ಪ್ರಬುದ್ಧ, ಸಮೃದ್ಧ, ಸಮ ಸಮಾಜ ನಿರ್ಮಿಸಲು ಪ್ರಾಮಾಣಿಕ ಪ್ರಯತ್ನ ನಿರಂತರ: ಪ್ರಿಯಾಂಕ್ ಖರ್ಗೆ

3 years ago

#Honest #efforts #build #mature #prosperous #equal #society #continuous #PriyankKharge

ಕಲಬುರಗಿ: ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಕಲಬುರಗಿ ಜಿಲ್ಲೆಯ ಸಮಸ್ತ ನಾಗರಿಕರು, ಚುನಾಯಿತ ಜನಪ್ರತಿನಿಧಿಗಳು ಹಾಗೂ ಮಾಧ್ಯಮ ಮಿತ್ರರಿಗೆ 77ನೇ ಸ್ವಾತಂತ್ರ್ಯ ದಿನಾಚರಣೆ ಹಾರ್ದಿಕ ಶುಭಾಶಯಗಳನ್ನು ಕೋರಿದರು.

ಕಲಬುರಗಿಯಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಮಾತನಾಡಿದ ಅವರು, ಇಂದು ಸರ್ಕಾರದ ಪರವಾಗಿ ಭಾರತದ ಧ್ವಜಾರೋಹಣ ಮಾಡುವಂತಹ ಅವಕಾಶ ದೊರೆಕಿಸಿಕೊಟ್ಟ ಚಿತ್ತಾಪುರ ಮತಕ್ಷೇತ್ರದ ಹಾಗೂ ಕಲಬುರಗಿ ಜಿಲ್ಲೆಯ ಎಲ್ಲ ನನ್ನ ಆತ್ಮೀಯರಿಗೆ ಕೃತಜ್ಞತೆಗಳನ್ನು ಅರ್ಪಿಸುತ್ತೇನೆ. ಜಿಲ್ಲೆಯ ಸರ್ವೋತಮುಖ ಅಭಿವೃದ್ಧಿಗೆ ನಾವೆಲ್ಲ ಕೂಡಿ ಶ್ರಮಿಸುವ ಸಂಕಲ್ಪವನ್ನು ಮಾಡೋಣ. ನಮ್ಮ ಜಿಲ್ಲೆಯ ಹಾಗು ರಾಜ್ಯದ ಅಭಿವೃದ್ಧಿಗೆ ಆದ್ಯ ಗಮನ ನೀಡುವ ಸಂಕಲ್ಪ ನನ್ನದಾಗಿದೆ ಎಂದರು.

ತ್ಯಾಗ ಬಲಿದಾನಗಳಿಂದ ಈ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟ ಮಹನೀಯರ ದೇಶಾಭಿಮಾನ ಅಸಾಮಾನ್ಯ. ತಮ್ಮ ವೈಯಕ್ತಿಕ ಆಸೆಗಳನ್ನು ಬದಿಗರಿಸಿ ದೇಶಕ್ಕಾಗಿ ದುಡಿದು ಮಡಿದ ಮಹಾತ್ಮ ಗಾಂಧೀಜಿ, ಡಾ. ಬಾಬಾಸಾಹೇಬ್ ಅಂಬೇಡ್ಕರ್, ಸುಭಾಷ್ ಚಂದ್ರ ಬೋಸ್, ಜವಹಾರ ಲಾಲ್ ನೆಹರು, ಸರ್ದಾರ್ ವಲ್ಲಭಭಾಯಿ ಪಟೇಲ್ ಸೇರಿದಂತೆ ರಾಷ್ಟ್ರ ನಾಯಕರ ಸೇವೆಯನ್ನು ನಾವು ನೆನಪಿಸಿಕೊಳ್ಳಬೇಕಿದೆ ಎಂದರು.

ಅಂದಿನ ನಮ್ಮ ನಾಯಕರ ತ್ಯಾಗ, ಬಲಿದಾನಗಳು ಇಂದು ಭಾರತದಲ್ಲಿ ನಿರ್ಭಯವಾಗಿ ಬದುಕಲು ಅವಕಾಶ ಕಲ್ಪಿಸಿದೆ ಎಂಬುದನ್ನು ನಮ್ಮ ಯುವ ಪೀಳಿಗೆಗೆ ಮನದಟ್ಟು ಮಾಡುವ ಕೆಲಸ ಆಗಬೇಕಿದೆ. ಭದ್ರ ಭಾರತದ ಅಡಿಪಾಯ ಹಾಕಿದ ನಮ್ಮ ನಾಯಕರ ಆಶಯಗಳು ಮತ್ತು ಕನಸುಗಳನ್ನು ನನಸಾಗಿಸಲು ನಾವೆಲ್ಲರೂ ಸಂಕಲ್ಪ ಮಾಡಿ ಮುನ್ನಡೆಯಬೇಕಿದೆ ಎಂದರು.

