ಸಿದ್ದರಾಮಯ್ಯ ಅವರ ಬೆಂಬಲಕ್ಕೆ ಧಾವಿಸಿದ ಕುರುಬ ಸಮಾಜ

5 months ago

ಬೆಂಗಳೂರು: ಸರ್ಕಾರ ರಚನೆ ಸಮಯದಲ್ಲಿ ಆಗುವ ಒಪ್ಪಂದದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರ ತ್ಯಾಗ ಮಾಡಬೇಕು ಎಂಬ ಬೇಡಿಕೆ ಬಂದಿರುವ ಬೆನ್ನಲ್ಲೇ ಕುರುಬ ಸಮಾಜ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬೆಂಬಲಕ್ಕೆ ಧಾವಿಸಿದೆ.

ಬೆಂಗಳೂರಿನ ಕುರುಬ ಸಮಾಜ ಕಚೇರಿಯಲ್ಲಿ ಸಭೆ ಸೇರಿದ ರಾಜ್ಯದ ಎಲ್ಲಾ ಜಿಲ್ಲೆಗಳ ಕುರುಬ ಸಮಾಜ ಅಧ್ಯಕ್ಷರು ಮತ್ತು ಪ್ರಮುಖ ನಾಯಕರು ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಪದಚ್ಯುತಿ ಮಾಡಿದರೆ ಸಮುದಾಯ ಕಾಂಗ್ರೆಸ್ ವಿರುದ್ಧ ಸಮರ ಸಾರಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಸಮುದಾಯದ ಎಲ್ಲ ಮುಖಂಡರ ಜೊತೆ ಸುದೀರ್ಘ ಸಮಲೋಚನೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ತಿಂಥಣಿ ಮಠದ ಸಿದ್ದರಾಮಾನಂದಪುರಿ ಸ್ವಾಮೀಜಿ, ಜನಪರವಾಗಿ ಅತ್ಯಂತ ದಕ್ಷತೆಯಿಂದ ಕೆಲಸ ಮಾಡುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರ ತ್ಯಾಗ ಮಾಡಬೇಕು ಎಂದು ಮಂಡಿಸುತ್ತಿರುವ ಬೇಡಿಕೆ ಹಾಸ್ಯಾಸ್ಪದವಾಗಿದೆ ಎಂದರು.

ರಾಜ್ಯದ ಪ್ರಭಾವಿ ಸಮುದಾಯದ ಸ್ವಾಮೀಜಿ ಒಬ್ಬರು ದೆಹಲಿಗೆ ತೆರಳಿ ಮುಖ್ಯಮಂತ್ರಿ ಹುದ್ದೆ ಕುರಿತಾಗಿ ಲಾಬಿ ಮಾಡುವಂತಹ ಸ್ಥಿತಿ ಬರಬಾರದಿತ್ತು. ಯಾವ ಕಾರಣಕ್ಕಾಗಿ ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಇಳಿಸಬೇಕು ಎಂದು ಪ್ರಶ್ನಿಸಿದರು.

ಸಿದ್ದರಾಮಯ್ಯ ಕೇವಲ ಕುರುಬ ಸಮುದಾಯದ ನಾಯಕರಲ್ಲ; ಅವರು ಅಹಿಂದ ನಾಯಕರಾಗಿ ಗುರುತಿಸಿಕೊಂಡಿದ್ದಾರೆ. ಎಲ್ಲ ಸಮುದಾಯಗಳ ಪರವಾಗಿ ಕೆಲಸ ಮಾಡುವ ಮೂಲಕ ಸಾಮಾಜಿಕ ನ್ಯಾಯದ ಹರಿಕಾರ ಎನಿಸಿಕೊಂಡಿದ್ದಾರೆ. ಇಂತಹ ವ್ಯಕ್ತಿಗೆ ತೊಂದರೆ ಕೊಡುವುದು ಯಾರಿಗೂ ಶೋಭೆ ತರುವುದಿಲ್ಲ. ಪ್ರಭಾವಿ ಸಮುದಾಯದ ಸ್ವಾಮೀಜಿಗಳು ಇದನ್ನು ಅರ್ಥಮಾಡಿಕೊಳ್ಳಬೇಕು ಎಂದರು.

ಕೆಲವು ಕಾಂಗ್ರೆಸ್ ನಾಯಕರು ಜೈಲಿಗೆ ಹೋಗಿ ಬಂದವರನ್ನು, ಭ್ರಷ್ಟರನ್ನು ಮುಖ್ಯಮಂತ್ರಿ ಮಾಡಲು ಹೊರಟಿದ್ದಾರೆ. ಇದು ರಾಜ್ಯಕ್ಕೆ ದೊಡ್ಡ ಅಪಚಾರವಾಗಲಿದೆ. ಇಂತಹ ನಾಯಕರ ವಿರುದ್ಧ ನಮ್ಮ ಸಮಾಜ ಸಮರ ಘೋಷಣೆ ಮಾಡಲಿದ್ದು, ಮುಂಬರುವ ಚುನಾವಣೆಯಲ್ಲಿ ಈ ನಾಯಕರನ್ನು ಸೋಲಿಸುವಂತೆ ಕರೆ ನೀಡಲಾಗುವುದು ಎಂದು ಎಚ್ಚರಿಕೆ ನೀಡಿದರು.

ಈ ವಿಚಾರದಲ್ಲಿ ತಕ್ಷಣವೇ ಕಾಂಗ್ರೆಸ್ ಮಧ್ಯಪ್ರವೇಶ ಮಾಡಬೇಕು. ಶಾಸಕಾಂಗ ಪಕ್ಷದ ಸಭೆ ಕರೆದು ಎಲ್ಲ ಗೊಂದಲಗಳಿಗೆ ಪೂರ್ಣ ವಿರಾಮ ಹಾಕಬೇಕು. ಕಾಂಗ್ರೆಸ್ಸಿನಲ್ಲಿ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಸೇರಿದಂತೆ ಯಾರೂ ಕೂಡ ಮಾಸ್ ಲೀಡರ್ ಗಳಿಲ್ಲ. ಇದನ್ನು ಹೈಕಮಾಂಡ್ ಅರ್ಥ ಮಾಡಿಕೊಳ್ಳಬೇಕು. ಇಲ್ಲವಾದರೆ ಸಿದ್ದರಾಮಯ್ಯ ಕಾಂಗ್ರೆಸ್ ಪಕ್ಷವನ್ನು ತೊರೆದು ಪ್ರಾದೇಶಿಕ ಪಕ್ಷ ಸಂಘಟಿಸುವಂತೆ ಮನವಿ ಮಾಡಲಾಗುವುದು ಎಂದರು.

Leave a Reply