ಬೆಂಗಳೂರು: ರಾಜ್ಯ ಸರ್ಕಾರದ ಮಂತ್ರಿಯೊಬ್ಬರು ಬಿಜೆಪಿ ನಾಯಕ, ಕೇಂದ್ರದ ಮಾಜಿ ಮಂತ್ರಿ ದಿವಂಗತ ಅನಂತಕುಮಾರ್ ಅವರ ಗುಣಗಾನ ಮಾಡಿದ್ದಾರೆ. ಅದು ಹೇಗೆಂದರೆ, ಬಿಜೆಪಿಯವರು ಕೇಂದ್ರದ ಮಾಜಿ ಸಚಿವ ಅನಂತಕುಮಾರ್ ಅವರನ್ನು ಮಾದರಿಯಾಗಿಟ್ಟುಕೊಂಡು ಕೆಲಸ ಮಾಡಬೇಕು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಸಲಹೆ ನೀಡಿದ್ದಾರೆ.
ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಹಿತಾಸಕ್ತಿಯ ವಿಷಯ ಬಂದಾಗ ದಿವಂಗತ ಅನಂತ ಕುಮಾರ್ ಅವರು ಎಂದಿಗೂ ರಾಜಕಾರಣ ಮಾಡಲಿಲ್ಲ. ಅವರ ರೀತಿಯಲ್ಲಿ ಈಗಿನ ಬಿಜೆಪಿ ನಾಯಕರು ಒಟ್ಟಾಗಿ ಕೈಗೂಡಿಸಿ ಕೆಲಸ ಮಾಡಬೇಕೆಂದು ಹೇಳಿದರು.
ಅಕ್ಕಿ ವಿಷಯದಲ್ಲಿ ಬಿಜೆಪಿ ಅನಗತ್ಯ ರಾಜಕಾರಣ ಮಾಡುತ್ತಿದೆ. ಮೊದಲು ಅಕ್ಕಿ ಕೊಡುತ್ತೇವೆ ಎಂದು ಒಪ್ಪಿಕೊಂಡು ನಂತರ ನಿರಾಕರಿಸಿದ್ದಾರೆ. ಇದು ಸಂಪೂರ್ಣ ಬಡವರ ವಿರೋಧಿ. ಬಿಜೆಪಿಯವರು ರಾಜ್ಯದ ಅಭಿವೃದ್ಧಿ ದೃಷ್ಟಿಯಿಂದ ರಾಜಕೀಯ ಮಾಡಬಾರದು. ಹಿಂದೆ ಅನಂತಕುಮಾರ್ ದೆಹಲಿಯಲ್ಲಿದ್ದಾಗ ರಾಜ್ಯದಿಂದ ಯಾರೇ ಭೇಟಿ ನೀಡಿದರೂ ಖುದ್ದು ಅವರನ್ನು ಕೇಂದ್ರ ಸರ್ಕಾರದ ಸಚಿವರು ಹಾಗೂ ಇತರರ ಬಳಿಗೆ ಕರೆದುಕೊಂಡು ಕೆಲಸ ಮಾಡಿಸಿಕೊಡುತ್ತಿದ್ದರು ಎಂದರು.
ರಾಜ್ಯದ ಅಭಿವೃದ್ಧಿ ದೃಷ್ಟಿಯಿಂದ ಅವರು ಪಕ್ಷ ರಾಜಕಾರಣದ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ. ಬಿಜೆಪಿಯವರು ಬಹುಶಃ ಅನಂತಕುಮಾರ್ ಅವರನ್ನು ಮರೆತಿರಬಹುದು. ಈಗಲಾದರೂ ನೆನಪಿಸಿಕೊಂಡು ಅವರಂತೆ ನಡೆದುಕೊಳ್ಳಿ. ಅಕ್ಕಿ ವಿಷಯದಲ್ಲಿ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಯಡಿಯೂರಪ್ಪ, ಸಿ.ಟಿ.ರವಿ, ಪ್ರತಾಪ ಸಿಂಹ ಸೇರಿದಂತೆ ಅನೇಕರು ಕೇಂದ್ರದ ಮೇಲೆ ಒತ್ತಡ ಹೇರಿ ಅಕ್ಕಿ ಕೊಡಿಸಬೇಕು ಎಂದು ಸಲಹೆ ನೀಡಿದರು. ಎಲ್ಲಾ ರಾಜಕೀಯ ನಾಯಕರು ಸರ್ಕಾರದ ಜೊತೆ ಕೈಜೋಡಿಸಬೇಕೆಂದು ಮನವಿ ಮಾಡಿದರು.
ರಾಜ್ಯದ ಜನರಿಗೆ 5 ಕೆ.ಜಿ. ಅಕ್ಕಿ ನೀಡುತ್ತಿರುವುದು ಬಿಜೆಪಿಯ ಕೊಡುಗೆಯಲ್ಲ. ಈ ಹಿಂದೆ ಕಾಂಗ್ರೆಸ್ ಸರ್ಕಾರ ಜಾರಿಗೊಳಿಸಿದ್ದ ಆಹಾರ ಭದ್ರತೆಯ ಕಾಯ್ದೆ ಅನುಸಾರವಾಗಿಯೇ ಅಕ್ಕಿ ನೀಡಲಾಗುತ್ತಿದೆ. ಬಿಜೆಪಿಯವರು ಇದನ್ನು ಅರ್ಥ ಮಾಡಿಕೊಳ್ಳಬೇಕು ಎಂದರು.




