ಹಿರಿಯ ಪತ್ರಕರ್ತರಾದ ಸ್ನೇಹಿತ ರುದ್ರಪ್ಪ ಚನಬಸಪ್ಪನವರು ಒಂದು ಲೇಖನ ಬರೆದಿದ್ದಾರೆ. ಎಂ. ಬಿ. ಪಾಟೀಲರು ‘ಸಿದ್ಧರಾಮಯ್ಯನನವರು ಪೂರ್ಣಾವಧಿ ಮುಖ್ಯಮಂತ್ರಿ’ ಎಂದಿದ್ದನ್ನು ‘ಆನಾವಶ್ಯಕವಾಗಿ ಸೃಷ್ಟಿಸಿದ ಬಿಕ್ಕಟ್ಟು’ ಎಂಬ ಲೇಖನಕ್ಕೆ ನನ್ನ ಅಭಿಪ್ರಾಯ ವ್ಯಕ್ತಪಡಿಸಲು ಬಯಸುವೆ.
ಎಂ.ಬಿ.ಪಾಟೀಲರ ಈ ಹೇಳಿಕೆಯು ಕಾಂಗ್ರೆಸ್ ಸರಕಾರವನ್ನು ಬಿಕ್ಕಟ್ಟಿಗೆ ಸಿಲುಕಿಸುವ ಬದಲಾಗಿ ಸರಕಾರವನ್ನು ಸುಭದ್ರಗೊಳಿಸುತ್ತದೆ ಎನ್ನಬಯಸುತ್ತೇನೆ ನಾನು.
ನಾಲ್ಕಾರು ದಿನಗಳಿಂದಲೂ ನಡೆಯುತ್ತಿರುವ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಮುಖ್ಯಮಂತ್ರಿ ಸಿದ್ಧರಾಮಯ್ಯನವರಿಗೆ ಕೈ ಕಟ್ಟಿದ ವಾತಾವರಣ ಸೃಷ್ಟಿಯಾಗುತ್ತಲಿದೆಯೇನೋ? ಎಂಬ ಸಂಶಯ ಕಾಡಲಾರಂಭಿಸಿದೆ ಕನ್ನಡಿಗನಿಗೆ. ಸಿದ್ಧರಾಮಯ್ಯನವರ ಗಂಭಿರ ನಿಲುವು, ಉಪಮುಖ್ಯಮಂತ್ರಿಗಳ ಅತಿಕ್ರಮಣದ ಆವೇಶ ಈ ರೀತಿಯಾಗಿ ಯೋಚಿಸಲು ಕಾರಣವಾಗುತ್ತದೆ.
ಇದಕ್ಕೆ ಕಾರಣವೇನಿರಬಹುದು? ಎಂದು ಹುಡುಕುತ್ತ ಹೋದಲ್ಲಿ ಅಲ್ಲಿ ಅವರದೆ ಪಕ್ಷದ ಹೈ ಕಮಾಂಡ್ ಕಾಣಿಸುತ್ತದೆ.
ಕನ್ನಡಿಗ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿದ್ದಾನೆ. ಇವರ ಜ್ಯಾತ್ಯಾತೀತ ನಿಲುವಿಗೆ ಶರಣೆಂದಿದ್ದಾನೆ. ಧರ್ಮ ದಳ್ಳುರಿಯನ್ನು ಸದೆಬಡಿದು ಕರ್ನಾಟಕವನ್ನು ಶಾಂತಿಯ ತೋಟವಾಗಿಸಲು ಪ್ರಯತ್ನಿಸಿದ್ದಾನೆ. ಧರ್ಮ, ಜಾತಿಯ ಸಂಕೋಲೆಗಳನ್ನು ಕಿತ್ತೊಗೆದು ಕಾಂಗ್ರೆಸ್ ಪಕ್ಷಕ್ಕೆ ಜೈ ಎಂದು ಸಂಪೂರ್ಣ ಬಹುಮತವನ್ನು ನೀಡಿದ್ದಾನೆ. ನೀವು ಸ್ಪಷ್ಟ ಬಹುಮತದೊಂದಿಗೆ ನಿರಾತಂಕವಾಗಿ ಐದು ವರ್ಷಗಳ ಕಾಲ ಸುಭದ್ರ ಸರಕಾರ ನೀಡಿ ಎಂದಿದ್ದಾನೆ.
