ಮೋಜಿಗಾಗಿ ಕಳವು ಮಾಡುತ್ತಿದ್ದ ಗ್ಯಾಂಗ್ ಬಂಧನ

3 years ago

ಬೆಂಗಳೂರು: ಸೋಲದೇವನಹಳ್ಳಿ, ರಾಜಗೋಪಾಲನಗರ ಪೊಲೀಸರು ಹಗಲುರಾತ್ರಿ ಕನ್ನ ಕಳವು, ಮನೆ ಕಳವು ಮಾಡುತ್ತಿದ್ದ ಖತರ್ನಾಕ್ ಅತ್ತೆ-ಆಳಿಯ ಸೇರಿ 8 ಮಂದಿ ಆರೋಪಿಗಳನ್ನು ಬಂಧಿಸಿ ಭರ್ಜರಿ ಬೇಟೆಯಾಡಿ 83.79 ಲಕ್ಷ ಮೌಲ್ಯದ ಮಾಲುಗಳನ್ನು ಜಪ್ತಿ ಮಾಡಿ 18 ಪ್ರಕರಣಗಳನ್ನು ಪತ್ತೆಹಚ್ಚಿದ್ದಾರೆ.

ಬಂಧಿತ ರಾಜಗೋಪಾಲನಗರದ ಮೂವರು ಸೋಲದೇವನಹಳ್ಳಿಯ ಐವರು ಸೇರಿ 8 ಮಂದಿ ಆರೋಪಿಗಳಿಂದ 49 ಸಾವಿರ ನಗದು ಸೇರಿ 83.79 ಲಕ್ಷ  ಮೌಲ್ಯದ 1259 ಗ್ರಾಂ ಚಿನ್ನಾಭರಣ, 550 ಬೆಳ್ಳಿ ಸಾಮಾನುಗಳು, 1-ಮಹೇಂದ್ರ ಥಾರ್ ವಾಹನ, 1-ಕಾರು, 3-ದ್ವಿಚಕ್ರವಾಹನಗಳು, 3-ಮೊಬೈಲ್ ಗಳನ್ನು  ವಶಪಡಿಸಿಕೊಳ್ಳಲಾಗಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಹೆಚ್ಚುವರಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ತಿಳಿಸಿದರು.

ಸೋಲದೇವನಹಳ್ಳಿ ಪೊಲೀಸರು ಜಕ್ಕೂರು ವಿವೇಕಾನಂದ ಲೇಔಟ್ ನ ವೆಂಕಟೇಶ್ ಅಲಿಯಾಸ್ ಜಿಮ್ ವೆಂಕಿ(25) ಮಹದೇವಿ ಅಲಿಯಾಸ್ ಮಹಾದೇವಮ್ಮ(45), ಆಂಧ್ರ ಮೂಲದ ಯಲಹಂಕದ ರಘು(24) ಜಕ್ಕೂರು ಲೇಔಟ್ ನ ಅರ್ಜುನ್(24), ತುಮಕೂರಿನ ಅಗ್ರಹಾರ ರಸ್ತೆಯ ಗಣೇಶ್(32)ನನ್ನು ಬಂಧಿಸಿ 12 ಪ್ರಕರಣಗಳನ್ನು ಪತ್ತೆಹಚ್ಚಿದ್ದಾರೆ ಎಂದರು.

