ಬಿ.ವೈ.ವಿಜಯೇಂದ್ರ ಸಂಬಂಧಿಕರ ಮೇಲೆ ಲೋಕಾಯುಕ್ತ ದಾಳಿ

2 years ago

#Lokayukta #attack #relatives #BYVijayendra

ಆದಾಯಕ್ಕೂ ಮೀರಿ ಆಸ್ತಿಪಾಸ್ತಿ ಗಳಿಸಿದ ದಾಖಲೆ ಪತ್ರ ಪತ್ತೆ

ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರ ಪತ್ನಿಯ ಸೋದರ ಹಾಗೂ ಯಾದಗಿರಿ ಡಿಎಚ್ ಓ ಡಾ ಪ್ರಭಲಿಂಗ ಮಾನಕರ್ ಸೇರಿದಂತೆ 13 ಸರ್ಕಾರಿ ಅಧಿಕಾರಿಗಳಿಗೆ ಸೇರಿದ 63 ಕ್ಕೂ ಹೆಚ್ಚು ಸ್ಥಳಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಿದ ಲೋಕಾಯುಕ್ತ ಪೊಲೀಸರು ಈ ಅಧಿಕಾರಿಗಳು ಅಕ್ರಮವಾಗಿ ಸಂಪಾದಿಸಿರುವ ಅಪಾರ ಪ್ರಮಾಣದ ಆಸ್ತಿಪಾಸ್ತಿ ಇರುವ ಸಂಗತಿಯನ್ನು ಪತ್ತೆ ಮಾಡಿದ್ದಾರೆ.

ಲೋಕಾಯುಕ್ತ ಅಧಿಕಾರಿಗಳು ಖಚಿತ ಮಾಹಿತಿ ಆಧರಿಸಿ ಬೆಳ್ಳಂಬೆಳಿಗ್ಗೆ ಬೆಂಗಳೂರು, ಮೈಸೂರು, ಬೀದರ್, ಬಳ್ಳಾರಿ, ವಿಜಯನಗರ ಸೇರಿದಂತೆ ರಾಜ್ಯದ 63ಕ್ಕೂ ಹೆಚ್ಚಿನ ಕಡೆಗಳಲ್ಲಿ ಏಕಕಾಲದಲ್ಲಿ ದಾಳಿ ನಡೆಸಿದರು. ಬೆಳಗಿನ ಜಾವ 13 ಅಧಿಕಾರಿಗಳು ನಡೆಸಿದ ದಾಳಿಯಿಂದ ಅಧಿಕಾರಿಗಳು ಬೆಚ್ಚಿದರು.

ದಾಳಿಗೆ ಗುರಿಯಾದ ಅಧಿಕಾರಿಗಳು ತಮ್ಮ ನಿಗದಿತ ಆದಾಯ ಮೀರಿ ನೂರಾರು ಪಟ್ಟು ಅಕ್ರಮ ಆಸ್ತಿಪಾಸ್ತಿ ಗಳಿಸಿರುವುದು ದಾಳಿವೇಳೆ ಪತ್ತೆಯಾಗಿದೆ. ಆಸ್ತಿಪಾಸ್ತಿಗಳ ಪರಿಶೀಲನೆ ನಡೆಸಿ ದಾಖಲೆ ಪತ್ರಗಳ ತಪಾಸಣೆ ನಡೆಸಲಾಗಿದೆ ಎಂದು ಲೋಕಾಯುಕ್ತ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಸುಮಾರು 200ಕ್ಕೂ ಹೆಚ್ಚು ಅಧಿಕಾರಿಗಳು, ಸಿಬ್ಬಂದಿ ಈ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು. ಯಾದಗಿರಿಯಲ್ಲಿ ಡಿಎಚ್ಒ ಆಗಿರುವ ಡಾ.ಪ್ರಭುಲಿಂಗ ಮಾನಕರ್ ಅವರ ಕಲಬುರಗಿ ನಗರದ ಕರುಣೇಶ್ವರ ಕಾಲೋನಿಯಲ್ಲಿರುವ ನಿವಾಸ ಸೇರಿದಂತೆ ಹಲವೆಡೆ ಲೋಕಾಯುಕ್ತ ಅಧಿಕಾರಿಗಳು ಶೋಧ ನಡೆಸಿದ್ದಾರೆ. ಈ ವೇಳೆ 300 ಗ್ರಾಂ ಚಿನ್ನಾಭರಣ ಹಾಗೂ 4 ಲಕ್ಷ ನಗದು ಪತ್ತೆಯಾಗಿದ್ದು, ಇವರ ಸಂಬಂಧಿಗಳ ನಿವಾಸಗಳಲ್ಲೂ ಪರಿಶೀಲನೆ ನಡೆಸಲಾಗಿದೆ.

