ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸಂಪೂರ್ಣವಾಗಿ ವಿಫಲ: ಡಿ ವಿ ಸದಾನಂದಗೌಡ

1 year ago

ವಿಶ್ವ ಮಹಿಳಾ ದಿನದಂದೇ ಈ ಭೀಕರ ಘಟನೆ ಕರ್ನಾಟಕದ ಹೆಸರಿಗೆ ಪ್ರಪಂಚದಾದ್ಯಂತ ಕಳಂಕ ತಂದಿದೆ. ಮುಖ್ಯಮಂತ್ರಿ ಶ್ರೀ @siddaramaiah_official  ಅವರು ತಕ್ಷಣ ತುರ್ತು ಕ್ರಮ ಕೈಗೊಂಡು ರಾಜ್ಯದ ಗೌರವವನ್ನು ಉಳಿಸಬೇಕು ಎಂಬುದು ನಮ್ಮ ಕೋರಿಕೆ ಎಂದು ಮಾಜಿ ಸಿಎಂ ಡಿ ವಿ ಸದಾನಂದಗೌಡ ಹೇಳಿದ್ದಾರೆ.

ಹಂಪಿಯಲ್ಲಿ ವಿದೇಶಿ ಮಹಿಳೆ ಮೇಲೆ ಅತ್ಯಾಚಾರ ಮತ್ತು ಹತ್ಯೆ ಪ್ರಕರಣ ಕುರಿತು ಸಿಎಂ ಸಿದ್ದರಾಮಯ್ಯ ಅವರಿಗೆ ಸಾಮಾಜಿಕ ಜಾಲತಾಣಗಳಲ್ಲಿ ಮನವಿ ಮಾಡಿರುವ ಅವರು, ಹಂಪಿ ಅತ್ಯಾಚಾರ ಪ್ರಕರಣ: ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸಂಪೂರ್ಣವಾಗಿ ವಿಫಲ! ಎಂದಿದ್ದಾರೆ.

ಮಹಿಳಾ ದಿನದ ಪೂರ್ವಸಂಧ್ಯೆಯಲ್ಲಿ, ಹಂಪಿಯ ಸಮೀಪದ ಸನಾಪುರ ಕೆರೆಯಲ್ಲಿ ನಡೆದ ಅತ್ಯಾಚಾರ ಪ್ರಕರಣವು ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆಯ ದುಸ್ಥಿತಿಯನ್ನು ಬಹಿರಂಗಪಡಿಸಿದೆ. ಇಸ್ರೇಲಿ ಪ್ರವಾಸಿ ಮಹಿಳೆ ಸೇರಿದಂತೆ ಇಬ್ಬರು ಮಹಿಳೆಯರು ಸಾಮೂಹಿಕ ಅತ್ಯಾಚಾರಕ್ಕೆ ಒಳಗಾದರೆ, ಅವರ ಪುರುಷ ಸ್ನೇಹಿತರನ್ನು ಕ್ರೂರವಾಗಿ ಹಲ್ಲೆ ಮಾಡಲಾಗಿದ್ದು, ಒಬ್ಬನನ್ನು ಹತ್ಯೆ ಮಾಡಲಾಗಿದೆ. ಕರ್ನಾಟಕವನ್ನು ಪ್ರವಾಸಿ ಸ್ನೇಹಿ ರಾಜ್ಯವನ್ನಾಗಿ ಪರಿಗಣಿಸಿದ ಪ್ರವಾಸಿಗರಿಗೆ ಈ ಘಟನೆ ಭಾರೀ ಆತಂಕವನ್ನು ಉಂಟುಮಾಡಿದೆ ಎಂದು ಹೇಳಿದ್ದಾರೆ.

ರಾಜ್ಯದಲ್ಲಿ ಮಹಿಳೆಯರ ಮೇಲೆ ದೌರ್ಜನ್ಯ ದಿನೇ ದಿನೇ ಹೆಚ್ಚಾಗುತ್ತಿದೆ. ಅತ್ಯಾಚಾರ, ಹಲ್ಲೆ ಮತ್ತು ಕೊಲೆ ಪ್ರಕರಣಗಳು ನಿರಂತರವಾಗಿ ನಡೆಯುತ್ತಿವೆ. ಆದಾಗ್ಯೂ, ರಾಜ್ಯ ಸರ್ಕಾರ ಇವುಗಳನ್ನು ಗಂಭೀರವಾಗಿ ಪರಿಗಣಿಸುವಲ್ಲಿ ಸಂಪೂರ್ಣ ವಿಫಲವಾಗಿದೆ. ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಸರ್ಕಾರ ತೊಡಗಿಸಿಕೊಂಡಿಲ್ಲ ಎಂಬುದೇ ಈ ಘಟನೆಯಲ್ಲಿಯೂ ಸ್ಪಷ್ಟವಾಗಿದೆ. ಈ ದಾರುಣ ಘಟನೆ ಕೂಡ ರಾಜ್ಯ ಸರ್ಕಾರದ ನಿರ್ಲಕ್ಷ್ಯತೆಯೇ ಕಾರಣವೆನ್ನಿಸುವಂತಹದ್ದಾಗಿದೆ ಎಂದಿದ್ದಾರೆ.