ಮೂವರು ಬಂಧಿತ ಆರೋಪಿಗಳಿಂದ ಸೋಲದೇವನಹಳ್ಳಿ-3, ರಾಜಾನುಕುಂಟೆ-4, ಕೊಡೀಗೆಹಳ್ಳಿ-2, ಯಲಹಂಕ ನ್ಯೂ ಟೌನ್-2, ಕೆ.ಆರ್.ಪುರಂ-1 ಸೇರಿ 12 ಕಳವು  ಪ್ರಕರಣಗಳು ಪತ್ತೆಯಾಗಿವೆ ಎಂದರು.
ಬಂಧಿತ ಮೂವರಿಂದ 829 ಗ್ರಾಂ ಚಿನ್ನಾಭರಣ, 250 ಗ್ರಾಂ ಬೆಳ್ಳಿ ಲಕ್ಷ್ಮೀ, 1-ಮಹೇಂದ್ರ ಥಾರ್ ವಾಹನ, 1-ಕಾರು, 2-ದ್ವಿಚಕ್ರವಾಹನಗಳು 2-ಮೊಬೈಲ್ 1-ಆಕ್ಸಲ್ ಭ್ಲೇಡ್ 1-ಹೈಡ್ರೋಲಿಕ್ ಸ್ಟೀಲ್ ಕಟರ್, 2-ಕಬ್ಬಿಣದ ಹುಳಿಗಳು ಸೇರಿ 61.45 ಲಕ್ಷ ರೂ ಮೌಲ್ಯದ ಮಾಲುಗಳನ್ನು ಜಪ್ತಿ ಮಾಡಲಾಗಿದೆ ಎಂದರು.
ಹೆಸರಘಟ್ಟದ ಮನೆಯೊಂದಕ್ಕೆ ಕಳೆದ ಅ.4 ಬೀಗ ಹಾಕಿಕೊಂಡು ದಸರಾ ಹಬ್ಬಕ್ಕೆ ಊರಿಗೆ ಮನೆಯ ಕಿಟಕಿ ಮೂಲಕ ಮನೆಯೊಳಗೆ ನುಗ್ಗಿ ಮನೆಯ ಬೀರುವಿನಲ್ಲಿದ್ದ ಚಿನ್ನಾಭರಣ  ನಗದು ಕಳವು ಮಾಡಿದ್ದ ಪ್ರಕರಣ ದಾಖಲಿಸಿ  ಕಾರ್ಯಾಚರಣೆ ಕೈಗೊಂಡ ಗೌತಮ್ ಜೆ ಮತ್ತವರ ಸಿಬ್ಬಂದಿ ಕಾರ್ಯಾಚರಣೆ ಕೈಗೊಂಡು ಖಚಿತ ಮಾಹಿತಿ ಆಧರಿಸಿ ಐವರು ಆರೋಪಿಗಳನ್ನು ಬಂಧಿಸಿದೆ.
ಆರೋಪಿಗಳನ್ನು ಹೆಚ್ಚಿನ ವಿಚಾರಣೆ ನಡೆಸಿದಾಗ ಆರೋಪಿ ಜಿಮ್ ವೆಂಕಿ ಮೂಲತಃ ತುಮಕೂರಿನವನಾಗಿದ್ದು, ಈತನು ಬಾಡಿಗೆ ಕಾರುಗಳನ್ನು ಓಡಿಸಿಕೊಂಡಿದ್ದು, ತಾನು ಕಲಿತ ದುಶ್ಚಟಗಳನ್ನು ಈಡೇರಿಸಿಕೊಳ್ಳಲು ಮತ್ತು ವಿಲಾಸಿ ಜೀವನ ನಡೆಸಲು ತನ್ನ ಸಹಚರರಾದ ರಘು ಹಾಗೂ ಅರ್ಜುನ್  ಜೊತೆ ಸೇರಿ, ಹಗಲು ವೇಳೆ ಬೀಗ ಹಾಕಿರುವ ಮನೆಗಳನ್ನು ಗುರ್ತಿಸಿ ರಾತ್ರಿ  ಬಂದು ಹೈಡ್ರೋಲಿಕ್ ಸ್ಟೀಲ್ ಕಟರ್ ನಿಂದ ಬೀಗ ಹಾಕಿದ ಮನೆಯ ಕಿಟಿಕಿಯ ಸರಳುಗಳನ್ನು ಕಟ್ ಮಾಡಿ ಒಳನುಗ್ಗಿ ಬೆಲೆ ಬಾಳುವ ವಸ್ತುಗಳನ್ನು ಕಳವು ಮಾಡುತ್ತಿದ್ದರು.
ಮೋಜಿಗಾಗಿ ಕಳವು: ಕಳವು ಮಾಡಿದ ಮಾಲುಗಳನ್ನು ಗಣೇಶ್ ಹಾಗೂ ಮಹದೇವಿ ಮೂಲಕ ಒಳಸಂಚು ನಡೆಸಿ, ವಿಲೇವಾರಿ ಮಾಡಿ ಬಂದ ಹಣದಿಂದ ಐಷಾರಾಮಿ ಜೀವನ ನಡೆಸುತ್ತಿದ್ದ.

