ಚುನಾವಣಾ ಬಾಂಡ್ ವಿಚಾರದಲ್ಲಿ ಮಾಧ್ಯಮದವರು ಬಾಯಿ ಬಿಡುತ್ತಿಲ್ಲ

2 years ago

ದೇಶದ ವಿರೋಧ ಪಕ್ಷಗಳ ಮೇಲೆ ಸದಾ ಕಾಲ ಭ್ರಷ್ಟಾಚಾರದ ಆರೋಪಗಳನ್ನು ಮಾಡುತ್ತಾ ದೇಶದಲ್ಲಿ ತಾನೊಬ್ಬನೇ ಸತ್ಯಹರಿಶ್ಚಂದ್ರ ಎಂಬ ರೀತಿಯಲ್ಲಿ ಬಿಂಬಿಸಿಕೊಳ್ಳುವ ಬಿಜೆಪಿಯ ನಾಯಕರು ಮತ್ತು ದೇಶದ ಪ್ರಧಾನಿಗಳು ಚುನಾವಣಾ ಬಾಂಡ್ ವಿವರಗಳು ಬಹಿರಂಗವಾಗುತ್ತಿದ್ದಂತೆ ಬೆವತು ಹೋಗಿದ್ದಾರೆ. ಆದರೂ ಅದನ್ನು ತೋರ್ಪಡಿಸಿಕೊಳ್ಳದೆ ಓಡಾಡುತ್ತಿದ್ದಾರೆ.

ಸುಮಾರು 12 ಸಾವಿರ ಕೋಟಿ ರೂಪಾಯಿಗಳ ಬೃಹತ್ ಮೊತ್ತದ ಭ್ರಷ್ಟಾಚಾರದ ಹಣವನ್ನು ನಕಲಿ ಕಂಪನಿಗಳು ಮತ್ತು ಮೋಸಗಾರ ಅನ್ಯಾಯದ ಮೂಲಕ ಸಂಪಾದನೆಯನ್ನು ಮಾಡಿರುವ ಸಂಸ್ಥೆಗಳ ಮೂಲಕ ಹಣವನ್ನು ಸಂಗ್ರಹಿಸಿ, ಅದಕ್ಕೆ ಚುನಾವಣಾ ಬಾಂಡ್ ಎಂಬ ನಾಮಕರಣವನ್ನು ಮಾಡಿ, ಭ್ರಷ್ಟಾಚಾರವನ್ನು ಈ ರೀತಿಯಲ್ಲೂ ಮಾಡಬಹುದು ಎಂಬುದನ್ನು ತೋರಿಸಿಕೊಟ್ಟಂತಹ ಬಿಜೆಪಿಯವರ ಬಣ್ಣವನ್ನ ಬಯಲು ಮಾಡಿದಂತಹ ದೇಶದ ಸರ್ವೋಚ್ಛ ನ್ಯಾಯಾಲಯಕ್ಕೆ ನಾವು ಆಭಾರಿಯಾಗಿರಬೇಕು.

ವಿರೋಧ ಪಕ್ಷಗಳ ಮೇಲೆ ಸಣ್ಣಪುಟ್ಟ ಆರೋಪಗಳು ಅಥವಾ ಆಪಾದನೆಗಳು ಕೆಲಸಕ್ಕೆ ಬಾರದ ಜನಗಳಿಂದ ಕೇಳಿ ಬಂದರೂ ಸಹ ಮಾಧ್ಯಮದ ಸಂಪಾದಕರು ಮತ್ತು ನಿರೂಪಕರು ಸಿಟ್ಟಿನಿಂದ ಮಾತನಾಡುವುದೇನು? ಅವರ ನೈತಿಕತೆಯನ್ನು ಪ್ರಶ್ನಿಸುವುದೇನು? ಜೊತೆಗೆ ಇವರದೇ ಆದಂತಹ ಕೆಲವು ವ್ಯಕ್ತಿಗಳಿಗೆ ಸಂಪರ್ಕವನ್ನು ಮಾಡಿ ಅವರಿಂದ ಬಾಯಿಗೆ ಬಂದಂತೆ ಮಾತನಾಡಿಸುವ ಇವರುಗಳಿಗೆ ಬಾಂಡ್ ವಿಚಾರದಲ್ಲಿ ಬಾಯಿ ಬಿಡಲು ಆಗುತ್ತಿಲ್ಲ. ಏಕೆಂದರೆ ಬಹಳಷ್ಟು ಸುದ್ದಿ ಮಾಧ್ಯಮಗಳು ಮತ್ತು ಪತ್ರಿಕೆಯವರು ಬಿಜೆಪಿಯ ಅಂಗ ಸಂಸ್ಥೆಯಾಗಿ ಅವರ ವಕ್ತಾರರಾಗಿ ಮಾತುಗಳನ್ನ ಆಡುತ್ತಾ ಪಕ್ಷಕ್ಕೆ ತಮ್ಮ ನಿಷ್ಠೆಯನ್ನ ತೋರಿಸುತ್ತಾರೆ. ಇದರಿಂದಾಗಿ 12 ಸಾವಿರ ಕೋಟಿ ರೂಪಾಯಿಗಳ ಚುನಾವಣಾ ಬಾಂಡ್ ವಿಚಾರದಲ್ಲಿ ಬಾಯಿ ಬಿಡಲು ಆಗುತ್ತಿಲ್ಲ. ಒಂದೊಮ್ಮೆ ಬಾಯಿ ಬಿಟ್ಟರೆ ತನಿಖಾ ಸಂಸ್ಥೆಗಳು ಇವರ ಮನೆಯ ಬಾಗಿಲು ತಟ್ಟುತ್ತವೆ ಎಂಬ ಭಯವೂ ಇದೆ.