ಸಮಾನತೆಯ ಹೊಸ ಹಾದಿಯಲ್ಲಿ ಸಾಗಿದ ಬುದ್ಧ, ಸಾಮಾಜಿಕ ಕ್ರಾಂತಿಯ ಹರಿಕಾರ ಬಸವಣ್ಣ ಮತ್ತು ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ತತ್ವ ಮತ್ತು ಆದರ್ಶಗಳನ್ನು ಆಧರಿಸಿದ “ಐದು ಗ್ಯಾರಂಟಿ” ಯೋಜನೆಗಳ ಜಾರಿಗೆ ತಾತ್ವಿಕ ಅನುಮೋದನೆ ನೀಡಿ ಈಗಾಗಲೆ ಎರಡೂವರೆ ತಿಂಗಳ ಅವಧಿಯಲ್ಲಿ ಪ್ರಮುಖ 4 ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರುವ ಮೂಲಕ ಇದು ನುಡಿದಂತೆ ನಡೆಯುವ ಸರ್ಕಾರ ಎಂಬುದನ್ನು ಸಾಬೀತು ಪಡಿಸಿದ್ದೇವೆ ಎಂದು ಸರ್ಕಾರದ ಸಾಧನೆಯನ್ನು ಸ್ಮರಿಸಿದರು.

ರಾಜ್ಯದಾದ್ಯಂತ ಸರ್ಕಾರಿ ಬಸ್ಸುಗಳಲ್ಲಿ ಮಹಿಳೆಯರಿಗೆ ಮತ್ತು ಲಿಂಗತ್ವ ಅಲ್ಪಸಂಖ್ಯಾತರಿಗೆ ಉಚಿತ ಪ್ರಯಾಣ ಒದಗಿಸುವ “ಶಕ್ತಿ” ಯೋಜನೆಗೆ ಜುಲೈ 11 ರಂದು ಚಾಲನೆ ನೀಡಿದ್ದು, ಪ್ರತಿ ದಿನ 50 ರಿಂದ 60 ಲಕ್ಷ ಜನ ಮಹಿಳೆಯರು ಉಚಿತ ಪ್ರಯಾಣದ ಸೌಲಭ್ಯ ಪಡೆಯುತ್ತಿದ್ದಾರೆ. ವಾರ್ಷಿಕವಾಗಿ ಸರ್ಕಾರ ಇದಕ್ಕಾಗಿ 4,000 ಕೋಟಿ ರೂ. ವೆಚ್ಚ ಮಾಡುತ್ತಿದೆ. ಕಲಬುರಗಿ ಜಿಲ್ಲೆಯಲ್ಲಿ ಆಗಸ್ಟ್ 9ರವರೆಗೆ 94,20,000 ಮಹಿಳಾ ಪ್ರಯಾಣಿಕರು ಈ ಸೌಲಭ್ಯ ಪಡೆದಿದ್ದು, ಪ್ರಯಾಣದ ವೆಚ್ಚ 30.54 ಕೋಟಿ ರೂ.ಗಳನ್ನು ಸರ್ಕಾರ ಭರಿಸಲಿದೆ ಎಂದು ಮಾಹಿತಿ ನೀಡಿದರು.

ನಮ್ಮ ಸರಕಾರವು ಹಸಿವು ಮುಕ್ತ ಕರ್ನಾಟಕಕ್ಕಾಗಿ “ಅನ್ನ ಭಾಗ್ಯ” ಯೋಜನೆಯಡಿ ತಲಾ 10 ಕೆ.ಜಿ. ಆಹಾರ ಧಾನ್ಯ ಘೋಷಿಸಿದ್ದು, ರಾಜ್ಯದ 4.42 ಕೋಟಿ ಫಲಾನುಭವಿಗಳಿಗೆ ಅನುಕೂಲವಾಗಲಿದೆ. ಅಕ್ಕಿ ನೀಡಲು ಕೇಂದ್ರ ಸರ್ಕಾರ ನಿರಾಕರಿಸಿದ ಕಾರಣ, ಜುಲೈ-2023 ತಿಂಗಳಿನಿಂದ 5 ಕೆ.ಜಿ ಅಕ್ಕಿಯ ಬದಲು ಪ್ರತಿ ಕೆ.ಜಿ.ಗೆ 34 ರೂ. ಗಳಂತೆ ತಲಾ ಸದಸ್ಯರಿಗೆ 170 ರೂ. ಗಳನ್ನು ರಾಜ್ಯದ 1.28 ಕೋಟಿ ಕುಟುಂಬಗಳಿಗೆ ಡಿ.ಬಿ.ಟಿ. ಮೂಲಕ ನೀಡುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಕಲಬುರಗಿ ಜಿಲ್ಲೆಯಲ್ಲಿ 2023ರ ಜುಲೈ ತಿಂಗಳವರೆಗೆ 5,11,701 ಅಂತ್ಯೋದಯ ಮತ್ತು ಆದ್ಯತಾ ಪಡಿತರ ಚೀಟಿಗಳ ಪೈಕಿ 4,24,635 ಪಡಿತರ ಚೀಟಿಯ ಮುಖ್ಯಸ್ಥರ ಬ್ಯಾಂಕ್ ಖಾತೆಗೆ 25.16 ಕೋಟಿ ರೂ. ಡಿ.ಬಿ.ಟಿ. ಮೂಲಕ ಜಮೆ ಮಾಡಲಾಗಿದೆ ಎಂದರು.

