ಬಿಜೆಪಿಗೆ 543 ಸ್ಥಾನವನ್ನು ಗೆಲ್ಲಿಸಿಕೊಟ್ಟುಬಿಡಿ
ನಮ್ಮ ದೇಶದ ಅನೇಕ ದೃಶ್ಯ ಮಾಧ್ಯಮಗಳು ಮತ್ತು ಕನ್ನಡ ವಾಹಿನಿಗಳು ಚುನಾವಣೆ ಇನ್ನೂ ನಾಮಪತ್ರ ಸಲ್ಲಿಕೆಯ ವಿಚಾರವಿರಲಿ ಇನ್ನು ಅಭ್ಯರ್ಥಿಗಳ ಆಯ್ಕೆ ಆಗಿರುವುದಿಲ್ಲ. ಆಗಲೇ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ನಾನೂರಕ್ಕೂ ಹೆಚ್ಚು ಸ್ಥಾನಗಳು ಬರುತ್ತದೆಂದು ಹೇಳುತ್ತಾ ಜೊತೆಗೆ ವಿರೋಧ ಪಕ್ಷಗಳ ಗೆಲುವಿನ ಸಂಖ್ಯೆಯನ್ನು ಪ್ರತಿದಿನವೂ ಕಡಿತಗೊಳಿಸುತ್ತಾ ಮತದಾರರ ಮನಸ್ಸಿನಲ್ಲಿ ಗೊಂದಲವನ್ನ ಸೃಷ್ಟಿಸುತ್ತಾ ಪರೋಕ್ಷವಾಗಿ ಪ್ರಜಾಪ್ರಭುತ್ವದ ಆಶಯಗಳನ್ನು ಮತ್ತು ಮತದಾರರ ಭಾವನೆಗಳನ್ನು ಕಡೆಗಣಿಸುತ್ತಿದ್ದಾರೆ.
- ಪ್ರೊ. ಎಸ್. ಬಿಳಿಗಿರಿ ವಾಸನ್ ಅವರಿಗೆ ಅಭಿನಂದನಾ ಸಮಾರಂಭ
- ಬಸವಣ್ಣನವರ ವಚನಗಳು ವಿಶ್ವವಿದ್ಯಾಲಯಗಳು ಹೇಳಿಕೊಡುವ ಪಾಠಕ್ಕಿಂತ ಕಡಿಮೆಯಲ್ಲ: ಸಾಜೀದ್ ಮುಲ್ಲಾ
- ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಮಸೂದೆ ಅಂಗೀಕಾರವಾಗಿದೆ
- ಮಹಿಳಾ ಮೀಸಲಾತಿ ವಿಷಯದಲ್ಲಿ ಮೋದಿ ಸರ್ಕಾರದಿಂದ ಮಹಿಳೆಯರಿಗೆ ದ್ರೋಹ: ಸಿದ್ದರಾಮಯ್ಯ
- ಕಾಂಗ್ರೆಸ್ಗೆ ಮಹಿಳಾ ಮೀಸಲಾತಿ ಬೇಕಿಲ್ಲ ಎಂಬುದು ಸ್ಪಷ್ಟ: ಬಸವರಾಜ ಬೊಮ್ಮಾಯಿ
ಹತ್ತು ವರ್ಷಗಳ ಕಾಲ ಕೇಂದ್ರದಲ್ಲಿ ಆಡಳಿತ ನಡೆಸಿರುವ ಸರ್ಕಾರಕ್ಕೆ ಯಾವುದೇ ರೀತಿಯ ತಪ್ಪುಗಳನ್ನು ಜನರ ಮುಂದೆ ಇಡದೆ ಸರ್ಕಾರ ಎಲ್ಲವೂ ಸರಿಯಾದ ದಾರಿಯಲ್ಲಿಯೇ ಮುನ್ನಡೆಸಿದೆ ಎನ್ನುವ ರೀತಿಯಲ್ಲಿ ಬಿಂಬಿಸುತ್ತಿರುವುದು ಮಾಧ್ಯಮದವರ ದಿವಾಳಿತನದ ಸಂಕೇತವಾಗಿದೆ. ತಮ್ಮ ಜವಾಬ್ದಾರಿಯನ್ನ ಮರೆತು ಸ್ವಾರ್ಥಿಗಳಾಗಿರುವುದು ನಾಚಿಕೆಗೇಡಿನ ಸಂಗತಿ.
