ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ನಿಂದ ಬೃಹತ್ ಪ್ರತಿಭಟನೆ

1 year ago

ಬೆಂಗಳೂರು: ಕೇಂದ್ರ ಸರ್ಕಾರದ ಹಲವು ನೀತಿಗಳಿಂದ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ ಎಂದು ಆರೋಪಿಸಿ ಕಾಂಗ್ರೆಸ್ ನಾಯಕರು ಕೇಂದ್ರ ಸರ್ಕಾರದ ವಿರುದ್ಧ ಬೃಹತ್ ಪ್ರತಿಭಟನೆ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಿಎಂ ಸಿದ್ದರಾಮಯ್ಯ ಡಿಸಿಎಂ ಡಿಕೆ ಶಿವಕುಮಾರ್ ಮತ್ತು ರಾಜ್ಯ ಕಾಂಗ್ರೆಸ್ ಉಸ್ತುವಾರಿ ನಾಯಕ ರಣದೀಪ್ ಸಿಂಗ್ ಸುರ್ಜೇವಾಲ ನೇತೃತ್ವದಲ್ಲಿ ಕಾಂಗ್ರೆಸ್ ನಾಯಕರು ಮತ್ತು ಕಾರ್ಯಕರ್ತರು ಬೆಂಗಳೂರಿನಲ್ಲಿ ಪ್ರತಿಭಟಿಸಿದರು. 

ಪ್ರತಿಭಟನೆಯಲ್ಲಿ ಮಾತನಾಡಿದ ಸಿದ್ದರಾಮಯ್ಯ, ಕೇಂದ್ರ ಸರ್ಕಾರ ನಿರುದ್ಯೋಗ, ಬೆಲೆ ಏರಿಕೆಯ ಬಗ್ಗೆ ಮಾತನಾಡುವುದಿಲ್ಲ. ಪ್ರತಿಬಾರಿಯೂ ಸುಳ್ಳುಗಳ ಮೂಲಕ ಜನರನ್ನು ದಾರಿ ತಪ್ಪಿಸುವ ಯತ್ನ ನಡೆಸುತ್ತಿದ್ದಾರೆ. ಬಿಜೆಪಿಯಿಂದ ನಡೆಸುತ್ತಿರುವ ಜನಾಕ್ರೋಶ ಯಾತ್ರೆ ಜನರ ಸಿಟ್ಟಿಗೆ ಕಾರಣವಾಗಿದೆ ಎಂದು ಕಿಡಿಕಾರಿದರು.

ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸಿರುವ ಜನರ ನೆರವಿಗೆ ಧಾವಿಸಿರುವ ರಾಜ್ಯ ಸರ್ಕಾರ ಐದು ಗ್ಯಾರಂಟಿಗಳನ್ನು ನೀಡುತ್ತಿದೆ. ಆದರೆ ರಾಜಕೀಯ ಕಾರಣಕ್ಕಾಗಿ ಬಿಜೆಪಿ-ಜೆಡಿಎಸ್‌‍ನವರು ಈ ಜನಪರ ಯೋಜನೆಗಳನ್ನು ಟೀಕಿಸುತ್ತಿದ್ದಾರೆ. ಈ ಮೂಲಕ ವಿರೋಧ ಪಕ್ಷಗಳ ನಾಯಕರು ಜನ ಸಾಮಾನ್ಯರ ಪರವಾದ ಕಾರ್ಯಕ್ರಮಗಳಿಗೆ ಅಡ್ಡಿ ಪಡಿಸಲು ಯತ್ನಿಸುತ್ತಿದ್ದಾರೆ ಎಂದರು.

