ಬೆಂಗಳೂರು: ‘’ತಾ ಕಳ್ಳ ಇತರರ ನಂಬ’’ ಎಂಬ ಗಾದೆ ಮಾತನ್ನು ಒಬ್ಬಮಾಜಿ ಮುಖ್ಯಮಂತ್ರಿ ಬಗ್ಗೆ ಬಳಸಬೇಕಾಗಿ ಬಂದದ್ದಕ್ಕೆ ನನಗೆ ವಿಷಾದ ಇದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ತಮ್ಮ ಪುತ್ರ ಯತೀಂದ್ರ ವಿರುದ್ಧ ಲಂಚ ಆರೋಪದ ಕುರಿತು ಸ್ಪಷ್ಟೀಕರಣ ನೀಡಿದ ನಂತರ ಕೂಡ ವಾಗ್ದಾಳಿ ಮತ್ತು ಆರೋಪಗಳನ್ನು ಮುಂದುವರೆಸಿರುವ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಕ್ರಿಯೆ ನೀಡಿರುವ ಸಿದ್ದರಾಮಯ್ಯ, ಡಾ.ಯತೀಂದ್ರ ಅವರ ಜೊತೆಗಿನ ಫೋನ್ ಸಂಭಾಷಣೆಯ ಹಿನ್ನೆಲೆಯನ್ನು ಸ್ಪಷ್ಟಪಡಿಸಿದ ನಂತರವೂ ಹೆಚ್.ಡಿ.ಕುಮಾರಸ್ವಾಮಿಯವರು ಮತ್ತೆ ತಮ್ಮ ಸಡಿಲ ನಾಲಿಗೆಯಲ್ಲಿ ಸುಳ್ಳುಗಳನ್ನು ಹರಿಯಬಿಟ್ಟಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಫೋನ್ ಸಂಭಾಷಣೆಯಲ್ಲಿ ಡಾ.ಯತೀಂದ್ರ ಹೆಸರಿಸಿದ ವಿವೇಕಾನಂದ ಅವರು ವರುಣ ಕ್ಷೇತ್ರಕ್ಕೆ ಸಂಬಂಧಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ (ಬಿಇಒ). ವರುಣ ಕ್ಷೇತ್ರಕ್ಕೆ ಸೇರಿರುವ ಹಾರೋಹಳ್ಳಿ, ಕೀಳನಪುರ, ದೇವಲಾಪುರ ಗ್ರಾಮಪಂಚಾಯಿತಿಗಳ ವ್ಯಾಪ್ತಿಯ ಐದು ಸರ್ಕಾರಿ ಶಾಲೆಗಳ ರಿಪೇರಿಯಾಗಬೇಕಾಗಿರುವ ಕೊಠಡಿಗಳ ವಿವರದ ಪಟ್ಟಿಯನ್ನು ಬಿಇಒ ಅವರೇ ನನ್ನ ಕಚೇರಿಯ ಜಂಟಿ ಕಾರ್ಯದರ್ಶಿಗಳಿಗೆ ಕಳಿಸಿದ್ದರು. ಇದರ ಬಗ್ಗೆಯೇ ನಾನು ಡಾ.ಯತೀಂದ್ರ ಅವರ ಜೊತೆಯಲ್ಲಿ ಮಾತನಾಡಿದ್ದು. ಇದಕ್ಕೆ ಸಂಬಂಧಿಸಿದ ದಾಖಲೆಯನ್ನು ಇಲ್ಲಿ ಲಗತ್ತಿಸಿದ್ದೇನೆ ಎಂದು ದಾಖಲೆಯನ್ನು ಕೂಡ ಬಿಡುಗಡೆ ಮಾಡಿದ್ದಾರೆ.

ಸುಳ್ಳುಕೋರರ ನಂಜಿನ ಆರೋಪಗಳಿಗೆ ವಿವರಣೆ ನೀಡಬೇಕಾದ ಅಗತ್ಯ ಖಂಡಿತ ಇಲ್ಲ. ಆದರೆ ಮಾಧ್ಯಮಗಳಲ್ಲಿ ಪ್ರಸಾರ, ಪ್ರಕಟವಾಗುತ್ತಿರುವ ಸುಳ್ಳು ಸುದ್ದಿಗಳನ್ನು ಅಮಾಯಕ ಜನ ನಂಬಿ ತಪ್ಪು ತಿಳಿದುಕೊಳ್ಳಬಾರದು ಎನ್ನುವ ಕಾರಣಕ್ಕೆ ಈ ವಿವರವನ್ನು ನೀಡಿದ್ದೇನೆ ಎಂದಿದ್ದಾರೆ.
ಸುಳ್ಳು, ಮೋಸ, ದ್ರೋಹ, ವಚನಭ್ರಷ್ಟತೆಗಳನ್ನೇ ಅಸ್ತ್ರಮಾಡಿಕೊಂಡು ಗಳಿಸಿದ ಅಧಿಕಾರವನ್ನು ಕೇವಲ ಹಣದ ಲೂಟಿಗಾಗಿ ದುರ್ಬಳಕೆ ಮಾಡಿಕೊಂಡ ಕುಮಾರಸ್ವಾಮಿಯವರಿಗೆ ಅಭಿವೃದ್ಧಿಯ ವಿಚಾರ ಅರ್ಥವಾಗುವಂತಹದ್ದಲ್ಲ ಎಂದು ತಿರುಗೇಟು ನೀಡಿದ್ದಾರೆ.




