ನನಗೊಂದಿರಲಿ, ನನ್ನ ಮನೆಗೂ ಒಂದಿರಲಿ

3 years ago

ಹಲವಾರು ದಶಕಗಳ ಹಿಂದೆ ಮನೆಗಳ ಮುಂದೆ ಮೊಸರು ಮಾರುವ ಮಂದಿ ಬರುತ್ತಿದ್ದರು. ಅವರು ಪ್ರತಿದಿನ ಮನೆಗಳಿಗೆ ಅವರು ಕೇಳಿದಷ್ಟು ಮೊಸರನ್ನು ಅಳತೆ ಮಾಡಿಕೊಟ್ಟು ಜೊತೆಗೆ ಮನೆಯಲ್ಲಿನ ಪುಟ್ಟ ಮಕ್ಕಳು ಲೋಟ ಹಿಡಿದುಕೊಂಡು ಬಂದಾಗ ಅದಕ್ಕೊಂದಷ್ಟು ಮೊಸರು ಹಾಕಿ ಮಕ್ಕಳ ಸಂತೋಷವನ್ನು ಕಣ್ತುಂಬಿಕೊಳ್ಳುತ್ತಿದ್ದರು. ಈ ಮಾತು ಈಗ ಮತ್ತೆ ನೆನಪಿಗೆ ಬರಲು ಕಾರಣ ಸದ್ಯದಲ್ಲಿಯೇ ಕರ್ನಾಟಕ ರಾಜ್ಯದ ವಿಧಾನಸಭಾ ಚುನಾವಣೆ ನಡೆಯಲಿದ್ದು ಈ ಹಿನ್ನೆಲೆಯಲ್ಲಿ ಬಹುತೇಕ ರಾಜಕೀಯ ಪಕ್ಷಗಳಲ್ಲಿ ವಿವಿಧ ಕ್ಷೇತ್ರಗಳಿಗೆ ಟಿಕೇಟ್ಗಳನ್ನು ಹಂಚುವ ಸಮಾಲೋಚನೆಗಳು ಆರಂಭಗೊಂಡಿದೆ.

ಈ ಸಂದರ್ಭದಲ್ಲಿ ರಾಜ್ಯದ ಕನಿಷ್ಠ ಐವತ್ತು ಕ್ಷೇತ್ರಕ್ಕೂ ಹೆಚ್ಚಿನ ಭಾಗದಲ್ಲಿ ತಾತ ಶಾಸಕನಾಗಿದ್ದ, ಅವರ ನಂತರ ಮಗ ಬಂದ, ಮಗನ ನಂತರ ಮೊಮ್ಮಗ ಹೀಗೆ ಹಲವಾರು ಕ್ಷೇತ್ರಗಳು ತಲಾತಲಾಂತರದಿಂದ ಅವರ ಕುಟುಂಬದ ಆಸ್ತಿಯಾಗಿದೆ. ಇವರುಗಳು ಪ್ರತಿ ಚುನಾವಣೆಯಲ್ಲೂ ವಾತಾವರಣವನ್ನು ನೋಡಿ ಪಕ್ಷವನ್ನು ಬದಲಾಯಿಸಿಕೊಳ್ಳುತ್ತಾರೆ. ಇವರೆಲ್ಲಾ ನಮ್ಮ ಜನಪ್ರಿಯ, ಜನನಾಯಕರುಗಳು, ಗೆಲುವಿಗೆ ಹೆಚ್ಚಿನ ಅವಕಾಶವಿರುವ ತಮ್ಮ ಕ್ಷೇತ್ರಗಳನ್ನು ಯಾವೊಬ್ಬ ಕಾರ್ಯಕರ್ತನಿಗೂ ಕೊಟ್ಟು ಗೆಲ್ಲಿಸಿಕೊಳ್ಳುವ ದೊಡ್ಡ ಬುದ್ಧಿ ಇವರಿಗಿಲ್ಲ. ಫಲವತ್ತಾದ ಭೂಮಿ ಇವರ ಕುಟುಂಬದ ಆಸ್ತಿಯಾಗಿರಬೇಕು.