ಇಂತಹ ಜನಾಭಿಪ್ರಾಯ ಪಡೆದ ಸರಕಾರ ರಚನೆಗೊಂಡ ನಂತರ ಕೆಲವು ಬೆಳವಣಿಗೆಗಳನ್ನು ಗಮನಿಸಿ ಹಿರಿಯ ಪತ್ರಕರ್ತರು ತಮ್ಮ ಆತಂಕ ಹಂಚಿಕೊಂಡಿದ್ದಾರೆ. ಅವರ ಅನಿಸಿಕೆ ಒಂದು ಕ್ಷಣ ಸರಿ ಎನಿಸಿದರೂ ಸಹ ಪಾಟೀಲರ ಹೇಳಿಕೆ ಇಂದಿನ ಅವಶ್ಯಕತೆ ಆಗಿತ್ತು ಎಂದು ನಾನು ಭಾವಿಸುವೆ.
ಕಾರಣ ಸುಭದ್ರ ಸರಕಾರದ ಮತ್ತೊಂದು ಅಂಗ ಕಾರ್ಯಾಂಗ. ಅದಕ್ಕೆ ಸಂಶಯದ ಸುಳಿ ಎಂದೂ ತಗುಲಬಾರದು. ತನ್ನ ನಾಯಕ ನಿಸ್ಸಾಯಕ ಎನಿಸಬಾರದು. ಅವನ ಆಡಳಿತದಲ್ಲಿ ಎಲ್ಲ ಶಾಸಕರು ಮಂತ್ರಿಮಂಡಲದ ಸಂಪೂರ್ಣ ಸದಸ್ಯರು ವಿಶ್ವಾಸ ಹೊಂದಿದ್ದಾರೆ ಎಂದಾಗ ಮಾತ್ರ ಅಧಿಕಾರಿಗಳು ತಲೆ ಬಾಗುತ್ತಾರೆ. ಕಾರ್ಯಾಂಗ ಕಾರ್ಯ ನಿರತವಾಗುತ್ತದೆ. ಆಳುವವನು ಕಾಲ ಇಷ್ಟೇ ಎಂದು ತಿಳಿದರೆ ಅವರು
ಸ್ವಾರ್ಥಕ್ಕೆ ಬಿದ್ದು ನಿರಂಕುಶ ಮತಿಗಳಾಗಿ ಕಾಲಾಹರಣ ಮಾಡಿ ಕೈ ತೊಳೆದುಕೊಂಡುಬಿಡುತ್ತಾರೆ.
ಇನ್ನು ಎಂ.ಬಿ.ಪಾಟೀಲರ ಹೇಳಿಕೆ, ಅವರ ಹೇಳಿಕೆಗೆ ಆಕ್ಷೇಪಣೆ ಮಾಡುವುದು ನನಗೆ ಸರಿಕಾಣದು. ಕಾಂಗ್ರೆಸ್ ಪಕ್ಷ ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆ ಎದುರಿಸಿತ್ತು. ಮುಂದಿನ ಮುಖ್ಯಮಂತ್ರಿ ಇಂತಹವರೇ ಎಂಬ ಸಣ್ಣ ಸುಳಿವನ್ನು ಸಹ ಕಾಂಗ್ರೆಸ್ ಹೈ ಕಮಾಂಡ ನೀಡಿರಲಿಲ್ಲ. ಪತ್ರಕರ್ತರು ಇಂತಹ ಪ್ರಶ್ನೆಯನ್ನು ಕೇಳಿದಾಗ ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆಯನ್ನು ಎದುರಿಸುವುದಾಗಿ ಪದೆ ಪದೆ ಹೇಳಿತ್ತು. ನಾಯಕತ್ವದ ಹೊಣೆಯನ್ನು ಶಾಸಕರ ಆಯ್ಕೆಗೆ ಬಿಡುತ್ತೇವೆ ಎಂದಿತ್ತು. ಇವರ ಹೇಳಿಕೆಯನ್ನು ಕರ್ನಾಟಕದ ಮತದಾರ ನಂಬಿದ್ದ. ಅದರಂತೆ ತನಗೆ ಸರಿಕಂಡ ನಾಯಕ ಮುಖ್ಯಮಂತ್ರಿ ಆಗುತ್ತಾನೆ ಎಂದು ನಂಬಿ ಸಾಮೂಹಿಕ ನಾಯಕತ್ವವನ್ನು ಬೆಂಬಲಿಸಿ ಅದನ್ನು ಅಧಿಕಾರಕ್ಕೆ ತಂದಿದ್ದ.