ಕೇಂದ್ರದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬರುವ ಮುನ್ನ ಮನಮೋಹನ್ ಸಿಂಗ್ ಇದ್ದಾಗ ಅಗತ್ಯ ವಸ್ತುಗಳ ಬೆಲೆ ಎಷ್ಟಿತ್ತು ಈಗ ಎಷ್ಟಾಗಿದೆ ಎನ್ನುವುದನ್ನು ಅರಿಯಬೇಕು. ಅಚ್ಛೇದಿನ್ ಬರಲಿದೆ, ನಾವು ಅಧಿಕಾರಕ್ಕೆ ಬಂದ ಕೇವಲ ನೂರು ದಿನಗಳಲ್ಲಿ ಕಪ್ಪು ಹಣ ವಾಪಸ್ ತಂದು15 ಲಕ್ಷ ರೂ. ಪ್ರತಿ ಖಾತೆಗೆ ಹಾಕುತ್ತೇವೆ ಎಂದವರು, 3ನೇ ಅವಧಿಗೆ ಅಧಿಕಾರಕ್ಕೆ ಬಂದರೂ ಅದರ ಬಗ್ಗೆ ಚಕಾರವಿಲ್ಲ ಎಂದರು.

ಮೋದಿ ಅವರು ಅಚ್ಚೇ ದಿನ ಆಯೇಗಾ ಅಂತ ಹೇಳಿದ್ದರು. ಆದರೆ ಒಳ್ಳೆಯ ದಿನ ಬಂತಾ? ಆದರೆ, ಎಲ್ಲ ಅಗತ್ಯ ವಸ್ತುಗಳ ಬೆಲೆ ಹೆಚ್ಚಳವಾಗಿದೆ. ಸಿಮೆಂಟ್ ಬೆಲೆ, ಪಿವಿಸಿ ಪೈಪ್ ಬೆಲೆ, ಸಕ್ಕರೆ ಬೆಲೆ, ಬೇಳೆ ಕಾಳುಗಳ ಬೆಲೆ, ಉಪ್ಪು ಬೆಲೆ, ಅಕ್ಕಿ, ರಾಗಿ ಬೆಲೆಗಳು ಏರಿಕೆಯಾಗಿದೆ. ಡಾಲರ್ ಮುಂದೆ ರೂಪಾಯಿ ಮೌಲ್ಯ ಹೆಚ್ಚಳವಾಗಿದೆ ಎಂದರು.

ಡಿ.ಕೆ.ಶಿವಕುಮಾರ್‌ ಮಾತನಾಡಿ, ಬಿಜೆಪಿ-ಜೆಡಿಎಸ್‌‍ ನಾಯಕರಿಗೆ ಕಾಂಗ್ರೆಸ್‌‍ ಸರ್ಕಾರದ ಜನಪರ ಯೋಜನೆಗಳನ್ನು ಸಹಿಸಿಕೊಳ್ಳಲಾಗುತ್ತಿಲ್ಲ. ಅದಕ್ಕಾಗಿ ಪ್ರತಿ ದಿನ ಅಪಪ್ರಚಾರ ಮಾಡುತ್ತಿದ್ದಾರೆ. ಆದರೆ ಜನರಿಗೆ ವಾಸ್ತವತೆ ಗೊತ್ತಿದೆ ಎಂದರು.

ತೈಲ ಬೆಲೆ ಬ್ಯಾರಲ್‌ಗೆ 65 ಡಾಲರ್ ಇದ್ದರೂ ಬೆಲೆ ಇಳಿಕೆ ಮಾಡುತ್ತಿಲ್ಲ. ಈ ಎಲ್ಲದರಿಂದಾಗಿ ಜನಸಾಮಾನ್ಯರಿಗೆ ತೊಂದರೆ ಆಗುತ್ತಿದೆ. ಇದನ್ನೆಲ್ಲ ಮನಗಂಡು ರಾಜ್ಯ ಕಾಂಗ್ರೆಸ್ ಸರಕಾರ 54 ಸಾವಿರ ಕೋಟಿ ರೂ.ಗಳನ್ನು ಮೀಸಲಿರಿಸಿ 5 ಗ್ಯಾರಂಟಿಗಳನ್ನು ನೀಡುತ್ತಿದೆ. ಬಿಜೆಪಿಯವರು ಇದೀಗ ನಮ್ಮ ಗ್ಯಾರಂಟಿಗಳನ್ನು ಕಾಪಿ ಮಾಡಿದ್ದಲ್ಲದೆ, ರಾಜ್ಯದ ಗ್ಯಾರಂಟಿಗಳ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ ಎಂದರು.