ಬೆಳಗಾವಿಯಲ್ಲಿ ಕೆಆರ್ಐಡಿಎಲ್ನ ಸೂಪರಿಂಡೆಂಟ್ ಎಂಜಿನಿಯರ್ ತಿಮ್ಮರಾಜಪ್ಪ ಅವರ ನಿವಾಸ ಸೇರಿದಂತೆ 8 ಕಡೆ ದಾಳಿ ನಡೆದಿದೆ. ಕೋಲಾರದ ಕೆಜಿಎಫ್ನಲ್ಲಿರುವ ಸ್ವಂತ ಊರಿನಲ್ಲಿರುವ ಮನೆ ಹಾಗೂ ಅವರ ಸಂಬಂಧಿಕರ ಮನೆ ಮೇಲೂ ದಾಳಿ ನಡೆದಿದೆ. ಕೋಲಾರ ಲೋಕಾಯುಕ್ತ ಎಸ್ಪಿ ಉಮೇಶ್ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆದಿದೆ.

ಬೆಂಗಳೂರು ನಗರದ 3 ಕಡೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದರು. ಬೆಸ್ಕಾಂನ ಜಾಗೃತ ದಳ ಅಧಿಕಾರಿ ಟಿ.ಎನ್ .ಸುಧಾಕರ್ ರೆಡ್ಡಿ, ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹೆಚ್.ಎಸ್.ಕೃಷ್ಣಮೂರ್ತಿ, ಜಯನಗರದ ಬೆಸ್ಕಾಂ ಎಕ್ಸಿಕ್ಯೂಟಿವ್ ಇಂಜಿನಿಯರ್ ಚನ್ನಕೇಶವ ಅವರ ಮನೆ ಮತ್ತು ಕಚೇರಿಗಳ ಮೇಲೆ ದಾಳಿ ನಡೆಯಿತು.

ಚನ್ನಕೇಶವ ಅವರು ವಾಸವಿದ್ದ ಅಮೃತಹಳ್ಳಿಯ ನಿವಾಸದ ಮೇಲೆ ದಾಳಿ ನಡೆಸಿದ ವೇಳೆ 6 ಲಕ್ಷ ನಗದು, 3 ಕಿ.ಲೋ ಚಿನ್ನ, 28 ಕೆ.ಜಿ ಬೆಳ್ಳಿ, 25 ಲಕ್ಷ ಮೌಲ್ಯದ ವಜ್ರಾಭರಣ ಹಾಗೂ 5 ಲಕ್ಷ ಮೌಲ್ಯದ 7 ಪುರಾತನ ವಸ್ತುಗಳು ದೊರೆತಿವೆ. ಪತ್ತೆಯಾದ ವಸ್ತುಗಳ ಮೌಲ್ಯ ಸುಮಾರು 1.5 ಕೋಟಿ ಎಂದು ಅಂದಾಜಿಸಿರುವ ವರದಿ ಇದೆ.

ಜಯನಗರ ಡಿವಿಷನ್ಗೆ ಬೆಸ್ಕಾಂ ಎಕ್ಸಿಕ್ಯೂಟಿವ್ ಇಂಜಿನಿಯರ್ ಆಗಿರುವ ಚನ್ನಕೇಶವ ಅಪಾರ್ಟ್ಮೆಂಟ್ ಹಾಗೂ ಕಮರ್ಷಿಯಲ್ ಬಿಲ್ಡಿಂಗ್ಗಳಿಗೆ ವಿದ್ಯುತ್ ಸಂಪರ್ಕ ನೀಡಲು ಲಕ್ಷಲಕ್ಷ ಲಂಚ ಪಡೆಯುತ್ತಿದ್ದ ಆರೋಪ ಕೇಳಿಬಂದಿದೆ.

ಹೆಚ್ಚು ಲಂಚಕ್ಕೆ ಬೇಡಿಕೆ ಇಡುತ್ತಿದ್ದ ಕಾರಣ ಲೋಕಾಯುಕ್ತಕ್ಕೆ ದೂರು ನೀಡಲಾಗಿತ್ತು. ಚನ್ನಕೇಶವ ಅವರಿಗೆ ಸೇರಿದ ಏಳು ಸ್ಥಳಗಳಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಈತ ಐಷಾರಾಮಿ ಅಪಾರ್ಟ್ ಮೆಂಟ್ ನಲ್ಲಿ ವಾಸ ಮಾಡುತ್ತಿರುವುದು ದಾಳಿ ವೇಳೆ ಬಹಿರಂಗವಾಗಿದೆ.

ಕುಂಬಳಗೋಡು – ಕಣಿಮಿಣಿಕೆ ಬಳಿಯ ಹಾಲು ಉತ್ಪಾದಕರ ಸಹಕಾರ ಸಂಘದ ಅಧಿಕಾರಿ ಮನೆ ಮೇಲೂ ದಾಳಿ ಮಾಡಿದ್ದು, ದಾಖಲೆಗಳನ್ನ ಪರಿಶೀಲನೆ ನಡೆಸಲಾಗಿದೆ.

