ಚಿಕ್ಕಬಳ್ಳಾಪುರ: ಕಾಂಗ್ರೆಸ್ ಸರ್ಕಾರ ಸೇಡಿನ ರಾಜಕಾರಣದಿಂದ ಕೋಚಿಮುಲ್ ವಿಭಜನೆಯ ಆದೇಶ ಹಿಂಪಡೆದು ರೈತರಿಗೆ ಅನ್ಯಾಯ ಮಾಡಿದೆ. ಇದರ ವಿರುದ್ಧ ಕಾನೂನು ಹೋರಾಟ ಮಾಡಿ ರೈತರಿಗೆ ನ್ಯಾಯ ದೊರಕಿಸಲಾಗುವುದು. ಹಾಗೆಯೇ 20 ಸಾವಿರ ನಿವೇಶನಕ್ಕೆ ಭೂಮಿ ಮಂಜೂರು ಮಾಡಿಸಿದ್ದೇನೆ ಎಂದು ಭೋಗನಂದೀಶ್ವರ ದೇವಸ್ಥಾನದಲ್ಲಿ ಪ್ರಮಾಣ ಮಾಡುತ್ತೇನೆ, ಈಗಿನ ಶಾಸಕರು ಕೂಡ ಇದನ್ನು ಮಾಡಿಲ್ಲ ಎಂದು ಪ್ರಮಾಣ ಮಾಡಲಿ ಎಂದು ಮಾಜಿ ಸಚಿವ ಡಾ.ಕೆ.ಸುಧಾಕರ್ ಸವಾಲು ಹಾಕಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋಲಾರ-ಚಿಕ್ಕಬಳ್ಳಾಪುರ ಹಾಲು ಒಕ್ಕೂಟವು ಬೆಂಗಳೂರು ಹಾಲು ಒಕ್ಕೂಟದಿಂದ ಬೇರ್ಪಟ್ಟಿತ್ತು. ಆಗ ಒಂದೂವರೆ ಲಕ್ಷ ಲೀಟರ್ ಹಾಲು ಉತ್ಪಾದನೆಯಾಗುತ್ತಿದ್ದು, ವಿಭಜನೆ ಬಳಿಕ ಉತ್ಪಾದನೆ 10 ಲಕ್ಷ ಲೀಟರ್‌ಗೆ ಏರಿತು. ಇದು ಹೆಮ್ಮೆಯ ವಿಚಾರವೇ ಹೊರತು ರಾಜಕೀಯ ವಿಚಾರವಲ್ಲ. ಹಿಂದಿನ ಬಿಜೆಪಿ ಸರ್ಕಾರ, ಬಸವರಾಜ ಬೊಮ್ಮಾಯಿಯವರ ನೇತೃತ್ವದಲ್ಲಿ ಹಾವೇರಿ ಹಾಲು ಒಕ್ಕೂಟವನ್ನು ಪ್ರತ್ಯೇಕವಾಗಿ ರಚಿಸಿದೆ. ಅದರ ಜೊತೆಗೆ ಚಿಕ್ಕಬಳ್ಳಾಪುರ ಹಾಲು ಒಕ್ಕೂಟ ರಚಿಸಲಾಗಿತ್ತು. ನಮ್ಮ ಜಿಲ್ಲೆಯ ಒಕ್ಕೂಟದಲ್ಲಿ ನಾಲ್ಕೂವರೆ ಲಕ್ಷ ಲೀಟರ್ ಹಾಲು ಉತ್ಪಾದನೆಯಾಗುತ್ತಿದೆ ಎಂದರು.