ಕಳೆದ ಆಗಸ್ಟ್ 5ರಂದು ಕಲಬುರಗಿಯಲ್ಲಿಯೇ ಮಾನ್ಯ ಮುಖ್ಯಮಂತ್ರಿಗಳು “ಉಚಿತ ಬೆಳಕು, ಸುಸ್ಥಿರ ಬದುಕು” ಘೋಷವಾಕ್ಯದ ಮೂಲಕ 200 ಯೂನಿಟ್ ವರೆಗೆ ಉಚಿತ ವಿದ್ಯುತ್ ಒದಗಿಸುವ “ಗೃಹ ಜ್ಯೋತಿ” ಯೋಜನೆಗೆ ಚಾಲನೆ ನೀಡಿದರು. ಈ ಯೋಜನೆಯಡಿ ರಾಜ್ಯದಾದ್ಯಂತ 2.14 ಕೋಟಿ ಗ್ರಾಹಕರು ಲಾಭ ಪಡೆಯಲಿದ್ದು, ಕಳೆದ ಜುಲೈ 25ರವರೆಗೆ ರಾಜ್ಯದಲ್ಲಿ 1.41 ಕೋಟಿ ಗ್ರಾಹಕರು ನೋಂದಾಯಿಸಿಕೊಂಡಿದ್ದಾರೆ. ಕಲಬುರಗಿ ಜಿಲ್ಲೆಯಲ್ಲಿ ಜುಲೈ 25ರ ವರೆಗೆ 4,69,029 ಗ್ರಾಹಕರು ನೋಂದಣಿ ಮಾಡಿಕೊಂಡಿದ್ದು, ಅರ್ಹರಿಗೆ ಜುಲೈ ತಿಂಗಳಲ್ಲಿನ ವಿದ್ಯುತ್ ಬಳಕೆಯ ಶೂನ್ಯ ದರದ ಬಿಲ್ ನೀಡಲು ಆರಂಭಿಸಲಾಗಿದೆ ಎಂದು ಹೇಳಿದರು.

ಮಹಿಳಾ ಸಬಲೀಕರಣ ನಿಟ್ಟಿನಲ್ಲಿ ಕುಟುಂಬದ ಯಜಮಾನಿಗೆ ಮಾಸಿಕ 2,000 ರೂ. ಒದಗಿಸುವ ʼಗೃಹ ಲಕ್ಷ್ಮಿʼ” ಯೋಜನೆಗಾಗಿ ಅರ್ಜಿಗಳ ಸಲ್ಲಿಕೆ ಕಾರ್ಯ ಆರಂಭವಾಗಿದೆ. ಇದೆ ತಿಂಗಳ 27ರಂದು ಬೆಳಗಾವಿಯಲ್ಲಿ ರಾಜ್ಯದ 1.28 ಕೋಟಿ ಜನ ಮಹಿಳೆಯರು ಈ ಸೌಲಭ್ಯ ಪಡೆಯಲಿದ್ದು, ವಾರ್ಷಿಕವಾಗಿ ಸರ್ಕಾರ 30 ಸಾವಿರ ಕೋಟಿ ರೂ. ವೆಚ್ಚ ಮಾಡಲಿದೆ. ಜಿಲ್ಲೆಯಲ್ಲಿ 5,88,903 ಫಲಾನುಭವಿಗಳನ್ನು ಗುರುತಿಸಿದ್ದು, 4,25,013 ಮಹಿಳೆಯರು ನೋಂದಣಿ ಮಾಡಿಕೊಂಡಿದ್ದಾರೆ ಎಂದರು.

2022-23ನೇ ಶೈಕ್ಷಣಿಕ ಸಾಲಿನಲ್ಲಿ ಡಿಪ್ಲೋಮಾ ಪದವಿ ಉತ್ತೀರ್ಣರಾದ ನಿರುದ್ಯೋಗಿಗಳಿಗೆ ಮಾಸಿಕ 1,500 ಮತ್ತು ಪದವಿ ತೇರ್ಗಡೆಯಾದ ನಿರುದ್ಯೋಗಿಗಳಿಗೆ ಮಾಸಿಕ 3,000 ಭತ್ಯೆ ನೀಡುವ “ಯುವ ನಿಧಿ” ಯೋಜನೆ ಈ ವರ್ಷದ ಅಂತ್ಯದೊಳಗೆ ಜಾರಿಗೆ ತರಲಾಗುತ್ತದೆ ಎಂದರು.

ಐದು ಗ್ಯಾರಂಟಿ ಯೋಜನೆಗಳಿಂದ ರಾಜ್ಯದ ಪ್ರತಿ ಕುಟುಂಬಕ್ಕೆ ವಾರ್ಷಿಕ 48 ರಿಂದ 60 ಸಾವಿರ ರೂ. ಸೌಲಭ್ಯ ಲಭಿಸಲಿದೆ. ರಾಜ್ಯದ ಎಲ್ಲ ಜನರಿಗೆ ಆರ್ಥಿಕ ಸ್ಥಿರತೆ ಮತ್ತು ಸಾಮಾಜಿಕ ಪ್ರಗತಿಪರ ಅಭಿವೃದ್ಧಿಗಾಗಿ ಈ ಯೋಜನೆಗಳನ್ನು ಜಾರಿಗೊಳಿಸಲಾಗಿದೆ. ಜಾತಿ-ಧರ್ಮವಿಲ್ಲದೆ ಸರ್ವ ಜನಾಂಗದ ಅಭಿವೃದ್ಧಿಯೇ ಈ ಜನಪರ ಸರ್ಕಾರದ ಧ್ಯೇಯವಾಗಿದೆ ಎಂದರು.

ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿಗಾಗಿ ಮಲ್ಲಿಕಾರ್ಜುನ ಖರ್ಗೆ, ಧರಂಸಿಂಗ್ ಹಾಗೂ ನಮ್ಮ ಭಾಗದ ಹಲವಾರು ನಾಯಕರು ಶ್ರಮವಹಿಸಿ ಸಂವಿಧಾನದ 371 ಜೆ ತಿದ್ದುಪಡಿ ತರದೇ ಹೋಗಿದ್ದಲ್ಲಿ ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳು ಇಂದಿಗೂ ಕತ್ತಲೆಯಲ್ಲಿರುತ್ತಿದ್ದವು. ಇದರಿಂದಾಗಿ ಶಿಕ್ಷಣ ಹಾಗೂ ಉದ್ಯೋಗದಲ್ಲಿ ಆದ್ಯತೆ ಹಾಗೂ ವಾರ್ಷಿಕ 5000 ಕೋಟಿ ರೂ.ಗಳ ಹೆಚ್ಚುವರಿ ಬಜೆಟ್ ಅನುದಾನದೊಂದಿಗೆ ಕಲ್ಯಾಣ ಕರ್ನಾಟಕ ಪ್ರಾಂತ್ಯ ಸುಧಾರಣೆಯತ್ತ ಹೋಗಲು ನೆರವಾಗಿದೆ ಎಂಬುದನ್ನು ನಮ್ಮ ಭಾಗದ ಜನರು ಗಮನಿಸುತ್ತಿದ್ದಾರೆ ಎಂದು ಹೇಳಿದರು.

ಡಾ.ಬಿ.ಆರ್.ಅಂಬೇಡ್ಕರ್ ಅವರ “ಪ್ರಬುದ್ಧ ಭಾರತ” ಮತ್ತು ಬಸವಣ್ಣನವರ “ಅರಿವೇ ಗುರು” ನಮ್ಮ ಸಮಾಜದ ಪ್ರತಿಯೊಬ್ಬರಲ್ಲೂ ಮಾರ್ದನಿಸಬೇಕು. ಗ್ರಾಮ ಪಂಚಾಯಿತಿಯ ಗ್ರಂಥಾಲಯಗಳು ಶ್ರೀಸಾಮಾನ್ಯರ ವಿಶ್ವದ್ಯಾಲಯಗಳಾಗಬೇಕು ಎಂಬ ಪರಿಕಲ್ಪನೆಯಿಂದ ಹೊಸ ಸೇವೆಗಳೊಂದಿಗೆ ಗ್ರಾಮದ ಗ್ರಂಥಾಲಯಗಳನ್ನು ʼಅರಿವು ಕೇಂದ್ರ’ಗಳಾಗಿ ಮೇಲ್ದರ್ಜೆಗೇರಿಸಲಾಗುತ್ತಿದೆ. ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆ ವಿಶೇಷ ಆಶಯ, ಆಸಕ್ತಿಗಳಿಂದ ರೂಪಿಸಿರುವ ಗ್ರಾಮ ಪಂಚಾಯತಿಗಳ ಗ್ರಂಥಾಲಯಗಳನ್ನು ‘ಅರಿವು ಕೇಂದ್ರಗಳು’ ಎಂದು ಮೇಲ್ದರ್ಜೆಗೆ ಏರಿಸುವ ಮೂಲಕ ಡಿಜಿಟಲ್ ಕಲಿಕಾ ಸಾಮಗ್ರಿಗಳು, ವೃತ್ತಿಪರ ಮಾರ್ಗದರ್ಶನ ವ್ಯವಸ್ಥೆ, ಸಂವಿಧಾನದ ಶೈಕ್ಷಣಿಕ ವ್ಯವಸ್ಥೆ, ವಿಶೇಷ ಚೇತನ ಸ್ನೇಹಿ ತಾಂತ್ರಿಕತೆ ಹಾಗೂ ನುರಿತ ವ್ಯಕ್ತಿಗಳಿಂದ ಜ್ಞಾನಾರ್ಜನೆ ಮುಂತಾದ ಸೌಲಭ್ಯಗಳನ್ನು ಒದಗಿಸಲಾಗುವುದು. ಗ್ರಂಥಾಲಯಗಳನ್ನು ಹೈಬ್ರೀಡ್ ಮಾದರಿಯಲ್ಲಿ ಮೇಲ್ದರ್ಜೆಗೆ ಏರಿಸುವ ಸಂಬಂಧದಲ್ಲಿ 2023-24ರ ಬಜೆಟ್ನಲ್ಲಿ ವಿಶೇಷ ಕಾರ್ಯಯೋಜನೆಯನ್ನು ಘೋಷಿಸಿದೆ. ಜಿಲ್ಲೆಯಲ್ಲಿನ 261 ಗ್ರಾಮ ಪಂಚಾಯತಿಯ ಅರಿವು ಕೇಂದ್ರಗಳಿಗೆ ಕೆ.ಆರ್.ಐ.ಡಿ.ಎಲ್ ಸಂಸ್ಥೆಯ ಸಿ.ಎಸ್.ಆರ್ ನಿಧಿಯಡಿ 26 ಲಕ್ಷ ರೂ. ವೆಚ್ಚದಲ್ಲಿ ತಲಾ 41 ಸ್ಪರ್ಧಾತ್ಮಕ ಪರೀಕ್ಷಾ ಪುಸ್ತಕಗಳನ್ನು ಪೂರೈಸಲಾಗಿದೆ ಎಂದು ವಿವರಿಸಿದರು.

ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ 400 ಸಮುದಾಯ ಶೌಚಾಲಯ ಸಂಕೀರ್ಣ ನಿರ್ಮಾಣಕ್ಕೆ ಸರ್ಕಾರ 100 ಕೋಟಿ ರೂ. ಅನುದಾನ ನೀಡಿದ್ದು, ಜಿಲ್ಲೆಯ 108 ಗ್ರಾಮಗಳಲ್ಲಿ ಸಮುದಾಯ ಶೌಚಾಲಯಗಳನ್ನು ವಿಶಿಷ್ಟ ರೀತಿಯಲ್ಲಿ ನಿರ್ಮಿಸಲಾಗುವುದು ಎಂದರು.

ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಸ್ಥಳೀಯ ಆಡಳಿತವನ್ನು ಬಲಪಡಿಸುವ ಸಲುವಾಗಿ ಪ್ರತಿ ತಾಲ್ಲೂಕಿನಲ್ಲಿ ಒಬ್ಬ ನುರಿತ ಯುವ ಪದವೀಧರರನ್ನು 24 ತಿಂಗಳುಗಳ ಅವಧಿಗೆ ‘ಮುಖ್ಯಮಂತ್ರಿಗಳ ಫೆಲೋಶಿಪ್’ ಗೆ ಆಯ್ಕೆ ಮಾಡಲಾಗುವುದು. ಈ ಕಾರ್ಯಕ್ರಮಕ್ಕಾಗಿ 10 ಕೋಟಿ ರೂ. ಗಳನ್ನು ಒದಗಿಸಲಾಗುವುದು ಎಂದರು.

ಗ್ರಾಮೀಣ ಪ್ರದೇಶಗಳಲ್ಲಿ ಒಣ ತ್ಯಾಜ್ಯ ವಿಲೇವಾರಿಯಲ್ಲಿ ಸುಸ್ಥಿರತೆಯನ್ನು ಕಾಪಾಡಲು ಮತ್ತು ವೈಜ್ಞಾನಿಕವಾಗಿ ನಿರ್ವಹಣೆ ಮಾಡುವ ಸಲುವಾಗಿ ಕಲಬುರ್ಗಿ ಸೇರಿದಂತೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ Material Recovery Facility ಘಟಕಗಳನ್ನು ಸ್ಥಾಪಿಸಲು ಕ್ರಮ ಕೈಗೊಳ್ಳಲಾಗಿದೆ ಎಂದರು.

ಕಲಬುರಗಿಯ ಜಿಮ್ಸ್ ಆಸ್ಪತ್ರೆಯ ಆವರಣದಲ್ಲಿ 70 ಕೋಟಿ ರೂ. ವೆಚ್ಚದಲ್ಲಿ 200 ಹಾಸಿಗೆಯ ಹೊಸ “ತಾಯಿ ಮತ್ತು ಮಕ್ಕಳ ಆಸ್ಪತ್ರೆ” ನಿರ್ಮಾಣ ಮಾಡಲಾಗುತ್ತಿದೆ. ಕಲಬುರಗಿಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕಾರ್ಯಾರಂಭಿಸಲು ಮತ್ತು ಸುಟ್ಟ ಗಾಯಗಳ ಘಟಕ ಸ್ಥಾಪಿಸಲಾಗುತ್ತಿದೆ. ತುರ್ತು ಪರಿಸ್ಥಿತಿಯಲ್ಲಿ ಚಿಕಿತ್ಸೆ ನೀಡಲು ಕಲಬುರಗಿಯಲ್ಲಿ ಈಗಾಗಲೆ ಟ್ರಾಮಾ ಕೇರ್ ಸೆಂಟರ್ ಕಟ್ಟಡ ನಿರ್ಮಿಸಿದ್ದು ಶೀಘ್ರವೇ ಕಾರ್ಯಾಚರಣೆ ಆರಂಭಿಸಲಿದೆ. ಕಲಬುರಗಿ ತಾಲೂಕಿನ ಫರಹತಾಬಾದ್ ಮತ್ತು ಹಿರೇಸಾವಳಗಿ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ತಲಾ 3.5 ಕೋಟಿ ರೂ. ವೆಚ್ಚದಲ್ಲಿ ಸಮುದಾಯ ಆರೋಗ್ಯ ಕೇಂದ್ರವಾಗಿ ಉನ್ನತೀಕರಿಸಲಾಗುತ್ತಿದೆ. 10 ಕೋಟಿ ರೂ. ವೆಚ್ಚದಲ್ಲಿ ಕಿದ್ವಾಯಿ ಕ್ಯಾನ್ಸರ್ ಚಿಕಿತ್ಸಾ ಆಸ್ಪತ್ರೆಯನ್ನು ಉನ್ನತಿಕರಿಸಲಾಗುವುದು ಎಂದರು.

ಜಿಲ್ಲೆಯ ಯುವ ಜನರ ಸಬಲೀಕರಣಕ್ಕಾಗಿ ಕಲಬುರಗಿಯಲ್ಲಿ ರಾಜೀವ್ ಗಾಂಧಿ ಅತ್ಯಾಧುನಿಕ ಕೌಶಲ್ಯ ಪ್ರಯೋಗಾಲಯ, ಸಂಶೋಧನಾ ಕೇಂದ್ರ ಮತ್ತು ಒಳಾಂಗಣ ಕ್ರೀಡಾ ಸೌಲಭ್ಯ ಹಾಗೂ Allied Health Sciences ಕಾಲೇಜುಗಳು ಸ್ಥಾಪನೆಯಾಗಲಿದೆ ಎಂದರು.

