ಲೋಕಸಭಾ ಚುನಾವಣಾ ಕಣಕ್ಕೆ ನಿಷ್ಠಾವಂತ ಐ.ಎ.ಎಸ್. ಅಧಿಕಾರಿ ಶಶಿಕಾಂತ್ ಸೆಂಥಿಲ್

2 years ago

ಕರ್ನಾಟಕ ಸರ್ಕಾರದಲ್ಲಿ ತಮ್ಮ ಪ್ರಾಮಾಣಿಕತೆ ಮತ್ತು ಬದ್ಧತೆಯ ಕಾರ್ಯವೈಖರಿಯ ಮೂಲಕ ಜನಮನ ಗೆದ್ದಿದ್ದ ತಮಿಳುನಾಡು ಮೂಲದ ಶಶಿಕಾಂತ್ ಸೆಂಥಿಲ್ ಅವರು ಈ ಬಾರಿ ಚೆನ್ನೈ ನಗರದ ಹೊರವಲಯ ಅಂದರೆ, ಬೆಂಗಳೂರಿಗೆ ನೆಲಮಂಗಲ ಇರುವಂತೆ, ಚೆನ್ನೈ – ಬೆಂಗಳೂರು ರೈಲು ಮಾರ್ಗದಲ್ಲಿ ಅರಕೋಣಂ ಸಮೀಪವಿರುವ ತಿರುವಳ್ಳೂರು ಕ್ಷೇತ್ರದಿಂದ ಲೋಕಸಭೆಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ.

ಮೂಲತಃ ಚೆನ್ನೈ ನಗರದಲ್ಲಿ ಹುಟ್ಟಿ ಬೆಳೆದ ಸೆಂಥಿಲ್ ಅವರನ್ನು ಅಲ್ಲಿನ ಜನತೆ ಕೈ ಹಿಡಿಯುವ ಸಾಧ್ಯತೆಯು ಹೆಚ್ಚಾಗಿದೆ. ಕಾಂಗ್ರೆಸ್ ಮತ್ತು ಡಿ.ಎಂ.ಕೆ. ಪಕ್ಷಗಳ ನಡುವೆ ಮೈತ್ರಿ ಇರುವ ಕಾರಣ ಹಾಗೂ ಚೆನ್ನೈ ನಗರದ ಬಹುತೇಕ ಕ್ಷೇತ್ರಗಳಲ್ಲಿ ಡಿ.ಎಂ.ಕೆ. ಪ್ರಭಾವ ಇರುವುದರಿಂದ ಶಶಿಕಾಂತ್ ಸೆಂಥಿಲ್ ಅವರ ಆಯ್ಕೆಯನ್ನು ನಾವು ನಿರೀಕ್ಷಿಸಬಹುದು.

ಐದು ವರ್ಷಗಳ ಹಿಂದೆ ಮಂಗಳೂರು ಜಿಲ್ಲಾಧಿಕಾರಿಯಾಗಿದ್ದ ಸಂದರ್ಭದಲ್ಲಿ ಶಶಿಕಾಂತ್ ಸೆಂಥಿಲ್ ತಮ್ಮ ಹುದ್ದೆಗೆ ರಾಜಿನಾಮೆ ಸಲ್ಲಿಸಿದಾಗ ನನಗೆ ಆಶ್ಚರ್ಯವಾಗಿತ್ತು. ಏಕೆಂದರೆ, ನಾನು ಉದಯ ಟಿ.ವಿ.ಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾಗ, ನನ್ನ ವ್ಯಾಪ್ತಿಗೆ ಬರುತ್ತಿದ್ದ ರಾಯಚೂರು ಜಿಲ್ಲೆಯಲ್ಲಿ ಅವರ ಕಾರ್ಯವೈಖರಿಯನ್ನು ಹಾಗೂ ಬೀದರ್ ಜಿಲ್ಲೆಯಲ್ಲಿ ಮೋನಿಸ್ ಮುದ್ಗಿಲ್ ಅವರ ಕಾರ್ಯವೈಖರಿಯನ್ನು ತೀರಾ ಹತ್ತಿರದಿಂದ ಗಮನಿಸಿದ್ದೆ. ಸೆಂಥಿಲ್ ಅವರು ರಾಜಿನಾಮೆ ನೀಡಿ ಹದಿನೈದು ದಿನಗಳಾಗಿದ್ದವು. ಅವರು ಇನ್ನೂ ಜಿಲ್ಲಾಧಿಕಾರಿ ನಿವಾಸವನ್ನು ತೆರವುಗೊಳಿಸಿರಲಿಲ್ಲ.

