ಹಾಸನ: ಹೊಳೆನರಸೀಪುರದ ದಕ್ಷ ಮತ್ತು ಪ್ರಾಮಾಣಿಕ ಪೊಲೀಸ್ ಅಧಿಕಾರಿಗಳಿಗೆ KRS ಪಕ್ಷದ ವತಿಯಿಂದ ಕ್ಷಮೆಯಾಚನೆ ಮತ್ತು ಸನ್ಮಾನ ಕಾರ್ಯಕ್ರಮವನ್ನು ಕೆ.ಆರ್.ಎಸ್. ಪಕ್ಷದ ವತಿಯಿಂದ ಆಯೋಜಿಸಲಾಗಿದೆ ಎಂದು ಪಕ್ಷದ ಅಧ್ಯಕ್ಷ ರವಿಕೃಷ್ಣಾರೆಡ್ಡಿ ಹೇಳಿದ್ದಾರೆ.
ಬಹುಶಃ ಹೊಳೆನರಸೀಪುರದ ನಗರ ಮತ್ತು ಗ್ರಾಮಾಂತರ ಪೊಲೀಸ್ ಠಾಣೆಗಳ ಸಿಬ್ಬಂದಿಯ ದಕ್ಷತೆ ಮತ್ತು ಪ್ರಾಮಾಣಿಕತೆಯನ್ನು ಅರಿಯದೆ KRS ಪಕ್ಷದ ಹಾಸನ ಜಿಲ್ಲೆಯ ಸೈನಿಕರು ಕಳೆದ ಶುಕ್ರವಾರದಂದು (12-08-2022) ಅವರ ಮೇಲೆಯೇ ದೂರು ದಾಖಲಿಸಲು ಅಲ್ಲಿಯ ನಗರ ಠಾಣೆಗೆ ಹೋಗಿದ್ದರು. ಆಗ ಆ ಪೊಲೀಸ್ ಠಾಣೆಗೆ ಬಂದ ಹೊಳೆನರಸೀಪುರದ ಸುಮಾರು ನಲವತ್ತು-ಐವತ್ತು ಜನರ ಗುಂಪು KRS ಪಕ್ಷದ ಮುಖಂಡರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡು, “ಇಲ್ಲಿಯ ಪೊಲೀಸರು ಬಹಳ ಪ್ರಾಮಾಣಿಕರು, ಅವರ ಮೇಲೆಯೇ ಹೇಗೆ ದೂರು ನೀಡುತ್ತೀರಿ? ಪೊಲೀಸರ ಮೇಲೆ ದೂರು ನೀಡಲು ನಿಮಗೇನಿದೆ ಅಧಿಕಾರ?” ಎಂದು ಪ್ರಶ್ನಿಸಿ, ಸಾಲದೆಂಬಂತೆ ಹಲವರನ್ನು ಎಳೆದಾಡಿ, ಹೊಡೆದು, ಎಲ್ಲೆಂದರಲ್ಲಿ ಗುದ್ದಿ ಸರಿಯಾಗಿಯೇ ಪಾಠ ಕಲಿಸಿದ್ದಾರೆ. ಅವರು ಈ ಮಟ್ಟಕ್ಕೆ ರೊಚ್ಚಿಗೇಳಬೇಕೆಂದರೆ ಅಲ್ಲಿರುವ ಪೊಲೀಸರು ಖಂಡಿತ ಪ್ರಾಮಾಣಿಕರು, ಜನಾನುರಾಗಿಗಳು, ದೈವಾಂಶಸಂಭೂತರೂ ಆಗಿರಲೇಬೇಕು. ಅವರನ್ನು ಪೊಲೀಸರೇ ಕರೆಸಿ KRS ಪಕ್ಷದವರ ಮೇಲೆ ಹಲ್ಲೆ ಮಾಡಿಸಿದ್ದಾರೆ ಎನ್ನುವುದು ಸಂಪೂರ್ಣ ಸುಳ್ಳು ಮತ್ತು ಅಪಪ್ರಚಾರ. ಇಂತಹ ದೈವಾಂಶಸಂಭೂತರ ವಿರುದ್ಧ ಮಾಡುವ ಆರೋಪ ದೈವನಿಂದೆಗೆ ಸಮ. Blasphemy.
ಹಾಗಾಗಿ, ಇದೇ ಗುರುವಾರದಂದು (18-08-2022) KRS ಪಕ್ಷದ ವತಿಯಿಂದ “ಹೊಳೆನರಸೀಪುರ ಚಲೋ” ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಅಂದು ಅಲ್ಲಿಯ ಪೊಲೀಸ್ ಠಾಣೆಗೆ ಹೋಗಿ, ಅಲ್ಲಿಯ ಪೊಲೀಸರಿಗೆ ಕೈಮುಗಿದು, ಅವರ ಕ್ಷಮೆ ಯಾಚಿಸಿ, ಅವರಿಗೆ ಶಾಲು ಹೊದೆಸಿ, ಮಾಲಾರ್ಪಣೆಯ ಜೊತೆಗೆ ಸಾಷ್ಟಾಂಗ ನಮಸ್ಕಾರವನ್ನೂ ಮಾಡಿ, ಅವರಿಗೆ ಗೌರವ ಸಲ್ಲಿಸಿ ಬರುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ.
