ಬೆಂಗಳೂರು: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಕನಿಷ್ಠ 20 ಸ್ಥಾನಗಳನ್ನು ಗೆಲ್ಲಬೇಕು ಎಂಬ ಕಾಂಗ್ರೆಸ್ ನಾಯಕರ ಲೆಕ್ಕಾಚಾರಕ್ಕೆ ಮಂತ್ರಿಗಳ ನಿಲುವು ಅಡ್ಡಿಯಾಗಿದೆ. ಚುನಾವಣೆಯ ಅಖಾಡಕ್ಕೆ ಧುಮುಕಲು ಮಂತ್ರಿಗಳು ನಿರಾಕರಿಸಿದರೆ ಕೆಲವು ಮಂತ್ರಿಗಳ ಚಲನವಲನಗಳ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ನಿಗಾ ಇಟ್ಟಿರುವ ಮಾಹಿತಿ ಹೊರಬಿದ್ದಿದೆ.
ಚುನಾವಣೆಯಲ್ಲಿ ಕನಿಷ್ಠ 20 ಸ್ಥಾನಗಳನ್ನು ಗೆಲ್ಲುವ ದೃಷ್ಟಿಯಿಂದ ಹಲವು ಮಂತ್ರಿಗಳನ್ನು ಚುನಾವಣೆಯಲ್ಲಿ ಸ್ಪರ್ಧೆಗಿಳಿಸಲು ಹೈಕಮಾಂಡ್ ಮತ್ತು ರಾಜ್ಯ ಕಾಂಗ್ರೆಸ್ ನಾಯಕರು ಚಿಂತನೆ ನಡೆಸಿದ್ದರು. ಈ ಸಂಬಂಧ ಕಳೆದ ರಾತ್ರಿ ಸಿಎಂ ಸಿದ್ದರಾಮಯ್ಯ ನಿವಾಸದಲ್ಲಿ ನಡೆದ ಭೋಜನಕೂಟದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ವಿಷಯ ಪ್ರಸ್ತಾಪಿಸಿದರು.
ಚುನಾವಣೆಯಲ್ಲಿ ಕಾಂಗ್ರೆಸ್ ಹೆಚ್ಚಿನ ಸ್ಥಾನಗಳನ್ನು ಗಳಿಸಬೇಕಿದೆ ಎಂದು ಹೇಳಿದ ಡಿ.ಕೆ.ಶಿವಕುಮಾರ್ ಅವರು ಇದಕ್ಕಾಗಿ ಕೆಲವು ಮಂತ್ರಿಗಳು ಚುನಾವಣೆಯ ಅಖಾಡಕ್ಕೆ ಧುಮುಕಬೇಕಾಗುತ್ತದೆ. ಅದರಲ್ಲೂ ಸಚಿವರಾದ ಕೆ.ಎನ್.ರಾಜಣ್ಣ ಡಾ.ಪರಮೇಶ್ವರ್, ಕೃಷ್ಣ ಬೈರೇಗೌಡ, ದಿನೇಶ್ ಗುಂಡೂರಾವ್, ಮಹಾದೇವಪ್ಪ, ಎಂ.ಬಿ.ಪಾಟೀಲ್, ಕೆ.ಎಚ್.ಮುನಿಯಪ್ಪ, ಸತೀಶ್ ಜಾರಕಿಹೊಳಿ, ಈಶ್ವರ ಖಂಡ್ರೆ ಮೊದಲಾದವರು ಸಿದ್ಧರಾಗಬೇಕು ಎಂದು ಹೇಳಿದರ ಎಂದು ಪಕ್ಷದ ಮೂಲಗಳಿಂದ ತಿಳಿದುಬಂದಿದೆ.
ಶಿವಕುಮಾರ್ ಈ ರೀತಿ ಹೇಳುತ್ತಿದ್ದಂತೆ ಮಧ್ಯಪ್ರವೇಶಿಸಿದ ರಾಜಣ್ಣ ಮತ್ತು ಕೃಷ್ಣ ಬೈರೇಗೌಡ ಸಚಿವರ ಸ್ಪರ್ಧೆಯಿಂದ ಕಾಂಗ್ರೆಸ್ ಪಕ್ಷಕ್ಕೆ ಆಗುವ ಅನುಕೂಲಕ್ಕಿಂತ ಅನಾನುಕೂಲವೇ ಹೆಚ್ಚಾಗಿದೆ. ಸಚಿವರಾಗಿದ್ದವರು ಸಂಸದರಾದರೆ ವಿಧಾನಸಭೆಗೆ ಮತ್ತೆ ಚುನಾವಣೆ ನಡೆಯಲಿದೆ ಎಂದು ಮತದಾರರು ನಮ್ಮನ್ನು ತಿರಸ್ಕರಿಸುವ ಸಾಧ್ಯತೆ ಹೆಚ್ಚಾಗಿದೆ. ಇದು ತಮ್ಮ ಅನುಭವ ಎಂದು ಕೃಷ್ಣಬೈರೇಗೌಡ ಮನವರಿಕೆ ಮಾಡಿಕೊಟ್ಟರು ಎಂದು ಗೊತ್ತಾಗಿದೆ.