ಹತ್ತಾರು ಸಾವಿರ ಕೋಟಿ ರೂಪಾಯಿಗಳ ಚುನಾವಣೆ ಬಾಂಡ್ ಗಳ ಬಗ್ಗೆ ಒಮ್ಮೆಯೂ ಮಾತನಾಡುವುದಿಲ್ಲ
ಪ್ರತಿಯೊಬ್ಬ ಭಾರತೀಯರ ಖಾತೆಗೆ 15 ಲಕ್ಷ ರೂಪಾಯಿಗಳನ್ನು ಹಾಕುತ್ತೇವೆಂದು ಹೇಳಿದ ಮಾತನ್ನು ನೆನಪಿರುವುದಿಲ್ಲ
ಪ್ರತಿ ವರ್ಷ ಎರಡು ಕೋಟಿ ಉದ್ಯೋಗವನ್ನು ಕಲ್ಪಿಸಿ ಕೊಡುತ್ತೇವೆಂದು ಭರವಸೆ ಕೊಟ್ಟ ಮಾತನ್ನು ಈಡೇರಿಸದಿದ್ದರೂ ಅದನ್ನು ನೆನಪಿಸುವುದೇ ಇಲ್ಲ
ಪಕ್ಷಾಂತರ ಎಂಬ ವಿಚಾರಕ್ಕೆ ಆಪರೇಷನ್ ಕಮಲ ಎನ್ನುವ ನೀಚ ಸಂಸ್ಕೃತಿಯನ್ನು ಅನುಷ್ಠಾನಗೊಳಿಸಿ ಅನೇಕ ರಾಜ್ಯಗಳಲ್ಲಿ ವಿವಿಧ ಪಕ್ಷದ ಸರ್ಕಾರಗಳನ್ನು ಅಸ್ಥಿರಗೊಳಿಸಿ ನೂರಾರು ಚುನಾಯಿತ ಪ್ರತಿನಿಧಿಗಳನ್ನು ಪಕ್ಷಾಂತರ ಮಾಡಿಸಿಕೊಂಡರು ಇಂತಹ ಪ್ರಜಾಪ್ರಭುತ್ವ ವಿರೋಧಿ ವಿಚಾರಗಳ ಬಗ್ಗೆ ಮಾತನಾಡುವುದಿಲ್ಲ
ವಿರೋಧ ಪಕ್ಷದಲ್ಲಿದ್ದಾಗ ಭ್ರಷ್ಟಾಚಾರಿಗಳು, ಪರಿವಾರದ ರಾಜಕಾರಣಿಗಳು ಅಯೋಗ್ಯರು ಎಂದು ಅಬ್ಬರಿಸಿ ಅಂತಹ ಅಯೋಗ್ಯರನ್ನು ಭ್ರಷ್ಟರನ್ನು ಪರಿವಾರದ ಮಂದಿಯನ್ನು ತಮ್ಮ ಪಕ್ಷಕ್ಕೆ ಸೇರಿಸಿಕೊಂಡು ಅವರನ್ನು ತಮ್ಮ ಪಕ್ಷದ ನಾಯಕರೆಂದು ಮತ್ತೆ ಬಿಂಬಿಸಿಕೊಳ್ಳುವ ಇವರ ಕೀಳು ರಾಜಕಾರಣವನ್ನ ಪ್ರಶ್ನಿಸುವುದೇ ಇಲ್ಲ
ಆಹಾರ ಪದಾರ್ಥಗಳ ಬೆಲೆಗಳು ಏರಿಕೆಯಾಗಿರುವುದರ ಬಗ್ಗೆ, ನಿರುದ್ಯೋಗದ ಬಗ್ಗೆ, ಹಣ ದುಬ್ಬರದ ಬಗ್ಗೆ, ದೇಶದ ಸಾಲದ ಮೊತ್ತ 183 ಲಕ್ಷ ಕೋಟಿ ರೂಪಾಯಿಗೆ ಮುಟ್ಟಿರುವುದರ ಬಗ್ಗೆ ಮಾತನಾಡುವುದಿಲ್ಲ