ಗಾಣಗಾಪುರ ದತ್ತಾತ್ರೇಯನ ದೇವಸ್ಥಾನ, ಸನ್ನತಿಯ ಬೌದ್ಧ ಕೇಂದ್ರ, ಕಲಬುರಗಿ ಗುರುದ್ವಾರ ಸಮಗ್ರ ಅಭಿವೃದ್ಧಿ ಮಾಡಲಾಗುತ್ತದೆ. ಕಲಬುರಗಿ ಹಾಗೂ ಮಳಖೇಡ್ ಕೋಟೆಗಳನ್ನು ಅಭಿವೃದ್ಧಿಪಡಿಸಲಾಗುವುದು. ಕಲಬುರಗಿ ಸರ್ಕಾರಿ ವಸ್ತು ಸಂಗ್ರಹಾಲಯ ಅಭಿವೃದ್ಧಿಗೂ ಕ್ರಮ ವಹಿಸಲಾಗುತ್ತಿದೆ ಎಂದರು.

ಜಿಲ್ಲೆಯಲ್ಲಿ ಮಳೆ ವಿಳಂಬವಾದ ಕಾರಣ 6.92 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿದೆ. ಜುಲೈ ತಿಂಗಳಲ್ಲಿ ಹೆಚ್ಚಿನ ಮಳೆಯಾದ ಕಾರಣ ಬೆಳೆ ಹಾನಿಯ ಜಂಟಿ ಸರ್ವೇ ಕಾರ್ಯ ಅಂತಿಮ ಹಂತದಲ್ಲಿದೆ. ಕಳೆದ ಸಾಲಿನಲ್ಲಿ ತೊಗರಿ ಬೆಳೆಗೆ ನೆಟೆ ರೋಗ ಬಾಧಿಸಿದ್ದರಿಂದ ರಾಜ್ಯ ಸರ್ಕಾರ ಪ್ರತಿ ಹೆಕ್ಟೇರ್ಗೆ 10 ಸಾವಿರ ರೂ. ಪರಿಹಾರ ಘೋಷಿಸಿದೆ. ಜಿಲ್ಲೆಗೆ 198.48 ಕೋಟಿ ರೂ. ಮಂಜೂರು ಮಾಡಲಾಗಿದ್ದು, 75,068 ರೈತರಿಗೆ 64.59 ಕೋಟಿ ರೂ. ಜಮೆ ಮಾಡಲಾಗಿದೆ. ಪ್ರಸಕ್ತ 2023-24ನೇ ಸಾಲಿಗೆ ಜಲಸಂಪನ್ಮೂಲ ಸಂರಕ್ಷಣೆ ಮತ್ತು ನೀರಿನ ಮಿತ ಬಳಕೆಯಿಂದ ಹೆಚ್ಚಿನ ತೋಟಗಾರಿಕೆ ಇಳುವರಿ ಪಡೆಯಲು ಕೃಷಿ ಸಿಂಚಾಯಿ ಯೋಜನೆಯಡಿ ಸುಮಾರು 680 ಹೆಕ್ಟೇರ್ ಪ್ರದೇಶಕ್ಕೆ ಹನಿ ನೀರಾವರಿ ಪದ್ಧತಿ ಅಳವಡಿಸಲು ಜಿಲ್ಲೆಗೆ 5 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿದೆ. ಹೈಟೆಕ್ ಸರ್ಕಾರಿ ರೇಷ್ಮೆ ಗೂಡು ಮಾರುಕಟ್ಟೆ ನಿರ್ಮಾಣಕ್ಕಾಗಿ ಕಲಬುರಗಿ ನಗರಕ್ಕೆ ಹೊಂದಿಕೊಂಡಿರುವ ಜಾಫರಾಬಾದ ಬಳಿ 4 ಎಕರೆ ಜಮೀನು ಮೀಸಲಿರಿಸಲಾಗಿದೆ. ನರೇಗಾ ಯೋಜನೆಯಡಿ ಜಿಲ್ಲೆಯಲ್ಲಿ 2023-24ನೇ ಸಾಲಿನಲ್ಲಿ 37.33 ಲಕ್ಷ ಮಾನವ ದಿನ ಸೃಜಿಸಿ 2.56 ಲಕ್ಷ ಜನರಿಗೆ ಉದ್ಯೋಗ ನೀಡಲಾಗಿದೆ ಎಂದರು.

