ಶಿವರಾಮಕಾರಂತರ ಆಪ್ತ ಸಹಾಯಕಿಯಾಗಿ ಕಾರ್ಯ ನಿರ್ವಹಿಸಿ, ಕಾರಾಂತರ ನಿಧನಾನಂತರ ಅವರ ಸಮಗ್ರ ಸಾಹಿತ್ಯವನ್ನು ಯಾವುದೇ ಸ್ವಾರ್ಥವಿಲ್ಲದೆ ಕನ್ನಡ ಜಗತ್ತಿಗೆ ಉಣಬಡಿಸಿದ ಮಾಲಿನಿ ಮಲ್ಯ ಎಂಬ ನಮ್ಮೆಲ್ಲರ ಹಿರಿಯ ಸಹೋದರಿ ನಿನ್ನೆ ಬೆಂಗಳೂರಿನಲ್ಲಿ ನಿಧನರಾದರು.
ಶಿವರಾಮಕಾರಂತರು ತಮ್ಮ ಶಿಷ್ಯೆಯ ಮೇಲಿನ ಪ್ರಿತಿ ಮತ್ತು ಕಾಳಜಿಯನ್ನು ಗಮನಿಸಿ ತಮ್ಮ ಸಮಗ್ರ ಸಾಹಿತ್ಯದ ಹಕ್ಕುಗಳನ್ನು ಮಾಲಿನಿ ಮಲ್ಯ ಅವರಿಗೆ ಬರೆದಿದ್ದರು. ಇದಕ್ಕೆ ಪ್ರತಿಕ್ರಿಯೆಯಂತೆ ತಮ್ಮ ಜೀವನಪೂರ್ತಿ ಗುರುವಿನ ಸ್ಮರಣೆಯಲ್ಲಿ ಕಳೆದ ಇವರು ಸಾಲಿಗ್ರಾಮದ ಕಾರಂತರ ಮನೆಯನ್ನು ಸ್ಮಾರಕ ಮಾಡಿದರು.
ಕರ್ನಾಟಕ ಸರ್ಕಾರವೂ ಸೇರಿದಂತೆ ಕಾರಂತರ ಕೃತಿಗಳನ್ನು ಪ್ರಕಟಿಸಲು ಮುಂದೆ ಬಂದ ಪ್ರಕಾಶಕರಿಗೆ ಉದಾರವಾಗಿ ಸಹಕರಿಸಿದರು. ಇದರ ಪರಿಣಾಮವಾಗಿ ಕನ್ನಡ ಸಂಸ್ಕೃತಿ ಇಲಾಖೆಯಿಂದ ಕಾರಂತರ ಕಾದಂಬರಿಗಳು ಒಂಬತ್ತು ಸಂಪುಟಗಳಲ್ಲಿ ಪ್ರಕಟವಾಗಲು ಸಹಾಯವಾಯಿತು.
ಉಡುಪಿ ಅಥವಾ ಬೆಂಗಳೂರು ನಗರದಲ್ಲಿ ಭೇಟಿಯಾದಾಗ ಈ ಹಿರಿಯಕ್ಕನ ಮುಂದೆ ಕೈ ಮುಗಿದು ನಿಮ್ಮ ನಿಸ್ವಾರ್ಥ ಸೇವೆಯಿಂದ ಕನ್ನಡ ಸಾಹಿತ್ಯ ಲೋಕ ಶ್ರೀಮಂತವಾಯಿತು ಎಂದು ಹೇಳುತ್ತಿದ್ದೆ. ಬಾಯಿತುಂಬಾ ನಗುತ್ತಿದ್ದ ಮಾಲಿನಿ ಅಕ್ಕ ಕಾರಂತರ ಸನೀಹದಿಂದ ನನ್ನ ಬದುಕು ಶ್ರೀಮಂತವಾಯಿತು ಎನ್ನುತ್ತಿದ್ದರು.