ಆರೋಪಿ ಆಂಧ್ರ ಪ್ರದೇಶದವನಾಗಿದ್ದು, ಬೆಂಗಳೂರಿಗೆ ಬಂದು ಪಿಜಿಯಲ್ಲಿ ವಾಸವಾಗಿದ್ದು ಮೋಜಿನ ಜೀವನಕ್ಕಾಗಿ ಮಾಡಿದ ಸಾಲವನ್ನು ತೀರುಸುವುದಕ್ಕಾಗಿ ತನ್ನ ಸಹಚರರೊಂದಿಗೆ ಕೃತ್ಯಗಳಲ್ಲಿ ಭಾಗಿಯಾಗಿರುವುದಾಗಿ ತಿಳಿದು ಬಂದಿದೆ.

ಆರೋಪಿ ಅರ್ಜುನ್ ಖಾಸಗಿ ಕಂಪನಿಯ ಸೇಲ್ಸ್ ಎಕ್ಸಿಕ್ಯೂಟಿವ್ ಆಗಿ ಕೆಲಸ ಮಾಡಿಕೊಂಡಿದ್ದು. ತನ್ನ ಕಾರಿನಲ್ಲಿ ಇತರೆ ಆರೋಪಿಗಳನ್ನು ಕರೆತಂದು ಕೃತ್ಯದಲ್ಲಿ ಭಾಗಿಯಾಗಿರುವುದಾಗಿ ತಿಳಿದು ಬಂದಿದೆ.

ಆರೋಪಿ ಗಣೇಶ್ ತಮಿಳುನಾಡಿನ ವೆಲೂರಿನವನಾಗಿದ್ದು, ಹಾಲಿ ತುಮಕೂರಿನಲ್ಲಿ ಚಿನ್ನ ಬೆಳ್ಳಿ ವ್ಯಾಪಾರ ಮಾಡಿಕೊಂಡಿರುತ್ತಾನೆ. ತನ್ನ ಸಹಚರರು ಕಳವು ಮಾಡಿ ತಂದು ಕೊಡುವ ಚಿನ್ನಾಭರಣಗಳನ್ನು ಪಡೆದು ವಿಲೇವಾರಿ ಮಾಡುತ್ತಿದ್ದಾಗಿ ತಿಳಿದು ಬಂದಿರುತ್ತದೆ.

ಆಳಿಯನಿಗೆ ಅತ್ತೆ ಸಾಥ್: ಆರೋಪಿ ಮಹದೇವಮ್ಮ ತನ್ನ ಮಗಳನ್ನು ಜಿಮ್ ವೆಂಕಿಗೆ ಕೊಟ್ಟು ಮದುವೆ ಮಾಡಿದ್ದು, ತನ್ನ ಅಳಿಯ ತಂದುಕೊಡುವ ಚಿನ್ನಾಭರಣಗಳು ಕಳವು ಮಾಡಿರುವುದು ಎಂದು ತಿಳಿದಿದ್ದರೂ ಕೂಡ ಅವುಗಳನ್ನು ಪಡೆದುಕೊಂಡು ವಿಲೇವಾರಿ ಮಾಡಿಕೊಡುತ್ತಿದ್ದಾಗಿ ತನಿಖೆಯಿಂದ ತಿಳಿದು ಬಂದಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಡಿಸಿಪಿ ವಿನಾಯಕ ಪಾಟೀಲ್ ಎಸಿಪಿ ಜಗದೀಶ್ ಇನ್ಸ್‌ಪೆಕ್ಟರ್ ಗಳಾದ ಗೌತಮ್, ರಘುಪತಿ ಮತ್ತವರ ಸಿಬ್ಬಂದಿ ಪಾಲ್ಗೊಂಡಿದ್ದರು.

Leave a Reply