ಬೆಂಗಳೂರು: ರಾಜ್ಯ ಕಾಂಗ್ರೆಸ್ಸಿನಲ್ಲಿ ನಡೆಯುತ್ತಿರುವ ವಿದ್ಯಮಾನಗಳು ಕುತೂಹಲ ಮೂಡಿಸಿದ್ದು, ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ನೂತನ ಸಾರಥಿ ನೇಮಕ ಮಾಡಬೇಕು ಎಂಬ ಆಗ್ರಹ ಕೇಳಿಬಂದಿದೆ.
- ದೇಶದ ರಾಜ್ಯಗಳಲ್ಲಿ ಕೊನೆಯ ಬಾರಿ ಕಾಂಗ್ರೆಸ್ ಸಿಎಂ ಇದ್ದದ್ದು ಯಾವಾಗ?
- ನಮ್ಮ ತಲೆಮಾರಿನ ರಾಜಕಾರಣಿಗಳು, ಭವಿಷ್ಯದ ಯುವ ನಾಯಕರಿಗೆ ಸಿದ್ದರಾಮಯ್ಯ ಸ್ಫೂರ್ತಿ: ಪ್ರಿಯಾಂಕ್ ಖರ್ಗೆ
- ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಸಿದ್ದರಾಮಯ್ಯ ಹೇಳಿದ್ದೇನು?
- ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ: ಯಾರು, ಏನೆಂದರು?
- ಹಣಕಾಸು ಮಂತ್ರಿಗಳಾಗಿ ಸಿದ್ದರಾಮಯ್ಯ ಸಾಧಿಸಿದ ಆರ್ಥಿಕ ಶಿಸ್ತು ಒಂದು ಪಠ್ಯದಂತಿದೆ: ಬಿ ಶ್ರೀಪಾದ ಭಟ್
ಬೆಳಗಾವಿಯಲ್ಲಿ ನಡೆಯುತ್ತಿರುವ ಜೈ ಬಾಪು, ಜೈ ಸಂವಿಧಾನ ಸಮಾವೇಶ ಮುಗಿಯುತ್ತಿದ್ದಂತೆ ಕೆಪಿಸಿಸಿ ಅಧ್ಯಕ್ಷರ ಸ್ಥಾನ ಕೂಡ ಬದಲಾಗಲಿದೆ ಎಂದು ಪಕ್ಷದ ಮೂಲಗಳಿಂದ ತಿಳಿದುಬಂದಿದೆ.
ಡಿಸಿಎಂ ಡಿ ಕೆ ಶಿವಕುಮಾರ್ ಸುದೀರ್ಘ ಅವಧಿಯಿಂದ ಕೆಪಿಸಿಸಿ ಅಧ್ಯಕ್ಷರಾಗಿದ್ದು, ಅವರ ಸ್ಥಾನಕ್ಕೆ ಹೊಸಬರ ನೇಮಕ ಕುರಿತು ಚರ್ಚೆ ಬಿರುಸಾಗಿದೆ.
ಸದ್ಯದಲ್ಲಿ ನೆನೆಗುದಿಗೆ ಬಿದ್ದಿರುವ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆಗಳು ನಡೆಯಲಿದ್ದು, ಅದಕ್ಕೆ ಮೊದಲೇ ಕೆಪಿಸಿಸಿಗೆ ನೂತನ ಅಧ್ಯಕ್ಷರನ್ನು ನೇಮಕ ಮಾಡಿ ಪಕ್ಷವನ್ನು ಚುನಾವಣೆಗೆ ಸಜ್ಜುಗೊಳಿಸಬೇಕು ಎಂದು ಕಾಂಗ್ರೆಸ್ ಹೈಕಮಾಂಡ್ ಚಿಂತನೆ ನಡೆಸಿದೆ.
ಈ ಬಾರಿ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಸ್ಥಾನವನ್ನು ಉತ್ತರ ಕರ್ನಾಟಕಕ್ಕೆ ಸೇರಿದ ಪ್ರಭಾವಿ ಲಿಂಗಾಯತ ಸಮುದಾಯಕ್ಕೆ ನೀಡಬೇಕು ಎಂದು ಹೈಕಮಾಂಡ್ ಚಿಂತನೆ ನಡೆಸಿದ್ದು, ಇದಕ್ಕಾಗಿ ಸಚಿವರಾದ ಎಂ.ಬಿ. ಪಾಟೀಲ್, ಈಶ್ವರ ಖಂಡ್ರೆ ಮತ್ತು ಮಾಜಿ ಸಚಿವ ಅಪ್ಪಾಜಿ ನಾಡಗೌಡ ಅವರ ಹೆಸರುಗಳು ಪ್ರಮುಖವಾಗಿ ಕೇಳಿಬರುತ್ತಿವೆ.
