ಬೆಂಗಳೂರು: ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟಿಸಿದ್ದ ಶಂಕಿತ ವ್ಯಕ್ತಿಯು ಸ್ಪೋಟಕದೊಂದಿಗೆ ಸಾಮಾನ್ಯರಂತೆ ಬಿಎಂಟಿಸಿ ಬಸ್‌ನಲ್ಲಿ ಓಡಾಟ ಮಾಡಿರುವ ಕುರಿತು ಮಾಹಿತಿ ಲಭ್ಯವಾಗಿದೆ.
ಸ್ಪೋಟ ಸಂಭವಿಸಿದ ವೈಟ್ ಫೀಲ್ಡ್ ನ ರಾಮೇಶ್ವರಂ ಕೆಫೆಗೆ ಬಿಎಂಟಿಸಿ ಬಸ್ ನಲ್ಲಿ ಬಂದಿದ್ದಾನೆ ಎಂಬ ಮಾಹಿತಿ ಆಧಾರ ಮೇಲೆ ಆತ ಸಂಚರಿಸಿದ ಬಸ್ ರೂಟ್ ಸಂಖ್ಯೆಯ ಜಾಡು ಹಿಡಿದ ಪೊಲೀಸ್ ತಂಡ ತನಿಖೆಯನ್ನು ತೀವ್ರಗೊಳಿಸಿದೆ.
ಈ ಬಗ್ಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.ಬಾಂಬ್ ಇಟ್ಟಿದ್ದ ವ್ಯಕ್ತಿ ಬಿಎಂಟಿಸಿಯ ವೋಲ್ವೋ ಬಸ್‌ನಲ್ಲಿ ಪ್ರಯಾಣ ಮಾಡಿರುವ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕಿದ್ದಾರೆ.
ಬಿಎಂಟಿಸಿಯ ವೋಲ್ವೋ ಬಸ್‌ನಲ್ಲಿ ಶಂಕಿತ ವ್ಯಕ್ತಿಯು ಪ್ರಯಾಣ ಮಾಡಿದ ದೃಶ್ಯಾವಳಿಯನ್ನೆಲ್ಲ ನಿಗಮ ಅಧಿಕಾರಿಗಳು ಪೊಲೀಸರಿಗೆ ಒಪ್ಪಿಸಿದ್ದಾರೆ.
ವಿಶೇಷವೆಂದರೆ ಬಾಂಬ್ ಇರುವ ಬ್ಯಾಗ್ ಹಿಡಿದು ಬಸ್‌ನಲ್ಲೇ ಬಂದಿದ್ದ ಶಂಕಿತ ವ್ಯಕ್ತಿ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಇಟ್ಟು ಮತ್ತೆ ವಾಪಸ್ ವೋಲ್ವೋ ಬಸ್‌ನಲ್ಲಿ ಹೋಗಿದ್ದಾನೆ.
ಬಸ್ ನಲ್ಲಿ ಆತ ಪ್ರಯಾಣ ಮಾಡಿರುವ ಕುರಿತು ತನಿಖಾ ಅಧಿಕಾರಿಗಳು ಮಾಹಿತಿ ಕೇಳಿದ್ದರು.ಹೀಗಾಗಿ ಎಲ್ಲ ಸಿಸಿಟಿವಿ ದೃಶ್ಯಗಳನ್ನು ಅವರಿಗೆ ಕೊಟ್ಟಿದ್ದೇವೆ. ನಾವು ಕೊಟ್ಟ ಮಾಹಿತಿ ಮೇಲೆ ಪೊಲೀಸರು ತನಿಖೆಯನ್ನು ನಡೆಸುತ್ತಿದ್ದಾರೆ. ಇದರ ಹೊರತಾಗಿ ತನಿಖೆಯಲ್ಲಿ ಮೂಗು ತೂರಿಸಲು ಹೋಗಲ್ಲ ಎಂದು ತಿಳಿಸಿದ್ದಾರೆ.