ಈ ವೇಳೆ ಬಹುತೇಕ ಸಚಿವರು, ಲೋಕಸಭೆಗೆ ತಾವು ಸ್ಪರ್ಧಿಸುವುದರಿಂದ ಅನುಕೂಲ ಆಗುವುದಿಲ್ಲ; ಅದರ ಬದಲಿಗೆ ಪಕ್ಷ ಸೂಚಿಸಿದ ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡು ಬರುತ್ತೇವೆ ಇದನ್ನು ಹೈಕಮಾಂಡ್ ಗೆ ಮನವರಿಕೆ ಮಾಡಿಕೊಡುವಂತೆ ಹೇಳಿದರು ಎನ್ನಲಾಗಿದೆ.
ಸಭೆಯ ಆರಂಭದಲ್ಲಿ ಮಾತನಾಡಿದ ಸಿದ್ದರಾಮಯ್ಯ, ಈ ಚುನಾವಣೆ ರಾಜ್ಯ ಸರ್ಕಾರಕ್ಕೆ ದೊಡ್ಡ ಸವಾಲಾಗಿದೆ. ಇದನ್ನು ಯಶಸ್ವಿಯಾಗಿ ನಿಭಾಯಿಸುವ ಮೂಲಕ ಹೈಕಮಾಂಡ್ ನಮ್ಮ ಮೇಲೆ ಇಟ್ಟಿರುವ ಭರವಸೆಯನ್ನು ಎತ್ತಿ ಹಿಡಿಯಬೇಕು ಎಂದರು.
ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಮನೋಬಲ ಕುಗ್ಗಿಸುವ ನಿಟ್ಟಿನಲ್ಲಿ ಬಿಜೆಪಿ ಮತ್ತು ಜೆಡಿಎಸ್ ನಾಯಕರು ಪ್ರಚೋದನಾಕಾರಿ ಹೇಳಿಕೆ ನೀಡುತ್ತಾರೆ. ಇದರ ಬಗ್ಗೆ ತಾವು ಎಚ್ಚರಿಕೆಯಿಂದ ಇರಬೇಕು ಎಂದು ತಿಳಿಸಿದ್ದಾರೆ ಎನ್ನಲಾಗಿದೆ.
ಮಾತನಾಡುವ ಸಮಯದಲ್ಲಿ ಅತ್ಯಂತ ಎಚ್ಚರಿಕೆಯಿಂದ ವರ್ತಿಸಬೇಕು. ಯಾವುದೇ ನಾಯಕರ ವಿರುದ್ಧ ವೈಯಕ್ತಿಕ ಟೀಕೆಗಳನ್ನು ಮಾಡಬಾರದು. ಸರ್ಕಾರದ ಗ್ಯಾರಂಟಿ ಯೋಜನೆಗಳ ಬಗ್ಗೆ ಜನರಿಗೆ ಹೇಳುತ್ತಾ ಮತಯಾಚಿಸಬೇಕು ಎಂದಿದ್ದಾರೆ.
ಮಂತ್ರಿಗಳು ಸೇರಿದಂತೆ ಕಾಂಗ್ರೆಸ್ ನಾಯಕರು ಮತ್ತು ಕಾಂಗ್ರೆಸ್ ಪರವಾದ ವ್ಯಕ್ತಿಗಳು ಮತ್ತು ಸಂಸ್ಥೆಗಳ ಮೇಲೆ ಕೇಂದ್ರ ಸರ್ಕಾರದ ಆದಾಯ ತೆರಿಗೆ ನೀಡಿ ಮೊದಲಾದ ಸಂಸ್ಥೆಗಳು ತೀವ್ರ ನಿಗಾ ವಹಿಸಿವೆ. ಯಾವುದೇ ಸಮಯದಲ್ಲಿ ದಾಳಿಯೂ ಕೂಡ ನಡೆಯಬಹುದು. ಹೀಗಾಗಿ ಸಾಕಷ್ಟು ಎಚ್ಚರಿಕೆಯಿಂದ ಇರಬೇಕಾಗುತ್ತದೆ. ಉದ್ಯಮಿಗಳು ಮತ್ತು ಗುತ್ತಿಗೆದಾರರ ಜೊತೆ ವ್ಯವಹಾರಿಸುವಾಗ ಮುನ್ನೆಚ್ಚರಿಕೆ ವಹಿಸಬೇಕು ಎಂದು ಹೇಳಿರುವುದಾಗಿ ಉನ್ನತ ಮೂಲಗಳು ತಿಳಿಸಿವೆ.