ಕೋಚಿಮುಲ್ ವಿಭಜನೆ ವಿರೋಧಿಸಿ ಕೆಲ ನಿರ್ದೇಶಕರು ಕೋರ್ಟ್ ಮೊರೆ ಹೋಗಿದ್ದರು. ಈ ಪ್ರಕರಣ ನಡೆಯುತ್ತಿದ್ದರೂ ಕಾಂಗ್ರೆಸ್ ಸರ್ಕಾರ ದುರುದ್ದೇಶದಿಂದ, ಸೇಡಿನ ರಾಜಕಾರಣಕ್ಕಾಗಿ ವೈಯಕ್ತಿಕವಾಗಿ ತೆಗೆದುಕೊಂಡು ಚಿಕ್ಕಬಳ್ಳಾಪುರ ಹಾಲು ಒಕ್ಕೂಟದ ಆದೇಶವನ್ನೇ ವಾಪಸ್ ಪಡೆದಿದೆ. ಕಾಂಗ್ರೆಸ್ ಸರ್ಕಾರ ರಚನೆಯಾಗಿ ಇನ್ನೂ ಎರಡು ತಿಂಗಳಾಗಿಲ್ಲ. ಆಗಲೇ ಚಿಕ್ಕಬಳ್ಳಾಪುರದ ರೈತರಿಗೆ ಮೊದಲ ಕೊಡಲಿ ಪೆಟ್ಟು ಕೊಟ್ಟಿದೆ. ಸರ್ಕಾರಕ್ಕೆ ಅಧಿಕಾರ ಇದ್ದರೂ ಕಾನೂನು ಎನ್ನುವುದು ಎಲ್ಲರಿಗಾಗಿ ಇದೆ. ಇದರ ವಿರುದ್ಧ ಕಾನೂನು ಹೋರಾಟ ಮಾಡಲಾಗುವುದು. ರೈತರಿಗೆ ನ್ಯಾಯ ಕೊಡಿಸಲಾಗುವುದು ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸೇಡಿನ ರಾಜಕಾರಣ ಮಾಡುವುದಿಲ್ಲವಾದರೆ, ಇದು ಸೇಡಿನ ರಾಜಕಾರಣವಲ್ಲವೇ ಎಂದು ತಿಳಿಸಬೇಕು. ಇಲ್ಲಿನ ಹಾಲು ಒಕ್ಕೂಟ ಉತ್ತಮ ರೀತಿಯಲ್ಲಿ ಕಾರ್ಯಾರಂಭವಾಗಿತ್ತು. ಇದು ಜಿಲ್ಲೆಯ ರೈತರಿಗೆ ಮಾಡಿದ ಅಪಮಾನ ಮತ್ತು ಮೋಸ. ಈ ಆದೇಶ ಹಿಂತೆಗೆದುಕೊಂಡು ಚಿಕ್ಕಬಳ್ಳಾಪುರ ಹಾಲು ಒಕ್ಕೂಟ ಮರುಸ್ಥಾಪಿಸಲು ಅವಕಾಶ ಮಾಡಿಕೊಡಬೇಕು ಎಂದು ಆಗ್ರಹಿಸಿದರು.
ಚಾಮರಾಜನಗರ ಹೊಸ ಜಿಲ್ಲೆಯಾದಾಗ ಅಲ್ಲಿ ಹಾಲು ಒಕ್ಕೂಟವನ್ನು ಬೇರ್ಪಡಿಸಿ ನೀಡಿದವರೇ ಸಿದ್ದರಾಮಯ್ಯನವರು. ಅವರ ಜಿಲ್ಲೆಯಲ್ಲಿ ನ್ಯಾಯ ನೀಡುವ ಅವರು ಇಲ್ಲಿ ಒಂದು ಕಣ್ಣಿಗೆ ಬೆಣ್ಣೆ, ಇನ್ನೊಂದು ಕಣ್ಣಿಗೆ ಸುಣ್ಣ ಎಂಬ ನೀತಿ ಅನುಸರಿಸಿದ್ದಾರೆ. ಇಲ್ಲಿ ಗೆದ್ದು ಅತಿಯಾದ ಸಂತೋಷ ಪಡುತ್ತಿರುವವರು ಈ ಬಗ್ಗೆ ಕ್ರಮ ವಹಿಸಬೇಕು ಎಂದು ಒತ್ತಾಯಿಸಿದರು.
ಸುಳ್ಳಿನ ಯೋಜನೆಯಲ್ಲ, ಕಣ್ಣಿಗೆ ಕಾಣುವ ಯೋಜನೆ: ಚಿಕ್ಕಬಳ್ಳಾಪುರದ ಹೊಸ ಶಾಸಕರು ವಸತಿ ಯೋಜನೆ ಬಗ್ಗೆ ಸುಳ್ಳು ಅಭಿಯಾನ ಆರಂಭಿಸಿದ್ದಾರೆ. ಗೆದ್ದಾದ ಮೇಲಾದರೂ ಕ್ಷೇತ್ರದ ಅಭಿವೃದ್ಧಿ ಬಗ್ಗೆ ಲಕ್ಷ್ಯ ನೀಡುತ್ತಾರೆ ಎಂದುಕೊಂಡರೆ ಸುಳ್ಳೇ ಮನೆ ದೇವರು ಎಂಬಂತೆ ನಿವೇಶನಗಳ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ಜನರ ಮನೆ ಕಟ್ಟುವ ಆಸೆಗೆ ತಣ್ಣೀರೆರೆಚಿದ್ದಾರೆ. ನಾನೆಂದೂ ಸುಳ್ಳಿನ ಯೋಜನೆ ತಂದಿಲ್ಲ, ಆದರೆ ಕಣ್ಣಿಗೆ ಕಾಣುವ ಯೋಜನೆಗಳನ್ನು ತಂದಿದ್ದೇನೆ. ಇಡೀ ರಾಜ್ಯದಲ್ಲಿ ಒಂದೇ ಕಡೆ 20 ಸಾವಿರ ನಿವೇಶನ ಹಂಚುವ ಕೆಲಸವನ್ನು ಬೇರೆ ಯಾವ ಶಾಸಕ ಮಾಡಿದ್ದಾರೆ ಎಂದು ಅವರೇ ತಿಳಿಸಬೇಕು ಎಂದರು.
