ಬೆಂಗಳೂರು: ಪಕ್ಷದ ಸಂಘಟನೆಗಾಗಿ ಹಲವಾರು ಯೋಜನೆಗಳನ್ನು ರೂಪಿಸಲಾಗಿದೆ. ಈಗಾಗಲೇ ಜನತಾ ಜಲಧಾರೆಯಲ್ಲಿ ಜನತೆಯಲ್ಲಿ ವಿಶ್ವಾಸಗಳಿಸಲು ಮತ್ತು ನೀರಾವರಿ ಯೋಜನೆಗಳನ್ನು ಜಾರಿಗೊಳಿಸುವ ನಿಟ್ಟಿನಲ್ಲಿ ಚಿಂತನೆ ನಡೆಸಲಾಗಿದೆ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹೇಳಿದರು.
ಜಾತ್ಯತೀತ ಜನತಾದಳದ ಕೇಂದ್ರ ಜೆ.ಪಿ. ಭವನದಲ್ಲಿ ಅಟಿಕಾ ಗೋಲ್ಡ್ ಮಾಲೀಕ ಬೊಮ್ಮನಹಳ್ಳಿ ಬಾಬುರವರು ಜೆ.ಡಿ.ಎಸ್.ಪಕ್ಷಕ್ಕೆ ಸೇರ್ಪಡೆಯಾದರು. ಈ ಸಂದರ್ಭದಲ್ಲಿ ಮಾತಾಡಿದ ಕುಮಾರಸ್ವಾಮಿ, 28 ವಿಧಾನಸಭಾ ಕ್ಷೇತ್ರದಲ್ಲಿ ಪ್ರತಿಯೊಬ್ಬ ನಾಗರಿಕರ ಮನೆ ಭೇಟಿ ಮಾಡಲು ಜನತಾ ಮಿತ್ರ ಅಂದೋಲನ ನಾಳೆಯಿಂದ ಪ್ರಾರಂಭವಾಗಲಿದೆ ಎಂದರು.
ಬಿ.ಜೆ.ಪಿ. ಆಡಳಿತದಲ್ಲಿ ಕೆಲಸ ಮಾಡದೇ ಹಣ ಲೂಟಿ ಮಾಡಿದ್ದಾರೆ. 14 ಸಾವಿರ ಕೋಟಿ ಹಗರಣದಲ್ಲಿ ಬಿ.ಬಿ.ಎಂ.ಪಿ.ಯ ಕಛೇರಿಗೆ ಬೆಂಕಿ ಇಟ್ಟವರು ಇಂದು ಬಿ.ಜೆ.ಪಿ. ಸರ್ಕಾರದ ಪ್ರಮುಖ ಸ್ಥಾನದಲ್ಲಿ ಇದ್ದಾರೆ. ಬೆಂಗಳೂರು ನಗರ ಜನರ ಸಂಕಷ್ಟಗಳಿಗೆ ನೆರವಾಗಲು ಜೀವಂತ ಕೆರೆ ಉಳಿಸಲು 15 ದಿನಗಳ ಜನತಾ ಮಿತ್ರ ಅಂದೋಲನ ಹಮ್ಮಿಕೊಳ್ಳಲಾಗಿದೆ. 6 ತಿಂಗಳ ಕಾಲ ಜನತಾ ಮಿತ್ರ ಯಾತ್ರೆ ಜರುಗಲಿದೆ. 2023ನೇ ವಿಧಾನಸಭಾ ಚುನಾವಣೆಯಲ್ಲಿ ಸಂಪೂರ್ಣ ಬಹುಮತದೊಂದಿಗೆ ಜಾತ್ಯತೀತ ಜನತಾ ದಳ ಸರ್ಕಾರ ರಚನೆಯಾಗಲಿದೆ ಎಂದರು.
ಇದೇ ಸಂದರ್ಭದಲ್ಲಿ ಮಾತಾಡಿದ ಬೊಮ್ಮನಹಳ್ಳಿ ಬಾಬು, ನಾಡಿನ ನೆಲ, ಜಲ, ಭಾಷೆ ನಾಡು, ನುಡಿಯ ಹಿತ ಕಾಯುವ ಮತ್ತು ರಕ್ಷಣೆಗೆ, ಸಾಮಾಜಿಕ ಸಮಾನತೆ ಮತ್ತು ಜಾತ್ಯತೀತ ಸಿದ್ದಾಂತವನ್ನು ಸಂಪೂರ್ಣ ಸುರಕ್ಷತೆ, ರಕ್ಷಣೆ ಮಾಡುತ್ತಿರುವ ಜಾತ್ಯತೀತ ಜನತಾ ದಳ ಪಕ್ಷ ಮತ್ತು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಆಶೀರ್ವಾದದೊಂದಿಗೆ ಮತ್ತು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರ ಕೈಬಲಪಡಿಸಲು ನಾನು ಜೆ.ಡಿ.ಎಸ್.ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದೇನೆ ಎಂದರು
ರಾಷ್ಟ್ರೀಯ ಪಕ್ಷಗಳು ನಾಡಿನ ಹಿತ ಕಾಯುವುದಿಲ್ಲ. ಕರ್ನಾಟಕದಲ್ಲಿ ಸ್ಥಳೀಯ ಜನರ ಭಾವನೆಗಳಿಗೆ ಸ್ಪಂದಿಸುವ ಮತ್ತು ರಾಜ್ಯದ ಅಭಿವೃದ್ದಿ ಚಿಂತನೆ ಮಾಡುವ ಜೆ.ಡಿ.ಎಸ್.ಪಕ್ಷಕ್ಕೆ ನಾಡಿನ ಆರೂವರೆ ಕೋಟಿ ಜನರು ಬೆಂಬಲಿಸಬೇಕು ಎಂದರು.
2023ರಲ್ಲಿ ನಡೆಯುವ ವಿಧಾನಸಭಾ ಚುನಾವಣೆಯಲ್ಲಿ ನಾಡಿನ ಹಿತ ಚಿಂತಕ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿರವರ ನೇತೃತ್ವದಲ್ಲಿ ಜನರ ಆಶೀರ್ವಾದದಿಂದ ಜಾತ್ಯತೀತ ಜನತಾದಳ ಸಂಪೂರ್ಣ ಬಹುಮತದಿಂದ ಆಯ್ಕೆಯಾಗಿ ಮುಂದಿನ ಮುಖ್ಯಮಂತ್ರಿಯಾಗಿ ಹೆಚ್.ಡಿ.ಕುಮಾರಸ್ವಾಮಿಯವರು ಆಯ್ಕೆಯಾಗಲಿದ್ದಾರೆ ಎಂದರು.
ಹೆಚ್.ಡಿ.ಕುಮಾರಸ್ವಾಮಿರವರ ಕೈ ಬಲಪಡಿಸಲು ಜೆ.ಡಿ.ಎಸ್.ಪಕ್ಷಕ್ಕೆ ಸೇರ್ಪಡೆಯಾಗಿದ್ದೇನೆ. ಮುಂದಿನ ತಿಂಗಳು ರಾಜ್ಯಾದ್ಯಂತ ಇರುವ ನನ್ನ ಬೆಂಬಲಿಗರು, ಸ್ನೇಹಿತರನ್ನು ಬೃಹತ್ ಸಮಾವೇಶದ ಮೂಲಕ ಜೆ.ಡಿ.ಎಸ್. ಪಕ್ಷಕ್ಕೆ ಸೇರ್ಪಡೆ ಮಾಡಲಾಗುವುದು ಎಂದರು.



