ದಮನಿತ ಮಹಿಳೆಯರಿಗೆ ಸರ್ಕಾರಿ ಸೌಲಭ್ಯ ದೊರೆಯುವಂತೆ ನೋಡಿಕೊಳ್ಳಿ: ಗಂಗಾಧರಸ್ವಾಮಿ

2 years ago

ದಾವಣಗೆರೆ:  ತೃತೀಯ ಲಿಂಗಿ (ಟ್ರಾನ್ಸ್ಜೆಂಡರ್) ಹಾಗೂ ದಮನಿತ ಮಹಿಳೆಯರ ಜೀವನಮಟ್ಟ ಸುಧಾರಿಸಲು ವಿವಿಧ ಇಲಾಖೆಯಿಂದ ಅನುಷ್ಠಾನ ಮಾಡುತ್ತಿರುವ ಯೋಜನೆ, ಸೌಲಭ್ಯಗಳ ಬಳಸಿಕೊಳ್ಳಲು ಜಾಗೃತಿ ಮೂಡಿಸಬೇಕೆಂದು ಜಿಲ್ಲಾಧಿಕಾರಿ ಗಂಗಾಧರಸ್ವಾಮಿ ಅಧಿಕಾರಿಗಳಿಗೆ ಸೂಚಿಸಿದರು.

ನಗರದ ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಲಿಂಗತ್ವ ಅಲ್ಪಸಂಖ್ಯಾತರ ಸಮನ್ವಯ   ಸಮಿತಿ ಹಾಗೂ ದಮನಿತ ಮಹಿಳೆಯರ ಸಮನ್ವಯ ಸಮಿತಿ ಸಭೆಯಲ್ಲಿ ಮಾತನಾಡಿದರು.

ಈ ಸೌಲಭ್ಯಗಳನ್ನು ಪಡೆಯಲು ಅರ್ಹರಿಗೆ ಸೌಲಭ್ಯಗಳನ್ನು ತಲುಪಿಸಿ, ಮುಂದಿನ ಸಭೆಯಲ್ಲಿ   ಎರಡು ವರ್ಗಗಳಿಗೆ ಇಲಾಖಾವಾರು ಸೌಲಭ್ಯ ಕಲ್ಪಿಸಿರುವ ಬಗ್ಗೆ ಮಾಹಿತಿ ನೀಡಬೇಕೆಂದರು. ಸಾಮಾಜಿಕವಾಗಿ ಹಾಗೂ ಶೈಕ್ಷಣಿಕವಾಗಿ ಹಿಂದುಳಿದ ವರ್ಗ ಎಂದು ಟ್ರಾನ್ಸ್ಜೆಂಡರ್‌ಗಳನ್ನು ಪರಿಗಣಿಸಿ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರಬೇಕು ಎಂದರು.

ಇವರು ಸಹ ಸ್ವಾವಲಂಬಿಗಳಾಗಿ ಜೀವನ ನಡೆಸಲು ಮತ್ತು ಆದಾಯೋತ್ಪನ್ನ ಚಟುವಟಿಕೆಗಳಲ್ಲಿ ಕೊಡಗಿಸಿಕೊಂಡು ಆರ್ಥಿಕ ಸ್ವಾವಲಂಭನೆ ಸಾಧಿಸಲು ನಿಗಮದಿಂದ ರೂ.30,000/- ಪ್ರೋತ್ಸಾಹಧನ ನೀಡಲಾಗುವುದು ಎಂದರು.
 
ಹೆಚ್‌ಐವಿ ಸೋಂಕಿತ ಮಹಿಳೆಯರು ಸ್ವಯಂ ಉದ್ಯೋಗ ಕೈಗೊಂಡು ಅಭಿವೃದ್ಧಿ ಹೊಂದಲು ಸಹ ಸೌಲಭ್ಯ ನೀಡಲಾಗುತ್ತದೆ. ಪ್ರತಿ ಫಲಾನುಭವಿಗೆ ನಿಗಮದಿಂದ ರೂ.30,000/- ಪ್ರೋತ್ಸಾಹಧನ ನೀಡಲಾಗುತ್ತಿದೆ ಎಂದರು.

ದಮನಿತ ಮಹಿಳೆಯರ ಸಮಸ್ಯೆಗಳು, ಹಕ್ಕುಗಳು ಸಂರಕ್ಷಣೆ, ಶಿಫಾರಸ್ಸು ಹಾಗೂ ದೀರ್ಘಕಾಲಿನ ಕಾರ್ಯಕ್ರಮಗಳ ಬಗ್ಗೆ ಮತ್ತು ಲಿಂಗತ್ವ ಅಲ್ಪಸಂಖ್ಯಾತರ ಚೇತನ ಯೋಜನೆಯಡಿ ಸಾಲ, ಮೈತ್ರಿ ಯೋಜನೆಯಡಿ ನೀಡಲಾಗುತ್ತಿರುವ ಪಿಂಚಣಿ, ವಯಸ್ಸಾದವರಿಗೆ ವೃದ್ಧಾಶ್ರಮ ಮತ್ತು ಪಿಂಚಣಿ, ಸರ್ಕಾರಿ ವ್ಯವಸ್ಥೆಯಲ್ಲಿ ಸರ್ಕಾರಿ, ಅರೆಸರ್ಕಾರಿ, ಗುತ್ತಿಗೆ ಆಧಾರಿತ ಉದ್ಯೋಗ ಕಲ್ಪಿಸುವ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.

ಲಾಟರಿಯ ಮೂಲಕ ಲಿಂಗತ್ವ ಅಲ್ಪಸಂಖ್ಯಾತರ ಪುನರ್ವಸತಿ ಯೋಜನೆಯಲ್ಲಿ 31 ಗುರಿಗಳಲ್ಲಿ, 17 ಜನರ ಆಯ್ಕೆ, ಚೇತನ ಯೋಜನೆಯಲ್ಲಿ 21 ಗುರಿಗಳಲ್ಲಿ, 21 ಜನರ ಆಯ್ಕೆ, ಧನಶ್ರೀ ಯೋಜನೆಯಲ್ಲಿ 21 ಗುರಿಗಳಲ್ಲಿ 21 ಜನರ ಆಯ್ಕೆ, ದೇವದಾಸಿ ಪುನರ್ವಸತಿ ಯೋಜನೆಯಲ್ಲಿ 11 ಗುರಿಗಳಲ್ಲಿ 11 ಜನರ ಆಯ್ಕೆ, ಉದ್ಯೋಗಿನಿಯಲ್ಲಿ 4 ಜನರನ್ನು ಆಯ್ಕೆ ಮಾಡಲಾಯಿತು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ್.ಬಿ.ಇಟ್ನಾಳ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಮಂಜುನಾಥ, ಡಿಯುಡಿಸಿ ಯೋಜನಾ ನಿರ್ದೇಶಕ ಡಾ.ಮಹಾಂತೇಶ್, ಕರ್ನಾಟಕ ರಾಜ್ಯದ ಮಹಿಳಾ ಅಭಿವೃದ್ದಿ ನಿಗಮದ ಅಭಿವೃದ್ದಿ ನಿರೀಕ್ಷಕರಾದ ಮಂಜುಳಾ.ಐ.ಟಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಉಪನಿರ್ದೇಶಕ ರಾಜಾ ನಾಯ್ಕ,  ಸೇರಿದಂತೆ ಇತರರು ಹಾಜರಿದ್ದರು.

Leave a Reply