ಅಧಿಕಾರಿಗಳ ಮನೆ, ಕಚೇರಿ ಸ್ಥಳಗಳಲ್ಲಿ ದಿಡೀರ್ ದಾಳಿ ನಡೆಸಿದ ಲೋಕಾಯುಕ್ತ ಪೊಲೀಸರು

1 year ago

ಬೆಂಗಳೂರು: ನಿಗದಿತ ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಕೆ ಮಾಡಿದ್ದಾರೆ ಎಂಬ ಆರೋಪದ ಸಂಬಂಧ ರಾಜ್ಯ ಸರ್ಕಾರದ ವಿವಿಧ ಇಲಾಖೆ ಮತ್ತು ನಿಗಮಗಳ ಒಂಬತ್ತು ಅಧಿಕಾರಿಗಳ ಮನೆ ಮತ್ತು ಕಚೇರಿ ಸೇರಿದಂತೆ 40 ಸ್ಥಳಗಳಲ್ಲಿ ದಿಡೀರ್ ದಾಳಿ ನಡೆಸಿದ ಲೋಕಾಯುಕ್ತ ಪೊಲೀಸರು ಅಪಾರ ಪ್ರಮಾಣದ ನಗ -ನಗದು, ಆಸ್ತಿ ಪತ್ರಗಳನ್ನು ವಶಪಡಿಸಿಕೊಂಡಿದ್ದಾರೆ.

ಬೆಳಗಾವಿ, ಹಾವೇರಿ, ದಾವಣಗೆರೆ, ಕಲಬುರ್ಗಿ, ರಾಮನಗರ, ಮೈಸೂರು, ಬೆಳಗಾವಿ ಮತ್ತು ಧಾರವಾಡದಲ್ಲಿ ದಾಳಿ ನಡೆದಿದೆ. ಈ ದಾಳಿ ವೇಳೆ ಒಬ್ಬ ಅಧಿಕಾರಿ ತಮ್ಮಲ್ಲಿದ್ದ ನಗದು ಮತ್ತು ಕೆಲವು ದಾಖಲೆಗಳನ್ನು ಗಂಟು ಕಟ್ಟಿ ಮನೆಯಿಂದ ಹೊರಗೆಸದಿದ್ದಾರೆ. ಅದನ್ನು ವಶಕ್ಕೆ ಪಡೆಯಲಾಗಿದೆ ಎಂದು ಲೋಕಾಯುಕ್ತ ಪೊಲೀಸರು ಮಾಹಿತಿ ನೀಡಿದ್ದಾರೆ.

ಧಾರವಾಡದಲ್ಲಿ ಕೆಐಎಡಿಬಿ ಎಇಇ ಗೋವಿಂದಪ್ಪ ಭಜಂತ್ರಿ ನಿವಾಸದ ಮೇಲೆ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಧಾರವಾಡ ನಗರದ ಗಾಂಧಿನಗರ ಬಡಾವಣೆಯಲ್ಲಿನ ಮನೆ ಮೇಲೆ ಲೋಕಾಯುಕ್ತ ಡಿವೈಎಸ್ಪಿ ವೆಂಕನಗೌಡ ಪಾಟೀಲ ನೇತೃತ್ವದಲ್ಲಿ ದಾಳಿ ನಡೆದಿದೆ. ಇವರಿಗೆ ಸಂಬಂಧಿಸಿದ ಧಾರವಾಡದಲ್ಲಿ ಮೂರು ಕಡೆ, ಸವದತ್ತಿ ತಾಲೂಕಿನಲ್ಲಿ , ಹೂಲಿ ಹಾಗೂ ಉಗರಗೋಳ ಗ್ರಾಮದ ಫಾರ್ಮ್ಹೌಸ್ ಹಾಗೂ ನರಗುಂದದಲ್ಲಿ ಅವರ ಸಹೋದರನ ಮನೆ ಮೇಲೂ ದಾಳಿ ನಡೆದಿದೆ.

ದಾವಣಗೆರೆಯ ಶಕ್ತಿನಗರದ 3ನೇ ಕ್ರಾಸ್ ನಲ್ಲಿರುವ ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆಯ ಅಧಿಕಾರಿ ಸಹಾಯಕ ನಿರ್ದೇಶಕ ಕಮಲ್ ರಾಜ್ ಮನೆ ಹಾಗೂ ಕಚೇರಿ ಮೇಲೆ ದಾಳಿ ನಡೆದಿದೆ. ಈ ವೇಳೆ ಚಿನ್ನಾಭರಣ, ನಗದು ಹಣ ಮತ್ತು ಹಲವು ಆಸ್ತಿಪತ್ರಗಳು ಪತ್ತೆಯಾಗಿದ್ದು, ಪರಿಶೀಲನೆ ನಡೆಸಲಾಗಿದೆ.

