ಬೆಂಗಳೂರು: ಬಹುಭಾಷಾ ನಟ ಪ್ರಕಾಶ್ ರಾಜ್, ಸಾಹಿತಿ ಕುಂ.ವೀರಭದ್ರಪ್ಪ ಸೇರಿದಂತೆ ಹಲವು ಬರಹಗಾರರು, ವಿಚಾರವಾದಿಗಳು ಬೆದರಿಕೆ ಕರೆ ಎದುರಿಸುತ್ತಿದ್ದು, ಇವರಿಗೆ ಸೂಕ್ತ ಭದ್ರತೆ ನೀಡುವಂತೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಪೊಲೀಸ್ ಮಹಾ ನಿರ್ದೇಶಕರಿಗೆ ಸೂಚಿಸಿದ್ದಾರೆ.
ಎಡ ಪಂಥೀಯ ವಿಚಾರಧಾರೆಯ ಸಾಹಿತಿಗಳು, ಕಲಾವಿದರು ಮತ್ತು ಚಿಂತಕರಿಗೆ ಪತ್ರ ಮುಖೇನ ಅನಾಮಧೇಯರು ಬೆದರಿಕೆ ಹಾಕಿದ್ದಾರೆ. ಅಲ್ಲದೆ, ಇತ್ತೀಚೆಗೆ ಧರ್ಮಸ್ಥಳದ ಸೌಜನ್ಯ ಪ್ರಕರಣದ ಬಗ್ಗೆ ಶಿವಮೊಗ್ಗದಲ್ಲಿ ನಡೆದ ಪತ್ರಿಕಾ ಸಂವಾದದಲ್ಲಿ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಪ್ರಕಾಶ್ ರಾಜ್ , “ಗುಪ್ತಚರ ಇಲಾಖೆಗೆ ಅನುಮಾನಗಳಿದ್ದರೆ ಧರ್ಮಾಧಿಕಾರಿಗಳನ್ನೂ ಮಂಪರು ಪರೀಕ್ಷೆಗೆ ಒಳಪಡಿಸುವುದರಲ್ಲಿ ತಪ್ಪೇನಿದೆʼʼ ಎಂದು ಪ್ರಶ್ನೆ ಮಾಡಿದ್ದರು. ಇದಕ್ಕೆ ವಿರೋಧ ವ್ಯಕ್ತಪಡಿಸಿದ ಸಂಘಪರಿವಾರದ ಕಾರ್ಯಕರ್ತ ಎನ್ನಲಾದ ಸಂತೋಷ್ ಕಾರ್ತಾಳ್ ಎಂಬಾತ, “ಧರ್ಮಾಧಿಕಾರಿಗಳ ಕ್ಷಮೆ ಕೇಳದಿದ್ದರೆ 24 ಗಂಟೆಯೊಳಗಡೆ ನಿನ್ನ ಮನೆ ಮುಂದೆ ನಿನ್ನ ಹೆಣ ಬಿದ್ದಿರುತ್ತದೆʼʼ ಎಂದು ಕೊಲೆ ಬೆದರಿಕೆ ಹಾಕಿದ್ದಾನೆ. ಈ ವೀಡಿಯೊವನ್ನು ಆತ ತನ್ನ ಫೇಸ್ ಬುಕ್ ನಲ್ಲಿ ಹರಿಬಿಟ್ಟಿದ್ದಾನೆ.
ಈ ಎಲ್ಲಾ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಗೃಹ ಸಚಿವ ಡಾ.ಜಿ ಪರಮೇಶ್ವರ್, ʼʼಹಲವು ಲೇಖಕರು, ಬುದ್ಧಿಜೀವಿಗಳಿಗೆ ಜೀವ ಬೆದರಿಕೆ ಪತ್ರ ಬಂದಿರುವ ವಿಚಾರಕ್ಕೆ ಸಂಬಂಧಿಸಿ ಈಗಾಗಲೇ ನನ್ನ ಭೇಟಿಗೆ ಸಾಹಿತಿಗಳ ನಿಯೋಗ ಸಮಯ ಕೇಳಿದೆ. ಈ ಹಿಂದೆ ಹಲವು ಕಹಿ ಘಟನೆಗಳು ನಡೆದಿವೆ. ಸಾಹಿತಿ, ಬುದ್ಧಿಜೀವಿಗಳಿಗೆ ರಕ್ಷಣೆ ನೀಡುವ ನಿಟ್ಟಿನಲ್ಲಿ ಡಿಜಿ-ಐಜಿಪಿ, ಬೆಂಗಳೂರು ಪೊಲೀಸ್ ಕಮಿಷನರ್ಗೆ ಸೂಚನೆ ನೀಡಿದ್ದೇನೆʼʼ ಎಂದು ತಿಳಿಸಿದರು.
ಈ ನಡುವೆ ಗೃಹ ಸಚಿವರಿಗೆ ಪತ್ರ ಬರೆದಿರುವ ಸಾಹಿತಿಗಳು ʼಕೋಮುವಾದ, ಜಾತಿವಾದ, ಮೌಡ್ಯವಿರೋಧಿ ನಿಲುವುಳ್ಳ ಸಾಹಿತಿಗಳು ಹಾಗೂ ಬುದ್ಧಿಜೀವಿಗಳಿಗೆ 2022ರ ಜೂನ್ ನಿಂದ ಪತ್ರದ ಮೂಲಕ ಜೀವ ಬೆದರಿಕೆ ಹಾಕಲಾಗಿದೆ. ಇದರಿಂದ ಸಾಹಿತಿಗಳು ಹಾಗೂ ಬುದ್ಧಿಜೀವಿಗಳು ಮಾನಸಿಕ ಹಿಂಸೆಗೊಳಗಾಗಿದ್ದು, ಯಾವ ಸಂದರ್ಭದಲ್ಲಾದರೂ ತಮ್ಮ ಮೇಲೆ ದಾಳಿಯಾಗಬಹುದುʼ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
“ಪ್ರೊ.ಕೆ.ಮರುಳಸಿದ್ದಪ್ಪ, ಪ್ರೊ.ಎಸ್.ಜಿ.ಸಿದ್ದರಾಮಯ್ಯ, ಬಂಜಗೆರೆ ಜಯಪ್ರಕಾಶ್, ವಸುಂಧರಾ ಭೂಪತಿ, ಕುಂ.ವಿರಭದ್ರಪ್ಪ ಸೇರಿದಂತೆ ಒಟ್ಟು 15 ಜನ ಲೇಖಕರು ಹಾಗೂ ಸಾಹಿತಿಗಳಿಗೆ ಬೆದರಿಕೆ ಪತ್ರ ಬಂದಿದೆ. ಈ ಬಗ್ಗೆ ಗಂಭಿರವಾಗಿ ಪರಿಗಣಿಸಿ ಸೂಕ್ತ ಕ್ರಮಕೈಗೊಳ್ಳಬೇಕುʼʼ ಎಂದು ಅವರು ಒತ್ತಾಯಿಸಿದ್ದಾರೆ.