ಈ ಹಿಂದೆ ಪೊಲೀಸರ ಪರವಾಗಿ ಬಂದು KRS ಪಕ್ಷದ ಸೈನಿಕರಿಗೆ ಪಾಠ ಕಲಿಸಿದ್ದ ವ್ಯಕ್ತಿಗಳೂ ನಮ್ಮ ಈ ಶಾಂತಿಯುತ ತಪ್ಪೊಪ್ಪಿಗೆ ಕಾರ್ಯಕ್ರಮಕ್ಕೆ ಸಹಕರಿಸಿ ಬೆಂಬಲಿಸಬೇಕು ಎಂದು ಈ ಮೂಲಕ ಕೋರಿದ್ದಾರೆ.
ಅದರ ಜೊತೆಗೆ, ಹೊಳೆನರಸೀಪುರ ಪೊಲೀಸ್ ಠಾಣೆಯ ಬಳಿಯೇ ಇರುವ ಗಾಂಧಿ ವೃತ್ತದಲ್ಲಿ ಮಹಾತ್ಮ ಗಾಂಧೀಜಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಸಾರ್ವಜನಿಕವಾಗಿ ಅಲ್ಲಿಯ ಪೊಲೀಸರ ಕರ್ತವ್ಯನಿಷ್ಠೆ, ದಕ್ಷತೆ, ಪ್ರಾಮಾಣಿಕತೆಗಳನ್ನು ಕೊಂಡಾಡುವ ಬಹಿರಂಗ ಸಭೆಯೂ ಇರುತ್ತದೆ. ಕಾರ್ಯಕ್ರಮವು ಮಧ್ಯಾಹ್ನ 12 ಗಂಟೆಗೆ ಆರಂಭವಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.
ಯಾವುದ್ಯಾವುದೋ ದುರುದ್ದೇಶದಿಂದ ಅಲ್ಲಿಯ ಪ್ರಾಮಾಣಿಕ ಮತ್ತು ದೈವಾಂಶಸಂಭೂತ ಪೊಲೀಸರ ವಿರುದ್ಧ ಇರುವ ಸಮಾಜಘಾತುಕ ಶಕ್ತಿಗಳು ನಮ್ಮ ಈ ಕಾರ್ಯಕ್ರಮಕ್ಕೆ ಅಡ್ಡಿಪಡಿಸದಂತೆ ಅದೇ ಠಾಣೆಯ ದಕ್ಷ ಪೊಲೀಸರು ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನೋಡಿಕೊಳ್ಳುತ್ತಾರೆ ಎನ್ನುವ ನಂಬಿಕೆ ನಮ್ಮದು. ಅವರಿಗೆ ಸನ್ಮಾನ ಮಾಡಲು ಆಯೋಜಿಸಿರುವ ಈ ಕಾರ್ಯಕ್ರಮದ ಸಂದರ್ಭದಲ್ಲಿಯೇ ಆ ಪೊಲೀಸರಿಗೆ ಅನಿವಾರ್ಯವಾಗಿ ಕೊಡುತ್ತಿರುವ ಈ ಹೆಚ್ಚುವರಿ ಕೆಲಸಕ್ಕಾಗಿ KRS ಪಕ್ಷವು ಅತೀವ ದುಃಖದಿಂದ ವಿಷಾದ ವ್ಯಕ್ತಡಿಸುತ್ತದೆ ಎಂದು ವ್ಯಂಗ್ಯವಾಗಿ ಪ್ರತಿಕ್ರಿಯಿಸಿದ್ದಾರೆ.
ಎಂದಿನಂತೆ KRS ಪಕ್ಷದ ಸೈನಿಕರು ಶಿಸ್ತು ಮತ್ತು ಸಂಯಮದಿಂದ ನಡೆದುಕೊಳ್ಳುತ್ತಾರೆ, ಯಾವುದೇ ಸಂದರ್ಭದಲ್ಲಿ ಅವಾಚ್ಯ ಶಬ್ದಗಳನ್ನು ಬಳಸುವುದಿಲ್ಲ, ಮತ್ತು ಯಾರ ಮೇಲೆಯೂ ದೈಹಿಕ ಹಲ್ಲೆ ಮಾಡುವುದಿಲ್ಲ ಎನ್ನುವ ಖಾತ್ರಿಯನ್ನು ಪೊಲೀಸರಿಗೆ ಪಕ್ಷ ನೀಡುತ್ತದೆ. ಅದು ಈಗಾಗಲೇ ಅಲ್ಲಿಯ ಪೊಲೀಸರಿಗೆ ಮನವರಿಕೆ ಆಗಿದೆ ಎನ್ನುವುದು ನೆಮ್ಮದಿಯ ಸಂಗತಿ. ಏನೇ ಆಗಲಿ, ಒಳ್ಳೆಯದನ್ನೇ ಮಾಡಿ; ಮಾಡುತ್ತಲೇ ಇರಿ ಎಂದು ಅವರು ಮನವಿ ಮಾಡಿದ್ದಾರೆ.