ಬೀದರ್ ಜಿಲ್ಲಾ ತರಬೇತಿ ಕೇಂದ್ರದ ಅಧಿಕಾರಿ ರವೀಂದ್ರ ರೊಟ್ಟೆ ನಿವಾಸ ಹಾಗೂ ಕಚೇರಿ ಮೇಲೆ ದಾಳಿ ನಡೆದಿದ್ದು,ಲೋಕಾಯುಕ್ತ ಡಿವೈಎಸ್ಪಿ ಹನುಮಂತ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ.

ಹಿರೇಕೆರೂರು ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಕಾಶಿನಾಥ್ ಭಜಂತ್ರಿ ಮನೆ ಮೇಲೆ ಲೋಕಾಯುಕ್ತ ಪೊಲೀಸರ ದಾಳಿ ನಡೆದಿದೆ.

ನಸುಕಿನಲ್ಲಿ ಅಧಿಕಾರಿಗಳ ತಂಡ ಬಾಗಿಲು ಬಡಿದಿತ್ತು. ಅವರನ್ನು ನೋಡಿ ಗಾಬರಿಗೊಂಡ ಕಾಶಿನಾಥ್, ಕೊಠಡಿಗೆ ಹೋಗಿ 9 ಲಕ್ಷ ನಗದಿನ ಗಂಟು ಕಟ್ಟಿ ಶೌಚಾಲಯದ ಕಿಟಕಿಯ ಮೂಲಕ ಹೊರಗೆ ಎಸೆದಿದ್ದರು.

ಬಾಗಿಲು ತೆರೆಸಿ ನಂತರ ಒಳಗೆ ಬಂದ ಅಧಿಕಾರಿಗಳು, ಗಂಟು ಪತ್ತೆ ಮಾಡಿದ್ದಾರೆ. 2 ಲಕ್ಷ ನಗದು ಬೆಡ್ ಮೇಲೆಯೇ ಸಿಕ್ಕಿದೆ. ಜೊತೆಗೆ ಒಟ್ಟು  14 ಲಕ್ಷ ಪತ್ತೆಯಾಗಿರುವುದಾಗಿ ಲೋಕಾಯುಕ್ತ ಪೊಲೀಸರು ತಿಳಿಸಿದ್ದಾರೆ. ಬಂಗಾರ ಸೇರಿದಂತೆ ಹಲವು ಮಹತ್ತರ ದಾಖಲೆಗಳು ಸಿಕ್ಕಿದ್ದು, ಪರಿಶೀಲನೆ ನಡೆಯುತ್ತಿದೆ.

ಮೈಸೂರು ಮಹಾನಗರ ಪಾಲಿಕೆ ವಲಯ ಕಚೇರಿ 5 ರ ಆಯುಕ್ತ ನಾಗೇಶ್.ಡಿ ಅವರ ಕಚೇರಿ ಹಾಗೂ ಮನೆಯ ಮೇಲೆ ದಾಳಿ ನಡೆದಿದೆ. ಲೋಕಾಯುಕ್ತ ಪೊಲೀಸರು ಶ್ರೀರಂಗಪಟ್ಟಣದ ಡಾಲರ್ಸ್ ಕಾಲೋನಿಯಲ್ಲಿರುವ ಅಪಾರ್ಟ್ಮೆಂಟ್, ಬಾಡಿಗೆ ಮನೆ, ಶಿವಮೊಗ್ಗ ಹಾಗೂ ಬೆಂಗಳೂರಿನ ನಿವಾಸ, ಮೈಸೂರಿನ ಮೇಟಗಳ್ಳಿ ಬಸವನಗುಡಿ ವೃತ್ತದ ಬಳಿ ಇರುವ ವಲಯ ಕಚೇರಿಯ ಮೇಲೂ ದಾಳಿ ನಡೆಸಿ ದಾಖಲೆ ವಶಪಡಿಸಿಕೊಂಡಿದ್ದು, ತನಿಖೆ ಮುಂದುವರೆದಿದೆ.

Leave a Reply