ಬೆಂಗಳೂರು: ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಅತ್ಯುತ್ತಮವಾಗಿದೆ. ಕೋಮು ಸಂಘರ್ಷ ಸೇರಿದಂತೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸರು ಸಾಕಷ್ಟು ಮುಂಜಾಗ್ರತ ಕ್ರಮಗಳನ್ನು ಕೈಗೊಂಡಿದ್ದು ಪರಿಸ್ಥಿತಿ ಸಂಪೂರ್ಣ ನಿಯಂತ್ರಣದಲ್ಲಿದೆ ಎಂದು ಗೃಹಸಚಿವ ಡಾ.ಜಿ. ಪರಮೇಶ್ವರ್ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾನೂನು ಸುವ್ಯವಸ್ಥೆ ಕುರಿತಂತೆ ಬಿಜೆಪಿ ನಾಯಕರು ಸುಳ್ಳು ಆರೋಪ ಮಾಡುತ್ತಿದ್ದಾರೆ. ಇವರ ಎಲ್ಲಾ ಆರೋಪಗಳಿಗೆ ಬೆಳಗಾವಿಯಲ್ಲಿ ನಡೆಯಲಿರುವ ವಿಧಾನ ಮಂಡಲದ ಅಧಿವೇಶನದಲ್ಲಿ ಉತ್ತರ ನೀಡುವುದಾಗಿ ತಿಳಿಸಿದರು.
- ಬಸವಣ್ಣನವರ ವಚನಗಳು ವಿಶ್ವವಿದ್ಯಾಲಯಗಳು ಹೇಳಿಕೊಡುವ ಪಾಠಕ್ಕಿಂತ ಕಡಿಮೆಯಲ್ಲ: ಸಾಜೀದ್ ಮುಲ್ಲಾ
- ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಮಸೂದೆ ಅಂಗೀಕಾರವಾಗಿದೆ
- ಮಹಿಳಾ ಮೀಸಲಾತಿ ವಿಷಯದಲ್ಲಿ ಮೋದಿ ಸರ್ಕಾರದಿಂದ ಮಹಿಳೆಯರಿಗೆ ದ್ರೋಹ: ಸಿದ್ದರಾಮಯ್ಯ
- ಕಾಂಗ್ರೆಸ್ಗೆ ಮಹಿಳಾ ಮೀಸಲಾತಿ ಬೇಕಿಲ್ಲ ಎಂಬುದು ಸ್ಪಷ್ಟ: ಬಸವರಾಜ ಬೊಮ್ಮಾಯಿ
- ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಎಷ್ಟು ಹದಗೆಟ್ಟಿದೆ ಎನ್ನುವುದಕ್ಕೆ ಕನ್ನಡಿ: ಆರ್ ಅಶೋಕ್
ಯಾವುದೇ ಘಟನೆ ನಡೆದಿಲ್ಲ ಎಂದು ಹೇಳುವುದಿಲ್ಲ. ಅವರು ಆಡಳಿತ ನಡೆಸಿದಾಗ ಹೇಗಿತ್ತು, ಈಗ ಏನಿದೆ ಎಂಬುದನ್ನು ತಿಳಿಸುತ್ತೇನೆ ಎಂದರು.
ಬಿಜೆಪಿ ಆಡಳಿತ ನಡೆಸುತ್ತಿರುವ ಬೇರೆ ರಾಜ್ಯಗಳಲ್ಲಿ ಕಾನೂನು ಸುವ್ಯವಸ್ಥೆ ಯಾವ ರೀತಿ ಇದೆ. ಬಿಜೆಪಿಯವರ ಅಧಿಕಾರಾವಧಿಯಲ್ಲಿ ಕರ್ನಾಟಕದಲ್ಲಿ ಕಾನೂನು ಸುವ್ಯವಸ್ಥೆ ಹೇಗಿತ್ತು, ಕಳೆದ ಎರಡು ವರ್ಷದಿಂದ ಹೇಗಿದೆ ಎಂಬುದನ್ನು ಸದನದಲ್ಲಿ ಹೇಳುತ್ತೇನೆ ಎಂದು ಬಿಜೆಪಿ ನಾಯಕರಿಗೆ ತಿರುಗೇಟು ನೀಡಿದರು.
ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ ನಡೆದ ಘಟನೆಗಳು ನಡೆದಾಗ ಯಾವ ಸರ್ಕಾರ ಅಧಿಕಾರದಲ್ಲಿತ್ತು ಎಂಬುದನ್ನು ಹೇಳುತ್ತೇನೆ. ನಾವು ಆಡಳಿತ ನಡೆಸುವಾಗ ಆಗಿದೆ ಎಂದಾಗ ಸೂಕ್ತವಾದ ಕ್ರಮ ತೆಗೆದುಕೊಂಡಿದ್ದೇವೆ. ಹಳೇ ವೀಡಿಯೋಗಳನ್ನು ಹಾಕಿ, ಈಗ ನಡೆದಿದ್ದು ಹೇಳಿರುವುದಕ್ಕೆ ಪ್ರತಿಯೊಂದು ಘಟನೆಯನ್ನು ತಿಳಿಸುತ್ತೇನೆ ಎಂದರು.
ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಾಂಗ್ರೆಸ್ ಮುಖಂಡನ ಹತ್ಯೆ ಪ್ರಕರಣವನ್ನು ಸ್ಥಳೀಯ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಯಾವ ಕಾರಣದಿಂದ ಹತ್ಯೆಯಾಗಿದೆ ಎಂಬುದರ ಬಗ್ಗೆ ತನಿಖೆಯ ವರದಿ ಬಂದರೆ ಗೊತ್ತಾಗುತ್ತದೆ. ಸ್ಥಳೀಯ ಪೊಲೀಸರು ಕ್ರಮ ಕೈಗೊಳ್ಳುತ್ತಾರೆ ಎಂದರು.
ಧರ್ಮಸ್ಥಳ ಪ್ರಕರಣದ ಬಗ್ಗೆ ಸದನದಲ್ಲಿ ಪ್ರಶ್ನೆ ಮಾಡಿದರೆ ಉತ್ತರ ನೀಡುತ್ತೇವೆ. ಎಸ್‌ಐಟಿಯವರು ಕೋರ್ಟ್‌ಗೆ ಮತ್ತು ಸರ್ಕಾರಕ್ಕೆ ವರದಿಯನ್ನು ನೀಡಿದ್ದಾರೆ. ಸದನದಲ್ಲಿ ಪ್ರಸ್ತಾಪ ಮಾಡಿದರೆ ಹೇಳುತ್ತೇವೆ. ವಸ್ತುಸ್ಥಿತಿ ಏನಿದೆ ಎಂಬುದನ್ನು ಹೇಳಬೇಕಲ್ಲ. ಇದರಲ್ಲಿ ಮುಚ್ಚುಮರೆ ಏನಿದೆ ಎಂದರು.
ಸಚಿವರು ಪರಸ್ಪರ ಭೇಟಿಯಾಗುತ್ತಿರುವ ವಿಚಾರದ ಕುರಿತು ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿ, ನಮ್ಮ ಕ್ಷೇತ್ರಕ್ಕೆ ಮತ್ತು ಜಿಲ್ಲೆಗೆ ಕೆಲಸಗಳಾಗಬೇಕು. ಸತೀಶ್ ಜಾರಕಿಹೊಳಿ ಅವರು ಲೋಕೋಪಯೋಗಿ ಸಚಿವರಿದ್ದಾರೆ. ಬಹಳ ಮುಖ್ಯವಾದ ಖಾತೆ. ಹೀಗಾಗಿ ಭೇಟಿ ಮಾಡಲು ಹೋಗಿರುತ್ತೇವೆ. ಕೆಲವು ಸಂದರ್ಭಗಳಲ್ಲಿ ರಾಜಕೀಯ ಮಾತನಾಡಲು ಹೋಗಿರುತ್ತೇವೆ. ಇದರಲ್ಲಿ ಮುಚ್ಚುಮರೆ ಏನಿದೆ? ಐದು ಜನ ಸೇರಿ ಎರಡು ಸಲ ಊಟಕ್ಕೆ ಸೇರಿ ರಾಜಕೀಯ ಮಾತನಾಡಿದ್ದೆವು. ಇದರಲ್ಲಿ ತಪ್ಪೇನಿದೆ. ನಾವೆಲ್ಲ ರಾಜಕಾರಣಿಗಳಲ್ಲವೇ? ಎಂದು ಪ್ರಶ್ನಿಸಿದರು.




