ಬಿಜೆಪಿ ಆಡಳಿತದಲ್ಲಿ ರಾಜ್ಯ ಆರ್ಥಿಕವಾಗಿ ದಿವಾಳಿಯಾಗುತ್ತಿದೆ: ಸಿದ್ದರಾಮಯ್ಯ

5 years ago

ಬೆಂಗಳೂರು: ಬಿಜೆಪಿ ಆಡಳಿತದಲ್ಲಿ ರಾಜ್ಯ ಆರ್ಥಿಕವಾಗಿ ದಿವಾಳಿಯಾಗುತ್ತಿದೆ ಎಂಬ ನಮ್ಮ ಆರೋಪಕ್ಕೆ ಮುಖ್ಯಮಂತ್ರಿಗಳು ಉತ್ತರಿಸಿಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು.

ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಜೆಟ್ ಮೇಲಿನ ನಮ್ಮ ಪ್ರಶ್ನೆಗಳಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ತರಾತುರಿಯಲ್ಲಿ 24 ಪುಟಗಳ ಉತ್ತರ ಓದಿರುವುದು ಸಂತೆಯಲ್ಲಿ ಮಾನ ಉಳಿಸಿಕೊಳ್ಳಲು ಸೊಪ್ಪು-ಸದೆಗಳನ್ನು ಮೈಗೆ ಕಟ್ಟಿಕೊಂಡಂತೆ ಇದೆ. ನಮ್ಮ ಅನೇಕ ಪ್ರಶ್ನೆಗಳಿಗೆ ಮುಖ್ಯಮಂತ್ರಿಗಳು ಉತ್ತರವನ್ನೇ ನೀಡಿಲ್ಲ ಎಂದರು.

ಬಿಜೆಪಿ ಆಡಳಿತದಲ್ಲಿ ರಾಜ್ಯ ಆರ್ಥಿಕವಾಗಿ ದಿವಾಳಿಯಾಗುತ್ತಿದೆ ಎಂಬ ನಮ್ಮ ಆರೋಪಕ್ಕೆ ಮುಖ್ಯಮಂತ್ರಿಗಳು ಉತ್ತರಿಸಿಲ್ಲ. ರಾಜ್ಯದ ಬದ್ಧತಾ ವೆಚ್ಚ ಶೇ.102 ಆಗಿರುವುದನ್ನು ಮುಖ್ಯಮಂತ್ರಿಗಳೇ ಒಪ್ಪಿಕೊಂಡಿದ್ದಾರೆ ಎಂದರು.

