ಬೆಂಗಳೂರು: ಬೆಂಗಳೂರಿನ ಹವಾಮಾನ, ಉತ್ತಮ ಪರಿಸರದ ಕಾರಣದಿಂದ ಇಸ್ರೋ ಸಂಸ್ಥೆ ಸ್ಥಾಪಿಸಲಾಯಿತು. ಆದರೆ ಇಂದು ಗುಜರಾತ್ ರಾಜ್ಯಕ್ಕೆ ಇಸ್ರೋ ಸಂಸ್ಥೆ ವರ್ಗಾಯಿಸುವ ಹುನ್ನಾರ ನಡೆಯುತ್ತಿದೆ. ರಾಜ್ಯದ 25 ಬಿ.ಜೆ.ಪಿ.ಯ ಲೋಕಸಭಾ ಸದಸ್ಯರು 12 ರಾಜ್ಯಸಭಾ ಸದಸ್ಯರು ಪ್ರಧಾನಿಯವರ ಬಳಿ ನಿಯೋಗ ತೆರಳಿ ಇಸ್ರೋ ಸಂಸ್ಥೆ ಇಲ್ಲಿಯೆ ಉಳಿಯುವಂತೆ ಮಾಡಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆಗ್ರಹಿಸಿದರು.
ಸಂಜಯನಗರದಲ್ಲಿ ಇಸ್ರೋ ಕೇಂದ್ರ ಕಛೇರಿ ಎದುರು ಎನ್.ಎಸ್.ಯು.ಐ. ವಿದ್ಯಾರ್ಥಿ ವತಿಯಿಂದ ಇಸ್ರೋ ಕೇಂದ್ರ ಗುಜರಾತ್ ರಾಜ್ಯಕ್ಕೆ ವರ್ಗಾಯಿಸುವ ಪ್ರಕ್ರಿಯೆ ಖಂಡಿಸಿ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಪ್ರತಿಭಟನೆ ಮಾಡಲಾಯಿತು.
ನಮ್ಮ ಹಿರಿಯರು ಕಟ್ಟಿ ಬೆಳೆಸಿದ ಹಲವು ಸಂಸ್ಥೆಗಳನ್ನು ಬಿ.ಜೆ.ಪಿ. ನೇತೃತ್ವದ ಕೇಂದ್ರ ಸರ್ಕಾರ ಖಾಸಗೀಕರಣ ಮಾಡಿದೆ. ಪ್ರಧಾನಿ ನರೇಂದ್ರಮೋದಿಯವರಿಗೆ, ರಾಜ್ಯದ ಮುಖ್ಯಮಂತ್ರಿಗಳಿಗೆ ಇಸ್ರೋ ಸಂಸ್ಥೆ ಇಲ್ಲಿ ಉಳಿಯುವಂತೆ ಮನವಿ ಮಾಡಲಾಗುವುದು. ವರ್ಗಾವಣೆಯಾದರೆ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು.
ಮಾಜಿ ಸಚಿವ ಕೃಷ್ಣಭೈರೇಗೌಡ, ಎನ್.ಎಸ್.ಯು.ಐ. ರಾಜ್ಯಾಧ್ಯಕ್ಷ ಕೀರ್ತಿ ಗಣೇಶ್ ಹಾಗೂ ಬೆಂಗಳೂರು ನಗರ ಉತ್ತರ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಜಯಸಿಂಹ ಮತ್ತು ಎನ್ ಎಸ್ ಯು ಐ ನ ನೂರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು.




