ಆತ್ಮಚರಿತ್ರೆ ಎಂಬ ಆತ್ಮವಂಚನೆಯ ಕೃತಿ ಬರೆಯಲಾಗದ ಅಸಹಾಯಕತೆ

3 years ago

Jagadish Koppa Autobiography

ಆತ್ಮಚರಿತ್ರೆ ಎಂಬ ಆತ್ಮವಂಚನೆಯ ಕೃತಿ ಬರೆಯಲಾಗದ ಅಸಹಾಯಕತೆ.

ಗೆಳೆಯರೇ, ಒಂದಿಡಿ ಅನ್ನ ಮತ್ತು ಎರಡು ಅಕ್ಷರಗಳು ಇವುಗಳಿಗಾಗಿ ಬೆನ್ನತ್ರಿ ಬದುಕು ಕಟ್ಟಿಕೊಂಡವನು ನಾನು.

ನಾನು ಇಂದ್ರ, ಚಂದ್ರ ಎಂದು ಹೊಗಳಿಕೊಂಡು ಆತ್ಮವಂಚನೆಯ ಚರಿತ್ರೆ ಬರೆಯಲಾರೆ. ನನ್ನ ಮಾತು ಮತ್ತು ಅಕ್ಷರಗಳಲ್ಲಿ ಸುಡುವ ಕೆಂಡಗಳಂತಹ ಅಭಿಪ್ರಾಯಗಳು ಇದ್ದರೆ ನಾನು ಅನುಭವಿಸಿದ ನೋವು, ಹಸಿವು, ಅಪಮಾನಗಳ ನಡುವೆ ಕಟ್ಟಿಕೊಂಡ ಬದುಕಿನ ಇತಿಹಾಸವಿದೆ.

ಹಾಗಾಗಿ ಎಲ್ಲವನ್ನೂ ದಾಖಲಿಸುವ ಅಗತ್ಯವಿಲ್ಲ. ನನ್ನನ್ನು ಬಲ್ಲವರಿಗೆ ಇತಿಹಾಸ ಗೊತ್ತಿರುವಾಗ, ತಿಳಿಯದವರಿಗೆ ಸುಳ್ಳು ಹೇಳುವ ಅಗತ್ಯವಿಲ್ಲ.

ಆದರೆ, ನನ್ನ ಬರೆವಣಿಗೆಯ ಬದುಕಿನ ಹಿಂದಿರುವ ಅನೇಕ ಮಹನೀಯರನ್ನು ಇಂದಿಗೂ ನಾನು ನೆನೆಯುತ್ತೇನೆ. ನಾನು ತಿನ್ನುವ ಅನ್ನ, ಕುಡಿಯುವ ನೀರು, ಉಸಿರಾಡುವ ಗಾಳಿ, ಬದುಕುತ್ತಿರುವ ಬದುಕಿನ ಹಿಂದೆ ಅವರುಗಳ ಋಣವಿದೆ.

ಇವರುಗಳಲ್ಲಿ ಪ್ರಮುಖವಾಗಿ ಪ್ರಜಾವಾಣಿ ಯ ಕೆ.ಎನ್.ಹರಿಕುಮಾರ್. ಜೆ.ರಾಮಮೂರ್ತಿ, ಶಿವರಾಮೇಗೌಡ, ಬಿ.ವಿ.ವೈಕುಂಠರಾಜು, ವಡ್ಡರ್ಸೆ, ಐ.ಕೆ‌ ಜಾಗೀರ್ದಾರ್, ರಾ.ಸೂರಿ, ಬಿ.ಗುಜ್ಜಾರಪ್ಪ, ಕೆ.ಪುಟ್ಟಸ್ವಾಮಿ ಇವರುಗಳ ಋಣವಿದೆ.

ಅದೇ ರೀತಿ ನಾನು ಹದಿನೆಂಟು ವರ್ಷಗಳ ಕಾಲ ಕಾರ್ಯ ನಿರ್ವಹಿಸಿದ ಉದಯ ಟಿ.ವಿ.ಯಲ್ಲಿ ಮಾಲೀಕರಾದ ಎಂ.ಸೆಲ್ವಂಅವರ ಪ್ರೀತಿ ಮತ್ತು ನಂಬಿಕೆಯ ಜೊತೆಗೆ ನನ್ನ ಸಹೋದ್ಯೋಗಿಗಳಾದ ಬಿ.ಟಿ.ಮುದ್ದೇಶ್, ಈರಲಗೆರೆ ಸಿದ್ದಯ್ಯ, ಎಂ.ಸಿ.ಶೋಭಾ, ಸೋಮಶೇಖರ ಕಿಲಾರಿ, ರಾಜೀವ, ವಾಸುದೇವಮೂರ್ತಿ, ಮಂಜುನಾಥ ಚಾಂದ್, ಬಿ.ಎಸ್. ಸತ್ಯ, ಹೀಗೆ ಅನೇಕ ಸಹೊದ್ಯೋಗಿ ಮಿತ್ರರ ಸಹಕಾರದಿಂದ ನಾನು ಲೇಖಕನಾಗಿ ಬೆಳೆಯಲು ಸಾಧ್ಯವಾಯಿತು.