ಈ ವರ್ಷ ರೂ.19,485 ಕೋಟಿ ರಾಜಸ್ವ ಕೊರತೆ ಇದೆ. ಕಳೆದ ಬಾರಿ ಬಜೆಟ್ ಮಂಡಿಸುವಾಗ ರೂ.143 ಕೋಟಿ ರಾಜಸ್ವ ಹೆಚ್ಚುವರಿಯಾಗಿತ್ತು. ಈಗ ರಾಜಸ್ವ ಕೊರತೆಯ ಬಜೆಟ್ ಮಂಡಿಸಿದ್ದಾರೆ. ಮುಂದಿನ ವರ್ಷ ಅಂದರೆ 2021-22ನೇ ಸಾಲಿನಲ್ಲಿ ರೂ.15,133 ಕೋಟಿ ರಾಜಸ್ವ ಕೊರತೆ ಆಗಲಿದೆ ಎಂದು ಅಂದಾಜಿಸಲಾಗಿದೆ. ನನ್ನ ಪ್ರಕಾರ ಇದು ರೂ.20,000 ಕೋಟಿ ಮೀರಲಿದೆ. 2022-23ಕ್ಕೆ 28,088 ಕೋಟಿ. 2023-24 ಕ್ಕೆ ರೂ.47,062 ಕೋಟಿ 2024-25 ಕ್ಕೆ ರೂ.57,993 ಕೋಟಿ ರಾಜಸ್ವ ಕೊರತೆಯಾಗಲಿದೆ ಎಂದು ಅಂದಾಜಿಸಲಾಗಿದೆ. ಅಂದರೆ ವರ್ಷದಿಂದ ವರ್ಷಕ್ಕೆ ರಾಜಸ್ವ ಕೊರತೆ ಏರಿಕೆಯಾಗುತ್ತಿದೆ. ಈ ಕೊರತೆಯ ಹಣವನ್ನು ಸಾಲ ಎತ್ತಿ ತುಂಬಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಈ ವರ್ಷ ಮಾಡಿರುವ ರೂ.70,000 ಕೋಟಿ ಸಾಲದಲ್ಲಿ ರೂ.20,000 ಕೋಟಿ ರಾಜಸ್ವ ಕೊರತೆಯನ್ನು ತುಂಬಿಸಿಕೊಳ್ಳಲು ಬಳಕೆ ಮಾಡಲಾಗುತ್ತಿದೆ. ಬದ್ಧತಾ ಖರ್ಚು ಹೀಗೆ ಏರುತ್ತಾ ಹೋದರೆ ರಾಜ್ಯ ದಿವಾಳಿಯಾಗಲಿದೆ ಎಂದು ನಾನು ಬಜೆಟ್ ಮೇಲಿನ ಚರ್ಚೆಯ ಸಂದರ್ಭದಲ್ಲಿ ಹೇಳಿದ್ದೆ. ಇಂತಹಾ ಪರಿಸ್ಥಿತಿ ರಾಜ್ಯಕ್ಕೆ ಇದೇ ಮೊದಲು ಬಂದಿರುವುದು. ಇಂಥವರ ಕೈಲಿ ಸರ್ಕಾರ ನಡೆಸಲು ಆಗುತ್ತಾ? ನಮ್ಮ ಸರ್ಕಾರ ಆಡಳಿತದಲ್ಲಿ ಇದ್ದಾಗ 74-78% ಬದ್ಧತಾ ವೆಚ್ಚ ಇತ್ತು. ಈಗ 102% ಆಗಿದೆ. ಬದ್ಧ ಖರ್ಚನ್ನು ಕಡಿಮೆ ಮಾಡುವ ಯೋಜನೆಗಳ ಬಗ್ಗೆ ಮುಖ್ಯಮಂತ್ರಿಗಳ ಭಾಷಣದಲ್ಲಿ ಯಾವ ಉಲ್ಲೇಖವೂ ಇಲ್ಲ ಎಂದರು.

ಬದ್ಧ ವೆಚ್ಚ ಹೆಚ್ಚಾಗಲು ಅನ್ನಭಾಗ್ಯದ ಅಕ್ಕಿ ನೀಡಿರುವುದು, ರೈತರಿಗೆ ಸಬ್ಸಿಡಿಯಲ್ಲಿ ವಿದ್ಯುತ್ ನೀಡುತ್ತಿರುವುದು, ಕ್ಷೀರಧಾರೆ ಯೋಜನೆಯಡಿ ಸಹಾಯಧನ ನೀಡುತ್ತಿರುವುದು ಕಾರಣ ಎಂದು ಮುಖ್ಯಮಂತ್ರಿಗಳು ಹೇಳಿದ್ದಾರೆ. ಈ ಎಲ್ಲಾ ಯೋಜನೆಗಳು ನಮ್ಮ ಸರ್ಕಾರದ ಅವಧಿಯಲ್ಲಿಯೂ ಇತ್ತು, ಆಗ ಆಗದ ಸಮಸ್ಯೆ ಈಗ ಉದ್ಭವಿಸಿದ್ದು ಹೇಗೆ? ಎಂದು ಪ್ರಶ್ನಿಸಿದರು.

ಕೆಲವು ಹೊಸ ನಿಗಮಗಳನ್ನು ಸ್ಥಾಪನೆ ಮಾಡಿದ್ದು ಬಿಟ್ಟರೆ ಈ ಸರ್ಕಾರ ಯಾವ ಹೊಸ ಕಾರ್ಯಕ್ರಮಗಳನ್ನೂ ಆರಂಭಿಸಿಲ್ಲ. ಬಹುತೇಕ ನಿಗಮಗಳಿಗೆ ಹಣವನ್ನೇ ನೀಡಿಲ್ಲ. ಒಟ್ಟಾರೆ ಯಡಿಯೂರಪ್ಪನವರು ತಪ್ಪು ಮಾಹಿತಿ ನೀಡಿ ಜನರ ದಾರಿ ತಪ್ಪಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಕೇಂದ್ರ ಸರ್ಕಾರದಿಂದ ನಮಗೆ ತೆರಿಗೆ ಪಾಲು ರೂ.28,591 ಕೋಟಿ ಬರಬೇಕಿತ್ತು, ಆದರೆ ಬಂದಿದ್ದು ರೂ.20,053 ಕೋಟಿ ಮಾತ್ರ ಅಂದರೆ ರೂ.8538 ಕೋಟಿ ಬಂದಿಲ್ಲ. ಸಹಾಯಧನ ರೂ.15,538 ಕೋಟಿ ಬರಬೇಕಿತ್ತು, ಬಂದಿದ್ದು ರೂ.14,140 ಕೋಟಿ. ಅಂದರೆ ರೂ.1,310 ಕೋಟಿ ಕಡಿಮೆ ಬಂದಿದೆ ಎಂದರು.