ಅದೇ ವರ್ಷ ಮಂಗಳೂರಿನ ಡಾ.ಶ್ರೀನಿವಾಸ ಕಕ್ಕಿಲಾಯರು ಅಕ್ಟೋಬರ್ ಎರಡರ ಗಾಂಧಿ ಜಯಂತಿ ದಿನಾಚರಣೆಯನ್ನು ವಿವಿಧ ಸಂಘಟನೆಗಳ ಸಹಾಯೋಗದಲ್ಲಿ ಹಮ್ಮಿಕೊಂಡಿದ್ದರು. ಗಾಂಧೀಜಿ ಕುರಿತು ನನ್ನಿಂದ ಉಪನ್ಯಾಸ ಹಾಗೂ ಸೆಂಥಿಲ್ ಅವರಿಂದ ಉದ್ಘಾಟನಾ ಭಾಷಣವನ್ನು ಏರ್ಪಡಿಸಿದ್ದರು.

ಧಾರವಾಡದಿಂದ ಮಂಗಳೂರಿಗೆ ಹೋಗಿದ್ದ ನಾನು ಕಾರ್ಯಕ್ರಮಕ್ಕೆ ಅರ್ಧ ಗಂಟೆ ಮುಂಚಿತವಾಗಿ ಹೋಗಿ ಸೆಂಥಿಲ್ ಅವರನ್ನು ಭೇಟಿಯಾಗಿ ಖಾಸಗಿಯಾಗಿ ಮಾತನಾಡಿದ್ದೆ. ಆ ದಿನ ಅವರು ತಮ್ಮ ಪತ್ನಿಯ ಜೊತೆ ಕಾರ್ಯಕ್ರಮಕ್ಕೆ ಬಂದಿದ್ದರು. ರಾಜೀನಾಮೆಗೆ ಕಾರಣವಾದ ವಿವರಗಳನ್ನು ಅವರು ನನ್ನೊಂದಿಗೆ ಹಂಚಿಕೊಂಡಿದ್ದರು. ಆಫ್ ದ ರೆಕಾರ್ಡ್ ಮಾದರಿಯಲ್ಲಿ ಅವರ ಮಾತುಗಳನ್ನು ನಾನು ಎಲ್ಲಿಯೂ ಹೊರಗೆ ಬಹಿರಂಗಪಡಿಸಲಿಲ್ಲ.

ಪ್ರಧಾನಿ ಮೋದಿ ಅವರ ಕಾರ್ಯವೈಖರಿ ಮತ್ತು ಧರ್ಮದ ಹೆಸರಿನಲ್ಲಿ ಜನತೆಯನ್ನು ಇಬ್ಭಾಗ ಮಾಡುತ್ತಿರುವ ಪರಿ ಇವುಗಳು ಸೆಂಥಿಲ್ ಅವರನ್ನು ಧೃತಿಗೆಡಿಸಿದ್ದವು. ಕೇಂದ್ರ ಸರ್ಕಾರದಿಂದ ನಿಯೋಜಿತಗೊಂಡಿದ್ದ ಓರ್ವ ಐ.ಎ.ಎಸ್. ಅಧಿಕಾರಿಗೆ ಕೇಂದ್ರ ಸರ್ಕಾರದ ನಡುವಳಿಕೆಗಳು ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಸಂಘಪರಿವಾರದ ಅಮಾನವೀಯ ಚಟುವಟಿಕೆಗಳಿಗೆ ಪ್ರತಿಭಟಿಸುವ ಸ್ವಾತಂತ್ರ್ಯವಿರಲಿಲ್ಲ. ಹಾಗಾಗಿ ಶಾಶ್ವತ ಪರಿಹಾರ ರೂಪಿಸಬೇಕೆಂಬ ಛಲ ಹೊತ್ತ ಅವರು ತಮ್ಮ ಹುದ್ದೆಗೆ ರಾಜಿನಾಮೆ ನೀಡಿದ್ದರು.

