ಬೆಂಗಳೂರು: ವಿಧಾನಸಭೆ ಚುನಾವಣೆ ಹೊಸ್ತಿಲಲ್ಲಿ ಇರುವಂತೆ ರಾಜಕೀಯ ನಾಯಕರ ಪಕ್ಷಾಂತರ ಪರ್ವ ಆರಂಭಗೊಂಡಿದೆ. ಬಿಜೆಪಿಗೆ ಗುಡ್ ಬೈ ಹೇಳಿದ ಕೊಳ್ಳೆಗಾಲ ಕ್ಷೇತ್ರದ ಮಾಜಿ ಶಾಸಕ, ಬಿಜೆಪಿ ನಂಜುಂಡಸ್ವಾಮಿ ಮತ್ತು ವಿಜಯಪುರದ ಮಾಜಿ ಶಾಸಕ ಮನೋಹರ ಐನಾಪುರ, ಮೈಸೂರು ಮಾಜಿ ಮೇಯರ್ ಪುರುಷೋತ್ತಮ ಅವರು ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್ ಸೇರ್ಪಡೆಯಾದರು
ಇವರನ್ನು ಪಕ್ಷಕ್ಕೆ ಬರಮಾಡಿಕೊಂಡ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ರಾಜ್ಯದಲ್ಲಿ ಕಾಂಗ್ರೆಸ್ ಪರವಾದ ವಾತಾವರಣ ನಿರ್ಮಾಣವಾಗಿದೆ. ಇದಕ್ಕೆ ಈ ಸೇರ್ಪಡೆಯೇ ಸಾಕ್ಷಿ ಎಂದರು.
ಇವತ್ತು ಮಾಜಿ ಶಾಸಕರು ಪಕ್ಷಕ್ಕೆ ಸೇರ್ಪಡೆ ಆಗುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಹಾಲಿ ಶಾಸಕು ಪಕ್ಷ ಸೇರಲಿದ್ದು, ಅವರ ಪಟ್ಟಿಯನ್ನು ಶೀಘ್ರ ಬಿಡುಗಡೆ ಮಾಡುತ್ತೇವೆ ಎಂದು ಡಿ.ಕೆ. ಶಿವಕುಮಾರ್ ಹೇಳಿದರು.
ಚುನಾವಣೆಗೆ ಹೆಚ್ಚು ದೂರ ಇಲ್ಲ. ಬಿಜೆಪಿಯವರು ಚುನಾವಣೆಯನ್ನು ಈಗಲೇ ನಡೆಸಲು ತರಾತುರಿಯಲ್ಲಿ ಇದ್ದಾರೆ. ಎಷ್ಟು ದಿನ ಬೇಗ ಆಗುತ್ತೋ ಅಷ್ಟು ಲಾಭ ಎಂಬ ಮನಸ್ಥಿತಿಯಲ್ಲಿ ಅವರು ಇದ್ದಾರೆ. ತರಾತುರಿಯಲ್ಲಿ ಟೆಂಡರ್ ಕರೆದು ಹಣ ಬಿಡುಗಡೆ ಮಾಡಲಾಗುತ್ತಿದೆ ಎಂದು ಆರೋಪಿಸಿದರು.
ನಾವು ಯಾವಾಗ ಬೇಕಾದರೂ ಚುನಾವಣೆಗೆ ಸಿದ್ದ. ಚುನಾವಣಾ ಆಯೋಗ ಚುನಾವಣೆ ದಿನ ಘೋಷಣೆ ಮಾಡಬೇಕು. ಈ ಮೂಲಕ ಭ್ರಷ್ಟಾಚಾರ ಕೊನೆಗೊಳಿಸಬೇಕು. ನಮ್ಮ ಹಿಂದಿನ ಸಮೀಕ್ಷೆಯಲ್ಲಿ ನಮಗೆ 134 ಸ್ಥಾನಗಳು ಇದ್ದವು. ಈಗಿನ ಸಮೀಕ್ಷೆಯಲ್ಲಿ ಅದು 140ಕ್ಕೆ ಏರಿದೆ ಎಂದರು.