15ನೇ ಹಣಕಾಸು ಆಯೋಗ ಶಿಫಾರಸು ಮಾಡಿದ್ದ ರೂ.5,495 ಕೋಟಿ ವಿಶೇಷ ಅನುದಾನ ಬಂದಿಲ್ಲ. ಜಿ.ಎಸ್.ಟಿ ಪರಿಹಾರಕ್ಕಾಗಿ ರಾಜ್ಯವೇ ಸಾಲ ಮಾಡಿದೆ. ಬಿಜೆಪಿಯ 25 ಸಂಸದರಿದ್ದಾರೆ, ಒಬ್ಬರೂ ಈ ಬಗ್ಗೆ ಮಾತನಾಡಲ್ಲ. ಯಾರಿಗೂ ಕರ್ನಾಟಕದ ಹಿತ ಕಾಯುವ ಬದ್ಧತೆಯಿಲ್ಲದಾಗಿದೆ. ಯಾವ ಅಭಿವೃದ್ಧಿ ಕಾರ್ಯಗಳಿಗೆ ಹಣ ಕೇಳಿದರೂ ಸರ್ಕಾರ ಕೊರೊನಾ ನೆಪ ಹೇಳಿ ತಪ್ಪಿಸಿಕೊಳ್ಳುತ್ತಿದೆ ಎಂದು ಕಿಡಿಕಾರಿದರು.

ಕರ್ನಾಟಕದಿಂದ ಸಂಗ್ರಹವಾಗಿರುವ ಎಲ್ಲಾ ತೆರಿಗೆಗಳ ಒಟ್ಟು ಮೊತ್ತ ಸುಮಾರು ರೂ.2.50 ಲಕ್ಷ ಕೋಟಿ. ಇದರಲ್ಲಿ ನಮಗೆ ವಾಪಾಸು ಬಂದಿರುವುದು ರೂ.34,198 ಕೋಟಿ ಮಾತ್ರ. ರಾಜ್ಯದಿಂದ ಬರೀ ಪೆಟ್ರೋಲಿಯಂ ಉತ್ಪನ್ನಗಳಿಂದಲೇ ರೂ.30,000 ಕೋಟಿ ಅಧಿಕ ತೆರಿಗೆ ಕೇಂದ್ರ ಸರ್ಕಾರಕ್ಕೆ ಸಂಗ್ರಹವಾಗುತ್ತಿದೆ. ಸಾಮಾನ್ಯ ಜನರಿಗೆ ಅನುಕೂಲವಾಗುತ್ತದೆ; ಈ ತೆರಿಗೆಯನ್ನು ಕಡಿಮೆ ಮಾಡಿ ಅಂದರೆ ನರೇಂದ್ರ ಮೋದಿ ಅವರು ಅದಕ್ಕೂ ಸಿದ್ಧರಿಲ್ಲ. ಒಟ್ಟಾರೆ ಕೇಂದ್ರ ಸರ್ಕಾರದಿಂದ ನಮ್ಮ ರಾಜ್ಯಕ್ಕೆ ಬಹುದೊಡ್ಡ ಅನ್ಯಾಯವಾಗಿದೆ. ಇದಕ್ಕೆ ಕೇಂದ್ರ ಸರ್ಕಾರದ ಮಲತಾಯಿ ಧೋರಣೆ ಕಾರಣ ಎಂದು ಆರೋಪಿಸಿದರು.

