ಹಸಿದವರಿಗೆ ಅನ್ನ ನೀಡದ ಸರ್ಕಾರ ಅತ್ಯಂತ ಜನದ್ರೋಹಿ: ತಾವರ್ ಚಂದ್ ಗೆಹ್ಲೋಟ್

3 years ago

#session #budget #government #feed #hungry #most #traitorous #TawarChandGehlot

ಬೆಂಗಳೂರು: ಆಡಳಿತದ ಎಲ್ಲಾ ರಂಗದಲ್ಲಿ ಪಾರದರ್ಶಕತೆಗೆ ಒತ್ತು ನೀಡುವ ಮೂಲಕ ಭ್ರಷ್ಟಾಚಾರ ನಿಗ್ರಹ ನಮ್ಮ ಧ್ಯೇಯವಾಗಿದೆ ಎಂದು ಹೇಳಿರುವ ರಾಜ್ಯಪಾಲ ತಾವರ್ ಚಂದ್ ಗೆಹ್ಲೋಟ್ ನುಡಿದಂತೆ ನಡೆಯುವುದು ನಮ್ಮ ಸರ್ಕಾರದ ಮಂತ್ರವಾಗಿದೆ ಎಂದು ಘೋಷಿಸಿದ್ದಾರೆ.

ವಿಧಾನಮಂಡಲದ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿದ ಅವರು, ಜನಕಲ್ಯಾಣ ಮತ್ತು ಆರ್ಥಿಕ ಸ್ಥಿತಿ ಎರಡನ್ನೂ ಸಮತೂಕದಲ್ಲಿ ನಿಭಾಯಿಸಿ ಕರ್ನಾಟಕದ್ದೇ ಆದ ಹೊಸ‌ ಆಡಳಿತ ಮಾದರಿಯೊಂದನ್ನು ನನ್ನ ಸರ್ಕಾರ ದೇಶಕ್ಕೆ ಪರಿಚಯಿಸಲಿದೆ ಎಂದು ಹೇಳಿದರು.

ಮುಂದಿನ 5 ವರ್ಷಗಳಲ್ಲಿ ಸರ್ಕಾರ ಸಮಗ್ರ ಅಭಿವೃದ್ಧಿಯ ಯೋಜನೆಗಳ ಸಂಕಲ್ಪವನ್ನು ಮುಂದಿಟ್ಟಿದ್ದು, ಕೃಷಿ, ಕೈಗಾರಿಕೆ, ಸೇವಾ ವಲಯ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲೂ ಸಮಗ್ರ ಅಭಿವೃದ್ಧಿಯ ವಿಚಾರವನ್ನು ಪ್ರಸ್ತಾಪಿಸಿದರು.

ಶಾಂತಿಯುತವಾದ, ಸಮೃದ್ಧವಾದ, ಸೌಹಾರ್ದಯುತವಾದ ಸರ್ವ ಜನಾಂಗದ ಶಾಂತಿಯ ತೋಟವನ್ನು ನಿರ್ಮಿಸಲು ಬದ್ಧರಾಗಿದ್ದೇವೆ. ಯಾರನ್ನೂ ಹೊರಗಿಡದೆ ಎಲ್ಲರನ್ನೂ ಒಳಗೊಂಡು ‘ಇವ ನಮ್ಮವ’ ಎಂದು ಕೂಡಿ ಬಾಳುವ ನಮ್ಮ ಹಿರಿಯರ ಕನಸನ್ನು ನನಸು ಮಾಡಲು ನನ್ನ ಸರ್ಕಾರ ಬದ್ಧವಾಗಿದೆ. ಜಾತಿ–ಧರ್ಮಗಳ ಹೆಸರಿನಲ್ಲಿನ ಭೇದವನ್ನು ತೊಡೆದು ಹಾಕಲಾಗುವುದು, ದ್ವೇಷರಹಿತ, ಪ್ರೀತಿಯುಕ್ತ ಸಮಾಜ‌ ನಿರ್ಮಾಣ ಮಾಡಲು ಈ ಸರ್ಕಾರವು ಹಲವು ಬಗೆಯ ಕ್ರಮ ಕೈಗೊಳ್ಳಲಿದೆ ಎಂದು ಹೇಳಿದರು.