ಅವರ ಭವಿಷ್ಯದ ಜೀವನದ ಬಗ್ಗೆ ಆತಂಕಗೊಂಡು ನಾನು ಪ್ರಶ್ನಿಸಿದಾಗ, ಚೆನ್ನೈ ನಗರದಲ್ಲಿ ತಾವು ಹುಟ್ಟಿ ಬೆಳೆದದ್ದು, ಅವರ ತಂದೆ ಪ್ರೊಫೆಸರ್ ಹಾಗೂ ತಾಯಿ ಬ್ಯಾಂಕ್ ಅಧಿಕಾರಿಯಾಗಿದ್ದ ಸಂಗತಿಯನ್ನು ವಿವರಿಸಿ, ಭವಿಷ್ಯದಲ್ಲಿ ಸ್ವಯಂ ಸೇವಾ ಸಂಘಟನೆಯ ಮೂಲಕ ಸಮಾಜವನ್ನು ಎಚ್ಚರಿಸುವ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುತ್ತೇನೆ ಎಂದು ಹೇಳಿದ್ದರು.

ಸ್ಪಷ್ಟವಾಗಿ ಕನ್ನಡ ಓದುವ, ಬರೆಯುವ ಹಾಗೂ ಮಾತನಾಡಬಲ್ಲ ಸೆಂಥಿಲ್ ಅವರು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಬಿ.ಜೆ.ಪಿ. ಮಣ್ಣು ಮುಕ್ಕಲು ಪರೋಕ್ಷವಾಗಿ ಕಾರಣರಾದರು. ಇಂದು ಕಾಂಗ್ರೆಸ್ ಪಕ್ಷಕ್ಕೆ ಬಂಡವಾಳವಾಗಿರುವ ಬಹುತೇಕ ಗ್ಯಾರಂಟಿ ಯೋಜನೆಗಳ ಪರಿಕಲ್ಪನೆಯನ್ನು ರೂಪಿಸಿದ ಕೀರ್ತಿ ಸೆಂಥಿಲ್ ಅವರಿಗೆ ಸಲ್ಲುತ್ತದೆ.

ಬಾಲ್ಯದಿಂದಲೂ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದ ಸೆಂಥಿಲ್ ಅವರು ತಿರುಚ್ಚರಾಪಳ್ಳಿಯಲ್ಲಿ ಇಂಜಿನಿಯರಿಂಗ್ ಪದವಿಯನ್ನು ಉನ್ನತ ಸ್ಥಾನದೊಂದಿಗೆ ಮುಗಿಸಿ, ನಂತರ ಚೆನ್ನೈ ನಗರದಲ್ಲಿ ಪ್ರತಿಷ್ಠಿತ ಕಂಪನಿಯೊಂದರಲ್ಲಿ ಒಂದು ವರ್ಷ ಇಂಜಿನಿಯರ್ ಆಗಿ ಸೇವೆ ಸಲ್ಲಿಸಿದ್ದರು. ಆನಂತರ ಐ.ಎ.ಎಸ್. ಪಾಸ್ ಮಾಡಿ ಕರ್ನಾಟಕ ಕೇಡರ್ ಅಧಿಕಾರಿಯಾಗಿ ಆಯ್ಕೆಗೊಂಡು, ಬಾಲ್ಯದಿಂದ ತಾವು ನಂಬಿಕೊಂಡು ಬಂದ ಸಿದ್ಧಾಂತಗಳನ್ನು ತಮ್ಮ ಸೇವೆಯಲ್ಲಿಯೂ ಮುಂದುವರಿಸಿ ಕನ್ನಡ ನೆಲದ ಜನಮಾನಸದಲ್ಲಿ ಶಾಶ್ವತವಾಗಿ ನೆಲೆ ನಿಂತರು.