ಇನ್ನು ಈ ಕ್ಷೇತ್ರಗಳೇನೂ ಅಭಿವೃದ್ಧಿಯ ನಾಗಲೋಟದಲ್ಲಿ ತೇಲಾಡುತ್ತಿಲ್ಲ, ಸ್ವರ್ಗವೂ ಧರೆಗಳಿದಿರುವುದಿಲ್ಲ. ಇದರೊಂದಿಗೆ ಇನ್ನು ನಿವೃತ್ತಿಯಾಗದ ನಿವೃತ್ತಿಯ ಅಂಚಿನಲ್ಲಿರುವ ಹಲವಾರು ನಾಯಕರುಗಳು ತಮಗೊಂದು ಕ್ಷೇತ್ರ ತಮ್ಮ ಮನೆಯವರಿಗೆ ಮಗನಿಗೂ, ಮಗಳಿಗೂ, ಅಳಿಯನಿಗೂ, ಸೊಸೆಗೂ ಅಥವಾ ಮೊಮ್ಮಕ್ಕಳಿಗೂ ಮತ್ತೊಂದು ಕ್ಷೇತ್ರವನ್ನು ಕೇಳುತ್ತಿದ್ದಾರೆ. ಒಟ್ಟಾರೆಯಾಗಿ ಸುಮಾರು ಕ್ಷೇತ್ರಗಳು ಕುಟುಂಬದವರ ಆಸ್ತಿಯಾಗಿದೆ.
ಈ ಹಿಂದೆ ರಾಜಪ್ರಭುತ್ವ ಹೋಗಿ, ಪ್ರಜಾಪ್ರಭುತ್ವದ ವ್ಯವಸ್ಥೆ ಬಂದಿತ್ತು. ಆದರೆ ನಮ್ಮನಾಳುವ ನಾಯಕರುಗಳು ಇನ್ನೂ ರಾಜರಂತೆಯೇ ತಮ್ಮ ವಂಶದ ಕುಡಿಗಳನ್ನು ಉತ್ತರಾಧಿಕಾರಿಯನ್ನಾಗಿ ನೇಮಕ ಮಾಡುತ್ತಿದ್ದಾರೆ. ಮತ್ತೊಂದು ಸಂತೋಷದ ಸಂಗತಿ ಎಂದರೆ ಅನೇಕ ನಾಯಕರುಗಳು ಕ್ಷೇತ್ರಗಳನ್ನು ತ್ಯಾಗ ಮಾಡುತ್ತಿದ್ದಾರೆ! ಕಾರ್ಯಕರ್ತರಿಗಲ್ಲ ಅವರ ಮನೆಯವರಿಗಾಗಿ, ಒಟ್ಟಾರೆ ಕರ್ನಾಟಕ ರಾಜ್ಯದ ಪ್ರಜಾಪ್ರಭುತ್ವದಲ್ಲಿ ಆಶಾದಾಯಕದಂತಹ ಯಾವ ಬೆಳವಣಿಗೆಗಳು ಕಾಣುತ್ತಿಲ್ಲ.

ನಮ್ಮನಾಳುವ ರಾಜ, ಮಹಾರಾಜರು ಅಥವಾ ಅವರ ಮನೆಯವರು ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುವುದಿಲ್ಲ. ಅವರೇಕೆ ಅವರ ಮನೆಯ ನಾಯಿಯೂ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವುದಿಲ್ಲ. ಇನ್ನು ಸರ್ಕಾರಿ ಶಾಲೆಗಳ ಕಡೆ ತಿರುಗಿ ನೋಡುವುದಿಲ್ಲ. ಐಶಾರಾಮಿ ಕಾರುಗಳು, ಹೆಲಿಕಾಪ್ಟರ್ಗಳು ಇವೇ ಇವರ ಸಂಚಾರದ ಸಾಧನಗಳಾಗಿರುವುದರಿಂದ ಇನ್ನು ಸಾರಿಗೆ ಬಸ್ಗಳ ಬಾಗಿಲು ಸಹ ನೋಡಿರುವುದಿಲ್ಲ. ಇದರಿಂದಾಗಿ ಇವರುಗಳಿಗೆ ಮೂಲಭೂತವಾದಂತಹ ಸಮಸ್ಯೆಗಳಾದ ಶಿಕ್ಷಣ, ಆರೋಗ್ಯ, ಸಾರಿಗೆ, ನೀರಿನ ಸಂಪರ್ಕ ಇವುಗಳ ಸಮಸ್ಯೆಗಳ ಅರಿವೆ ಇರುವುದಿಲ್ಲ. ಆದರೂ ಇವರೆಲ್ಲರೂ ಬಡವರ ಬಂಧುಗಳು, ದೀನದಲಿತರ ನಾಯಕರು, ಸರಳ ಸಜ್ಜನರು, ದೊಡ್ಡ ದೊಡ್ಡ ಬಂಗಲೆಯಲ್ಲಿ ವಾಸಿಸುತ್ತಿದ್ದರೂ, ಆಡಂಬರದ ಬದುಕು ನಡೆಸುತ್ತಿದ್ದರೂ ಗಾಂಧಿ ಅನುಯಾಯಿಗಳು, ಚುನಾವಣೆಗೆ ನಿಂತವರು ಅಧಿಕಾರದ ರುಚಿ ನೋಡದವರು ಅದೇನೂ ವಿನಯ, ಅದೇನೂ ನಮ್ರತೆ, ಜನರ ಬಗ್ಗೆ ಅದೇನೂ ಕಾಳಜಿ, ಒಂದು ಬಾರಿ ಅಧಿಕಾರ ದೊರೆಯುತ್ತಿದ್ದಂತೆ ಇವರಿಗೆ ಎಲ್ಲಾ ರೀತಿಯ ಜಾಡ್ಯಗಳು ಅಂಟಿಕೊಳ್ಳುತ್ತದೆ.

– ಕೆ.ಎಸ್. ನಾಗರಾಜ್, ಬೆಂಗಳೂರು

Leave a Reply