ಬೆಂಗಳೂರು: ಬೆಳಗಾವಿ, ಬೀದರ್ ಸೇರಿದಂತೆ ಕರ್ನಾಟಕ ಗಡಿಭಾಗದಲ್ಲಿರುವ ರಾಜ್ಯದ 865 ಗ್ರಾಮಗಳ ನಿವಾಸಿಗಳಿಗೆ ಮಹಾರಾಷ್ಟ್ರ ಸರ್ಕಾರ ಆರೋಗ್ಯ ವಿಮಾ ಯೋಜನೆ ಜಾರಿಗೆ ಮುಂದಾಗಿದೆ.ಇದು ಕನ್ನಡಿಗರು ಮತ್ತ ಕರ್ನಾಟಕಕ್ಕೆ ಮಾಡಿದ ಅಪಮಾನ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಗಡಿಯಲ್ಲಿನ ಕರ್ನಾಟಕದ ಗ್ರಾಮಗಳಿಗೆ ನೆರೆಯ ರಾಜ್ಯ ಸೌಲಭ್ಯ ಒದಗಿಸುತ್ತದೆ ಎಂದರೆ ನಾವೆಷ್ಟು ದುರ್ಬಲರಾಗಿದ್ದೇವೆ ಎಂಬುದನ್ನು ತೋರಿಸುತ್ತದೆ. ರಾಜ್ಯವನ್ನು ಇಂತಹ ಕೆಟ್ಟ ಸ್ಥಿತಿಗೆ ತಲುಪಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಜನತೆಯ ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿದರು.
ನಮ್ಮ ನೆಲದಲ್ಲಿ ಮಹಾರಾಷ್ಟ್ರ ಸರ್ಕಾರ ಯೋಜನೆ ಜಾರಿಗೆ ಮುಂದಾಗಿದ್ದರೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕಣ್ಣುಮುಚ್ಚಿ ಕುಳಿತಿರುವುದು ಈ ಸರ್ಕಾರದ ದೌರ್ಬಲ್ಯಕ್ಕೆ ಸಾಕ್ಷಿ. ಮೊದಲಿಂದಲೂ ಬಿಜೆಪಿ ಸರಕಾರ ಇಂತಹ ಮರ್ಯಾದೆಗೇಡು ನಡೆಯನ್ನೇ ಇಟ್ಟುಕೊಂಡು ಬಂದಿದೆ. ಕನ್ನಡಿಗರನ್ನು ಅವಮಾನಿಸುತ್ತಿದೆ ಎಂದು ದೂರಿದರು.
ಬೊಮ್ಮಾಯಿ ಅವರಿಗೆ ಅಧಿಕಾರದಲ್ಲಿ ಮುಂದುವರಿಯಲು ಯೋಗ್ಯತೆಯಾಗಲಿ, ನೈತಿಕ ಹಕ್ಕಾಗಲಿ ಇಲ್ಲವಾಗಿದೆ. ಇದೊಂದು ನಾಲಾಯಕ್ ಸರ್ಕಾರ. ರಾಜ್ಯ ಹಾಗೂ ಕನ್ನಡಿಗರ ಹಿತ ಕಾಯುವಲ್ಲಿ ವಿಫಲವಾಗಿರುವ ಮುಖ್ಯಮಂತ್ರಿಗಳು ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು
ನಮ್ಮ ಪ್ರಾಣ ಹೋದರೂ ಸರಿ ನಮ್ಮ ನೆಲ, ಜಲ, ಭಾಷೆ ರಕ್ಷಣೆ ಮಾಡಿಕೊಳ್ಳುತ್ತೇವೆ. ನಾವು ಗಡಿ ಭಾಗದ ಒಂದೇ ಒಂದು ಇಂಚು ಭೂಮಿಯನ್ನು ಮಹಾರಾಷ್ಟ್ರಕ್ಕೆ ಬಿಟ್ಟು ಕೊಡುವುದಿಲ್ಲ. ಅವರ ಯೋಜನೆ ನಮ್ಮ ನೆಲದಲ್ಲಿ ಜಾರಿಗೆ ಅವಕಾಶ ನೀಡುವುದಿಲ್ಲ ಎಂದು ಹೇಳಿದರು.
ಇದು ಕನ್ನಡಿಗರ ಸ್ವಾಭಿಮಾನದ ಪ್ರಶ್ನೆ. ನಮ್ಮ ನೆಲದಲ್ಲಿ, ನಮ್ಮ ಜನರ ಆರೋಗ್ಯ ರಕ್ಷಿಸಲು ನಮಗೆ ತಾಕತ್ತು ಇಲ್ಲವೇ? ನಮ್ಮ ನೆಲದಲ್ಲಿ ಯೋಜನೆ ಜಾರಿ ಮಾಡಲು ಮಹಾರಾಷ್ಟ್ರ ಸರಕಾರಕ್ಕೆ ಅನುಮತಿ ಕೊಟ್ಟವರು ಯಾರು? ನಮಗೇಕೆ ಬೇಕು ಅವರ ಭಿಕ್ಷೆ. ನಮ್ಮ ಜನರ ಅರೋಗ್ಯ ರಕ್ಷಣೆ ಮಾಡಲು ರಾಜ್ಯ ಬಿಜೆಪಿ ಸರಕಾರದ ಬಳಿ ಹಣ ಇಲ್ಲವೇ? ಈ ಸರಕಾರವೇನಾದರೂ ದಿವಾಳಿ ಆಗಿದೆಯೇ? ಎಂದು ಪ್ರಶ್ನಿಸಿದರು.
