ಬೆಂಗಳೂರು: ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಲು ಗುತ್ತಿಗೆದಾರರಿಂದ ತಮ್ಮ ಪುತ್ರ ಲಂಚ ಪಡೆಯುತ್ತಿದ್ದ ಪ್ರಕರಣದಲ್ಲಿ ಬಂಧಿತರಾಗಿರುವ ಚನ್ನಗಿರಿಯ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಲೋಕಾಯುಕ್ತ
ಪೊಲೀಸರ ಪ್ರಶ್ನೆಗಳಿಗೆ ಸುಸ್ತು ಹೊಡೆದಿದ್ದಾರೆ.
ತೀವ್ರ ವಿಚಾರಣೆ ನಡೆಸಿದ ಬಳಿಕವು ಹಣ ಮೂಲಕ್ಕೆ ನಿಖರವಾದ ದಾಖಲೆಗಳನ್ನು ನೀಡಲು ವಿಫಲವಾಗಿರುವ ಮಾಡಾಳ್ ಅವರನ್ನು ತಮ್ಮ ಕಸ್ಟಡಿಗೆ ಪಡೆದು ಮಾಹಿತಿ ಸಂಗ್ರಹಿಸಲು ಸಿದ್ದತೆ ನಡೆಸಿದ್ದಾರೆ.
ನಿರೀಕ್ಷಣಾ ಜಾಮೀನು ರದ್ದಾಗುತ್ತಿದ್ದಂತೆ ಶಾಸಕ ಮಾಡಾಳು ವಿರೂಪಾಕ್ಷಪ್ಪರನ್ನು ಬಂಧಿಸಿದ
ಲೋಕಾಯುಕ್ತ ಪೊಲೀಸರು ಮೊದಲಿಗೆ
ಬೌರಿಂಗ್ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದರು. ಹೃದ್ರೋಗದ ಹಿನ್ನೆಲೆಯಲ್ಲಿ ಇಸಿಜಿ, ರಕ್ತದೊತ್ತಡ, ಮಧುಮೇಹ ಸೇರಿದಂತೆ ಸಾಮಾನ್ಯ ತಪಾಸಣೆ ನಡೆಸಲಾಯಿತು. ಈ ವೇಳೆ ನಾನು ಮೊದಲೇ ಹೃದ್ರೋಗಿ, ಎದೆ ನೋವು ಬರುತ್ತಿದೆ ಎಂದು ನೋವು ತೋಡಿಕೊಂಡರು.
ಆದರೆ ಆತನ ಆರೋಗ್ಯ ಸಾಮಾನ್ಯವಾಗಿದೆ ಎಂದು ಬೌರಿಂಗ್ ಆಸ್ಪತ್ರೆ ವೈದ್ಯರು ಖಚಿತಪಡಿಸಿದ ಬಳಿಕ ಅವರನ್ನು ಲೋಕಾಯುಕ್ತ ಕಚೇರಿಗೆ ಕರೆತರಲಾಯಿತು.
ಕಚೇರಿಯಲ್ಲಿಯೇ ಮಾಡಾಳ್ ಅವರನ್ನು ವಿಚಾರಣೆ ನಡೆಸಿದ್ದು, ರಾತ್ರಿ ಲೋಕಾಯುಕ್ತ ಕಚೇರಿಯಲ್ಲಿ ಮಾಡಳು ವಿರೂಪಾಕ್ಷಪ್ಪ ಅವರಿಗೆ ತಂಗಲು ಅವಕಾಶ ಕಲ್ಪಿಸಲಾಯಿತು.
ವಿರೂಪಾಕ್ಷಪ್ಪಗೆ ಮಲಗಲು ಅವರ ಆಪ್ತರು ಕಬ್ಬಿಣದ ಮಂಚ ತಂದು ಕೊಟ್ಟರು. ಚಾಪೆ, ದಿಂಬು, ಬೆಡ್ ಶೀಟ್ ಸೇರಿದಂತೆ ರಾತ್ರಿ ಊಟ, ನೀರಿನ ಬಾಟಲ್ ತಂದುಕೊಟ್ಟರು. ಬಳಿಕ ನನಗೆ ಟೋಪಿ ಬೇಕೆಂದು ಅದನ್ನು ಶಾಸಕರು ತರಿಸಿಕೊಂಡರು.
ರಾತ್ರಿ 12 ಗಂಟೆವರೆಗೆ ಲೋಕಾಯುಕ್ತ ಅಧಿಕಾರಿಗಳು ಪ್ರಶ್ನೆಗಳ ಸುರಿಮಳೆಗೈದಿದ್ದಾರೆ. ಆದರೆ, ಯಾವೊಂದು ಪ್ರಶ್ನೆಗೂ ಸರಿಯಾಗಿ ಉತ್ತರ ನೀಡಿಲ್ಲ. 8 ಕೋಟಿ ಎಲ್ಲಿಂದ ಬಂತು? ಅದರ ಮೂಲ ಯಾವುದು? ಎಲ್ಲಿಗೆ ತಲುಪಿಸುತ್ತಿದ್ದರು? ಮುಂತಾದ ಪ್ರಶ್ನೆಗಳನ್ನು ಮಾಡಾಳ್ ಮುಂದೆ ಇಡಲಾಗಿತ್ತು. ಆದರೆ, ಉತ್ತರಿಸಲು ಅವರು ತಡಬಡಾಯಿಸಿದ್ದಾರೆ.
ಈ ಹಿಂದೆ ವಿಚಾರಣೆಗೆ ಹಾಜರಾಗಿದ್ದ ಸಮಯದಲ್ಲೂ ಅವರು ತನಿಖೆಗೆ ಸರಿಯಾಗಿ ಸಹಕಾರ ನೀಡಿಲ್ಲ ಮತ್ತು ಸಮರ್ಪಕವಾದ ಉತ್ತರ ನೀಡಿಲ್ಲ. ಹಣದ ಮೂಲಕ್ಕೆ ಪೂರಕವಾದ ಸಾಕ್ಷ್ಯಾಧಾರಗಳನ್ನು ಸಹ ಒದಗಿಸಿಲ್ಲ. ಹಣದ ಮೂಲದ ಕುರಿತಂತೆ ಪುರಾವೆ ನೀಡಲು ಮೀನಮೇಷ ಎಣಿಸುತ್ತಿದ್ದಾರೆ. ಹಲವು ಬಾರಿ ವಿಚಾರಣೆ ವೇಳೆಯಲ್ಲೂ ಹಣದ ಮೂಲದ ದಾಖಲೆ ನೀಡಲು ವಿಫಲವಾಗಿದ್ದಾರೆ.
ಮೊದಲಿಗೆ ಕೃಷಿ ಮೂಲದ ಹಣ ಎಂದು ಮಾಡಾಳ್ ವಿರೂಪಾಕ್ಷಪ್ಪ ಹೇಳಿದ್ದರು. ಆ ಬಳಿಕ ವಿಚಾರಣೆ ವೇಳೆ ಸೂಕ್ತ ದಾಖಲೆಗಳ ಒದಗಿಸಿ, ಸಮರ್ಥಿಸಲು ತಡಬಡಾಯಿಸಿದ್ದರು. ಹೀಗಾಗಿ ಐದು ದಿನಗಳ ಅವಧಿಗೆ ಕಸ್ಟಡಿಗೆ ಪಡೆದಿದ್ದಾರೆ.



