ಬೆಂಗಳೂರು: ಬೆಂಗಳೂರು ಮಹಾನಗರದ ಮೂಲ ಸೌಕರ್ಯಗಳಿಗೆ ನಾನು ಮುಖ್ಯಮಂತ್ರಿ ಆಗಿದ್ದಾಗ ಅಡ್ಡಿಪಡಿಸಿದ್ದೇನೆ ಎಂಬ ಬಗ್ಗೆ ಒಂದು ಪ್ರಕರಣವನ್ನು ತೋರಿಸಿದರೆ ರಾಜಕೀಯ ನಿವೃತ್ತಿ ತೆಗೆದುಕೊಳ್ಳುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಪ್ರತಿಪಕ್ಷಗಳಿಗೆ ಸವಾಲು ಹಾಕಿದರು.
ವಿಧಾನಸೌಧದಲ್ಲಿ ಇಂದು ಬೆಳಗ್ಗೆ ಮಾಧ್ಯಮಗಳ ಜತೆ ಮಾತನಾಡಿದ ಅವರು, ಒತ್ತುವರಿ ತೆರವಿನ ನಾಟಕ ನಡೆಯುತ್ತಿದೆ. ನಾನು ಈಗಾಗಲೇ ಕಲಾಪದಲ್ಲಿ ಹೇಳಿದ್ದೇನೆ. ನೆಪಕ್ಕೆ ನಾಲ್ಕೈದು ಕಡೆ ತೆರವು ಮಾಡಿ ಸುಮ್ಮನಾಗುವುದಲ್ಲ. ಕಳೆದ 25 ವರ್ಷಗಳಿಂದ ಆದ ಅನಾಹುತಗಳು ಸೇರಿ ಕಳೆದ ಐದು ವರ್ಷಗಳಿಂದ ನಗರದಲ್ಲಿ ಆಗಿರುವ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು ಎಂದು ಒತ್ತಾಯ ಮಾಡಿದರು.
ಜೆಡಿಎಸ್ ಸರ್ಕಾರದ ನಿರ್ಧಾರಗಳಿಂದ ಲೋಪ ಆಗಿದೆ ಎಂದು ಕೆಲವರು ಆರೋಪ ಮಾಡಿದ್ದಾರೆ. ನಾನು ಅಧಿಕಾರದಲ್ಲಿ ಇದ್ದಾಗ ಏನಾದರೂ ಲೋಪ ಆಗಿದ್ದರೆ, ಆರೋಪ ಮಾಡಿರುವ ಕಾಂಗ್ರೆಸ್ ಮತ್ತು ಬಿಜೆಪಿ ಸಾಬೀತು ಮಾಡಿದರೆ ರಾಜಕೀಯ ನಿವೃತ್ತಿ ಘೋಷಣೆ ಮಾಡುತ್ತೆನೆ. ಬೆಂಗಳೂರು ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ ಎಂದರು.
ಹರಗಣವೊಂದನ್ನು ಬಯಲಿಗೆ ತರುವ ಬಗ್ಗೆ ಸದನದಲ್ಲಿ ಮಾತನಾಡಲು ಅವಕಾಶ ಕೊಡಬೇಕು ಈಗಾಗಲೇ ಸಭಾಧ್ಯಕ್ಷರಿಗೆ ಮನವಿ ಮಾಡಿದ್ದೇನೆ. ಸುಖಾಸುಮ್ಮನೆ ಮಾತನಾಡಿ ಸದನದಲ್ಲಿ ಸಮಯ ಹಾಳು ಮಾಡೋಕೆ ಇಷ್ಟವಿಲ್ಲ. ಬೇರೆ ಬೇರೆ ವಿಚಾರಗಳ ಚರ್ಚೆಗೆ ಅವಕಾಶ ನೀಡಿದ ಕಾರಣ ತಡವಾಗಿ ಅವಕಾಶ ನೀಡುವುದಾಗಿ ತಿಳಿಸಿದ್ದಾರೆ. ಬಹುಶಃ ನಾಳೆ (ಮಂಗಳವಾರ) ಅವಕಾಶ ಸಿಗಬಹುದು ಎಂದು ತಿಳಿಸಿದರು.
ಸದನದಲ್ಲಿ ನಾನು ಪ್ರಸ್ತಾಪ ಮಾಡಲಿರುವ ವಿಷಯ ಅತ್ಯಂತ ಗಂಭೀರ ವಿಚಾರವಾಗಿದೆ. ಸಂಪೂರ್ಣ ದಾಖಲೆಗಳನ್ನು ಇಟ್ಟುಕೊಂಡು ಮಾತನಾಡುತ್ತೇನೆ. ಗಾಳಿಯಲ್ಲಿ ಗುಂಡು ಹಾರಿಸಿ ಕುಮಾರಸ್ವಾಮಿ ಹಿಟ್ ಆಂಡ್ ರನ್ ಮಾಡ್ತಾರೆ ಎಂದು ಹೇಳುವವರಿಗೆ ಉತ್ತರ ಕೊಡುತ್ತೇನೆ. ಸಾರ್ವಜನಿಕ ಹಿತಾಸಕ್ತಿ ಹೊಂದಿರುವ ಸಾವಿರಾರು ಕೋಟಿ ವ್ಯವಹಾರಕ್ಕೆ ಸಂಬಂಧಪಟ್ಟ ವಿಷಯ ಅದಾಗಿದೆ. ಈ ಒಂದು ವಿಷಯದಲ್ಲಿ ಸರ್ಕಾರ ಆಘಾತಕಾರಿ ತೀರ್ಮಾನ ತೆಗೆದುಕೊಂಡಿದೆ ಎಂದು ವರದಿಗಾರರ ಪ್ರಶ್ನೆಯೊಂದಕ್ಕೆ ಉತ್ತರ ನೀಡಿದರು.
ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವುದು ಒಳಿತು. ಬಿಡಿಎ ವಸತಿ ಯೋಜನೆಗೆ ಸಂಬಂಧಿಸಿದ ಲಂಚದ ಆರೋಪ ಹಿನ್ನೆಲೆಯಲ್ಲಿ ಲೋಕಾಯುಕ್ತ ಪೊಲೀಸರು ಸಚಿವರ ವಿರುದ್ಧ ಆರೋಪ ಪಟ್ಟಿ ದಾಖಲು ಮಾಡಿದ್ದಾರೆ. ಇದರ ತನಿಖೆಗೆ ಹೈಕೋರ್ಟ್ ಸೂಚನೆ ಕೊಟ್ಟಿದೆ ಎಂದು ತಿಳಿಸಿದರು .