ಮುಖ್ಯಮಂತ್ರಿಯ ಆಯ್ಕೆಯನ್ನು ಜಟಿಲಗೊಳಿಸಿದ್ದು ಕಾಂಗ್ರೆಸ್ ಹೈ ಕಮಾಂಡ. ಯಾವುದೆ ಒಬ್ಬ ವ್ಯಕ್ತಿಯ ಒತ್ತಡಕ್ಕೆ ಮಣಿಯದೆ, ಶಾಸಕರಿಗೆ ಮುಕ್ತ ಅವಕಾಶ ನೀಡಿ, ಆಂತರಿಕ ಚುನಾವಣೆ ಮಾಡಿ, ಮತಗಳ ವಿವರಣೆಯನ್ನು ಸ್ಪರ್ಧಾಳುಗಳ ಸಮ್ಮುಖದಲ್ಲಿ ತೋರಿಸಿ, ನಂತರ ಅದನ್ನು ಹೈ ಕಮಾಂಡ್ ಗಮನಕ್ಕೆ ವಿವರಿಸಿ ಅದರ ಮುದ್ರೆಯನ್ನು ಒತ್ತಿಸಬಹುದಿತ್ತು.
ಆದರೆ ಅದು ಹಾಗಾಗಲಿಲ್ಲ. ಬಹುಮತ ಪಡೆದವರನ್ನು ತಮ್ಮಅಂಕೆಯಲ್ಲಿ ಸದಾಕಾಲ ಬಂಧಿಸಿಡಲು ಹುನ್ನಾರ ಮಾಡಿತು. “ನಾಯಕನ ಆಯ್ಕೆ ಹೈ ಕಮಾಂಡ ನಿರ್ಧಾರದಂತೆ” ಎಂಬ ಒಂದು ವಾಕ್ಯದ ನಿರ್ಣಯ ಮಂಡಿಸಿತು. ಪ್ರಜಾಪ್ರಭುತ್ವದ ತತ್ವಕ್ಕೆ ವಿರೋಧವಾಗಿ ಹೈ ಕಮಾಂಡ್ ಸಂಸ್ಕೃತಿ ಶ್ರೇಷ್ಠ ಎಂಬ ಯಾವಾಗಲೂ ಪ್ರದರ್ಶಿಸುವ ನೀತಿಯನ್ನು ಚಲಾಯಿಸಿತು.
ಮುಖ್ಯಮಂತ್ರಿಯ ಆಯ್ಕೆ ಹಾದಿಬೀದಿಯ ರಂಪಾಟದಂತೆ ಟಿ. ವ್ಹಿಗಳು ಚಿತ್ರಿಸಲು ಪ್ರಾರಂಭಿಸಿದಾಗ. ಪರಸ್ಥಿತಿ ಕೈಮೀರಿ ಹೋಗುತ್ತಿರುವುದನ್ನು ಅರಿತ ಹೈಕಮಾಂಡ ಸಕಾಲದಲ್ಲಿ ಎಚ್ಚೆತ್ತು ಕೊಂಡಿತು. ಅಂತಿಮವಾಗಿ ಸಂಧಾನ ಸೂತ್ರ ತಂದಂತೆ ನಟಿಸಿತು. ಕೊನೆಗೂ ಜನ ನಿರೀಕ್ಷಿಸಿದ ನಾಯಕರು ಮುಖ್ಯಮಂತ್ರಿಯಾದರು.
ಆದರೆ ಅಂದುಕೊಂಡ ಸಂಧಾನ ಸೂತ್ರದ ವಿವರಗಳು ಬಹಿರಂಗ ಗೊಳಿಸಲಿಲ್ಲ. ಅದರ ಅವಶ್ಯಕತೆಯೂ ಇಲ್ಲವೆನ್ನಿ. ಆದರೆ ಅದು ಉಹಾಪೋಹಕ್ಕೆ ಎಡೆಮಾಡಿಕೊಟ್ಟಿತು. ಇಂತಹ ಊಹಾಪೋಹಗಳಿಂದ ಜನರಿಗೆ ತಪ್ಪುಸಂದೇಶ ರವಾನೆಯಾಗಿ ತನ್ನದೆ ಸರಕಾರ ಅತಂತ್ರವಾಗುತ್ತಿದೆ ಎಂಬ ಮಮಕಾರ ಹೈ ಕಮಾಂಡಿಗೆ ಇರಬೇಕಿತ್ತು.
