ಎಲ್ಲಾ ಸಾವಿಗೂ ಧರ್ಮದ ಲೇಪನವನ್ನು ಹಚ್ಚಬೇಡಿ

3 years ago

#Dont #put #religion #label #all #death #humanity #ksnagaraj

ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ಮತ್ತೆ ಬಿ.ಜೆ.ಪಿ. ಮತ್ತು ಬಿ.ಜೆ.ಪಿ. ಬೆಂಬಲಿತ ಸಂಘಟನೆಗಳು ರಾಜ್ಯದಲ್ಲಿ ಆಗುವ ಎಲ್ಲಾ ಕೊಲೆ ಮತ್ತು ಹಲ್ಲೆಯ ಪ್ರಕರಣಗಳಿಗೆ ಧರ್ಮದ ಲೇಪನವನ್ನು ಹಚ್ಚಿ ಜನರ ದಿಕ್ಕನ್ನು ತಪ್ಪಿಸುವಂತಹ ಪ್ರಯತ್ನವನ್ನು ನಡೆಸುತ್ತಿದ್ದಾರೆ.

ಇಂತಹ ಒಂದು ತಂತ್ರಗಾರಿಕೆ 2013 ರಿಂದ 2018ರ ಅವಧಿಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವಿದ್ದಾಗಲು ಮಾಡಿದ್ದರು. ಅನೇಕ ಕೊಲೆಗಳಲ್ಲಿ ಸಿ.ಬಿ.ಐ. ತನಿಖೆ ನಡೆದು ಕಾರಣಗಳನ್ನು ನೀಡಿದ ಹಿನ್ನಲೆಯಲ್ಲಿ ಅಂತಹ ಕೊಲೆಗಳ ಬಗ್ಗೆ ಮಾತನಾಡುವುದನ್ನು ನಿಲ್ಲಿಸಿದರು.

ಈಗ ಜೈನಮುನಿಗಳ ಅತ್ಯಂತ ಹೀನವಾದಂತಹ ಕೊಲೆಯ ಬಗ್ಗೆ ಯಾವ ನಾಗರೀಕ ಸಮಾಜವು ಸಹ ದುಃಖಪಡದೇ ಇರುವುದಿಲ್ಲ. ಇದು ಯಾವ ಕಾರಣಕ್ಕೆ ಆಗಿದೆ, ಇದರ ಹಿನ್ನೆಲೆ ಏನು ಎಂಬುದು ಈಗಷ್ಟೆ ಪ್ರಾಥಮಿಕ ತನಿಖೆಯಿಂದ ತಿಳಿಯಬೇಕಾಗಿದೆ.

ರಾಜ್ಯದ ಉನ್ನತ ಪೊಲೀಸ್ ಅಧಿಕಾರಿಗಳು ಈ ನಿಟ್ಟಿನಲ್ಲಿ ಶ್ರಮವಹಿಸಿದ್ದಾರೆ. ರಾಜ್ಯದ ಗೃಹಸಚಿವರು ಸಹ ಅಗತ್ಯವಾದ ಕ್ರಮಗಳನ್ನು ಕೈಗೊಂಡು ಸ್ವತಃ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಹೀಗಿದ್ದರೂ ಸಹ ಬಿ.ಜೆ.ಪಿ.ಯ ನಾಯಕರು ಸದನದಲ್ಲಿ ರಾಜ್ಯ ಸರ್ಕಾರವನ್ನು ದೂಷಿಸುತ್ತಾ ಈ ಒಂದು ಅಮಾನುಷವಾದ ಹತ್ಯೆಗೆ ಪೂರ್ವಾಗ್ರಹ ಪೀಡಿತರಾಗಿ ರಾಜಕೀಯವಾದ ಮಾತುಗಳನ್ನಾಡಿ ಧರ್ಮದ ಲೇಪನವನ್ನು ‌ಹಚ್ಚುತ್ತಾ ತನಿಖೆಯ ಹಾದಿಯನ್ನು ದಿಕ್ಕುತಪ್ಪಿಸುವಂತಹ ಪ್ರಯತ್ನ ನಡೆಸಿದ್ದಾರೆ.

ರಾಜ್ಯ ಸರ್ಕಾರ ಯಾವುದೇ ಕಾರಣಕ್ಕು ಯಾವುದೇ ವ್ಯಕ್ತಿಯ ಸಾವು ಅಥವಾ ಹಿಂಸೆಯನ್ನು ಬಯಸುವುದಿಲ್ಲ. ಎಲ್ಲ ಪ್ರಕರಣಗಳಲ್ಲೂ ನಿಷ್ಪಕ್ಷಪಾತವಾದ ಪ್ರಾಮಾಣಿಕವಾದ ತನಿಖೆಯನ್ನು ನಡೆಸುತ್ತಿದೆ. ಅನಾವಶ್ಯಕವಾಗಿ ಕಾಂಗ್ರೆಸ್‌ ಸರ್ಕಾರ ಹಾಗೂ ಮುಖ್ಯಮಂತ್ರಿಗಳು ಒಂದು ಧರ್ಮದ ಪರವಾಗಿ ಇದ್ದಾರೆ ಎನ್ನುವ ರೀತಿಯಲ್ಲಿ ಬಿಂಬಿಸುವುದು ಸಾಧುವಲ್ಲ.

