ಪರಿಷ್ಕೃತ ಪಠ್ಯಪುಸ್ತಕಗಳಲ್ಲಿ ಅಂಬೇಡ್ಕರರಿಗೆ ಮಾಡಿರುವ ಅವಮಾನ ಕಾಣಿಸುತ್ತಿಲ್ಲವೇ?

4 years ago

ಕಳೆದ 140 ದಿನಗಳಿಂದ ವಾಲ್ಮೀಕಿ ಗುರುಪೀಠದ ಶ್ರೀ ಪ್ರಸನ್ನಾನಂದ ಸ್ವಾಮೀಜಿ ನೇತೃತ್ವದಲ್ಲಿ ಪರಿಶಿಷ್ಟ ಪಂಗಡ (ಎಸ್ಟಿ ST) 7.5% ಮೀಸಲಾತಿ ಹೆಚ್ಚಳಕ್ಕೆ ಆಗ್ರಹಿಸಿ ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಧರಣಿ ಸತ್ಯಾಗ್ರಹ ನಡೆಯುತ್ತಿದೆ. “ಕರ್ನಾಟಕ ಸ್ವಾಭಿಮಾನಿ ಪರಿಶಿಷ್ಟ ಜಾತಿ ಮತ್ತು ಪಂಗಡ ಸಂಘಟನೆಗಳ ಒಕ್ಕೂಟ ಹಾಗೂ ಮೀಸಲಾತಿ ಹೆಚ್ಚಳ ಹೋರಾಟ ಕ್ರಿಯಾ ಸಮಿತಿ” ವತಿಯಿಂದ ನಡೆಯುತ್ತಿರುವ ಈ ಹೋರಾಟದಲ್ಲಿ ನಿನ್ನೆ ದಿನ (29-06-2022) ವಿವಿಧ ಮಠಾಧಿಪತಿಗಳು  ಭಾಗವಹಿಸಿ, ಜುಲೈ 11ಕ್ಕೆ ಪ್ರತಿ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ ನಡೆಸುವುದಾಗಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ಆರ್ಥಿಕ ಹಿಂದುಳಿದಿರುವಿಕೆಯ ಮಾನದಂಡವನ್ನು ಮುಂದೊಡ್ಡಿ ಸಂವಿಧಾನದ ಆಶಯಕ್ಕೆ ವಿರುದ್ಧವಾಗಿ ಕೇವಲ 3% ಮೇಲ್ಜಾತಿಯ ಜನ 10% ಮೀಸಲಾತಿಯನ್ನು ಕಬಳಿಸಿರುವ ಹೊತ್ತಿನಲ್ಲಿ, ನಿಜವಾಗಿ ಸಾಮಾಜಿಕ ಅಂಚಿನಲ್ಲಿರುವ ಜನರಿಗೆ ಆಗಿರುವ ಅನ್ಯಾಯವನ್ನು ಸರಿಪಡಿಸಲು ನಡೆಯುತ್ತಿರುವ ಈ ಹೋರಾಟ ಸ್ವಾಗತಾರ್ಹವಾದದ್ದು.

ಈಗ ನನ್ನ ಅಸಲಿ ಪ್ರಶ್ನೆ ಏನೆಂದರೆ ಮೀಸಲಾತಿ ಸೌಲಭ್ಯ ಎಂಬುದು ‘ಸಂವಿಧಾನ ಶಿಲ್ಪಿ’ ಡಾ.ಅಂಬೇಡ್ಕರ್ ಅವರ ಹೋರಾಟದ ಫಲ.‌ ಮೀಸಲಾತಿ ಹೆಚ್ಚಳಕ್ಕಾಗಿ ಹೀಗೆ ಒಗ್ಗಟ್ಟಾಗಿ ಸರ್ಕಾರಕ್ಕೆ ಎಚ್ಚರಿಕೆ ನೀಡುವ ಈ ಮಠಾಧಿಪತಿಗಳಿಗೆ ಪಠ್ಯಪುಸ್ತಕಗಳಲ್ಲಿ ಅಂಬೇಡ್ಕರ್ ವಿರುದ್ಧ ಎಸಗಿರುವ ಅವಮಾನ ಕಾಣಿಸುತ್ತಿಲ್ಲವೇ? ರೋಹಿತ್ ಚಕ್ರತೀರ್ಥ ಸಮಿತಿಯ ಪರಿಷ್ಕೃತ ಪಠ್ಯಪುಸ್ತಕಗಳನ್ನು ರದ್ದುಪಡಿಸಬೇಕೆಂದು ವ್ಯಾಪಕವಾಗಿ ಹೋರಾಟಗಳು ನಡೆಯುತ್ತಿರುವಾಗ ಸ್ವಾಮೀಜಿಗಳು ಹೀಗೇಕೆ ಒಗ್ಗಟ್ಟಾಗಿ ಪ್ರತಿಭಟಿಸಬಾರದು? ರೋಹಿತ್ ಚಕ್ರತೀರ್ಥ ಎಂಬ ವಿಕೃತ ವ್ಯಕ್ತಿಯು ಶಾಲಾ ಪರಿಷ್ಕೃತ ಪಠ್ಯಪುಸ್ತಕಗಳಲ್ಲಿ  ಅಂಬೇಡ್ಕರರಿಗೆ ಮಾಡಿರುವ ಅವಮಾನ ಇವರಿಗೆ ಕಾಣಿಸುತ್ತಿಲ್ಲವೇ?