ಹಸಿದವರಿಗೆ ಅನ್ನ ನೀಡದ ಸರ್ಕಾರ ಅತ್ಯಂತ ಜನದ್ರೋಹಿ ಎಂದು ಕರೆಸಿಕೊಳ್ಳುತ್ತದೆ. ದುಡಿಯುವ ವರ್ಗದ ಜನರು, ವಲಸೆ ಕಾರ್ಮಿಕರು, ನಿರಾಶ್ರಿತರು ಮುಂತಾದವರ ಹಸಿವು ತಣಿಸಲು ಹಿಂದೆ ಇಂದಿರಾ ಕ್ಯಾಂಟೀನ್‍ಗಳನ್ನು ಸ್ಥಾಪಿಸಲಾಗಿತ್ತು. ಇವುಗಳು ಲಕ್ಷಾಂತರ ಜನರ ಹಸಿದ ಹೊಟ್ಟೆ ತುಂಬಿಸಿ ತೃಪ್ತಿ ನೀಡಿವೆ. ಮುಂದಿನ ದಿನಗಳಲ್ಲಿ ಕ್ಯಾಂಟೀನ್‍ಗಳನ್ನು ಸಮರ್ಥವಾಗಿ ನಡೆಸುತ್ತೇವೆ. ಅನ್ನಭಾಗ್ಯ ಯೋಜನೆ ಮತ್ತು ಇಂದಿರಾ ಕ್ಯಾಂಟೀನ್‍ಗಳ ಮೂಲಕ ಹಸಿವು ಮುಕ್ತ ರಾಜ್ಯ ಮಾಡುತ್ತೇವೆ ಎಂದು ಘೋಷಿಸಿದರು.

ಆಹಾರಭದ್ರತಾ ಕಾಯ್ದೆಯಡಿ 5 ಕೆ.ಜಿ. ಅಕ್ಕಿ ಕೊಡಲಾಗುತ್ತಿದೆ. ಜೊತೆಗೆ ತಮ್ಮ ಸರ್ಕಾರ ಬಿಪಿಎಲ್ ಕುಟುಂಬಗಳ ಪ್ರತಿ ಸದಸ್ಯರಿಗೆ ಹೆಚ್ಚುವರಿಯಾಗಿ 5 ಕೆ.ಜಿ. ಅಕ್ಕಿಯನ್ನು ಉಚಿತವಾಗಿ ನೀಡಲು ತಕ್ಷಣದಿಂದ ಪ್ರಾರಂಭಿಸುತ್ತಿದ್ದೇವೆ. ಹೆಚ್ಚುವರಿ ಅಕ್ಕಿ ದೊರೆಯದೇ ಇರುವ ಕಾರಣ ಹಣ ನೀಡಲಾಗುತ್ತಿದೆ ಎಂದು ಸ್ಪಷ್ಟಪಡಿಸಿದರು.

ಯುವನಿಧಿ ಯೋಜನೆಯಡಿ 2022-23ರಲ್ಲಿ ಉತ್ತೀರ್ಣರಾಗಿ 6 ತಿಂಗಳೊಳಗಾಗಿ ಉದ್ಯೋಗ ದೊರಕದ ನಿರುದ್ಯೋಗ ಪದವೀಧರ, ಸ್ನಾತಕೋತ್ತರ ಪದವೀಧರರಿಗೆ ಹಾಗೂ ಡಿಫ್ಲೋಮಾದಾರರಿಗೆ 24 ತಿಂಗಳ ಕಾಲ ಅಥವಾ ಉದ್ಯೋಗ ಸಿಗುವವರೆಗೂ ಆರ್ಥಿಕ ನೆರವು ನೀಡಲು ನಿರ್ಧರಿಸಲಾಗಿದೆ. ಇದರಿಂದ ನಿರುದ್ಯೋಗಿ ಕುಟುಂಬಗಳಿಗೆ ಅಗತ್ಯ ಇರುವ ಬೆಂಬಲ ಮತ್ತು ಘನತೆ ದೊರಕುತ್ತದೆ ಎಂದು ಹೇಳಿದರು.

ಗೃಹಜ್ಯೋತಿ ಯೋಜನೆಯಡಿ 200 ಯೂನಿಟ್‍ಗಳವರೆಗೆ ಉಚಿತ ವಿದ್ಯುತ್ ನೀಡುವುದರಿಂದ ರಾಜ್ಯದಲ್ಲಿ 2.14 ಕೋಟಿ ಕುಟುಂಬಗಳ ಗ್ರಾಹಕರಿಗೆ ಪ್ರಯೋಜನವಾಗುತ್ತದೆ. ರಾಜ್ಯದ ಶೇ.98ರಷ್ಟು ಕುಟುಂಬಗಳು ಯೋಜನಾ ವ್ಯಾಪ್ತಿಗೊಳಪಡುತ್ತವೆ ಎಂದಿದ್ದಾರೆ.