ಎರಡು ವರ್ಷದ ಹಿಂದೆ ಹೃದಯಾಘಾತಕ್ಕೆ ಒಳಗಾದಾಗ, ಸಾವಿಗೆ ನಾನು ಹೆದರಲಿಲ್ಲ. ಅಷ್ಟು ವರ್ಷದ ಸಂಶೋದನೆ ದೇವದಾಸಿಯರ ಇತಿಹಾಸ ಪದಗಳಿವೆ ಎದೆಯೊಳಗೆ ಬರೆಯಲು ಸಾಧ್ಯವಾಗದಿದ್ದರೆ ಏನು ಮಾಡುವುದು? ಎಂಬ ಸಂಕಟ ನನ್ನನ್ನು ಕಾಡುತ್ತಿತ್ತು ‌ಕೊನೆಗೂ ಬರೆದು ಮಗಿಸಿದೆ.

ಕನ್ನಡ ಸಾಹಿತ್ಯ ಜಗತ್ತು ಆ ಕೃತಿಯನ್ನು ಪ್ರೀತಿಯಿಂದ ಸ್ವೀಕರಿಸಿತು. ಅದೇ ರೀತಿಯಲ್ಲಿ ಇನ್ನೊಂದು ಅಧ್ಯಯನ ಕೃತಿ ಗಾಂಧೀಜಿಯವರ ಕೊನೆಯ ದಿನಗಳ ಬಗ್ಗೆ ಉಳಿದಿತ್ತು.ಈಗ ಪ್ರಾರಂಭಿಸುತ್ತಿದ್ದೀನಿ. ಇದನ್ನು ಬರೆದು ಮುಗಿಸಿದರೆ ಸಾಕು. ಮತ್ತೇ ಬರೆಯಬೇಕೆಂಬ ಯಾವ ಉಮೇದು ನನಗಿಲ್ಲ.

ಪ್ರಶಸ್ತಿ ಅಥವಾ ಅಧಿಕಾರದ ಸ್ಥಾನ ಮಾನಕ್ಕೆ ಎಂದಿಗೂ ಹಲ್ಲುಗಿಂಜದೆ, ಯಾರ ಬಳಿ ಹೋಗದಿದ್ದರೂ ನನ್ನ ಕೃತಿಗಳಿಗೆ ನನ್ನ ನಿರೀಕ್ಷೆ ಮೀರಿ ಎಲ್ಲವೂ ನನಗೆ ದೊರೆತಿವೆ. ಎಲ್ಲಾ ಸಾಮಾನ್ಯರಂತೆ ಪದವಿ ಅಥವಾ ವಿ.ವಿ.ಗಳಲ್ಲಿ ಓದಲು ಯೋಗ್ಯತೆ ಇಲ್ಲದ ನಾನು ಹಗಲು ವೇಳೆ ದುಡಿದು ಸಂಜೆ ಕಾಲೇಜಿನಲ್ಲಿ ಓದಿದೆ.ಈಗ ನನ್ನ ಕೃತಿಗಳು ಮತ್ತು ಕೃತಿಗಳ ಅಧ್ಯಾಯಗಳು ರಾಜ್ಯದ ಏಳು ವಿಶ್ವ ವಿದ್ಯಾನಿಲಯಗಳಲ್ಲಿ ಪದವಿ ತರಗತಿಗಳಿಗೆ ಪಠ್ಯವಾಗಿವೆ.

ಒಬ್ಬ ಹಳ್ಳಿಗಾಡಿನ ಅನಕ್ಷರಸ್ಥ ಕುಟುಂಬದಿಂದ ಬಂದ ಹಾಗೂ ಅಕ್ಷರ ಲೋಕದ ಬೆನ್ನು ಹತ್ತಿದ ಅನಾಮಿಕನಿಗೆ ಇದಕ್ಕಿಂತ ಪ್ರಶಸ್ತಿ ಬೇಕಾ? ನಾನು ಮುಂದೆ ಏನೂ ಬರೆಯಲಾಗದಿದ್ದರೂ ನನ್ನ ಇಂದಿನ ನೆಮ್ಮದಿಯ ಬದುಕಿಗೆ ಏಣಿಯ ಮೆಟ್ಟಿಲು ಆದವರ ಬಗ್ಗೆ ಮರೆಯಲು ಹೇಗೆ ಸಾಧ್ಯ? ಅವರ ಕುರಿತಾಗಿ ಹಾಗೂ ನನ್ನ ಬರೆವಣಿಗೆಯ ಹಿಂದೆ ಪ್ರಭಾವ ಬೀರಿದ ವ್ಯಕ್ತಿಗಳ ಕುರಿತಾಗಿ ಬರೆಯುವ ಆಸೆಯಿದೆ. ನೋಡೋಣ.

  • ಜಗದೀಶ್ ಕೊಪ್ಪ, ಹಿರಿಯ ಪತ್ರಕರ್ತರು

Leave a Reply