ಬೆರಳಚ್ಚುಗಾರ್ತಿಯಾಗಿ ಸೇರಿದ ಮಾಲಿನಿಮಲ್ಯ ಅವರು ಲೇಖಕಿಯಾಗಿ ರೂಪುಗೊಂಡರು. ಕಾರಂತರ ಸ್ಮರಣೆ ಕುರಿತಾದ ಅವರ ಕೃತಿ ಬಹಳ ಮುಖ್ಯವಾದ ಕೃತಿ.
ನಮ್ಮೆಲ್ಲರ ಪುಣ್ಯವೆಂಬಂತೆ, ಮಾಲಿನಿ ಅಕ್ಕ ಅವರಿಂದ ಕಾರಂತರು, ತೇಜಸ್ವಿ ಮತ್ತು ತಾರಿಣಿ ಅವರ ಉದಾತ್ತ ನಿಲುವುಗಳಿಂದ ಕುವೆಂಪು ಅವರ ಸಮಗ್ರ ಕೃತಿಗಳು ಕನ್ನಡಿಗರಿಗೆ ದೊರೆತವು. ದ.ರಾ. ಬೇಂದ್ರೆ ಅವರ ಪುತ್ರ ಡಾ.ವಾಮನಬೇಂದ್ರೆ ಅವರ ಹುಚ್ಚಾಟದಿಂದ ಬೇಂದ್ರೆ ಕಾವ್ಯಗಳು ಕನ್ನಡ ಜಗತ್ತಿಗೆ ದೊರೆಯಲಿಲ್ಲ.
ಬೇಂದ್ರೆಯವರ ಕವಿತೆಯ ಪ್ರಕಟಣೆಗೆ ಕನ್ನಡ ವಿ.ವಿ. ಮತ್ತು ಸರ್ಕಾರಕ್ಕೆ ಅನುಮತಿ ನೀಡದ ವಾಮನಬೇಂದ್ರೆ, ತಾವೇ ಸ್ವಂತ ಔದಂಬರಗಾಥೆ ಹೆಸರಿನಲ್ಲಿ ಸಮಗ್ರ ಕಾವ್ಯ ಸಂಪುಟಗಳನ್ನು ಬರೆದು ಒಂದಿಷ್ಟು ಗೊಬ್ಬರಗಳನ್ನು ಪ್ರಕಟಿಸಿದರು.
ಈ ಕಾರಣಕ್ಕಾಗಿ ಕುವೆಂಪು ಅವರ ಶ್ರೇಷ್ಠ ಕೃತಿ ಪೂರ್ಣಚಂದ್ರ ತೇಜಸ್ವಿ ಆದರೆ, ಬೇಂದ್ರೆಯವರ ಕೆಟ್ಟ ಕೃತಿ ವಾಮನಬೇಂದ್ರೆ ಎಂಬ ಜೋಕ್ ಕನ್ನಡ ಸಾಹಿತ್ಯದಲ್ಲಿ ಹುಟ್ಟಿಕೊಂಡಿತು.
ಮಾಲಿನಿ ಅಕ್ಕನವರು ವಾಮನ ಬೇಂದ್ರೆಯವರ ಎದುರು ನನಗೆ ಗ್ರೇಟ್ ಎನಿಸುತ್ತಿದ್ದರು. ಇಂತಹ ಸಂತತಿ ಕನ್ನಡದ ಜಗತ್ತಿನಲ್ಲಿ ಮತ್ರಷ್ಟು ಹೆಚ್ಚಲಿ ಎಂಬ ಆಸೆಯಿಂದ ಅಗಲಿದ ಅಕ್ಕನಿಗೆ ಗೌರವಪೂರ್ವಕವಾಗಿ ವಿದಾಯ ಹೇಳಬಯಸುತ್ತೇನೆ.
-ಜಗದೀಶ್ ಕೊಪ್ಪ, ಚಿಂತಕರು