ಸಾಲ ಜಿ.ಎಸ್.ಡಿ.ಪಿ ಯ 25% ಗಿಂತ ಕಡಿಮೆ ಇರಬೇಕಿತ್ತು, ಇದನ್ನು 2% ಹೆಚ್ಚಳ ಮಾಡಿಕೊಂಡಿದ್ದಾರೆ. ಈಗ ಜಿ.ಎಸ್.ಡಿ.ಪಿ ಯ 26.90% ಸಾಲ ಮಾಡಿದ್ದಾರೆ. ಇದರಿಂದ ರಾಜ್ಯ ದಿವಾಳಿಯಾಗಲಿದೆ. ನಮ್ಮ ಆಡಳಿತಾವಧಿಯಲ್ಲಿ ಸಾಲದ ಹಣವನ್ನು ಸರ್ಕಾರಿ ಆಸ್ತಿಗಳ ವೃದ್ಧಿಗೆ ಬಳಕೆ ಮಾಡುತ್ತಿದ್ದೆವು. ಬಿಜೆಪಿ ಸರ್ಕಾರ ಸಾಲ ಮಾಡಿ ಸಂಬಳ ಕೊಡುವ ಸ್ಥಿತಿಗೆ ಬಂದು ನಿಂತಿದೆ. ಬದ್ಧತಾ ಖರ್ಚನ್ನು ಕಡಿಮೆ ಮಾಡಲು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸಮಗ್ರ ಯೋಜನೆಗಳನ್ನು ರೂಪಿಸಬೇಕಾದ ಅನಿವಾರ್ಯ ಸ್ಥಿತಿ ಇದೆ. ಜೂನ್ 2022 ರಿಂದ ಜಿ.ಎಸ್.ಟಿ ಪರಿಹಾರ ಬರುವುದು ನಿಂತು ಹೋಗಲಿದೆ. ಆಗ ಇನ್ನಷ್ಟು ಹೊರೆಯಾಗಲಿದೆ. ಇದಕ್ಕೆ ಯಡಿಯೂರಪ್ಪನವರ ಬಳಿ ಪರಿಹಾರ ಇದೆಯೇ? ಎಂದು ಪ್ರಶ್ನಿಸಿದರು.

ದೆಹಲಿಯಲ್ಲಿ ಬಿಜೆಪಿ ಸರ್ಕಾರ, ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬಂದರೆ ಡಬಲ್ ಇಂಜಿನ್ ಸರ್ಕಾರವಾಗುತ್ತದೆ, ಕರ್ನಾಟಕ ಸ್ವರ್ಗವಾಗುತ್ತದೆ ಎಂದು ಜನರಿಗೆ ಸುಳ್ಳು ಭರವಸೆ ನೀಡಿದ್ದರು. ಈಗ ನೋಡಿದರೆ ಎರಡೂ ಇಂಜಿನ್ ಗಳೂ ರಿವರ್ಸ್ ಹೋಗುತ್ತಿವೆ ಎಂದು ಕುಹಕವಾಡಿದರು.

ನಮ್ಮ ಸರ್ಕಾರ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ಸಮುದಾಯದ ಜನರಿಗೆ ರೂ.50 ಲಕ್ಷದ ವರೆಗಿನ ಸರ್ಕಾರಿ ಟೆಂಡರ್ ಗಳಲ್ಲಿ ಮೀಸಲಾತಿ ನೀಡಿದ್ದೆವು. ಇಂದು ನಾವು ಸದನದಲ್ಲಿ ಧರಣಿ ಮಾಡುವ ವೇಳೆ ಸರ್ಕಾರ ಪಾರದರ್ಶಕ ಕಾಯ್ದೆಗೆ ತಿದ್ದುಪಡಿ ತಂದು, ಈ ವರ್ಗದ ಜನರಿಗೆ ಟೆಂಡರ್ ಗಳಲ್ಲಿ ಇದ್ದ ಮೀಸಲಾತಿಯನ್ನು ತಪ್ಪಿಸುವ ಹುನ್ನಾರ ಮಾಡಿದೆ. ಇದರಿಂದ ಬಿಜೆಪಿ ಪಕ್ಷ ಮೀಸಲಾತಿ ವಿರೋಧಿ ಎಂಬುದು ಮತ್ತೊಮ್ಮೆ ಸಾಬೀತಾಗಿದೆ ಎಂದು ವಾಗ್ದಾಳಿ ನಡೆಸಿದರು.

Leave a Reply