ಬೆಂಗಳೂರು: ಗುತ್ತಿಗೆ ಕಾರ್ಯಾದೇಶ ನೀಡಲು ಲಂಚ ಪಡೆದ ಆರೋಪಕ್ಕೆ ಗುರಿಯಾಗಿ ಬಂಧನದ ಭೀತಿ ಎದುರಿಸುತ್ತಿದ್ದ ಚನ್ನಗಿರಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಕೆ.ಮಾಡಾಳು ವಿರೂಪಾಕ್ಷಪ್ಪ ಅವರಿಗೆ ಹೈಕೋರ್ಟ್ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ. ನ್ಯಾಯಾಲಯದ ಈ ತೀರ್ಪಿನಿಂದಾಗಿಮಾಡಾಳ್ ವಿರೂಪಾಕ್ಷಪ್ಪ ಸದ್ಯಕ್ಕೆ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.
ಲೋಕಾಯುಕ್ತ ಪೊಲೀಸರು ಬಂಧಿಸಬಹುದು ಎಂಬ ಹಿನ್ನಲೆಯಲ್ಲಿ ವಿರೂಪಾಕ್ಷಪ್ಪ ಹೈಕೋರ್ಟ್ ನಲ್ಲಿ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದ್ದರು.ಈ ಅರ್ಜಿಯನ್ನು, ‘ಶಾಸಕರು–ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ಮೇಲ್ಮನವಿಯ ವಿಶೇಷ ನ್ಯಾಯಪೀಠದ ನ್ಯಾಯಮೂರ್ತಿ ಕೆ.ನಟರಾಜನ್ ವಿಚಾರಣೆ ನಡೆಸಿದರು.
ಅರ್ಜಿದಾರರ ಪರ ವಾದ ಮಂಡಿಸಿದ ವಕೀಲ ಕೆ.ಸುಮನ್, ತಮ್ಮ ಕಕ್ಷಿದಾರರಾದ ಮಾಡಾಳು ವಿರೂಪಾಕ್ಷಪ್ಪ ಅವರು ಈ ಪ್ರಕರಣದಲ್ಲಿ ಎಲ್ಲಿಯೂ ನೇರವಾಗಿ ಭಾಗಿಯಾಗಿಲ್ಲ. ಎಫ್. ಐ ಆರ್ ನಲ್ಲಿ ಅರ್ಜಿದಾರರ ವಿರುದ್ಧ ಆರೋಪ ಸಾಬೀತುಪಡಿಸಲು ಯಾವುದೇ ಸಾಕ್ಷಿಗಳಿಲ್ಲ. ಟೆಂಡರ್ ಗೆ ಲಂಚ ನೀಡುವಂತೆ 30ರಷ್ಟು ಕಮಿಷನ್ ಬೇಡಿಕೆ ಇಟ್ಟಿರುವ ಬಗ್ಗೆ, ಪ್ರಯತ್ನ ನಡೆಸಿರುವ ಬಗ್ಗೆ ಅಥವಾ ನಿರ್ದಿಷ್ಟ ದಿನದಂದು ಲಂಚ ಕೊಡುವಂತೆ ಕೇಳಿದ ಬಗ್ಗೆ ಇನಿತೂ ಸಾಕ್ಷಿ ಇಲ್ಲ ಎಂದು ಹೇಳಿದರು.
ಮಗ ಮತ್ತು ತಂದೆಗೆ ಇದರಲ್ಲಿ ಯಾವುದೇ ಸಂಬಂಧ ಇಲ್ಲ. ಎಫ್ ಐಆರ್ ನಲ್ಲಿ ಯಾವುದೇ ಆರೋಪಗಳು ಇಲ್ಲ. ಗುತ್ತಿಗೆದಾರರಿಗೆ ಅವರು ಹಣ ನೀಡುವಂತೆ ಕೇಳಿರುವುದಕ್ಕೆ ಯಾವುದೇ ಸಾಕ್ಷ್ಯಾಧಾರಗಳಿಲ್ಲ. ಪ್ರಕರಣದ ತನಿಖೆಗೆ ಲೋಕಾಯುಕ್ತ ಪೊಲೀಸರು ವಿಶೇಷ ತನಿಖಾ ತಂಡ ರಚಿಸಿದ್ದಾರೆ. ವಿಚಾರಣೆಗೆ ಹಾಜರಾಗುವಂತೆ ನೋಟೀಸ್ ನೀಡಿದ್ದಾರೆ. ವಿರೂಪಾಕ್ಷಪ್ಪ ಅವರಿಗೀಗ 75 ವರ್ಷ. ನಾಲ್ಕು ಬಾರಿ ಶಾಸಕರು. ಮೇಲಾಗಿ ಹೃದಯ ಸಂಬಂಧಿತ ಸಮಸ್ಯೆ ಹೊಂದಿದ್ದಾರೆ. ವಿಚಾರಣೆಗೆ ಹಾಜರಾದರೆ ಲೋಕಾಯುಕ್ತ ಪೊಲೀಸರು ಬಂಧಿಸುವ ಭೀತಿ ಇದೆ. ಆದ್ದರಿಂದ, ನಿರೀಕ್ಷಣಾ ಜಾಮೀನು ನೀಡಬೇಕು ಎಂದು ಮನವಿ ಮಾಡಿದರು.