ಜನರಿಗೆ ನಿವೇಶನ ನೀಡಲು ಒಟ್ಟು 555 ಎಕರೆ ಜಮೀನು ಮಂಜೂರು ಆಗಿದೆ. ನಾನೇ ಖುದ್ದಾಗಿ ಗ್ರಾಮ ಸಭೆ ಮಾಡಿ ಫಲಾನುಭವಿ ಆಯ್ಕೆ ನಡೆದಿದೆ. ಇದು ಸಚಿವ ಸಂಪುಟದಲ್ಲೇ ಮಂಜೂರಾತಿಯಾಗಿದೆ. ಹಕ್ಕು ಪತ್ರ ಹಾಗೂ ಮಂಜೂರಾತಿ ಪತ್ರ ಎಂಬುದರ ಬಗ್ಗೆಯೇ ಈಗಿನ ಶಾಸಕರಿಗೆ ಪ್ರಾಥಮಿಕ ಮಾಹಿತಿ ಇಲ್ಲ. ಸಿನಿಮಾ ಡೈಲಾಗ್ ಹೇಳಿಬಿಟ್ಟರೆ ರಾಜಕೀಯ ಮಾಡಬಹುದು ಎಂದುಕೊಂಡಿದ್ದಾರೆ. ಎಲ್ಲರೂ ಪ್ರತಿ ಬಾರಿ ಏಮಾರುವುದಿಲ್ಲ ಎಂದರು.
ದೇವರ ಮೇಲೆ ಪ್ರಮಾಣದ ಸವಾಲು: ನಾನು ನಿವೇಶನ ನೀಡಿದ್ದು ಸುಳ್ಳು ಎಂದಾದಲ್ಲಿ, ಭೋಗನಂದೀಶ್ವರ ದೇವಸ್ಥಾನದಲ್ಲಿ ದೀಪ ಹಚ್ಚಿ ಪ್ರಮಾಣ ಮಾಡಲು ಸಿದ್ಧನಿದ್ದೇನೆ. ಇಲ್ಲ ಎಂದು ಈಗಿನ ಶಾಸಕರು ಪ್ರಮಾಣ ಮಾಡಲಿ. ನನ್ನ ಜನರಿಗೆ ಸುಳ್ಳು ಹೇಳಿ ಮೋಸ ಮಾಡುವ ದುಸ್ಥಿತಿಗೆ ನಾನು ತಲುಪಿಲ್ಲ ಎಂದು ಸವಾಲು ಹಾಕಿದರು.
ಎಚ್.ಎನ್.ವ್ಯಾಲಿ ಯೋಜನೆಯಡಿ ಮೂರನೇ ಹಂತದ ಸಂಸ್ಕರಣೆ ಮಾಡಲಾಗುವುದು ಎಂದು ತಿಳಿಸಲಾಗಿದೆ. ಎತ್ತಿನಹೊಳೆ ಯೋಜನೆ ಪೂರ್ಣ ಮಾಡಲು, ನಂದಿ ಬೆಟ್ಟಕ್ಕೆ ರೋಪ್‌ವೇ ಮಾಡಲು, ನಂದಿ ಮೆಡಿಕಲ್ ಕಾಲೇಜು ಕಟ್ಟಡ ಕಾಮಗಾರಿ ಪೂರ್ಣ ಮಾಡಲು ಬಜೆಟ್‌ನಲ್ಲಿ ಅನುದಾನ ನೀಡಬೇಕಿದೆ. ಅದನ್ನು ಶಾಸಕರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಮಾಡಬೇಕಿದೆ ಎಂದು ಒತ್ತಾಯಿಸಿದರು.