ಇರಲಿ, ಇಂದಿನ ಕಾಂಗ್ರೆಸ್ ನಾಯಕತ್ವ ಸುಭದ್ರವಾಗಿದೆ. ಜನಪ್ರಿಯ ಮುಖ್ಯಮಂತ್ರಿಯ ಸಾರಥ್ಯದಲ್ಲಿ ಮಂತ್ರಿಮಂಡಳ ರಚನೆಗೊಳ್ಳುತ್ತಿದೆ. ಸಿದ್ಧರಾಮಯ್ಯನವರು
ಎಲ್ಲ ಸಮಾಜಗಳನ್ನು ಒಂದುಗೂಡಿಸಿ ಅವರ ಇಚ್ಛೆಯನುಸಾರವಾಗಿ ನಡೆಯುವ ಸರ್ವಜನಾಂಗದ ನಾಯಕನೆಂದು ಮನ್ನಣೆ ಪಡೆದಿದ್ದಾರೆ. ಅವರ ಜನಪ್ರಿಯತೆ ಒಂದು ಕಡೆಗಿದ್ದರೆ, ಚಾಣಾಕ್ಷ ಸಂಘಟಿಕ,ಆಕ್ರಮಶೀಲ ನಾಯಕ ಡಿ. ಕೆ. ಶಿವಕುಮಾರವರು. ಇವರೊಂದಿಗೆ ಕಳೆದ ಸರಕಾರದಲ್ಲಿ ನೀರಾವರಿ ಸಚಿವರಾಗಿ ಸಿದ್ಧರಾಮಯ್ಯ ಸರಕಾರಕ್ಕೆ ಗಣನೀಯವಾಗಿ ಹೆಸರು ತಂದು ಕೊಟ್ಟವರು ಎಂ. ಬಿ. ಪಾಟೀಲರು. ಅವರು ಕೃಷ್ಣ, ಕಾವೇರಿ ಎಂದು ನಾಡನ್ನು ವಿಭಜಿಸದೆ ಸಮಸ್ಥ ಕನ್ನಡಿಗರಿಗೆ ನೀರಾವರಿ ಸೌಲಭ್ಯ ನೀಡಿದವರು. ಅವರ ಸೇವೆಯನ್ನು ಪರಿಗಣಿಸಿಯೇ ಅವರನ್ನು ಪಕ್ಷದ ಇನ್ನೊಂದು ಪ್ರಮುಖ ಹುದ್ದೆಯಾದ ಪ್ರಚಾರ ಸಮೀತಿಯ ಅಧ್ಯಕ್ಷರೆಂದು ಹೆಸರಿಸಿತ್ತು ಹೈ ಕಮಾಂಡ. ಇಂದು ಅವರು ಸರಕಾರದ ಒಂದು ಪ್ರಮುಖ ಭಾಗ. ಅವರೊಂದಿಗೆ ದಲಿತ ನಾಯಕರಾದ ಪರಮೇಶ್ವರರವರು ಹಾಗೂ ಇನ್ನುಳಿದ ಹಿರಿಯ ಸಚಿವರು ಕಾಂಗ್ರೆಸ್ ಪಕ್ಷದ ಕಟ್ಟಾಳುಗಳು. ಕೇವಲ ಉಪ ಮುಖ್ಯಮಂತ್ರಿ ಮಾತ್ರ ನಾಯಕರಲ್ಲ. ಇಂದು ಎಲ್ಲರೂ ಜವಾಬ್ದಾರಿಯುತವಾಗಿ ನಡೆಯಬೇಕಾಗಿದೆ. ಇದು ಕಾಂಗ್ರೆಸ್ ಪಕ್ಷದ ಸರಕಾರ. ಕರ್ನಾಟಕದ ಪ್ರತಿಯೊಬ್ಬ ನಾಗರಿಕನ ಸರಕಾರ ಅಲ್ಲವೆ?
– ಜಿ.ಬಿ.ಪಾಟೀಲ್, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಜಾಗತಿಕ ಲಿಂಗಾಯತ ಮಹಾಸಭಾ




