ಬೆಂಗಳೂರು: ಕಾರ್ಯಕರ್ತರಾದಿಯಾಗಿ ರಾಜ್ಯ ಬಿಜೆಪಿಯ ಸರ್ವ ಸದಸ್ಯರಿಗೂ ಇದು ಸಿಹಿ ಸುದ್ದಿ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಹೇಳಿದ್ದಾರೆ.
ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಹಾಗು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರನ್ನು ಬಿಜೆಪಿಯ ಬಿಜೆಪಿ ಸಂಸದೀಯ ಮಂಡಳಿ ಮತ್ತು ಚುನಾವಣಾ ಸಮಿತಿಗೆ ನೇಮಿಸಲಾಗಿದೆ. ಈ ಹಿನ್ನೆಲೆಯಲ್ಲಿ ಸಂತಸ ಹಂಚಿಕೊಂಡಿರುವ ಅಶ್ವತ್ಥ ನಾರಾಯಣ, ಭಾರತೀಯ ಜನತಾ ಪಕ್ಷದ ರಾಷ್ಟ್ರಾಧ್ಯಕ್ಷರಾದ ಜೆ.ಪಿ. ನಡ್ಡಾ ಅವರು ಬಿಜೆಪಿ ಸಂಸದೀಯ ಮಂಡಳಿ ಮತ್ತು ಚುನಾವಣಾ ಸಮಿತಿಗೆ ನಿಕಟಪೂರ್ವ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ ಅವರು ಹಾಗೂ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಾದ ಬಿ.ಎಲ್. ಸಂತೋಷ್ ಅವರನ್ನು ಆಯ್ಕೆ ಮಾಡಿರುವುದು ಪಕ್ಷದ ಕಾರ್ಯಕರ್ತರಾದಿಯಾಗಿ ಎಲ್ಲರಿಗೂ ಅತ್ಯಂತ ಸಂತೋಷದ ಜತೆ ಹೊಸ ಭರವಸೆಯನ್ನು ಮೂಡಿಸಿದೆ ಎಂದಿದ್ದಾರೆ.
ರಾಜ್ಯದಲ್ಲಿ ತಳಮಟ್ಟದಿಂದಲೇ ಪಕ್ಷವನ್ನು ಕಟ್ಟಿ ಬೆಳೆಸುವಲ್ಲಿ ತಮ್ಮ ಜೀವನವನ್ನೇ ಮುಡಿಪಾಗಿಡುವ ಜತೆ ರಾಜ್ಯದ ಜನತೆಯ ನಾಡಿ ಮಿಡಿತವನ್ನು ಅತ್ಯಂತ ಹತ್ತಿರದಿಂದ ಬಲ್ಲ ಹಿರಿಯ ನಾಯಕರಾದ ಬಿ.ಎಸ್.ಯಡಿಯೂರಪ್ಪ ಅವರ ಅಪಾರ ಅನುಭವ ಹಾಗೂ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಪಕ್ಷ ಸಂಘಟನೆಯ ಜತೆ ಯುವಜನತೆಯಲ್ಲಿ ದೇಶಾಭಿಮಾನದ ಕಿಚ್ಚು ಹೊತ್ತಿಸುವ ನಾಯಕತ್ವ ಗುಣ ಹೊಂದಿರುವ ಬಿ.ಎಲ್. ಸಂತೋಷ್ ಅವರ ದೂರದೃಷ್ಟಿತ್ವದ ಜುಗಲ್ ಬಂದಿ ಕರ್ನಾಟಕದಲ್ಲಿ ಮತ್ತೊಮ್ಮೆ ಕಮಲ ಅರಳಿಸಲು ಕಾರ್ಯಕರ್ತರಲ್ಲಿ ಹೊಸ ಚೈತನ್ಯ ತುಂಬುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.
ನನ್ನ ರಾಜಕೀಯ ಮಾರ್ಗದರ್ಶಕರು ಪಕ್ಷದ ಅತ್ಯಂತ ಪ್ರಮುಖ ಹುದ್ದೆ ಅಲಂಕರಿಸಿರುವುದು ವೈಯಕ್ತಿಕವಾಗಿ ನನಗೆ ಅತೀವ ಸಂತಸವಾಗಿದೆ. ಇನ್ನೂ ಹೆಚ್ಚಿನ ಮಾರ್ಗದರ್ಶನ ಹಾಗೂ ಸಲಹೆ, ಸೂಚನೆಗಳ ಮೂಲಕ ಪಕ್ಷ ಸಂಘಟನೆ ಹಾಗೂ ಬಲವರ್ಧನೆಗೆ ಇನ್ನಷ್ಟು ವೇಗ ಸಿಗಲಿದೆ ಎಂಬ ಭರವಸೆಯಿದೆ ಎಂದಿದ್ದಾರೆ.
ಅಭಿವೃದ್ಧಿಪರ ಆಡಳಿತ, ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವ ಹಾಗೂ ಮಾರ್ಗದರ್ಶನದ ಜತೆ ಎಲ್ಲಾ ಹಿರಿಯ ನಾಯಕರ ನೇತೃತ್ವದ ಮೂಲಕ ಕರ್ನಾಟಕದಲ್ಲಿ ಭಾರತೀಯ ಜನತಾ ಪಕ್ಷ ಮತ್ತೊಮ್ಮೆ ಅಧಿಕಾರಕ್ಕೇರುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದಿದ್ದಾರೆ.




