ಕೇಂದ್ರದ ಮೋದಿರವರ ನೇತೃತ್ವದ ಸರ್ಕಾರ ಹತ್ತು ವರ್ಷಗಳು ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಮತ್ತು ಮತ್ತೊಮ್ಮೆ ಲೋಕಸಭಾ ಚುನಾವಣೆ ಸಮೀಪಿಸುತ್ತಿರುವ ಕಾರಣದಿಂದಲೂ ಈ ಸರ್ಕಾರ ಇಲ್ಲಿಯ ತನಕ ಘೋಷಿಸಿರುವ ಕಾರ್ಯಕ್ರಮಗಳ ಅನುಷ್ಠಾನದ ವಿಚಾರದಲ್ಲಿ ಅಂಕಿ-ಅಂಶಗಳೊಂದಿಗೆ ಮುಂದೆ ನಡೆಯಲಿರುವ ಸಂಸತ್ ಅಧಿವೇಶನದಲ್ಲಿ ಚರ್ಚೆಯಾಗಬೇಕು.
ಕೇಂದ್ರ ಸರ್ಕಾರ 2014ರ ನಂತರ ಅನೇಕ ಯೋಜನೆಗಳನ್ನು ಘೋಷಿಸಿ ಪ್ರತಿದಿನ ತನ್ನ ಜಾಹೀರಾತುಗಳಲ್ಲಿ ಅದರ ಫಲಾನುಭವಿಗಳ ಸಂಖ್ಯೆ ಮತ್ತು ಅದಕ್ಕಾಗಿ ವಿನಿಯೋಗಿಸಿರುವ ಮೊತ್ತದ ಸಂಖ್ಯೆ ಇವುಗಳನ್ನು ಗಮನಿಸಿದರೆ ದೇಶದಲ್ಲಿ ಈ ಹೊತ್ತಿಗಾಗಲೇ ಅನೇಕ ಕ್ಷೇತ್ರಗಳಲ್ಲಿ ಸಮಸ್ಯೆಯೇ ಇಲ್ಲದೆ ಎಲ್ಲವೂ ಪರಿಹಾರವಾಗಿರಬೇಕಾಗಿತ್ತು. ಆದರೆ ವಾಸ್ತವವಾಗಿ ಅವರ ಅಂಕಿ-ಅಂಶಗಳಿಗೂ ಮತ್ತು ಸತ್ಯದ ಮಾಹಿತಿಗಳಿಗೂ ತಾಳೆಯಾಗುವುದಿಲ್ಲ.
ಕೇಂದ್ರ ಸರ್ಕಾರ ಆಯುಷ್ಮಾನ್ ಭಾರತ್ ಎಂಬ ಆರೋಗ್ಯ ಯೋಜನೆಯನ್ನು ಘೋಷಿಸಿ ಈ ಕಾರ್ಡ್ ಹೊಂದಿರುವವರಿಗೆ ಐದು ಲಕ್ಷ ರೂಪಾಯಿಗಳ ತನಕ ದೇಶದ ಯಾವುದೇ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಉಚಿತವಾಗಿ ಪಡೆಯಬಹುದೆಂಬ ಅಬ್ಬರದ ಪ್ರಚಾರವಿದೆ. ಆದರೆ ಆಯುಷ್ಮಾನ್ ಕಾರ್ಡನ್ನು ಹೊಂದಿರುವವರ ಕೆಲವು ಸರ್ಕಾರಿ ಆಸ್ಪತ್ರೆಗಳಲ್ಲಿ ಸೌಲಭ್ಯವನ್ನು ಪಡೆಯಬಹುದು. ಆದರೆ ಸರ್ಕಾರಿ ಅನುದಾನಿತ ಆಸ್ಪತ್ರೆಗಳಲ್ಲಿ ಇದಕ್ಕೆ ಮಾನ್ಯತೆ ಇಲ್ಲ.
ಇನ್ನು ಖಾಸಗಿ ಆಸ್ಪತ್ರೆಗಳಲ್ಲಿ ಇದಕ್ಕೆ ಯಾವುದೇ ರೀತಿಯ ಕಿಮ್ಮತ್ತಿಲ್ಲ. ಹೀಗಿದ್ದಮೇಲೂ ಹಲವಾರು ಕೋಟಿ ಜನರಿಗೆ ಈ ಯೋಜನೆಯ ಲಾಭವಾಗಿದೆ ಎಂದು ಜಾಹೀರಾತುಗಳಲ್ಲಿ ಕಾಣುತ್ತಿದ್ದೇವೆ. ಆದುದರಿಂದ ಈ ಯೋಜನೆ ಘೋಷಣೆಯಾದ ದಿನದಿಂದ ಇಲ್ಲಿಯ ತನಕ ಎಷ್ಟು ಕೋಟಿ ರೂಪಾಯಿಗಳನ್ನು ರೋಗಿಗಳ ಚಿಕಿತ್ಸೆಗೆ ಯಾವ ಯಾವ ವರ್ಷ, ಯಾವ ಯಾವ ರಾಜ್ಯಕ್ಕೆ ಬಿಡುಗಡೆಯಾಗಿದೆ? ಇದರ ಫಲಾನುಭವಿಗಳ ಸಂಖ್ಯೆ ಎಷ್ಟು ಎನ್ನುವುದನ್ನು ನಿಖರವಾಗಿ ಅರಿಯುವ ಅಗತ್ಯ ಇದೆ.