ಟೆಂಡರ್ ಹಾಗೂ ಖರೀದಿ ಆದೇಶ ನೀಡಲಾಗಿದೆ. ಆದರೆ ಟೆಂಡರ್ ಅಂತಿಮಗೊಳಿಸುವ ಅಧಿಕಾರ ವಿರೂಪಾಕ್ಷಪ್ಪನವರಿಗೆ ಇಲ್ಲ. ಲಂಚಕ್ಕೆ ಯಾವುದೇ ಬೇಡಿಕೆ ಇಟ್ಟಿರುವ ಬಗ್ಗೆ ದೂರಿನಲ್ಲಿ ದಾಖಲಾಗಿಲ್ಲ. ಮಗನೊಂದಿಗೆ ಮಾತನಾಡುವಂತೆ ತಿಳಿಸಿರುವುದಾಗಿ ಆರೋಪಿಸಲಾಗಿದೆ. ಆದರೆ ಲಂಚಕ್ಕೆ ಬೇಡಿಕೆ ಇಟ್ಟ ಬಗ್ಗೆ ಆರೋಪ ಇಲ್ಲ ಎಂದು ನ್ಯಾಯಾಧೀಶರ ಗಮನಕ್ಕೆ ತಂದರು.
ಮತ್ತೊಂದೆಡೆ ಇದಕ್ಕೆ ಪ್ರತಿಯಾಗಿ ಲೋಕಾಯುಕ್ತ ಪರ ಹಾಜರಾಗಬೇಕಿದ್ದ ವಕೀಲ ಬಿ.ಬಿ.ಪಾಟೀಲ ಅವರು ಗೈರಾಗಿದ್ದರು. ಕಿರಿಯ ವಕೀಲರು ಪ್ರಕರಣದ ಬಗ್ಗೆ ತನಿಖಾಧಿಕಾರಿಯಿಂದ ಹೆಚ್ಚಿನ ವಿವರಣೆ ಪಡೆಯಬೇಕಿದೆ ಎಂದರು.
ಇದನ್ನು ಆಲಿಸಿದ ನ್ಯಾಯಪೀಠ ಆರೋಪಿ ವಿರೂಪಾಕ್ಷಪ್ಪ ಮುಂದಿನ 48 ಗಂಟೆಗಳ ಒಳಗಾಗಿ ತನಿಖಾಧಿಕಾರಿ ಮುಂದೆ ಹಾಜರಾಗಬೇಕು. ಈ ವೇಳೆ ತನಿಖಾಧಿಕಾರಿಯು ಆರೋಪಿಯನ್ನು ಬಂಧಿಸಬಾರದು ಎಂದು ನಿರೀಕ್ಷಣಾ ಜಾಮೀನು ಮಂಜೂರು ಮಾಡಿ ಆದೇಶಿಸಿದರು.
ವಿಜಯೋತ್ಸವ: ಮತ್ತೊಂದೆಡೆ ಕಳೆದ ಆರು ದಿನಗಳಿಂದ ನಾಪತ್ತೆಯಾಗಿದ್ದ, ಮಾಡಾಳು ವಿರೂಪಾಕ್ಷಪ್ಪ ಹೈಕೋರ್ಟ್ ಷರತ್ತುಬದ್ದ ಜಾಮೀನು ನೀಡಿದ ಮರುಕ್ಷಣವೇ ಪ್ರತ್ಯಕ್ಷರಾದರು. ಅವರು ಚನ್ನಗಿರಿಯ ಚನ್ನೇಶ್ವರಪುರದ ನಿವಾಸದಿಂದ ಹೊರಬಂದು ಸ್ಥಳೀಯ ಮಹಾದೇವಮ್ಮ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದರೆ, ಅಭಿಮಾನಿಗಳು ಮತ್ತು ಬಿಜೆಪಿ ಕಾರ್ಯಕರ್ತರು ವಿಜಯೋತ್ಸವ ಆಚರಿಸಿ ಸಂಭ್ರಮಿಸಿದರು.