ಸಿಎಸ್‌ಆರ್‌ನಡಿ, ಕೆಲವು ಶಾಲಾ ಕಾಲೇಜುಗಳ ಅಭಿವೃದ್ಧಿ ಮಾಡಿಸಲು ಕ್ರಮ ವಹಿಸಿದ್ದೆ. ಅದು ಆದಷ್ಟು ಬೇಗ ಪೂರ್ಣಗೊಳಿಸಲು ಕ್ರಮ ವಹಿಸಬೇಕಿದೆ. ರೈತರಿಗಾಗಿ ಹೈಟೆಕ್ ಹೂ ಮಾರುಕಟ್ಟೆಗೆ 100 ಕೋಟಿ ರೂ. ಘೋಷಣೆ ಮಾಡಿಸಲಾಗಿದೆ. ಇದಕ್ಕೆ ಹಣ ಒದಗಿಸಬೇಕು. ಕೋಲ್ಡ್ ಸ್ಟೋರೇಜ್ ನಿರ್ಮಾಣ ಕೂಡ ಶೀಘ್ರ ಆಗಬೇಕಿದೆ. ಈ ಎಲ್ಲಾ ಅಂಶಗಳನ್ನು ಮುಖ್ಯಮಂತ್ರಿ ಗಮನಕ್ಕೆ ತಂದು ಬಜೆಟ್‌ನಲ್ಲಿ ಅನುದಾನ ಕೊಡಿಸಬೇಕು. 5 ವರ್ಷ ಸೇವೆ ಸಲ್ಲಿಸುವ ಭಾಗ್ಯ ಸಿಕ್ಕಿದ ನಂತರ ಜನರ ಅಭ್ಯುದಯಕ್ಕೆ ಒತ್ತು ನೀಡಿ ಎಂದರು.
ಕನಕಪುರಕ್ಕೆ ಮಂಜೂರಾಗಿದ್ದ ಮೆಡಿಕಲ್ ಕಾಲೇಜು ಯೋಜನೆಯನ್ನು ಚಿಕ್ಕಬಳ್ಳಾಪುರಕ್ಕೆ ತರಲಾಗಿದೆ. ಇದರಲ್ಲಿ ಹೆಚ್ಚು ಕಟ್ಟಡ ಹಾಗೂ ವಿನ್ಯಾಸ ಬದಲಾಗಿದ್ದರಿಂದ ಅನುದಾನ ಹೆಚ್ಚಾಗಿದೆ. ಇದನ್ನು ಎಂಜಿನಿಯರ್‌ಗಳ ಸಮಿತಿ ಪರಿಶೀಲಿಸಿ, ಏಕ ಜಡ್ಜ್ ಸಮಿತಿಯಿಂದಲೂ ಪರಿಶೀಲಿಸಿ ಮಂಜೂರು ಮಾಡಲಾಗಿದೆ. ಇದನ್ನು ತನಿಖೆ ಮಾಡುವುದಾದರೆ ಮಾಡಲಿ ಎಂದರು.
ಕಾಂಗ್ರೆಸ್ ಸರ್ಕಾರ ಎಲ್ಲಾ ತನಿಖೆಗಳನ್ನು ಮಾಡಲಿ. ಗ್ಯಾರಂಟಿಗಳ ಬಗ್ಗೆ ಮಾತನಾಡುವುದು ಬಿಟ್ಟು ತನಿಖೆ ಬಗ್ಗೆ ಮಾತಾಡಿ ವಿಷಯವನ್ನು ಬೇರೆಡೆ ಸೆಳೆಯಲಾಗುತ್ತಿದೆ ಎಂದರು.
ಮೂರು ಜಿಲ್ಲೆಗಳಲ್ಲಿ 2018 ರ ಚುನಾವಣೆ ಹಾಗೂ 2023 ರ ಚುನಾವಣೆಯನ್ನು ಗಮನಿಸಿದರೆ ಬಿಜೆಪಿಗೆ ಮತದಾನ ಪ್ರಮಾಣ ಗಣನೀಯವಾಗಿ ಹೆಚ್ಚಿದೆ. ಈಗ ಸ್ವಲ್ಪ ಹಿನ್ನಡೆಯಾಗಿರಬಹುದು. ಆದರೆ ಮುಂದಿನ ಚುನಾವಣೆಯಲ್ಲಿ 8 ರಿಂದ 10 ಸ್ಥಾನ ಬಿಜೆಪಿ ಪಡೆಯಲು ಶ್ರಮಿಸಲಿದ್ದೇವೆ ಎಂದರು.
ಸೋತಿರಬಹುದು ಸತ್ತಿಲ್ಲ: ಹಾಲು ಒಕ್ಕೂಟದ ವಿಚಾರದಲ್ಲಿ ರೈತರೊಂದಿಗೆ ಹೋರಾಟ ಮಾಡಲಾಗುವುದು. ನಾವು ಸೋತಿರಬಹುದು, ಆದರೆ ಸತ್ತಿಲ್ಲ ಎಂದು ಡಾ.ಕೆ.ಸುಧಾಕರ್ ಹೇಳಿದರು.




