ಬೆಂಗಳೂರು: ಯುಪಿಎ ಸರ್ಕಾರದ ಅವಧಿಯಲ್ಲಿ ಕಚ್ಚಾ ತೈಲದ ದರ ಪ್ರತಿ ಬ್ಯಾರೆಲ್‌ಗೆ ಸುಮಾರು 140 ಡಾಲರ್‌ಗಳಷ್ಟು ಇತ್ತು. ಆದರೆ ಇಂದು ಕೇಂದ್ರದ ಬಿಜೆಪಿ ನೇತೃತ್ವದ ಸರ್ಕಾರದ ಅವಧಿಯಲ್ಲಿ ಈ ದರವು ಪ್ರತಿ ಬ್ಯಾರೆಲ್‌ಗೆ 60 ಡಾಲರ್‌ಗಳಷ್ಟಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಯೊಂದಿಗೆ ಹೋಲಿಸಿದಾಗ ಇಂದಿನ ದರ ಕಡಿಮೆ ಇರುವಾಗಲೂ ಸಾರ್ವಜನಿಕರಿಗೆ ಹೆಚ್ಚಿನ ದರ ವಿಧಿಸಲಾಗುತ್ತಿದೆ. ಪೆಟ್ರೋಲ್ ಹಾಗೂ ಡೀಸೆಲ್‌ನ ಮೇಲಿನ ಹೆಚ್ಚುವರಿ ತೆರಿಗೆಯ ಮೂಲಕ ಜನರಿಂದ ಹೆಚ್ಚುವರಿ ಹಣ ಸಂಗ್ರಹಿಸಲಾಗುತ್ತಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ ಎಚ್ ಮುನಿಯಪ್ಪ ಹೇಳಿದರು.
- ಬೆಂಗಳೂರಿನಲ್ಲಿ ಕನ್ನಡ ಗಜಲ್ ಯಾತ್ರೆ 100ರ ಸಂಭ್ರಮ
- ನಕಲಿ ದೇಶಪ್ರೇಮಿಗಳ ಆಟ ಇನ್ನೂ ರಾಜ್ಯದಲ್ಲಿ ನಡೆಯಲ್ಲ: ಬಿ ಕೆ ಹರಿಪ್ರಸಾದ್
- ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸುವುದು ನೂರು ಪರ್ಸೆಂಟ್ ಗ್ಯಾರೆಂಟಿ: ಆರ್ ಅಶೋಕ್
- ದರ್ಶನ್ ಪುಟ್ಟಣ್ಣಯ್ಯ ಅವರಿಗೆ ಸಚಿವ ಸ್ಥಾನ ನೀಡಿ
- ರಾಜಕೀಯ ಸಂತ ಶಾಂತವೇರಿ ಗೋಪಾಲಗೌಡ ಕೃತಿ ಲೋಕಾರ್ಪಣೆ
ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ವತಿಯಿಂದ ನಗರದ ಫ್ರೀಡಂ ಪಾರ್ಕ್‌ನಲ್ಲಿ ಕೇಂದ್ರ ಸರ್ಕಾರದ ಬೆಲೆ ಏರಿಕೆ ನೀತಿಯ ವಿರುದ್ಧ ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಅಡಿಗೆ ಅನಿಲದ ದರ, ಅಡಿಗೆ ಸಾಮಗ್ರಿಗಳ ದರ ಗಗನಕ್ಕೇರಿದ್ದು, ರೈತರು, ಬಡವರು ಹಾಗೂ ಮಧ್ಯಮ ವರ್ಗದ ಕುಟುಂಬಗಳು ಬೆಲೆ ಏರಿಕೆಯಿಂದ ತೀವ್ರವಾಗಿ ಸಂಕಷ್ಟಕ್ಕೆ ಒಳಗಾಗಿದ್ದಾರೆ ಎಂದರು.
ಕೇಂದ್ರ ಸರ್ಕಾರ ತೆರಿಗೆ ಹಣವನ್ನು ರಾಜ್ಯಗಳಿಗೆ ಸಮರ್ಪಕವಾಗಿ ಹಂಚಿಕೆಯಾಗದೆ ವಂಚನೆ ಮಾಡುತ್ತಿದೆ. ಈ ಬಗ್ಗೆ ನಮ್ಮ ಪಕ್ಷದ ಅಧ್ಯಕ್ಷರು ಇಡೀ ರಾಜ್ಯದಾದ್ಯಂತ ಪ್ರತಿಭಟನೆ ನಡೆಸಲು ಮುಂದಾಗಬೇಕು. ಬೆಂಗಳೂರು ನಗರಕ್ಕೆ ಸೀಮಿತವಲ್ಲದೆ, ಜಿಲ್ಲೆ ಹಾಗೂ ತಾಲ್ಲೂಕು ಮಟ್ಟದಲ್ಲಿಯೂ ಹೆಚ್ಚಿನ ಜನಸಂಖ್ಯೆಯನ್ನು ಸೇರಿಸುವ ಮೂಲಕ ಪ್ರತಿಭಟನೆ ನಡೆಸಬೇಕು. ಜನರಿಗೆ ಈ ಬೆಲೆ ಏರಿಕೆಯ ನೈಜ ಹಿನ್ನಲೆಯನ್ನು ತಿಳಿಸಲು ಈ ಮೂಲಕ ಅವಕಾಶ ಸಿಗುತ್ತದೆ ಎಂದರು.
ಸಾಮಾನ್ಯ ಜನರಿಂದ ಸಂಗ್ರಹಿಸುತ್ತಿರುವ ಹಣ ಎಲ್ಲಿ ಹೋಗುತ್ತಿದೆ ಎಂಬುದರ ಸ್ಪಷ್ಟತೆ ಇಲ್ಲ. ದಿನ ಬಳಕೆ ವಸ್ತುಗಳ ಬೆಲೆ ಏರಿಕೆಯಾಗುತ್ತಿರುವಾಗ, ಸಾಮಾನ್ಯ ವರ್ಗದ ಜನರು ಹೇಗೆ ಜೀವನ ಸಾಗಿಸಬೇಕು? ಎಂದು ಪ್ರಶ್ನಿಸಿದರು.
ನಮ್ಮ ಸರ್ಕಾರ ಬಡವರ ಪರವಾಗಿದ್ದು, ಜನಸಾಮಾನ್ಯರಿಗಾಗಿ ಪಂಚ ಗ್ಯಾರಂಟಿಗಳನ್ನು ಜಾರಿಗೆ ತರುವ ಮೂಲಕ ಅವರ ಸರ್ವತೋಮುಖ ಅಭಿವೃದ್ಧಿಗೆ ಸಹಾಯ ಮಾಡುತ್ತಿದೆ. ಕೇಂದ್ರ ಸರ್ಕಾರದ ಬೆಲೆ ಏರಿಕೆ ನೀತಿ ಖಂಡನೀಯ ಹಾಗೂ ಸಾರ್ವಜನಿಕ ಆಕ್ರೋಶಕ್ಕೆ ಪಾತ್ರವಾಗಿದೆ ಎಂದರು.
ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ವಿವಿಧ ಸಚಿವರು, ಶಾಸಕರು, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳು, ಸದಸ್ಯರು ಹಾಗೂ ಕಾಂಗ್ರೆಸ್ ಪಕ್ಷದ ವಿವಿಧ ಘಟಕಗಳ ಅಧ್ಯಕ್ಷರು ಮತ್ತು ಕಾರ್ಯಕರ್ತರು ಹಾಜರಿದ್ದರು.