ಮಹಿಳಾ ಸಬಲೀಕರಣಕ್ಕಾಗಿ ಗೃಹಲಕ್ಷ್ಮಿ ಯೋಜನೆಯನ್ನು ಜಾರಿಗೆ ತರಲಾಗಿದೆ. ಕುಟುಂಬದ ಮುಖ್ಯಸ್ಥ ಮಹಿಳೆಗೆ ಮಾಸಿಕ 2 ಸಾವಿರ ರೂ. ನೀಡುವುದರಿಂದ ಬೆಲೆ ಏರಿಕೆಯಿಂದ ತತ್ತರಿಸಿರುವ ಮಹಿಳೆಯರಿಗೆ ಆರ್ಥಿಕ ಚೈತನ್ಯ ಲಭಿಸಲಿದೆ ಎಂದರು.

ರಾಜ್ಯವು ಒಂದು ರೀತಿಯ ಆರ್ಥಿಕ‌ ಸಂಕಟದ ಸ್ಥಿತಿಯಲ್ಲಿ ನಿಂತಿದೆ. ಈ ಸ್ಥಿತಿಯಿಂದ ರಾಜ್ಯವನ್ನು ಮೇಲೆತ್ತುವುದು ‌ಸರ್ಕಾರದ ಆದ್ಯತೆಯಾಗಲಿದೆ. ಸಾರ್ವಜನಿಕ ಸಂಪತ್ತನ್ನು ಎಲ್ಲರಿಗೂ ಹಂಚಿಕೆ ಮಾಡುವ ಉದ್ದೇಶದಿಂದ ಜನಕೇಂದ್ರಿತ ಆರ್ಥಿಕತೆಯನ್ನು ಜಾರಿಗೆ ತರಲಾಗುವುದು. ಕೃಷಿ, ಕೈಗಾರಿಕೆ ಮತ್ತು ಸೇವಾ ವಲಯಗಳನ್ನು ಸಮಾನ ದೃಷ್ಟಿಯಲ್ಲಿ ಪರಿಗಣಿಸಿ ಆಧುನಿಕ ಕರ್ನಾಟಕವನ್ನು ನಿರ್ಮಾಣ ಮಾಡಲಾಗುವುದು ಎಂದು ತಿಳಿಸಿದರು.

ಬೆಲೆ ಏರಿಕೆ ಹಾಗೂ ಕಡಿಮೆ ಆದಾಯದಿಂದ ತತ್ತರಿಸಿರುವ ಜನರಿಗೆ ಈ ಯೋಜನೆಗಳು ಹೊಸ ಅಭಿವೃದ್ಧಿ ಮಾದರಿಯನ್ನು ಸೃಷ್ಟಿಸುತ್ತದೆ. ಜಗತ್ತಿನ ಅನೇಕ ದೇಶಗಳು ಜನಕೇಂದ್ರಿದ ಆರ್ಥಿಕತೆಯನ್ನು ಪ್ರತಿಪಾದಿಸುತ್ತಿವೆ. ಇದು ಉಳ್ಳವರು ಮತ್ತು ಇಲ್ಲದವರ ನಡುವಿನ ಅಂತರವನ್ನು ಕಡಿಮೆ ಮಾಡಲು ಸಹಕಾರಿಯಾಗುತ್ತಿದೆ. ಮಾನವೀಯತೆ ಮತ್ತು ಅಭಿವೃದ್ಧಿಪರ ಚಿಂತನೆಯೊಂದಿಗೆ ವಿಕಾಸಗೊಳ್ಳುತ್ತಿರುವ ಈ ಆರ್ಥಿಕ ನೀತಿಯು ಸಂಪತ್ತು ಕೆಲವರ ಕೈಯಲ್ಲಿ ಕೇಂದ್ರೀಕೃತಗೊಳ್ಳುವುದನ್ನು ತಗ್ಗಿಸುತ್ತದೆ ಎಂದು ವಿಶ್ಲೇಷಿಸಿದ್ದಾರೆ.

Leave a Reply