ಒಬಿಸಿ ಮೀಸಲಾತಿ ಫಲಾನುಭವಿಗಳಲ್ಲಿ ಲಿಂಗಾಯತರು, ಒಕ್ಕಲಿಗರೂ ಇದ್ದಾರೆ

4 years ago

ವಿ.ಎಲ್.ನರಸಿಂಹಮೂರ್ತಿ ಅವರು ಮಾಜಿ ಪ್ರಧಾನಿ ವಿ.ಪಿ.ಸಿಂಗ್ ಬಗ್ಗೆ ಬರೆದಿರುವ ಲೇಖನ ಓದಿದೆ. ಅದನ್ನು ಬಹಳಷ್ಟು ಮಂದಿ ಶೇರ್ ಮಾಡಿಕೊಂಡಿದ್ದಾರೆ. ಚೆನ್ನಾಗಿದೆ ಎಲ್ಲರೂ ಓದಿ. ಅವರು ಹೇಳದೆ ಉಳಿದಿರುವ ಎರಡು ವಿಚಾರಗಳು ನಿಮ್ಮ ಗಮನಕ್ಕೆ:

ಮೊದಲನೆಯದಾಗಿ, ವಿ.ಪಿ.ಸಿಂಗ್ ಅವರು ಮಂಡಲ್ ವರದಿಯನ್ನುಮಾತ್ರ ಜಾರಿ ಮಾಡಿಲ್ಲ. ಸಂವಿಧಾನಕ್ಕೆ 62ನೇ ತಿದ್ದುಪಡಿ ಮಾಡಿ The Schedule cast/Schedule tribe (Prevention of Attoricity) Act 1989 ಜಾರಿಗೆ ತಂದಿದ್ದಾರೆ. ಅಲ್ಲಿಯವರೆಗೆ Protection of Civil right act 1955 ಮತ್ತು ಐಪಿಸಿಯಿಂದ ಮಾತ್ರ ದಲಿತರ ಮೇಲಿನ ದೌರ್ಜನ್ಯಕ್ಕೆ ರಕ್ಷಣೆ ಇತ್ತು. ವಿ.ಪಿ.ಸಿಂಗ್ ಜಾರಿಗೆ ತಂದಿದ್ದ ಕಾನೂನನ್ನು ನರೇಂದ್ರಮೋದಿ ಸರ್ಕಾರ ದುರ್ಬಲಗೊಳಿಸಲು ಪ್ರಯತ್ನಮಾಡಿತ್ತು.

ಎರಡನೆಯದಾಗಿ, ಹಿಂದುಳಿದ ಜಾತಿಗಳಿಗೆ ಮೀಸಲಾತಿ ನೀಡಿದ ವಿ.ಪಿ.ಸಿಂಗ್ ಅವರನ್ನು ಹಿಂದುಳಿದ ಜಾತಿಗಳೇ ಮರೆತುಬಿಟ್ಟದ್ದು ದುರಂತ ಎಂದು ಬರೆದಿರುವುದು ಸರಿಯಾಗಿದೆ. ಆದರೆ ಆ ಹಿಂದುಳಿದ ಜಾತಿಗಳು ಯಾವುದು ಎನ್ನುವುದನ್ನು ವಿವರಿಸದಿದ್ದರೆ ತಪ್ಪು ಅಭಿಪ್ರಾಯಕ್ಕೆ ದಾರಿಮಾಡಿಕೊಟ್ಟಂತಾಗಿದೆ.

ಹಿಂದುಳಿದ ಜಾತಿಗಳು ಎಂದರೆ ಕರ್ನಾಟಕದ ಮೀಸಲಾತಿ ಪಟ್ಟಿಯ ಪ್ರವರ್ಗ 1 ಮತ್ತು ಪ್ರವರ್ಗ 2 (ಎ) ನಲ್ಲಿರುವ ಗೊಲ್ಲ, ಕುರುಬ,ಈಡಿಗ, ವಿಶ್ವಕರ್ಮ, ಅಗಸ,ಕ್ಷೌರಿಕ ಮೊದಲಾದ ಜಾತಿಗಳು ಎಲ್ಲರ ಕಣ್ಣ ಮುಂದೆ ಬರುತ್ತವೆ.

ಆದರೆ ಕರ್ನಾಟಕದಲ್ಲಿ ಜಾರಿಯಲ್ಲಿರುವ ಮೀಸಲಾತಿ ಪಟ್ಟಿಯಲ್ಲಿ ಪ್ರವರ್ಗ 3(ಎ) ನಲ್ಲಿರುವ  ಒಕ್ಕಲಿಗರು ಮತ್ತು ಪ್ರವರ್ಗ 3 (ಬಿ) ಯಲ್ಲಿರುವ ಲಿಂಗಾಯತರು ಮತ್ತು 2 (ಎ) ನಲ್ಲಿರುವ ಮುಸ್ಲಿಮರು ಕೂಡಾ ಹಿಂದುಳಿದ ವರ್ಗಕ್ಕೆ ಸೇರಿದವರಾಗಿದ್ದಾರೆ. ಇದರ ಸತ್ಯಾಸತ್ಯತೆಯನ್ನು ಯಾರಾದರೂ ಪರೀಕ್ಷಿಸಬೇಕಾದರೆ ಸಮೀಪದ ಹಿಂದುಳಿದ ಜಾತಿಗಳ ಸರ್ಕಾರಿ ಹಾಸ್ಟೆಲ್ ಗೆ ಹೋಗಿ ಒಂದು ಸಮೀಕ್ಷೆ ನಡೆಸಬಹುದು.