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಫೋಟೋ

ಜೊತೆಗೆ ಇಂತಹ ಮಾಧ್ಯಮಗಳನ್ನು ಚೆನ್ನಾಗಿ ಆರೈಕೆ ಮಾಡುವುದರಲ್ಲಿ ಬಿಜೆಪಿಯವರು ನಿಪುಣರಾಗಿದ್ದಾರೆ. ಆದುದರಿಂದ ಪ್ರಜಾಪ್ರಭುತ್ವದ ನಾಲ್ಕನೇ ಅಂಗ ಎಂಬ ಕೀರ್ತಿಗೆ ಪಾತ್ರವಾಗಿರುವ ಮಾಧ್ಯಮ ತನ್ನ ಕರ್ತವ್ಯವನ್ನ ಮರೆತಿದೆಯೋ ಅಥವಾ ಬಿಜೆಪಿಯವರಿಗೆ ತಮ್ಮನ್ನು ಸಮರ್ಪಿಸಿಕೊಂಡಿದ್ದಾರೋ ಅರ್ಥವಾಗುತ್ತಿಲ್ಲ.

ಮಾಧ್ಯಮದವರಿಗೆ ಆತ್ಮಸಾಕ್ಷಿ ಇದ್ದರೆ, ಬದ್ಧತೆ ಇದ್ದರೆ ಇದಕ್ಕೊಂದು ಧರ್ಮವಿದೆ ಎನ್ನುವ ಅರಿವು ಇದ್ದರೆ, ಚುನಾವಣಾ ಬಾಂಡ್ ವಿಚಾರದಲ್ಲಿ ಬಿಜೆಪಿ ಸೇರಿದಂತೆ ಯಾವುದೇ ರಾಜಕೀಯ ಪಕ್ಷ ಮಾಡಿರುವಂತಹ ಅಕ್ರಮಗಳ ಬಗ್ಗೆ ಮಾತನಾಡಬೇಕು. ಇಲ್ಲದಿದ್ದರೆ ನೇರವಾಗಿ ಬಿಜೆಪಿಯ ಅಂಗ ಸಂಸ್ಥೆ ನಮ್ಮ ಚಾನೆಲ್ ಎಂದು ಹೇಳುತ್ತಾ ಬಿಜೆಪಿಯ ಧ್ವನಿಯಾಗಿ ನೇರವಾಗಿ ಕರ್ತವ್ಯವನ್ನ ಮಾಡಲಿ.

ಮಾಧ್ಯಮದವರಿಗೆ ಚುನಾವಣಾ ಬಾಂಡ್ ವಿಚಾರದಲ್ಲಿ ಬಿಜೆಪಿಯವರ ಅಕ್ರಮಗಳ ಬಗ್ಗೆ ಕಣ್ಣು ಮಂಜಾಗಿದ್ದರೆ ಸೂಕ್ತ ಚಿಕಿತ್ಸೆಯನ್ನು ಪಡೆದುಕೊಳ್ಳಲಿ. ಕಿವಿ ಕಿವುಡಾಗಿದ್ದರೆ ಅದಕ್ಕೂ ಚಿಕಿತ್ಸೆ ಪಡೆದುಕೊಳ್ಳಲಿ. ಮಾತನಾಡಲು ಗಂಟಲು ಬೇರೆ ಇದ್ದರೆ ಅದಕ್ಕೂ ಚಿಕಿತ್ಸೆಯನ್ನ ಪಡೆದುಕೊಳ್ಳಲಿ. ಇವು ಯಾವುದು ಇಲ್ಲ ಎನ್ನುವುದಾದರೆ ಕೂಡಲೇ ಪತ್ರಿಕಾ ಧರ್ಮವನ್ನು ಅನುಸರಿಸಿ ಚುನಾವಣಾ ಬಾಂಡ್ ಹಣದ ಸಂಗ್ರಹದ ವಿಚಾರದಲ್ಲಿ ತಮ್ಮ ಪ್ರಮಾಣಿಕತೆಯನ್ನು ಮಾತುಗಳ ಮೂಲಕ ವ್ಯಕ್ತಪಡಿಸಲಿ.

– ಕೆಎಸ್ ನಾಗರಾಜ್, ಬೆಂಗಳೂರು

Leave a Reply