ಬಿಜೆಪಿ ಸರ್ಕಾರ ರಾಜಕೀಯ ಕಾರಣಗಳಿಗೆ ಕನ್ನಡಿಗರ ಹಿತಾಸಕ್ತಿ ಬಲಿ ಕೊಡಲು ಮುಂದಾಗಿದೆ. ಕನ್ನಡಿಗರ ಸ್ವಾಭಿಮಾನ, ಮರ್ಯಾದೆ ಹರಾಜು ಹಾಕುತ್ತಿದೆ. ಇದರ ವಿರುದ್ಧ ಕನ್ನಡ ಪರ ಸಂಘಟನೆಗಳು, ಸಾಹಿತಿಗಳು, ಚಿತ್ರರಂಗದವರು, ಕಲಾವಿದರು, ಬುದ್ಧಿಜೀವಿಗಳು ಧ್ವನಿ ಎತ್ತಬೇಕು ಎಂದು ಮನವಿ ಮಾಡಿದರು.
ನಾನು ನಾಳೆಯೇ ಬೆಳಗಾವಿಗೆ ಹೋಗಿ, ಅಲ್ಲಿನ ನಾಯಕರ ಜತೆ ಚರ್ಚೆ ಮಾಡಿ ನಮ್ಮ ನೆಲ ರಕ್ಷಣೆ ಮಾಡಿಕೊಳ್ಳಲು ಹೋರಾಟ ಮಾಡುತ್ತೇವೆ ಎಂದು ಘೋಷಿಸಿದರು.
ಸರ್ಕಾರ ವಜಾಗೊಳಿಸಿ: ಈ ನಡುವೆ ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಗಡಿಗೆ ಹೊಂದಿಕೊಂಡಿರುವ ಕರ್ನಾಟಕದ 865 ಹಳ್ಳಿಗಳ ಜನರಿಗಾಗಿ ಮಹಾರಾಷ್ಟ್ರ ಸರ್ಕಾರವು ಆರೋಗ್ಯ ವಿಮೆ ಯೋಜನೆ ಜಾರಿಗೊಳಿಸುತ್ತಿರುವುದು ಅಕ್ಷಮ್ಯ. ಇದು ಒಕ್ಕೂಟದ ವ್ಯವಸ್ಥೆಗೆ, ರಾಜ್ಯದ ಸಾರ್ವಭೌಮತೆಗೆ ಧಕ್ಕೆ ತರುವಂತಿದೆ. ಕೂಡಲೇ ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಿ, ಅಲ್ಲಿನ ರಾಜ್ಯ ಸರ್ಕಾರವನ್ನು ವಜಾಗೊಳಿಸಬೇಕೆಂದು ಒತ್ತಾಯಿಸಿದರು.
ರಾಜ್ಯ ಹಾಗೂ ಕನ್ನಡಿಗರ ಹಿತಾಸಕ್ತಿ ಕಾಪಾಡುವಲ್ಲಿ ಮುಖ್ಯಮಂತ್ರಿ ಬೊಮ್ಮಾಯಿ ಅವರು ಕೂಡ ವಿಫಲರಾಗಿದ್ದಾರೆ. ಮುಖ್ಯಮಂತ್ರಿಯಾಗಿ ಒಂದು ಕ್ಷಣವೂ ಮುಂದುವರಿಯಲು ಅವರಿಗೆ ಅಧಿಕಾರವಿಲ್ಲ. ಕೂಡಲೇ ರಾಜೀನಾಮೆ ನೀಡಲಿ ಎಂದು ಒತ್ತಾಯಿಸಿದರು.
ಗಡಿ ಪ್ರದೇಶಕ್ಕೆ ಸಂಬಂಧಿಸಿದಂತೆ ಮಹಾಜನ್ ಆಯೋಗ ನೀಡಿದ ವರದಿಯನ್ನು ರಾಜ್ಯ ಸರ್ಕಾರ ಒಪ್ಪಿಕೊಂಡಿದೆ. ಆದರೆ, ಮಹಾರಾಷ್ಟ್ರ ಇದುವರೆಗೂ ತಕರಾರು ಎತ್ತುತ್ತಿದೆ. ರಾಜ್ಯದ ಒಂದಿಂಚೂ ಜಾಗ ಬಿಟ್ಟುಕೊಡಬಾರದು. ನೆಲ– ಜಲ– ಗಡಿ ರಕ್ಷಣೆ ನಮ್ಮ ಹಕ್ಕು. ರಾಜ್ಯ ಸರ್ಕಾರ ಮೌನವಾಗಿರಬಾರದು ಎಂದು ಹೇಳಿದರು.