ಮಂಡ್ಯ, ರಾಮನಗರ, ಹಾಸನದ ಒಬಿಸಿ ಹಾಸ್ಟೆಲ್ ಗಳಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಒಕ್ಕಲಿಗರು ಹಾಗೆಯೇ ಧಾರವಾಡ, ಬೆಳಗಾವಿ, ಬಿಜಾಪುರ ಒಬಿಸಿ ಹಾಸ್ಟೆಲ್ ಗಳಲ್ಲಿ ಲಿಂಗಾಯತ ವಿದ್ಯಾರ್ಥಿಗಳಿದ್ದಾರೆ. ವಿದ್ಯಾಸಿರಿಯಿಂದ ಹಿಡಿದು ಒಬಿಸಿಗೆ ನೀಡಲಾಗುವ ಎಲ್ಲ ಸೌಲಭ್ಯಗಳಿಗೆ ಇವರು ಫಲಾನುಭವಿಗಳಿದ್ದಾರೆ.

ಆದರೆ ಮೀಸಲಾತಿ ಎಂದ ಕೂಡಲೇ ಎಸ್ ಸಿ ಮತ್ತು ಎಸ್ ಟಿ ಹಾಗೂ ಪ್ರವರ್ಗ 1 ಮತ್ತು 2 (ಎ)ಯಲ್ಲಿ ಬರುವ ಹಿಂದುಳಿದ ಜಾತಿಗಳನ್ನು ಮಾತ್ರ ಉಲ್ಲೇಖಿಸಿ. ಅರ್ಹತೆ ಇಲ್ಲದೆ ಮೀಸಲಾತಿ ಪಡೆದವರು, ಸರ್ಕಾರದ ಸೌಲಭ್ಯಗಳನ್ನು ಮುಕ್ಕುತ್ತಿರುವವರು ಎಂದು ಗೇಲಿ ಮಾಡುವುದು, ಹಂಗಿಸುವುದು ನಡೆಯುತ್ತಿರುತ್ತದೆ.

ಇದೇ ಮೀಸಲಾತಿ ಸೌಲಭ್ಯವನ್ನು ಪಡೆದಿರುವ ಒಕ್ಕಲಿಗ ಮತ್ತು ಲಿಂಗಾಯತ ಸಮುದಾಯ ಯಾರ ನೆನಪಿಗೂ ಬರುವುದಿಲ್ಲ. ಈ ಸಮುದಾಯಗಳ ಚಿಂತಕರು, ಬುದ್ದಿಜೀವಿಗಳು ಕೂಡಾ ಈ ತಪ್ಪು ಕಲ್ಪನೆಯನ್ನು ಹೋಗಲಾಡಿಸಲು ಪ್ರಯತ್ನವನ್ನೇ ಮಾಡಿಲ್ಲ.

ಇನ್ನು ಮಂಡಲ ಆಯೋಗದ ಶಿಫಾರಸಿನ ಮೇಲೆ ಪ್ರತಿ ರಾಜ್ಯಕ್ಕೆ ಪ್ರತ್ಯೇಕ ಮೀಸಲಾತಿ ಪಟ್ಟಿ ಮಾಡಿದೆ. ಅದರಲ್ಲಿಯೂ ಒಕ್ಕಲಿಗ ಮತ್ತು ಲಿಂಗಾಯತ ಸಮುದಾಯದ ಬಹಳಷ್ಟು ಜಾತಿಗಳು ಹಿಂದುಳಿದ ಪಟ್ಟಿಯಲ್ಲಿ ಸೇರಿವೆ.

ಉದಾ: ಲಿಂಗಾಯತ-ಅಗಸ, ಮೇದಾರ, ಗೌಳಿಗ, ನೀಲಗಾರ, ಅಕ್ಕಸಾಲಿ, ಜಾಡರ್, ಕುರುವಿನಶೆಟ್ಟಿ ಮತ್ತಿತರ ಜಾತಿಗಳು ಹಾಗೂ  ಒಕ್ಕಲಿಗ ಸಮುದಾಯದ  ಗೌಡ, ಒಕ್ಕಲಿಗ, ಉಪ್ಪಿನ ಕೊಳಗ, ಸರ್ಪ ಒಕ್ಕಲಿಗ (ಗ್ರಾಮೀಣ ಪ್ರದೇಶದಲ್ಲಿರುವವರು) ಪಂಗಡಗಳು ಕೇಂದ್ರ ಮೀಸಲಾತಿ ಪಟ್ಟಿಯಲ್ಲಿವೆ.

ಈ ಎಲ್ಲ ಜಾತಿಗಳು ಕೇಂದ್ರ ಸರ್ಕಾರದಲ್ಲಿ ಉದ್ಯೋಗ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಮೀಸಲಾತಿ ಪಡೆಯುತ್ತಿವೆ. ಮಂಡಲ್ ವರದಿಯ ಫಲಾನುಭವಿಗಳಾದ ಹಿಂದುಳಿದ ಜಾತಿಗಳು ಮಾತ್ರವಲ್ಲ ಒಕ್ಕಲಿಗ ಮತ್ತು‌ ಲಿಂಗಾಯತರು ಕೂಡಾ ವಿರೋಧಿಸಿದ್ದು ದುರಂತ.

ವೆಂಕಟಸ್ವಾಮಿ ಆಯೋಗದ ವರದಿ ವಿರುದ್ದ ಸಾಕ್ಷಾತ್ ಹೆಚ್.ಡಿ.ದೇವೇಗೌಡರೇ ಬೀದಿಗಿಳಿದು ರಾಮಕೃಷ್ಣ ಹೆಗಡೆಯನ್ನು ಮಣಿಸಿದ್ದು ಇನ್ನೂ ದೊಡ್ಡ ದುರಂತ.

  • ದಿನೇಶ್ ಅಮಿನ್ ಮಟ್ಟು, ಹಿರಿಯ ಪತ್ರಕರ್ತರು

Leave a Reply