ಕಲ್ಯಾಣ ಕರ್ನಾಟಕ ಭಾಗದ ಏಳು ಜಿಲ್ಲೆಗಳ ಪದವೀಧರ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧರಾಗಿ ಸರ್ಕಾರಿ ವೃತ್ತಿಗಳಲ್ಲಿ ತೊಡಗಿಕೊಳ್ಳಲಲು ಅನುಕೂಲ ಮಾಡಿಕೊಡುವ ಸಲುವಾಗಿ “Centre of Excellence for Competative Examinations” ವಿಶೇಷ ಕಾರ್ಯಕ್ರಮ ಹಾಕಿಕೊಳ್ಳಲಾಗಿದೆ. ಕಲಬುರಗಿ ನಗರದ ವಾಜಪೇಯಿ ಬಡಾವಣೆಯಲ್ಲಿ ಸುಮಾರು ಎರಡು ಸಾವಿರ ವಿದ್ಯಾರ್ಥಿಗಳಿಗೆ ಬೋಧನೆ ನೀಡುವಂತಹ ಸ್ಪರ್ಧಾತ್ಮಕ ತರಬೇತಿ ಕೇಂದ್ರ ನಿರ್ಮಾಣ ಮಾಡಲಾಗಿದೆ. ಕಲ್ಯಾಣ ಕರ್ನಾಟಕ ಜಿಲ್ಲೆಗಳ ಯುವಕ ಯುವತಿಯರು ಈ ತರಬೇತಿ ಕೇಂದ್ರದ ಸೌಲಭ್ಯ ಪಡೆದು ಸರ್ಕಾರದ ವಿವಿಧ ಹುದ್ದೆಗಳನ್ನು ಪಡೆದುಕೊಳ್ಳುವಂತಾಗಲಿ ಎಂದು ಹಾರೈಸಿದರು.

ರಾಜ್ಯದಲ್ಲಿಯೇ ಮೊದಲ ಬಾರಿಗೆ ಕಲಬುರಗಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿಯಿಂದ ಸಾರ್ವಜನಿಕರ ಕುಂದುಕೊರತೆಗಳನ್ನು ಈಗ ಸಂಬಂಧಪಟ್ಟ ಇಲಾಖೆಗಳಿಂದ ವೆಬ್ ಸೈಟ್ ಮುಖಾಂತರ ಪರಿಹಾರ ಒದಗಿಸಲು ಆಡಳಿತವನ್ನು ‘ಕಲಬುರಗಿ ಕನೆಕ್ಟ್’ ಮೂಲಕ ಸಜ್ಜುಗೊಳಿಸಲಾಗಿದೆ. ಇದರಿಂದ ಆಡಳಿತ ಪೂರ್ಣವಾಗಿ ಪಾರದರ್ಶಕವಾಗಲಿದೆ. ಸರ್ಕಾರಿ ಸೇವೆ ನಿಮ್ಮ ಮನೆ ಬಾಗಿಲಿಗೆ ಬಂದಿದೆ. ಇನ್ನು ಮುಂದೆ ನಿಮ್ಮ ಸಮಸ್ಯೆಗಳನ್ನು ಸರಳವಾಗಿ ಬಗೆಹರಿಸಿಕೊಳ್ಳಬಹುದಾಗಿದೆ ಎಂದರು.

ಪೊಲೀಸ್ ಠಾಣೆಗೆ ಬರಲು ಜನ ಹಿಂಜರಿಯುವ ಸಮಯವೊಂದಿತ್ತು. ಈಗ ಪೊಲೀಸ್ ಠಾಣೆಗಳನ್ನು ಜನಸ್ನೇಹಿಗೊಳಿಸಿ, ಜನ ಸಾಮಾನ್ಯರ ಸಮಸ್ಯೆಗಳನ್ನು ಸುಲಲಿತವಾಗಿ ಬಗೆಹರಿಸಲು ‘ಜನಸ್ನೇಹಿ ಪೊಲೀಸ್ ಅಭಿಯಾನ’ ಜಾರಿಗೊಳಿಸಲಾಗಿದೆ. ಇದೇ ಮೊದಲ ಬಾರಿಗೆ ಕಲಬುರಗಿಯ ಪೋಲೀಸ್ ಇಲಾಖೆಯಲ್ಲಿ ಫೀಡ್ ಬ್ಯಾಕ್ ವ್ಯವಸ್ಥೆಗೆ ಚಾಲನೆ ನೀಡಲಾಗಿದೆ. ಸಾರ್ವಜನಿಕರು QR ಕೋಡ್ ಮುಖಾಂತರ ಪೊಲೀಸ್ ಠಾಣೆಗಳ ಕಾರ್ಯ ವೈಖರಿ ಹಾಗೂ ಪೊಲೀಸ್ ಸಿಬ್ಬಂದಿಯ ಕರ್ತವ್ಯ ನಿರ್ವಹಣೆ ಕುರಿತು ಅಭಿಪ್ರಾಯ ಹಾಗೂ ದೂರುಗಳನ್ನು ನೀಡಬಹುದಾಗಿದೆ ಎಂದರು.

ಕಲ್ಯಾಣ ಕರ್ನಾಟಕ ಭಾಗದಲ್ಲಿ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಯುವಕ ಯುವತಿಯರಿಗೆ ನೆರವಾಗಲು ಕಲ್ಯಾಣ ಕರ್ನಾಟಕ ಎಲಿವೇಟ್ ಕಾರ್ಯಕ್ರಮದಡಿ ನವೋದ್ಯಮಗಳನ್ನು ಆರಂಭಿಸಲು ಪ್ರೋತ್ಸಾಹ ನೀಡಲಾಗುವುದು ಎಂದರು.

