ದೆಹಲಿ: ನೋವು, ಸೋಂಕು ಸಮಸ್ಯೆಗಳನ್ನು ಪರಿಹರಿಸುವ ಹೃದ್ರೋಗ, ರೋಗನಿರೋಧಕ ಔಷದಿಗಳು ಸೇರಿದಂತೆ ಅತ್ಯಗತ್ಯ ಔಷಧಿಗಳ ಬೆಲೆಯಲ್ಲಿ ಶೇ. 20ರಷ್ಟು ಏರಿಕೆಯಾಗುವ ಆತಂಕ ಎದುರಾಗಿದೆ.
ನಿರಂತರವಾಗಿ ಪೆಟ್ರೋಲ್, ಡೀಸೆಲ್, ನೈಸರ್ಗಿಕ ಅನಿಲ ದರ, ಅಡುಗೆ ಎಣ್ಣೆ ಸೇರಿದಂತೆ ಇನ್ನಿತರ ಪದಾರ್ಥಗಳ ದರದಲ್ಲಿ ತೀವ್ರ ಏರಿಕೆಯಿಂದ ಬಳುತ್ತಿರುವ ಬಡವರು ಮತ್ತು ಮಧ್ಯಮ ವರ್ಗದವರು ಇದೀಗ ಆರೋಗ್ಯ ಸಂಬಂಧಿ ಔಷಧಿಗಳ ಬೆಲೆ ಏರಿಕೆಗೆ ಸಜ್ಜಾಗಬೇಕಾದ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಗಿದೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್.ಡಿ.ಎ ಸರ್ಕಾರ ಸಗಟು ದರ ಸೂಚ್ಯಂಕ (ಡಬ್ಲ್ಯುಪಿಐ) ಆಧರಿಸಿ ಬೆಲೆ ಪರಿಷ್ಕರಿಸಲು ಸರಕಾರ ಅವಕಾಶ ಮಾಡಿಕೊಟ್ಟಿದೆ. ಇದರ ಪರಿಣಾಮದಿಂದಾಗಿ ಔಷಧ ಉತ್ಪನ್ನಗಳ ಉತ್ಪಾದಕರು ಬೆಲೆಗಳನ್ನು ಏರಿಕೆ ಮಾಡಲು ಚಿಂತನೆ ನಡೆಸಿದ್ದಾರೆ.
ಔಷಧಿಗಳ ಬೆಲೆಯಲ್ಲಿ ಪ್ರತಿ ವರ್ಷ ಏರಿಕೆ ಮಾಡಲು ರಾಷ್ಟ್ರೀಯ ಔಷಧ ದರ ಪ್ರಾಧಿಕಾರ ಅನುಮತಿ ನೀಡಬೇಕು. ಬೆಲೆ ಏರಿಕೆ ಸಗಟು ದರ ಸೂಚ್ಯಂಕದ ಏರಿಳಿತವನ್ನು ಆಧರಿಸಿ ನಿರ್ಧಾರವಾಗುತ್ತದೆ. ಇದೀಗ ಔಷಧಗಳ ಉತ್ಪಾದನಾ ವೆಚ್ಚ ಶೇ.15-20ರಷ್ಟು ಏರಿಕೆಯಾಗಿದೆ. ಆದ್ದರಿಂದ ಔಷಧಗಳ ಬೆಲೆಯನ್ನು ಶೇ. 20 ಏರಿಕೆ ಮಾಡಲು ಕಂಪನಿಗಳು ಸಿದ್ಧತೆ ನಡೆಸಿವೆ ಎಂದು ವರದಿಯಾಗಿದೆ.
ವಿಶೇಷವೆಂದರೆ, ಹೃದ್ರೋಗ, ಸಕ್ಕರೆ ಕಾಯಿಲೆ ಔಷಧಿ, ರೋಗ ನಿರೋಧಕ, ಸೋಂಕು ನಿವಾರಕಗಳ ಉತ್ಪಾದನೆಗೆ ಅಗತ್ಯವಾದ ಕಚ್ಚಾ ವಸ್ತುಗಳನ್ನು ಭಾರತ ಚೀನಾದಿಂದ ಆಮದುಮಾಡಿಕೊಳ್ಳುತ್ತದೆ. ಇನ್ನು ಕೆಲವು ಔಷಧಿಯ ಕಚ್ಚಾ ವಸ್ತುಗಳಿಗೆ ಚೀನಾ ದೇಶವನ್ನೇ ಭಾರತ ಅವಲಂಬಿಸಿದೆ. ಕೊರೊನಾ ದೇಶದಲ್ಲಿ ದಾಳಿ ಇಟ್ಟ ನಂತರ ಕಚ್ಚಾ ವಸ್ತುಗಳ ಪೂರೈಕೆಯಲ್ಲಿ ಇಳಿಕೆಯಾಗಿದೆ. ಇದರ ಪರಿಣಾಮದಿಂದಾಗಿಯೇ ದರ ಏರಿಕೆಯ ಹೊರೆ ಬೀಳಲಿದೆ.
ಇಷ್ಟು ದಿನಗಳ ಕಾಲ ಅಗತ್ಯ ವಸ್ತುಗಳ ಬೆಲೆ ಏರಿಕೆಯ ಬಿಸಿಯನ್ನು ಅನುಭವಿಸಿದ್ದ ದೇಶದ ನಾಗರಿಕರು, ಇನ್ನು ಮುಂದೆ ಆರೋಗ್ಯಕ್ಕಾಗಿ ಆಸ್ಪತ್ರೆಗೆ, ಮೆಡಿಕಲ್ ಶಾಪ್ ಗಳಿಗೆ ಹೋಗುವ ಸಮಯದಲ್ಲಿ ಕೂಡ ಜೇಬಿಗೆ ಕತ್ತರಿ ಹಾಕಿಸಿಕೊಳ್ಳಲು ಸಜ್ಜಾಗಬೇಕಿದೆ.