ಬಡವರ ಬಗ್ಗೆ ಮಾತನಾಡುತ್ತಿರುವ ಮೋದಿಯವರು ಅಡುಗೆ ಸಿಲಿಂಡರ್ ಮೇಲಿನ ಸಹಾಯಧನವನ್ನು ಏಕೆ ತೆಗೆದು ಹಾಕಿದ್ದೀರಿ.‌ ಗ್ಯಾರಂಟಿ ಯೋಜನೆಗೆ ವಾರ್ಷಿಕ 52,000 ಕೋಟಿ ರೂ. ಹಣ ಮೀಸಲಿಟ್ಟಿದ್ದೇವೆ. ಬೆಲೆ ಏರಿಕೆಗೆ ನರೇಂದ್ರ ಮೋದಿ ಕಾರಣ. ನಮ್ಮ ವಿರುದ್ಧ ಹೋರಾಟ ಮಾಡುವ ನೈತಿಕ ಹಕ್ಕಿಲ್ಲ. ಹಾಲಿನ ಬೆಲೆ ಏರಿಕೆ ಮಾಡುವಂತೆ ರೈತರು ಮನವಿ ಮಾಡುತ್ತಿದ್ದರು. ಅದಕ್ಕಾಗಿ ಹಾಲಿನ ಬೆಲೆ ಏರಿಕೆ ಮಾಡಿದ್ದೇವೆ. ಬೇರೆ ರಾಜ್ಯಗಳಿಗೆ ಹೋಲಿಸಿದರೆ ನಮ್ಮಲ್ಲಿ ಹಾಲಿನ ದರ ಕಡಿಮೆ ಇದೆ. ಬಿಜೆಪಿಯವರು ರೈತರ ವಿರೋಧಿಗಳು. ಅದಕ್ಕಾಗಿ ಹಾಲಿನ ದರ ಏರಿಕೆ ವಿರುದ್ಧ ಹೋರಾಟ ಮಾಡುತ್ತಿದ್ದಾರೆ ಎಂದರು.

ಕಂದಾಯ ಸಚಿವ ಕೃಷ್ಣ ಬೈರೇಗೌಡ ಮಾತನಾಡಿ, ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಡೀಸೆಲ್‌ ಬೆಲೆ 500 ಪಟ್ಟು, ಪೆಟ್ರೋಲ್‌ ಬೆಲೆ 250 ಪಟ್ಟು ಹೆಚ್ಚಾಗಿದೆ. ಅಡುಗೆ ಅನಿಲ ದರ 400 ರೂಪಾಯಿನಿಂದ 900 ರೂಪಾಯಿ ಆಗಿದೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು.

ಶ್ರೀಮಂತರ ಮೇಲಿನ ತೆರಿಗೆಯನ್ನು ಕಡಿಮೆ ಮಾಡಿ, ಜನ ಸಾಮಾನ್ಯರ ಮೇಲೆ ದುಬಾರಿ ತೆರಿಗೆ ಹಾಕಿ ಬೆಲೆ ಹೆಚ್ಚಿಸಲಾಗುತ್ತಿದೆ ಎಂದರು.

ಪ್ರತಿಭಟನೆಯಲ್ಲಿ ದಿನನಿತ್ಯ ವಸ್ತುಗಳ ಬೆಲೆ ಏರಿಕೆ ವಿರುದ್ಧ ಘೋಷಣೆಗಳನ್ನು ಕೂಗಲಾಯಿತು. ಬಿಜೆಪಿ ವತಿಯಿಂದ ನಡೆಸಲಾಗುತ್ತಿರುವ ಜನಾಕ್ರೋಶ ಯಾತ್ರೆ ಕುರಿತು ಕಾಂಗ್ರೆಸ್ಸಿಗರು ಅಸಮಾಧಾನ ವ್ಯಕ್ತಪಡಿಸಿದರು.

Leave a Reply