ಈ ಘಟನೆಯಲ್ಲಿ ನಿರ್ದಯವಾಗಿ ಮಹಿಳೆಯರ ಮಾನಭಂಗ ಮಾಡಿರುವ, ಹೇಡಿ, ಕ್ರೂರಿ ಅಪರಾಧಿಗಳನ್ನು ತಕ್ಷಣ ಪತ್ತೆಹಚ್ಚಿ ಕಠಿಣ ಶಿಕ್ಷೆ ವಿಧಿಸಬೇಕು. ಸಮಾಜದಲ್ಲಿ ಭಯದ ವಾತಾವರಣ ನಿರ್ಮಾಣವಾಗದಂತೆ, ಇಂತಹ ಕ್ರೂರ ಅಪರಾಧಿಗಳಿಗೆ ತಕ್ಷಣವೇ ಎನ್‌ಕೌಂಟರ್ ಮಾಡುವ ಮೂಲಕ ಖಡಕ್ ಸಂದೇಶ ನೀಡಬೇಕು. ಕಾನೂನು ಸುವ್ಯವಸ್ಥೆಯನ್ನು ಉಳಿಸಬೇಕಾದ ಸರ್ಕಾರದ ಪ್ರಾಥಮಿಕ ಕರ್ತವ್ಯವನ್ನು ಅದು ನಿರ್ಲಕ್ಷಿಸುತ್ತಿದ್ದರೆ, ಇದು ಜನರ ಕೋಪಕ್ಕೆ ಕಾರಣವಾಗಲಿದೆ ಎಂದಿದ್ದಾರೆ.

ಇದಲ್ಲದೆ, ಇಂದು ಮಾಧ್ಯಮದಲ್ಲಿ ಬಂದಂತೆ ಬೆಳಗಾವಿಯಲ್ಲಿ ನಡೆದ ಮತ್ತೊಂದು ಘಟನೆ ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆಯ ಸ್ಥಿತಿಯನ್ನು ಮತ್ತಷ್ಟು ಪ್ರಶ್ನಿಸುತ್ತದೆ. ಬೆಳಗಾವಿಯ ಸ್ಟೇಶನ್ ಪ್ರದೇಶದಲ್ಲಿ ಹಿಂದು ಯುವತಿಯನ್ನು ಮುಸ್ಲಿಂ ವ್ಯಕ್ತಿಗಳಿಂದ ಅಪಹರಿಸಲಾಯಿತು ಎಂಬ ವರದಿಗಳು ಬಂದಿವೆ. ಈ ಘಟನೆಗಳು ರಾಜ್ಯದಲ್ಲಿ ಮಹಿಳೆಯರ ಸುರಕ್ಷತೆಯ ಕುರಿತು ಗಂಭೀರ ಚಿಂತನೆಗಳನ್ನು ಉಂಟುಮಾಡಿವೆ ಎಂದಿದ್ದಾರೆ.

ಈ ಹೀನ ಕೃತ್ಯವನ್ನು ಖಂಡಿಸಿ, ಸರ್ಕಾರವು ತಕ್ಷಣ ಕಠಿಣ ಕ್ರಮ ಕೈಗೊಳ್ಳಬೇಕು. ಆದರೆ ಸರ್ಕಾರ ಇನ್ನೂ ಮೌನವಹಿಸಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ. ಇಂತಹ ಅಪರಾಧಿಗಳು ಮುಕ್ತವಾಗಿ ಸಂಚರಿಸಲು ಅವಕಾಶ ಮಾಡಿಕೊಡಲು ಆಡಳಿತ ಅಸಮರ್ಥವಾಗಿರುವುದು ನಿಜಕ್ಕೂ ಖೇದಕರ. ಕಾನೂನು-ಸುವ್ಯವಸ್ಥೆಯನ್ನು ಕಾಪಾಡಲು ಸರ್ಕಾರವು ಇನ್ನೂ ಎಚ್ಚರಗೊಳ್ಳದಿದ್ದರೆ, ಜನತೆ ತಮಗೆ ಬೇಕಾದ ತೀರ್ಮಾನ ಕೈಗೊಳ್ಳುವುದು ಅನಿವಾರ್ಯವಾಗುತ್ತದೆ ಎಂದಿದ್ದಾರೆ.

ರಾಜ್ಯ ಸರ್ಕಾರ ತಕ್ಷಣ ಎಚ್ಚೆತ್ತುಕೊಂಡು ಅಪರಾಧಿಗಳನ್ನು ಪತ್ತೆ ಮಾಡಿ, ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಕರ್ನಾಟಕವನ್ನು ಮತ್ತೆ ಸುರಕ್ಷಿತ ರಾಜ್ಯವನ್ನಾಗಿ ಮಾಡಲು ಸರ್ಕಾರ ಗಂಭೀರ ಕ್ರಮ ಕೈಗೊಳ್ಳುವುದು ಅವಶ್ಯಕ ಎಂದಿದ್ದಾರೆ.

Leave a Reply