ಕೇಂದ್ರ ಸರ್ಕಾರ ಮುದ್ರಾಯೋಜನೆ ಅಡಿಯಲ್ಲಿ ಐದು ಲಕ್ಷದಿಂದ ಐವತ್ತು ಲಕ್ಷ ರೂಪಾಯಿಗಳ ತನಕ ಮೂವತ್ತೈದು ಕೋಟಿ ಜನರಿಗೆ ಸಾಲದ ನೀಡಿರುವುದಾಗಿ ಜಾಹೀರಾತು ನೀಡುತ್ತದೆ. ಆದುದರಿಂದ ಯಾವ ಯಾವ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಇಲ್ಲಿಯ ತನಕ ಯಾವ ಯಾವ ರಾಜ್ಯದಲ್ಲಿ ಎಷ್ಟು ಜನ ಫಲಾನುಭವಿಗಳಿಗೆ ಎಷ್ಟು ಕೋಟಿ ರೂಪಾಯಿಗಳ ಸಾಲವನ್ನು ನೀಡಿದ್ದಾರೆ ಎಂಬ ಮಾಹಿತಿಯನ್ನು ಬಿಡುಗಡೆ ಮಾಡಬೇಕು.
ಕೇಂದ್ರ ಸರ್ಕಾರದ ಮತ್ತೊಂದು ಮಹತ್ವದ ಯೋಜನೆಯಾದ ಉಜ್ವಲ್ ಯೋಜನೆಯಡಿ ಐದು ಕೋಟಿಗೂ ಹೆಚ್ಚು ಜನ ಗ್ಯಾಸ್ ಸಂಪರ್ಕವನ್ನು ಪಡೆದು ಸೌದೆ ಒಲೆಗಳಿಂದ ಮುಕ್ತಾರಾಗಿದ್ದಾರೆಂದು ಜಾಹೀರಾತು ನೀಡುತ್ತದೆ. ಆದುದರಿಂದ ಎಷ್ಟು ಕೋಟಿ ಜನ ಯಾವ ರಾಜ್ಯದಲ್ಲಿ ಈ ಯೋಜನೆಯ ಫಲವನ್ನು ಪಡೆದಿದ್ದಾರೆ ಮತ್ತು ಇಂದಿಗೂ ಆ ಯೋಜನೆಯ ಫಲವನ್ನು ಅನುಭವಿಸುತ್ತಿದ್ದಾರೆಯೇ? ಗ್ಯಾಸ್, ಸಿಲಿಂಡರ್‌ಗಳಿಗೆ ಪ್ರತಿ ತಿಂಗಳು ಹಣವನ್ನು ಪಾವತಿಸಲು ಸಾಧ್ಯವಾಗದೆ ಈ ಯೋಜನೆಯಿಂದ ಹೊರಬಂದಿರುವ ಮಹಿಳೆಯರ ಸಂಖ್ಯೆಯು ಎಷ್ಟು ಎಂಬುದನ್ನು ಬಹಿರಂಗಪಡಿಸಬೇಕು.
ದೇಶ ಆರ್ಥಿಕವಾಗಿ ಸದೃಢವಾಗಿದೆ ಎಂಬ ಮಾತುಗಳನ್ನು ಪದೇ ಪದೇ ಹೇಳುತ್ತಲೇ ಇರುತ್ತಾರೆ. ಇದು ಸತ್ಯ ಎನ್ನುವುದಾದರೆ ಕಳೆದ ಹತ್ತು ವರ್ಷದ ಅವಧಿಯಲ್ಲಿ ಕೇಂದ್ರ ಸರ್ಕಾರ ದೇಶದ ಹೊರಗಿನ ಎಷ್ಟು ಸಾಲಗಳನ್ನು ತೀರಿಸಿದೆ ಮತ್ತು ದೇಶದ ಇಂದಿನ ಒಟ್ಟು ಸಾಲದ ಮೊತ್ತವೆಷ್ಟು ತಾವು ಬರುವ ಮುನ್ನ ದೇಶದ ಸಾಲ ಎಷ್ಟಿತ್ತು, ಈಗ ದೇಶದ ಸಾಲ ಎಷ್ಟಿದೆ ಎಂಬ ಮಾಹಿತಿಯನ್ನು ನೀಡಬೇಕು.