ವೋಲ್ವೋ ಬಸ್ ಡಿಪೋ 25ಕ್ಕೆ ಸೇರಿದ್ದು, ರೂಟ್ ನಂಬರ್ 500 ಎಫ್ ಐಟಿಪಿಎಲ್, ಹೆಚ್‌ಎಸ್‌ಆರ್ ಲೇಔಟ್ ನಡುವೆ ಸಂಚಾರ ಮಾಡುವ ಬಸ್ ಇದಾಗಿದ್ದು ಅದರಲ್ಲಿ ಶಂಕಿತ ಸಂಚಾರ ಮಾಡಿರುವುದು ಖಚಿತವಾಗಿದೆ.
ಬೆಳಗ್ಗೆ ಸಮಯ 11:50:45 ಬಂದಿದ್ದ ಬಸ್‌ನಲ್ಲಿ ಶಂಕಿತ ಸಂಚರಿಸಿದ್ದಾನೆ. ವೋಲ್ವೋ ಬಸ್‌ನಲ್ಲಿ ವಿಡಿಯೋ ರೆಕಾರ್ಡ್ ಆಗಿದೆ. ಐಟಿಪಿಎಲ್ ಹಾಗೂ ಹೂಡಿ ಭಾಗಕ್ಕೆ ಸಂಚಾರ ಮಾಡಿದ್ದಾನೆ.
ಸ್ಫೋಟ ಪ್ರಕರಣಕ್ಕೆ ಸಂಬಂಧಪಟ್ಟ ನಾಲ್ವರನ್ನು ವಶಕ್ಕೆ ಪಡೆದಿರುವ ನಗರ ಪೊಲೀಸರು ತೀವ್ರ ವಿಚಾರಣೆ ಕೈಗೊಂಡು,ಎಲ್ಲಾ ಆಯಾಮದ ತನಿಖೆಯನ್ನು ನಡೆಸಿದ್ದಾರೆ.
ಈ ಮಧ್ಯೆ ಸಿಸಿಟಿಟಿಯಲ್ಲಿ ಅನುಮಾನಾಸ್ಪದ ಓಡಾಟದೊಂದಿಗೆ ಕಂಡುಬಂದಿದ್ದ ಕ್ಯಾಪ್ ಧರಿಸಿದ ವ್ಯಕ್ತಿಯನ್ನೂ ನಿನ್ನೆ ರಾತ್ರಿಯೇ ವಶಕ್ಕೆ ಪಡೆದು ವಿಚಾರಣೆ ಕೈಗೊಂಡಿದ್ದಾರೆ. ಸ್ಫೋಟ ನಡೆದ ಕೆಲವೇ ಕ್ಷಣದಿಂದಲೇ ಮಿಂಚಿನ ಕಾರ್ಯಾಚರಣೆಗೆ ಇಳಿದಿರುವ ಸಿಸಿಬಿ ಪೊಲೀಸರು, ಕ್ಯಾಪ್ ಹಾಕಿರುವ ವ್ಯಕ್ತಿ ಸೇರಿ ಒಟ್ಟು ನಾಲ್ಕು ಜನರನ್ನು ವಶಕ್ಕೆ ಪಡೆದಿದ್ದಾರೆ. ಅಜ್ಞಾತ ಸ್ಥಳದಲ್ಲಿ ಇವರ ವಿಚಾರಣೆ ನಡೆಸಲಾಗುತ್ತಿದೆ.
ಶಂಕಿತ ವ್ಯಕ್ತಿ ಖತರ್ನಾಕ್ ಪ್ಲಾನ್ ಮಾಡಿದ್ದು, ಘಟನೆಯುದ್ದಕ್ಕೂ ಕೈಗೆ ಹ್ಯಾಂಡ್ ಗ್ಲೌಸ್ ಹಾಕಿಕೊಂಡಿದ್ದ ಎಂದು ಗೊತ್ತಾಗಿದೆ.
ಬೆರಳಚ್ಚು(ಫಿಂಗರ್ ಪ್ರಿಂಟ್)ಎಲ್ಲಿಯೂ ಉಳಿಯಬಾರದು ಎಂಬ ಕಾರಣಕ್ಕೆ ಹ್ಯಾಂಡ್ ಗ್ಲೌಸ್ ಬಳಸಿದ್ದ. ಹ್ಯಾಂಡ್ ಗ್ಲೌಸ್ ಹಾಕಿಕೊಂಡೇ ಕೆಫೆಯೊಳಗೆ ಬಂದು ಅದೇ ರೀತಿಯಲ್ಲಿ ಹೊರ ಹೋಗಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.