ಚೆನ್ನಣ್ಣ ವಾಲಿಕಾರ ಅವರ ‘ನೀ ಹೋದ ಮರುದಿನ’ ಎಂಬ ಅಂಬೇಡ್ಕರ್ ಕುರಿತ ಕವಿತೆಯನ್ನು ಕೈಬಿಡಲಾಗಿದೆ. ಅಂಬೇಡ್ಕರ್ ರೂಪಿಸಿದ  ಹೋರಾಟಗಳಾದ ಮಹಾಡ್ ಸತ್ಯಾಗ್ರಹ ಮತ್ತು ಕಾಳಾರಾಂ ದೇಗುಲ ಪ್ರವೇಶ ಕುರಿತ ಮಾಹಿತಿಯನ್ನು ತೆಗೆದುಹಾಕಲಾಗಿದೆ. ‘ಸಂವಿಧಾನ ಶಿಲ್ಪಿ’ ಎಂಬ ವಿಶೇಷಣವನ್ನು ತೆಗೆದು ಹಾಕಲಾಗಿದೆ.  ಬುದ್ಧ, ಬಸವಣ್ಣ, ಸಾವಿತ್ರಿಬಾಯಿ ಫುಲೆ, ಅಂಬೇಡ್ಕರ್, ಕುವೆಂಪು ಮುಂತಾದವರಿಗೆ ಮಾಡಿರುವ ಅವಮಾನವಾಗಲೀ ನಾಡಗೀತೆ ಮತ್ತು ನಾಡಧ್ವಜಕ್ಕೆ ಮಾಡಿರುವ ಅವಮಾನವಾಗಲೀ ನಿಮಗೆ ಕಾಣಿಸುತ್ತಿಲ್ಲವೇ?

ಬಲಪಂಥೀಯ ಶಕ್ತಿಗಳೊಂದಿಗೆ ಕೈಜೋಡಿಸಿರುವ ಕೆಲವು ಸ್ವಾಮೀಜಿಗಳು ಕೂಡಾ ಈಗ ಕೇವಲ ಮೀಸಲಾತಿಗಾಗಿ ಒಟ್ಟಾಗಿ ಹೋರಾಟಕ್ಕಿಳಿದಿರುವುದು ನ್ಯಾಯವೇ? ಅಂಬೇಡ್ಕರ್ ಅವರಿಗೆ ಅಪಮಾನವಾದಾಗ, ದಲಿತರ ವಿರುದ್ಧ ದೌರ್ಜನ್ಯ ನಡೆದಾಗ ತುಟಿ ಬಿಚ್ಚದಿರುವ ಸ್ವಾಮೀಜಿಗಳೇ  ನಿಮಗಿದು ಶೋಭೆಯೇ? ನಿಮಗಿದು ತರವೇ? ಸಮ್ಮತವೇ? ಶೋಷಿತರಿಗಾಗಿ ಸಂವಿಧಾನದಲ್ಲಿ ಹಕ್ಕುಗಳನ್ನು ದೊರಕಿಸಿಕೊಟ್ಟು, ಬಾಯಿಲ್ಲದ ಮೂಕರಾಗಿದ್ದ ಜನರಿಗೆ ಮಾತನಾಡುವ ಧ್ವನಿ ತುಂಬಿ ಮಾತು ಕಲಿಸಿದ ಆ ಮಹಾ ಚೇತನದ ಆತ್ಮ ನಿಮ್ಮಂತಹ ಕೆಲವು ಸ್ವಾರ್ಥಿಗಳೂ RSS ಗುಲಾಮರೂ ಆಗಿರುವ ಸ್ವಾಮೀಜಿಗಳನ್ನು ನೋಡಿ ಮರುಗುವುದಿಲ್ಲವೇ?

ಮೊದಲು ಅಂಬೇಡ್ಕರ್ ಅವರ ಚಿಂತನೆಗಳನ್ನು ಮತ್ತು ಸಂವಿಧಾನವನ್ನು ರಕ್ಷಿಸಿಕೊಳ್ಳಲು ಹೋರಾಡೋಣ. ಸಾರ್ವಜನಿಕ ವಲಯಗಳನ್ನು ಕೆಲವೇ ಖಾಸಗಿ ಬಂಡವಾಳಶಾಹಿಗಳಿಗೆ ಮಾರಾಟ ಮಾಡುತ್ತಿರುವುದರ ವಿರುದ್ಧ ಹಾಗೂ ಈಗಿರುವ ಖಾಸಗಿ ವಲಯಗಳಲ್ಲಿಯೂ ಮೀಸಲಾತಿ ಅನುಷ್ಠಾನಕ್ಕೆ ತರುವ ಸಾಂಘಿಕ ಹೋರಾಟಕ್ಕೆ ಮುಂದಾಗೋಣ. ಸಾಮಾಜಿಕ ನ್ಯಾಯದ ಮೀಸಲಾತಿ ತಾನಾಗಿಯೇ ದೊರಕುತ್ತದೆ.

  • ಡಾ.ವಡ್ಡಗೆರೆ ನಾಗರಾಜಯ್ಯ, ಹಿರಿಯ ಸಾಹಿತಿ

Leave a Reply