ಶಶಿಕಾಂತ್ ಸೆಂಥಿಲ್ ಕಾಂಗ್ರೆಸ್ ಪಕ್ಷಕ್ಕೆ ಆಸ್ಥಿಯಾಗಬಲ್ಲ ವ್ಯಕ್ತಿತ್ವ ಹಾಗೂ ಪ್ರತಿಭೆ ಉಳ್ಳವರು. ಎಪ್ಪತ್ತೈದು ದಾಟಿದ ನಡೆದಾಡುವ ಶವಗಳನ್ನು ಪಕ್ಷದ ಹಿರಿಯ ನಾಯಕರು ಎಂಬ ಹಣೆ ಪಟ್ಟಿಯೊಂದಿಗೆ ರಾಜ್ಯಸಭೆಗೆ ಆಯ್ಕೆ ಮಾಡುವ ಬದಲು ಇಂತಹ ಪ್ರಖರ ಪ್ರತಿಭೆಗಳನ್ನು ದೆಹಲಿಯ ಕೇಂದ್ರ ಸ್ಥಾನದಲ್ಲಿ ಇರಿಸಿಕೊಂಡು ಪಕ್ಷದ ಸಿದ್ಧಾಂತಗಳನ್ನು ರೂಪಿಸುವುದರ ಜೊತೆಗೆ ಆಧುನಿಕ ಕಾಲಕ್ಕೆ ಯುವಕರನ್ನು ಪಕ್ಷಕ್ಕೆ ಸೆಳೆಯಬೇಕಾಗಿದೆ. ಕಾಂಗ್ರೆಸ್ ಪಕ್ಷವು ತನ್ನ ಧೋರಣೆಯನ್ನು ಬದಲಾಯಿಸಿಕೊಳ್ಳುವ ನಿಟ್ಟಿನಲ್ಲಿ ಯುವಕ-ಯುವತಿಯರಿಗೆ ಆದ್ಯತೆ ನೀಡಬೇಕಾಗಿದೆ.

ಎರಡು ರೂಪಾಯಿ ಎಂಜಲು ಕಾಸಿಗೆ ಪೋಸ್ಟ್ ಕಾರ್ಡ್ ಹೆಸರಿನಲ್ಲಿ ವೆಬ್ ತಾಣವೆಂಬ ಕಕ್ಕಸ್ ಗುಂಡಿಯನ್ನು ರಚಿಸಿಕೊಂಡು ಯುವಕರ ಮಿದುಳಿಗೆ ಮೋದಿಯ ಲದ್ದಿಯನ್ನು ತುಂಬುವ ಗಿರಾಕಿಗಳ ಕಾರ್ಯವೈಖರಿಗಿಂತ ಭಿನ್ನವಾಗಿ ಇಂದಿನ ಯುವತಲೆಮಾರಿಗೆ ವೈಚಾರಿಕತೆಯ ಬೀಜ ಬಿತ್ತುವ ಕೆಲಸವನ್ನು ಕಾಂಗ್ರೆಸ್ ಮಾಡಬೇಕಿದೆ. ಈ ನಿಟ್ಟಿನಲ್ಲಿ ಸೆಂಥಿಲ್, ಕನ್ಹಯ್ಯಕುಮಾರ್ ನಂತಹ ಪ್ರತಿಭಾವಂತರು ಪಕ್ಷಕ್ಕೆ ಆಸ್ತಿಯಾಗಬಲ್ಲರು. ಈ ಕುರಿತು ಪಕ್ಷದ ಪದಾಧಿಕಾರಿಗಳು ಗಭೀರವಾಗಿ ಯೋಚಿಸಬೇಕಿದೆ.

  • ಜಗದೀಶ್ ಕೊಪ್ಪ, ಹಿರಿಯ ಪತ್ರಕರ್ತರು

Leave a Reply