ನಮ್ಮ ಭಾಗದ ಯುವಜನರನ್ನು ನೂತನ ತಂತ್ರಜ್ಞಾನ ವಿಭಾಗಗಳಲ್ಲಿ ಉದ್ಯಮಶೀಲರನ್ನಾಗಿಸುವ ಸಲುವಾಗಿ ಕೌಶಲ್ಯಾಭಿವೃದ್ದಿ ಇಲಾಖೆ ಸಹಯೋಗದೊಂದಿಗೆ Skill Council for Emerging Technologies ಅನ್ನು ಸ್ಥಾಪಿಸಲಾಗಿದೆ. ಇದರಿಂದ ನಮ್ಮ ಭಾಗದ ಆಸಕ್ತ ಯುವಜನರಿಗೆ IT/BT ವಲಯದಲ್ಲಿ ಹೆಚ್ಚಿನ ಉದ್ಯೋಗಾವಕಾಶ ಒದಗಿಸಲು ವಿಶೇಷ ಕ್ರಮ ವಹಿಸಲಾಗಿದೆ ಎಂದರು.

ಜನಪರ ಆಶಯಗಳೊಂದಿಗೆ ಅಧಿಕಾರಕ್ಕೆ ಬಂದ ನಮ್ಮ ಸರ್ಕಾರ ಧ್ವನಿ ಇಲ್ಲದವರಿಗೆ ಧ್ವನಿಯಾಗಲು, ದುರ್ಬಲರಿಗೆ ಶಕ್ತಿ ತುಂಬಲು, ಸಾಮಾಜಿಕ ಹಾಗೂ ಆರ್ಥಿಕ ಚೇತನವನ್ನು ನೀಡುವ ಸಲುವಾಗಿಯೇ ಐದು ಗ್ಯಾರೆಂಟಿಗಳನ್ನು ಯಶಸ್ವಿಯಾಗಿ ಜಾರಿಗೆ ತರುವ ಮೂಲಕ ರಾಜ್ಯದ ಕೋಟ್ಯಾಂತರ ಕುಟುಂಬಗಳ ಸಬಲೀಕರಣಕ್ಕೆ ಕಾರಣವಾಗಿದೆ. ಹಿಂದಿನ ಸರ್ಕಾರ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯತ್ತ ತೋರಿದ ನಿರ್ಲಕ್ಷದಿಂದಾಗಿ ಕಳೆದ ನಾಲ್ಕು ವರ್ಷಗಳಿಂದ ಇಲ್ಲಿನ ಅಭಿವೃದ್ಧಿಗೆ ಅಡಚಣೆಯಾಗಿತ್ತು. ಇದೀಗ ನಮ್ಮ ಸರ್ಕಾರ ಆ ಸಂಕಷ್ಟವನ್ನು ನಿವಾರಿಸಲಿದೆ ಎಂದು ಭರವಸೆ ನೀಡಿದರು.

ಯುವಜನಾಂಗ ರಾಷ್ಟ್ರೀಯ ಪ್ರಜ್ಞೆಯೊಂದಿಗೆ ಪರಂಪರೆ, ಪರಿಸರ ಹಾಗೂ ಪರಿಶ್ರಮದ ಪ್ರಜ್ಞೆ ಬೆಳೆಸಿಕೊಳ್ಳಲು ಪ್ರಾಮಾಣಿಕವಾಗಿ ಹಾಗೂ ಶ್ರದ್ಧೆ, ವಿಶಾಲ ಮನೊಭಾವ, ದೃಢಸಂಕಲ್ಪ, ಶಿಸ್ತು ಮತ್ತು ಸಂಯಮಗಳನ್ನು ಬೆಳೆಸಿಕೊಳ್ಳಬೇಕು. ಯುವ ಜನಾಂಗದವರು ಗ್ರಾಮೀಣ ಜನಜೀವನದ ಚೇತನ ಚಿಲುಮೆಗಳಾಗಬೇಕು. “ಸ್ವಾತಂತ್ರ್ಯ” ಎನ್ನುವುದು ಅನುಪಮ, ಅಮೂಲ್ಯವಾದ ಜೀವರತ್ನ. ನಮ್ಮ ಹಿರಿಯರು ತಮ್ಮ ಬಲಿದಾನದಿಂದ ಕಷ್ಟಪಟ್ಟು ಗಳಿಸಿಕೊಟ್ಟಿರುವ ಸ್ವಾತಂತ್ರ್ಯವನ್ನು ಉಳಿಸಿಕೊಳ್ಳುವ ಸಂಕಲ್ಪ ಮಾಡಬೇಕು. ದೇಶದ 77ನೇ ಸ್ವಾತಂತ್ರ್ಯ ದಿನಾಚರಣೆಯ ಈ ಸಂದರ್ಭದಲ್ಲಿ ಐಕ್ಯತೆ, ಸಮಗ್ರತೆ, ಸಹೋದರತೆ, ಸಾಮರಸ್ಯಗಳ ಮೂಲಕ ಅಭಿವೃದ್ಧಿಯತ್ತ ಸಾಗೋಣ ಎಂಬ ಸಂಕಲ್ಪ ಮಾಡೋಣ ಎಂದು ಕರೆನೀಡಿದರು.

ಪ್ರಬುದ್ಧ ಹಾಗೂ ಸಮೃದ್ಧ ಸಮ ಸಮಾಜ ನಿರ್ಮಿಸಲು ನಮ್ಮ ಪ್ರಾಮಾಣಿಕ ಪ್ರಯತ್ನ ನಿರಂತರವಾಗಿರಲಿದೆ ಎಂದು ಹೇಳುತ್ತಾ ತಮ್ಮೆಲ್ಲರಿಗೂ 77ನೇ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳನ್ನು ಕೋರಿದರು.

Leave a Reply