ಬೆಳಗಾವಿ: ಜನರಿಗೆ ನ್ಯಾಯ ಒದಗಿಸಲು ಹಾಗೂ ಉತ್ತಮ ಆಡಳಿತ ನೀಡಲು ಬಿಜೆಪಿ ಪಕ್ಷದ ನೂತನ ವಿಪಕ್ಷ ನಾಯಕ ಆರ್. ಅಶೋಕ್ ಸಹಕರಿಸಬೇಕು ಎಂದು ಸಚಿವ ಕೃಷ್ಣ ಬೈರೇಗೌಡ ಕೋರಿದರು.
ವಿಪಕ್ಷದ ನಾಯಕರಾಗಿ ಆಯ್ಕೆಯಾಗಿರುವ ಪದ್ಮನಾಭನಗರದ ಶಾಸಕ ಆರ್.ಅಶೋಕ್ ಅವರಿಗೆ ಸರ್ಕಾರದ ಪರವಾಗಿ ಶುಭಾಶಯಗಳನ್ನು ತಿಳಿಸಿ ಮಾತಾಡಿದ ಕೃಷ್ಣ ಬೈರೇಗೌಡ, ವಿಪಕ್ಷ ನಾಯಕನ ಸ್ಥಾನ ಮುಖ್ಯಮಂತ್ರಿಯ ಸ್ಥಾನದಷ್ಟೇ ಪ್ರಾಮುಖ್ಯತೆ ಪಡೆದಿದೆ. ಭಾರತದ ಆಡಳಿತ ವ್ಯವಸ್ಥೆಯಲ್ಲಿ ಬ್ರಿಟೀಷ್ ಪಾರ್ಲಿಮೆಂಟರಿ ಅಭ್ಯಾಸವೂ ಇದೆ. ಬ್ರಿಟೀಷ್ ಪಾರ್ಲಿಮೆಂಟರಿಯಲ್ಲಿ ವಿಪಕ್ಷ ನಾಯಕನನ್ನು “ಶಾಡೋ ಪ್ರಧಾನಿ” ಎನ್ನುತ್ತಾರೆ. ಹಾಗೆ ನೋಡಿದರೆ ಆರ್.ಅಶೋಕ್ ಅವರನ್ನು “ಶಾಡೋ ಸಿಎಂ” ಎನ್ನಬಹುದು. ಅವರಿಗೆ ಸರ್ಕಾರದ ಪರವಾಗಿ ಅಭಿನಂದನೆಗಳು ಎಂದರು.
ವಿರೋಧ ಪಕ್ಷದ ನಾಯಕರಾಗಿ ಆಡಳಿತ ಪಕ್ಷದ ವಿರುದ್ಧ ರಾಜಕೀಯವಾಗಿ ಟೀಕೆ ಟಿಪ್ಪಣಿ ಅನಿವಾರ್ಯ. ಆದರೆ, ರಾಜಕೀಯ ಟೀಕೆ ಟಿಪ್ಪಣಿಗಳ ಜೊತೆಯಲ್ಲಿ ವಿಪಕ್ಷ ನಾಯಕರು ಸಕಾರಾತ್ಮ ಟೀಕೆಗಳನ್ನು ಸಲಹೆಗಳನ್ನೂ ಸರ್ಕಾರದ ಮುಂದಿಡಲಿ. ವಿಪಕ್ಷ ನಾಯಕರಾಗಿ ಅವರ ಸಲಹೆಗಳಿಗೂ ಸರ್ಕಾರ ಕಿವಿಯಾಗುವುದು. ಆಡಳಿತ ಪಕ್ಷ ಮತ್ತು ವಿಪಕ್ಷ ಜೊತೆಜೊತೆಯಾಗಿ ಜನರಿಗೆ ಉತ್ತಮ ಆಡಳಿತ ನೀಡಲು ಇಂತಹ ಪ್ರಕ್ರಿಯೆಗಳು ಸಹಕಾರಿಯಾಗುತ್ತದೆ. ಜನರಿಗೆ ನ್ಯಾಯ ಒದಗಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಬೇಕು ಎಂದರು.