ಅಪರಾಧ ಯಾವುದೇ ಧರ್ಮದವರು ಮಾಡಿದರೂ ಸಹ ನೆಲದ ಕಾನೂನು ತನ್ನದೇ ಆದಂತಹ ರೀತಿಯಲ್ಲಿ ಅವರನ್ನು ಶಿಕ್ಷಿಸುತ್ತದೆ ಇದರಲ್ಲಿ ಯಾರು ಸಹ ಅಕ್ಷೇಪ ನಡೆಸುವುದಿಲ್ಲ. ಪ್ರತಿಯೊಂದು ಕೊಲೆಗಳಾದ ಸಂದರ್ಭದಲ್ಲಿ ಕೂಡಲೇ ಸರ್ಕಾರವನ್ನು ದೂಷಿಸುವಂತಹ ಕೆಟ್ಟ ಪ್ರವೃತ್ತಿಯನ್ನು ಬಿಡುವುದು ಒಳ್ಳೆಯದು. ರಾಜ್ಯದಲ್ಲಿ ಬಿ.ಜೆ.ಪಿ. ಆಡಳಿತವಿದ್ದ ಸಂದರ್ಭದಲ್ಲೂ ಅನೇಕರ ಹತ್ಯೆಗಳಾಗಿತ್ತು. ಆಗ ನೀವು ಯಾವ ಕ್ರಮಗಳನ್ನು ಅನುಸರಿಸಿದ್ದೀರಿ ಎನ್ನುವುದು ದಾಖಲೆಗಳಲ್ಲಿದೆ.

ಇದೇ ರೀತಿಯಲ್ಲಿ ರಾಜ್ಯ ಸರ್ಕಾರ ‘ಸಿ’ ದರ್ಜೆಯ ಮುಜರಾಯಿ ದೇವಾಲಯಗಳ ನಿರ್ವಹಣೆಗೆ ರೂ. 35,000/- ಮೊತ್ತವನ್ನು ನಿಗದಿಪಡಿಸಿದೆ. ಮೈಸೂರು ಚಾಮುಂಡೇಶ್ವರಿ ದೇವಾಲಯದ ಅಭಿವೃದ್ಧಿಗೆ ಪ್ರಾಧಿಕಾರ ರಚಿಸಿದೆ. ಉತ್ತರ ಕರ್ನಾಟಕ ಅನೇಕ ದೇವಾಲಯಗಳ ಸೌಲಭ್ಯಗಳ ಸೌಕರ್ಯಗಳಿಗೆ ಮುಂಗಡ ಪತ್ರದಲ್ಲಿ ಹಣ ಮೀಸಲಿಟ್ಟಿದೆ.

ಹಸು, ಕರು, ಮೇಕೆ, ಕುರಿ ಇವುಗಳ ಸಾವಿಗೆ ಹೆಚ್ಚಿನ ಮೊತ್ತವನ್ನು ನಿಗದಿಪಡಿಸಿದೆ. ದಲಿತರು ಮತ್ತು ಹಿಂದುಳಿದ ವರ್ಗದವರ ಮಕ್ಕಳ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಹಾಸ್ಟೆಲ್ ಸೌಲಭ್ಯ ಒದಗಿಸಿಕೊಡಲಾಗಿದೆ. ಇಷ್ಟೆಲ್ಲಾ ಇದ್ದರೂ ಸಹ ಮುಂಗಡ ಪತ್ರದಲ್ಲಿ ಅಲ್ಪಸಂಖ್ಯಾತರಿಗಾಗಿ ಕೆಲವು ಯೋಜನೆಗಳನ್ನು ಘೋಷಿಸಿರುವ ವಿಚಾರವನ್ನೆ ದೊಡ್ಡದು ಮಾಡಿಕೊಂಡು ಮುಂಗಡ ಪತ್ರ ಒಂದು ಧರ್ಮದ ಪರವಿದೆ ಎಂಬ ರೀತಿಯಲ್ಲಿ ಜಾಲತಾಣಗಳಲ್ಲಿ ಸುದ್ದಿಗಳನ್ನು ಹರಡಿಸುತ್ತಿರುವುದು ಅವರುಗಳ ಸಣ್ಣತನವನ್ನು ತೋರಿಸುತ್ತದೆ.

ಮುಜರಾಯಿ ಇಲಾಖೆಯ ಆದಾಯದಲ್ಲಿ ಯಾವುದೇ ಒಂದು ಭಾಗವನ್ನು ಮಸೀದಿಗಳಿಗೆ ಮತ್ತು ಚರ್ಚ್‌ಗಳಿಗೆ ಕೊಡುವುದಿಲ್ಲ. ದೇವಾಲಯದ ಅಭಿವೃದ್ಧಿಗೆ ಮಾತ್ರವೇ ಈ ಹಣ ಬಳಕೆಯಾಗುತ್ತದೆ. ಆದರೂ ಸಹ ಸಾಮಾಜಿಕ ಜಾಲತಾಣದಲ್ಲಿ ದೇವಾಲಯದ ಹಣ ಮಸೀದಿ ಮತ್ತು ಚರ್ಚ್‌ಗಳಿಗೆ ನೀಡುತ್ತಾರೆಂದು ಸುದ್ದಿ ಹರಡಿಸುತ್ತಾರೆ. ಮಾನ್ಯ ಮುಜರಾಯಿ ಇಲಾಖೆಯ ಅಧಿಕಾರಿಗಳು ಪತ್ರಿಕಾ ಪ್ರಕಟಣೆಯ ಮೂಲಕ ಜಾಹಿರಾತು ನೀಡಿ ಇದರ ಬಗ್ಗೆ ಸ್ಪಷ್ಟನೆ ನೀಡಬೇಕು. ಇಲ್ಲದಿದ್ದರೆ ಇಂತಹ ಸುಳ್ಳು ಸುದ್ದಿಗಳು ಸತ್ಯ ಎಂದು ನಂಬುತ್ತಲೇ ಇರುತ್ತಾರೆ.

– ಕೆ.ಎಸ್.ನಾಗರಾಜ್, ಬೆಂಗಳೂರು

Leave a Reply