ಮೈಸೂರಿನಲ್ಲೂ ದಾಳಿ: ನಂಜನಗೂಡು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಉಪನ್ಯಾಸಕ ಮಹದೇವಸ್ವಾಮಿ ಅವರ ಕಚೇರಿ ಮೈಸೂರಿನ ಗುರುಕುಲ ಬಡಾವಣೆ ನಿವಾಸ ಸೇರಿ 12 ಕಡೆ ಪರಿಶೀಲನೆ ನಡೆಸಿದ್ದಾರೆ. ಕುಟುಂಬದ ಹೆಸರಿನಲ್ಲಿ ಎಂ ಎಸ್ ಗ್ರೂಪ್ ಕಂಪನಿ, ಆದಾಯಕ್ಕೂ ಮೀರಿ ಅಸ್ತಿ ಗಳಿಕೆ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಲೋಕಾಯುಕ್ತ ಎಡಿಜಿಪಿ ಪ್ರಶಾಂತ್ ಕುಮಾರ್ ಠಾಕೂರ್ ಹಾಗೂ ಐ ಜಿ ಪಿ, ಸುಬ್ರಮಣ್ಣೀಶ್ವರ ರಾವ್ ಮಾರ್ಗದರ್ಶನದಲ್ಲಿ ದಾಳಿ ನಡೆಯಿತು.

ಬಳ್ಳಾರಿ, ವಿಜಯನಗರ ಜಿಲ್ಲೆಯಲ್ಲಿ ಏಕಕಾಲಕ್ಕೆ ಲೋಕಯುಕ್ತ ದಾಳಿ ನಡೆದಿದೆ. ಬಳ್ಳಾರಿಯ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಚಂದ್ರಶೇಖರ್, ಅರಣ್ಯ ಇಲಾಖೆಯ ಡಿಆರ್ ಎಫ್ ಓ ಮಾರುತಿ ಮನೆ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಚಂದ್ರಶೇಖರ್ ಬಳ್ಳಾರಿಯಲ್ಲಿ ಕೆಲಸ ಮಾಡುತ್ತಿದ್ದು, ಮನೆ ಮಾತ್ರ ಹೊಸಪೇಟೆಯಲ್ಲಿದೆ.

ಅರಣ್ಯ ಇಲಾಖೆಯ ಡಿಆರ್ ಎಫ್ ಓ ಮಾರುತಿ ಗಂಗಾವತಿಯಲ್ಲಿ ಕೆಲಸ ಮಾಡುತ್ತಿದ್ದು ಮನೆ ಕಂಪ್ಲಿಯಲ್ಲಿದೆ. ಹೀಗಾಗಿ ಚಂದ್ರಶೇಖರ ಅವರ ಹೊಸಪೇಟೆ ಮನೆ ಮತ್ತು ಮಾರುತಿ ಅವರ ಕಂಪ್ಲಿ ಮತ್ತು ಗಂಗಾವತಿ ನಿವಾಸದ ಮೇಲೆ ದಾಳಿ ಮಾಡಿ ದಾಖಲೆ ಪರಿಶೀಲನೆ ನಡೆಸಲಾಗುತ್ತಿದೆ.
ಬೀದರ್ ನಲ್ಲು ಕೂಡ ದಾಳಿ: ಬೀದರ್ ನಲ್ಲಿ ಕೂಡ ಇಂದು ಬೆಳ್ಳಂಬೆಳಗ್ಗೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಬೀದರ್ ಪಶು ವೈಧ್ಯಕೀಯ ವಿಶ್ವವಿದ್ಯಾಲಯದ ನೌಕರರ ಸುನೀಲ್ ಕುಮಾರ್ ಮನೆ ಹಾಗೂ ಕಾಂಪ್ಲೆಕ್ಸ್ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದು, ದಾಖಲೆಗಳ ಪರಿಶೀಲನೆ ನಡೆಸಿದರು.

ಯಾದಗಿರಿ ಡಿಎಚ್ಓ ಡಾ. ಪ್ರಭುಲಿಂಗ್ ಮಾನಕರ್ ಅವರ ಕಲಬುರಗಿ ನಗರದ ಕರುಣೇಶ್ವರ ಕಾಲೋನಿಯಲ್ಲಿರುವ ನಿವಾಸದ ಮೇಲೆ, ಯಾದಗಿರಿ ನಗರದ ಬಾಡಿಗೆ ಮನೆ ಮೇಲೆ ಲೋಕಾಯುಕ್ತ ಡಿವೈಎಸ್ ಪಿ ಹಣಮಂತರಾಯ ನೇತೃತ್ವದಲ್ಲಿ ದಾಳಿ ನಡೆಸಲಾಯಿತು.

Leave a Reply