ಕಳೆದ ಹತ್ತು ವರ್ಷದ ಅವಧಿಯಲ್ಲಿ ಕೇಂದ್ರ ಸರ್ಕಾರ ವಿವಿಧ ಯೋಜನೆಗಳಡಿಯಲ್ಲಿ ವಿವಿಧ ಸ್ವರೂಪದಲ್ಲಿ ರಾಜ್ಯಗಳಿಂದ ಪಡೆದಿರುವ ತೆರಿಗೆಯ ಮೊತ್ತವೆಷ್ಟು, ಯಾವ ಯಾವ ರಾಜ್ಯಕ್ಕೆ ವಿವಿಧ ಯೋಜನೆಗಳಿಗೆ ಎಷ್ಟು ಮೊತ್ತವನ್ನು ಹಿಂತಿರುಗಿಸಿದ್ದೀರಿ. ಇದರ ಬಗ್ಗೆಯೂ ಚರ್ಚೆಯಾಗಲಿ.
ದೇಶದಲ್ಲಿನ ನಿರುದ್ಯೋಗದ ಪ್ರಮಾಣ 2014ರ ಮುನ್ನ ಎಷ್ಟಿತ್ತು? ಈಗ ಇದರ ಪ್ರಮಾಣವೇನು? 2014ರ ಮುನ್ನ ಇದ್ದಂತಹ ಸಣ್ಣ, ಮಧ್ಯಮ ಮತ್ತು ಬೃಹತ್ ಕೈಗಾರಿಕೆಗಳ ಸಂಖ್ಯೆ ಎಷ್ಟು? ಕಳೆದ ಹತ್ತು ವರ್ಷದಲ್ಲಿ ಹೊಸದಾಗಿ ಸ್ಥಾಪನೆಯಾಗಿರುವ ಸಣ್ಣ, ಮಧ್ಯಮ ಮತ್ತು ಬೃಹತ್ ಕೈಗಾರಿಕೆಗಳ ಸಂಖ್ಯೆ ಎಷ್ಟು ಇದು ಚರ್ಚೆಯಾಗಲಿ.
ಕೇಂದ್ರ ಸರ್ಕಾರ ಪ್ರತಿಯೊಂದು ವಿಭಾಗದಲ್ಲೂ ಸಹ ಕಳೆದ ಹತ್ತು ವರ್ಷದಲ್ಲಿ ಎಲ್ಲವನ್ನೂ ಸಾಧಿಸಿದ್ದೇವೆ ಎಂದು ಜಾಹೀರಾತು ನೀಡುತ್ತಿದೆ. ಆದುದರಿಂದ ಇವುಗಳ ವಿಚಾರದಲ್ಲಿ ಅಂಕಿ-ಅಂಶಗಳು ಬಹಿರಂಗಗೊಂಡು ಚರ್ಚೆಯಾದರೆ ಕೇಂದ್ರ ಸರ್ಕಾರ ಕಳೆದ ಹತ್ತು ವರ್ಷದಲ್ಲಿ ಮಾಡಿರುವ ಸಾಧನೆಗಳ ಆಧಾರದ ಮೇಲೆ ಮುಂದಿನ ಚುನಾವಣೆಯ ವಿಚಾರಗಳು ಕೇಂದ್ರೀಕೃತವಾಗಲಿ.
ಕೇವಲ ಜಾಹೀರಾತುಗಳನ್ನು ನೀಡಿ ಜನರನ್ನು ನಂಬಿಸಿ ಸುಳ್ಳನ್ನೇ ಸತ್ಯವೆಂದು ಬಿಂಬಿಸುತ್ತಾ ರಾಷ್ಟ್ರದ ಜನರನ್ನು ಭ್ರಮಲೋಕದಲ್ಲಿಡಬಾರದು. ಇಂಡಿಯಾ ಒಕ್ಕೂಟ ಜನರ ಮುಂದೆ ಇಂತಹ ವಿಚಾರಗಳ ಬಗ್ಗೆ ಚರ್ಚಿಸಬೇಕು. ಜೊತೆಗೆ ತಮ್ಮ ಒಕ್ಕೂಟದ ಕೈಗಾರಿಕೆ, ಆರ್ಥಿಕ, ಸಾಂಸ್ಕೃತಿಕ, ಔದ್ಯೋಗಿಕ ಮತ್ತು ಧಾರ್ಮಿಕ ವಿಚಾರಗಳ ನೀತಿಗಳನ್ನು ಆದಷ್ಟು ಬೇಗನೆ ಚರ್ಚಿಸಿ ಜನರ ಮುಂದಿಡಬೇಕು.
– ಕೆ.ಎಸ್.ನಾಗರಾಜ್, ಬೆಂಗಳೂರು




