ಗ್ಯಾರಂಟಿ ರದ್ದು ವಿವಾದ: ಎಚ್.ಸಿ.ಬಾಲಕೃಷ್ಣ ಅನರ್ಹಗೊಳಿಸಲು ಜೆಡಿಎಸ್ ಮನವಿ

2 years ago

ಬೆಂಗಳೂರು: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮತದಾರರು ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕದೆ ಹೋದರೆ ಗ್ಯಾರಂಟಿ ಯೋಜನೆಗಳು ಸ್ಥಗಿತಗೊಳ್ಳುತ್ತವೆ ಎಂಬ ಹೇಳಿಕೆಯ ಮೂಲಕ ಶಾಸಕ ಬಾಲಕೃಷ್ಣ ಅವರು ಮತದಾರರಿಗೆ ಬೆದರಿಕೆ ಹಾಕಿದ್ದಾರೆ ಎಂದು ಜೆಡಿಎಸ್ ಆರೋಪಿಸಿದೆ.

ಈ ಕುರಿತು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಜೆಡಿಎಸ್ ನಿಯೋಗ, ರಾಜ್ಯ ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ ಅವರನ್ನು ಭೇಟಿ ಮಾಡಿ ಮಾಗಡಿ ಶಾಸಕ ಎಚ್.ಸಿ.ಬಾಲಕೃಷ್ಣ ಅವರ ವಿರುದ್ಧ ದೂರು ನೀಡಿತು.

ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಜನ ಅವರಿಗೆ ಮತ ನೀಡದಿದ್ದರೆ 5 ಗ್ಯಾರಂಟಿ ಯೋಜನೆಗಳನ್ನು ಹಿಂಪಡೆಯಲು ತಮ್ಮ ಪಕ್ಷದೊಂದಿಗೆ ಚರ್ಚಿಸುತ್ತೇನೆ ಎಂಬುದಾಗಿ ಅವರು ಹೇಳಿಕೆ ನೀಡಿರುತ್ತಾರೆ. ಇದು ಸಾರ್ವಜನಿಕರಿಗೆ ಬೆದರಿಕೆ ಮತ್ತು ಅವರ ಮತದಾನದ ನಡವಳಿಕೆಯನ್ನು ಭ್ರಷ್ಟಗೊಳಿಸುವ ಸ್ಪಷ್ಟ ಪ್ರಕರಣವಾಗಿದೆ ಎಂದು ಜೆಡಿಎಸ್ ದೂರಿನಲ್ಲಿ ಹೇಳಿದೆ.

ಜನತಾ ಪ್ರಾತಿನಿಧ್ಯ ಕಾಯಿದೆಯ ಪ್ರಕಾರ ಭಾರತೀಯ ಸಂವಿಧಾನದ ನಿಬಂಧನೆಗಳನ್ನು ಅಥವಾ 1951ರ ಜನತಾ ಪ್ರಾತಿನಿಧ್ಯ ಕಾಯಿದೆಯನ್ನು ಉಲ್ಲಂಘಿಸಿದ ಪಕ್ಷದಲ್ಲಿ ಆ ರಾಜಕೀಯ ಪಕ್ಷದ ಮಾನ್ಯತೆ ರದ್ದು ಮಾಡುವ ಅಧಿಕಾರವನ್ನು ಚುನಾವಣಾ ಆಯೋಗವು ಹೊಂದಿದೆ. ಈ ನಿಟ್ಟಿನಲ್ಲಿ ಕಾಂಗ್ರೆಸ್ ಪಕ್ಷ ಹಾಗೂ ಶಾಸಕ ಬಾಲಕೃಷ್ಣ ಅವರು ಜನತಾ ಪ್ರಾತಿನಿಧ್ಯ ಕಾಯ್ದೆಯನ್ನು ಉಲ್ಲಂಘಿಸಿರುವುದು ಸ್ಪಷ್ಟವಾಗಿದೆ. ಈ ಹಿನ್ನೆಲೆಯಲ್ಲಿ ಅವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಬೇಕು ಎಂದು ಮನವಿಮಾಡಿದೆ.

ಮನವಿ ಕೊಟ್ಟ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ನಿಖಿಲ್ ಕುಮಾರಸ್ವಾಮಿ, ಕಾಂಗ್ರೆಸ್ ಶಾಸಕ ಬಾಲಕೃಷ್ಣ ಅವರು ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಮತ್ತು ರಾಹುಲ್ ಗಾಂಧಿ ಅವರು ಸೇರಿದಂತೆ ಪಕ್ಷದ ಉನ್ನತ ನಾಯಕತ್ವದ ಪೂರ್ವಾನುಮತಿ ಇಲ್ಲದೆ ಅವರು ಯಾವುದೇ ಹೇಳಿಕೆ ನೀಡಿರುವ ಸಾಧ್ಯತೆ ಇಲ್ಲ. ಇಂತಹ ವರ್ತನೆಯನ್ನು ಜೆಡಿಎಸ್ ಮತ್ತು ಕರ್ನಾಟಕದ ಜನತೆ ಸಹಿಸುವುದಿಲ್ಲ ಎಂದರು.

ಕಾಂಗ್ರೆಸ್, ದೇಶ ವಿರೋಧಿ ಮತ್ತು ಕರ್ನಾಟಕ ವಿರೋಧಿ ಪಕ್ಷ. ಸಾರ್ವಜನಿಕರು ಕಾಂಗ್ರೆಸ್ಸಿಗರ ನಿಜವಾದ ಗುಣವನ್ನು ಅರ್ಥಮಾಡಿಕೊಂಡಿದ್ದಾರೆ. ಹಾಗಾಗಿ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ಸಿಗೆ ಮತ ಹಾಕಲು ಹೋಗುವುದಿಲ್ಲ ಎಂಬುದು ಕಾಂಗ್ರೆಸ್ಸಿಗರಿಗೆ ಈಗಾಗಲೇ ಅರಿವಾಗಿದೆ. ಮುಂಬರುವ ಚುನಾವಣೆಗಳಲ್ಲಿ ಪಿಎಂ ಮೋದಿ ನೇತೃತ್ವದ ಎನ್‌ಡಿಎ ಭರ್ಜರಿ ಗೆಲುವು ಸಾಧಿಸುವುದು ಖಚಿತ. ಹತಾಶೆಯಿಂದ ಅವರು ಇಂತಹ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದರು.

Leave a Reply