ತೆರೆದ ವಾಹನದಲ್ಲಿ ಅವರನ್ನು ಮನೆಯವರೆಗೆ ಕೊಂಡೊಯ್ದರು. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ನನ್ನ ಮೇಲೆ ಆಪಾದನೆ ಬಂದಿದ್ದರಿಂದ ನಾನು ಯಾರನ್ನೂ ಭೇಟಿಯಾಗಲಿಲ್ಲ. ನಾನು ಎಲ್ಲಿಯೂ ಓಡಿಹೋಗಿರಲಿಲ್ಲ. ನಾಪತ್ತೆಯಾಗಿರಲಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ನಾನು ಯಾವುದೇ ಅಕ್ರಮ ಹಣ ಸಂಪಾದಿಸಿಲ್ಲ. ನನ್ನ ಮನೆಯಲ್ಲಿ ಸಿಕ್ಕ ಹಣ ಕ್ರಷರ್ ಉದ್ಯಮದಿಂದ ಹಾಗೂ ಅಡಿಕೆ ಮಾರಿ ಬಂದ ಆದಾಯವಾಗಿದ್ದು, ಅದಕ್ಕೆ ಸೂಕ್ತ ದಾಖಲೆ ಇದೆ. ಅದನ್ನು ಸಲ್ಲಿಸುತ್ತೇನೆ. ಲಂಚ ಪ್ರಕರಣದಲ್ಲಿ ನಾನು ಸಂಪೂರ್ಣ ನಿರ್ದೋಷಿ ಎಂದು ಹೇಳಿದರು.
ನನ್ನ ಮೇಲೆ ಆಪಾದನೆ ಬಂದಿದ್ದರಿಂದ ನಾನು ಯಾರನ್ನೂ ಭೇಟಿಯಾಗಲಿಲ್ಲ. ನಾನು ಎಲ್ಲಿ ಓಡಿಹೋಗಿರಲಿಲ್ಲ. ನಾಪತ್ತೆಯಾಗಿರಲಿಲ್ಲ ಎಂದು ಸ್ಪಷ್ಟ ಪಡಿಸಿದರು.
ಸರ್ಕಾರದ ರಕ್ಷಣೆ: ಈ ನಡುವೆ ಬೆಳವಣಿಗೆಯ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ರಾಜ್ಯ ಸರ್ಕಾರ ಶಾಸಕ ಮಾಡಾಳು ವಿರೂಪಾಕ್ಷಪ್ಪ ಅವರ ರಕ್ಷಣೆ ಮಾಡುತ್ತಿದೆ ಎಂದು ಆರೋಪಿಸಿದರು.
ಸರ್ಕಾರದ ಭ್ರಷ್ಟಾಚಾರಕ್ಕೆ ದಾಖಲೆ ಕೇಳುತ್ತಿದ್ದವರಿಗೆ ವಿರೂಪಾಕ್ಷಪ್ಪ ಮಾಡಾಳು ಅವರ ಮಗ ಲಂಚದ ಹಣದ ಸಮೇತ ಸಿಕ್ಕಿಬಿದ್ದಿರುವುದು ಸಾಕ್ಷಿ. ರಾಜೀನಾಮೆ ಕೊಡಲು ಬಂದ ದಿನವೇ ವಿರೂಪಾಕ್ಷಪ್ಪ ಮಾಡಾಳ್ ಬಂಧನ ಆಗಬೇಕಿತ್ತು. ಈಗಲೂ ಅವರು ಬೆಂಗಳೂರಿನಲ್ಲಿದ್ದುಕೊಂಡೇ ಜಾಮೀನಿಗೆ ಅರ್ಜಿ ಹಾಕಿದ್ದಾರೆ. ಇಂಥಾ ಭ್ರಷ್ಟ ಸರ್ಕಾರವನ್ನು ಕಿತ್ತುಹಾಕಲೇಬೇಕು ಎಂದರು.
ಶಾಸಕನ ಮಗನ ಮನೆಯಲ್ಲಿ ₹ 8 ಕೋಟಿ ಭ್ರಷ್ಟ ಹಣ ಸಿಕ್ಕಿದೆ ಎಂದರೆ ಇನ್ನು ಇಡೀ ಸರ್ಕಾರ ಎಷ್ಟು ಲೂಟಿ ಮಾಡಿರಬಹುದು. ಈ ಪ್ರಕರಣದಿಂದ ರಾಜ್ಯದಲ್ಲಿ ಶೇ 40 ಕಮಿಷನ್ ನಡೆಯುತ್ತಿದೆ ಎಂಬುದು ಸಾಬೀತಾಗಿದೆ. ನಿಮ್ಮದು ಶೇ 40 ಕಮಿಷನ್ ಸರ್ಕಾರ ಎಂದು ಹೇಳಲು ಇದಕ್ಕಿಂತ ಬೇರೆ ಯಾವ ಸಾಕ್ಷಿ ಬೇಕು ಬೊಮ್ಮಾಯಿಯವರೇ? ನಿಮಗೇನಾದರೂ ನೈತಿಕತೆ ಇದ್ದರೆ ಈ ಕೂಡಲೇ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.