ಬರಗಾಲಕ್ಕೆ ಬಿಡಿ ಕಾಸು ಕೊಡಲಿಲ್ಲ. ನಾವು ಕೇಂದ್ರಕ್ಕೆ ನೀಡುವ ತೆರಿಗೆ ಹಣದಲ್ಲಿ ನಮಗೆ ನ್ಯಾಯವಾಗಿ ಕೊಡಬೇಕಾಗಿರುವ ಪಾಲು ಕೊಡಲಿಲ್ಲ. ಸಂಕಷ್ಟದ ಸಮಯದಲ್ಲಿ ರಾಜ್ಯದ ಕಡೆ ತಿರುಗಿ ನೋಡಲಿಲ್ಲ. ಆದರೂ ಪ್ರಚಾರಕ್ಕೆ ಮಾತ್ರ ಪದೇಪದೇ ರಾಜ್ಯಕ್ಕೆ ಬಂದು ಜನರತ್ತ ಕೈಬೀಸಿ ಸಂಭ್ರಮಿಸುವಾಗ ಬಾಡಿಗೆ ಜನರ ಮೂಲಕ ಹೂವನ್ನು ಸುರಿಸಿಕೊಳ್ಳುವುದರ ಮೂಲಕ ಮೆರೆಯುವ ಸಂದರ್ಭದಲ್ಲಿ ರಾಜ್ಯದ ವಿಚಾರಗಳ ಬಗ್ಗೆ ಮಾತನಾಡುವುದೇ ಇಲ್ಲ
ರಾಜ್ಯದಲ್ಲಿ ನಿರ್ಮಾಣವಾಗುವ ಶೌಚಾಲಯಗಳು, ಕುಡಿಯುವ ನೀರಿನ ನಲ್ಲಿಗಳು, ವಿದ್ಯುತ್ ದೀಪಗಳು ಎಲ್ಲವೂ ಕೇಂದ್ರದ್ದೇ ಎಂದು ಸುಳ್ಳು ಪ್ರಚಾರವನ್ನು ಮಾಡುವ ವಿಚಾರಗಳ ಬಗ್ಗೆ ಮಾತನಾಡುವುದಿಲ್ಲ
ಕೇಂದ್ರದ ಯೋಜನೆಗಳಲ್ಲಿ ರಾಜ್ಯ ಸರಕಾರದ ಹೆಚ್ಚಿನ ಪಾಲು ಇದ್ದರೂ ಇವೆಲ್ಲವೂ ಕೇಂದ್ರದ ಕೊಡುಗೆ ಎಂದು ನಾಚಿಕೆ ಇಲ್ಲದೆ ಜಾಹೀರಾತು ನೀಡುವಾಗ ಸ್ವಲ್ಪವೂ ಇವರ ವಿವೇಕಗಳು ಜಾಗೃತಗೊಳ್ಳಲೇ ಇಲ್ಲ
ನಾವು ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿದ್ದೇವೆ. ಇಲ್ಲಿ ಪ್ರಭುಗಳೇ ದೊಡ್ಡವರು. ಸಂವಿಧಾನವೇ ದೊಡ್ಡದು ಎಂಬ ಎಲ್ಲಾ ಅಂಶಗಳು ತಿಳಿದಿದ್ದರೂ ರಾಜಪ್ರಭುತ್ವದ ರೀತಿಯಲ್ಲಿ ಮೆರೆಯುತ್ತಿರುವ ಏಕವ್ಯಕ್ತಿ ವ್ಯವಸ್ಥೆಯ ವಿರುದ್ಧ ಎಲ್ಲೂ ಮಾತನಾಡದೆ ಏಕವ್ಯಕ್ತಿ ಸಂಸ್ಕೃತಿಯನ್ನು ಪ್ರೋತ್ಸಾಹಿಸುತ್ತಾ ಪ್ರಜಾಪ್ರಭುತ್ವದ ಕತ್ತು ಹಿಸುಕುತ್ತಿರುವ ಇವರುಗಳಿಗೆ ನಾಚಿಕೆಯಾಗುತ್ತಿಲ್ಲ
ಹೇಗಿದ್ದರೂ ಫಲಿತಾಂಶವನ್ನು ಪ್ರತಿದಿನವೂ ನಿಮ್ಮ ಅನುಕೂಲಕ್ಕೆ ತಕ್ಕ ಹಾಗೆ ನಿಮಗೆ ಸಲ್ಲಿಸುತ್ತಿರುವ ಸಂಭಾವನೆಗೆ ಅನುಗುಣವಾಗಿ ಸಂಖ್ಯೆಯನ್ನು ಏರಿಸುತ್ತದೆ ತೋರಿಸಿಬಿಡಿ. 543 ಲೋಕಸಭಾ ಕ್ಷೇತ್ರಗಳು ಬಿಜೆಪಿಯ ಪಾಲಾಗಿದೆ. ನೂರಕ್ಕೆ ನೂರರಷ್ಟು ಮತಗಳು ಮೋದಿಯವರ ಪಾಲಾಗಿದೆ. ವಿರೋಧ ಪಕ್ಷಗಳ ಸಂಖ್ಯೆ ಶೂನ್ಯವೆಂದು ಹೇಳುವುದರ ಮೂಲಕ ನಿಮ್ಮ ಋಣವನ್ನು ಸಂಪೂರ್ಣವಾಗಿ ಈಗಲೇ ತೀರಿಸಿಕೊಂಡುಬಿಡಿ. ಸಂಭ್ರಮಿಸುವುದಾದರೆ ಅವರು ಸಂಭ್ರಮಿಸಲಿ, ನೀವು ಸಂತೋಷಪಡಿ. ಅಂದ ಭಕ್ತರು ಮತ್ತಷ್ಟು ಕೇಕೆ ಹಾಕಿ ಕುಣಿದಾಡಲಿ.
ಇಂತಹ ವ್ಯವಸ್ಥೆಯ ನಡುವೆ ಅಲ್ಲೊಂದು ಇಲ್ಲೊಂದು ಭಿನ್ನ ಅಭಿಪ್ರಾಯದ ಮನಸ್ಸಿನ ಜನರು ಇದ್ದೇ ಇರುತ್ತಾರೆ. ಸಣ್ಣದೊಂದು ಜಾಗೃತಿಯ ಕಿಡಿ ಜ್ಯೋತಿಯಾಗಿ ಇಂದಲ್ಲ ನಾಳೆ ಎಲ್ಲ ತಪ್ಪುಗಳಿಗೆ ಉತ್ತರವನ್ನು ನೀಡುವ ಕಾಲ ಬಂದೇ ಬರುತ್ತದೆ. ಕಾಯುವ ಮನಸ್ಥಿತಿ ನಮಗಿದೆ, ಕಾಯುತ್ತೇವೆ, ನಿಜವಾದ ಒಳ್ಳೆಯ ದಿನಗಳಿಗಾಗಿ ಕಾಯುತ್ತೇವೆ
- ಕೆಎಸ್ ನಾಗರಾಜ್, ಬೆಂಗಳೂರು




