಳಲ್ಲಿ ಅವಿರತವಾಗಿ ಓಡಾಡಿದರು. ಪಾಪ ಅವರಿಗೆ ಸಂಜೆ ಕಾಲು ಎತ್ತಿಡಲಾರದಷ್ಟು ದಣಿವಿತ್ತು. ಇವರಿಗೆ ಸಿದ್ದೇಶ್ವರ ಶ್ರೀ ಎಂದರೆ ಬಹಳ ಪ್ರೀತಿ. ಎಂ.ಬಿ. ಪಾಟೀಲರ ಜತೆ ಬಂದ ಅಷ್ಟೂ ಜನಕ್ಕೆ ದಾಸೋಹ ನೀಡಿದ್ದು ಮಹತ್ತರ ಕಾರ್ಯಯವೇ ಸರಿ. ಈ ಇಬ್ಬರು ಬಿಜಾಪುರದ ನಾಯಕರು ಜಿಲ್ಲೆಯ ಮಮತೆಯನ್ನು ಎಲ್ಲೆಡೆಗೂ ಹಂಚಿದರು. ಆಶ್ರಮದ ಮನೆಯ ಮಕ್ಕಳಂತೆ ನಿಂತು ಸಾರ್ಥಕತೆ ಮೆರೆದರು. ಇವರೂ ಸೇರಿ ಜಿಲ್ಲಾಡಳಿತ, ರಾಜ್ಯ ಸರಕಾರ ಸಂಯಮ, ಶಿಸ್ತು ಪ್ರದರ್ಶಿಸಿತು. ಪೊಲೀಸರಂತೂ ಭಾಳ ಹೈರಾಣಾದದ್ದು ನೋಡಿದೆವು. ಎಲ್ಲರೊಳಗೊಂಡು ‘ಜಂಗಮ’ವಾಗುವುದೆಂದರೆ ಇದೇ ಅಲ್ಲವೇ. ಅದಕ್ಕೆ ಸ್ಥಾವರಕ್ಕಳಿವುಂಟು, ಜಂಗಮಕ್ಕಳಿವಿಲ್ಲ. ಇದನ್ನೇ ಸಿದ್ದೇಶ್ವರ ಶ್ರೀ ಬಯಸಿದ್ದು. ನಿಜ ಜಂಗಮರಾಗಿದ್ದು.
– ಶಿವಕುಮಾರ್ ಉಪ್ಪಿನ, ಬರಹಗಾರ, ಬಿಜಾಪುರ

Leave a Reply