ಹೈಕಮಾಂಡ್ ಸೂಚನೆ ಮೇರೆಗೆ ಸಿಎಂ ಸಿದ್ದರಾಮಯ್ಯ ಅವರು ಈಗಾಗಲೇ ನೂತನ ಕೆಪಿಸಿಸಿ ಅಧ್ಯಕ್ಷರ ನೇಮಕ ಕುರಿತು ತಮ್ಮ ಡಿ ಕೆ ಶಿವಕುಮಾರ್ ಮತ್ತು ತಮ್ಮ ಆಪ್ತರೊಂದಿಗೆ ಸಮಾಲೋಚನೆ ನಡೆಸಿದ್ದಾರೆ. ಈ ವೇಳೆ ಈಶ್ವರ ಖಂಡ್ರೆ ಮತ್ತು ಎಂ ಬಿ ಪಾಟೀಲ್ ಪರವಾಗಿ ಹೆಚ್ಚಿನ ಒಲವು ವ್ಯಕ್ತವಾಗಿದೆ. ಆದರೆ ಈ ಇಬ್ಬರು ಕೆಪಿಸಿಸಿ ಅಧ್ಯಕ್ಷ ಸ್ಥಾನದ ಜೊತೆಗೆ ಮಂತ್ರಿ ಸ್ಥಾನವನ್ನು ನಿಭಾಯಿಸುವುದಾಗಿ ಹೇಳುತ್ತಿದ್ದಾರೆ.
ಆದರೆ, ಹೈಕಮಾಂಡ್ ಪಕ್ಷದಲ್ಲಿ ಒಬ್ಬರಿಗೆ ಒಂದೇ ಹುದ್ದೆ ಎಂಬ ತತ್ವವನ್ನು ಕಟ್ಟುನಿಟ್ಟಾಗಿ ಪಾಲಿಸಲು ಮುಂದಾಗಿರುವ ಹಿನ್ನೆಲೆಯಲ್ಲಿ ಈ ಇಬ್ಬರಲ್ಲಿ ಯಾರಾದರೂ ಅಧ್ಯಕ್ಷ ಸ್ಥಾನ ಒಪ್ಪಿಕೊಂಡಲ್ಲಿ ಅವರು ಮಂತ್ರಿ ಸ್ಥಾನ ತೊರೆಯಬೇಕಾಗುತ್ತದೆ ಎಂದು ಸ್ಪಷ್ಟವಾಗಿ ಹೇಳಿದೆ. ಆದರೆ ಇಬ್ಬರೂ ಅದಕ್ಕೆ ಸಿದ್ದರಿಲ್ಲ ಎಂದು ಹೇಳಲಾಗಿದೆ.
ಹೀಗಾಗಿ ಸದ್ಯ ಕರ್ನಾಟಕ ಸೋಪು ಮತ್ತು ಡಿಟರ್ಜೆಂಟ್ ಕಾರ್ಖಾನೆ ಅಧ್ಯಕ್ಷ ಅಪ್ಪಾಜಿ ನಾಡಗೌಡ ಅವರನ್ನು ಈ ಸ್ಥಾನಕ್ಕೆ ನೇಮಕ ಮಾಡಲು ಸಿದ್ದರಾಮಯ್ಯ ಒಲವು ಹೊಂದಿದ್ದಾರೆ ಎಂದು ಉನ್ನತ ಮೂಲಗಳಿಂದ ತಿಳಿದುಬಂದಿದೆ.
ಕಿತ್ತೂರು ಕರ್ನಾಟಕ ಪ್ರದೇಶಕ್ಕೆ ಸೇರಿರುವ ಅಪ್ಪಾಜಿ ನಾಡಗೌಡ ಅವರು ಅತ್ಯಂತ ಹಿರಿಯರಾಗಿದ್ದಾರೆ. ಮಾಜಿ ಮಂತ್ರಿಯು ಆಗಿದ್ದು ಮೆಕಾನಿಕಲ್ ಇಂಜಿನಿಯರ್ ಪದವೀಧರನಾಗಿದ್ದಾರೆ. ಪಕ್ಷದಲ್ಲಿ ಹಲವು ಹುದ್ದೆಗಳನ್ನು ನಿಭಾಯಿಸಿರುವ ಇವರನ್ನು ಪಕ್ಷದ ನೂತನ ಸಾರಥಿ ಯನ್ನಾಗಿ ನೇಮಕ ಮಾಡಿದರೆ ಉತ್ತಮ ಎಂಬ ಸಂದೇಶವನ್ನು ಹೈಕಮಾಂಡ್ ಗೆ ರವಾನಿಸಿರುವುದಾಗಿ ಗೊತ್ತಾಗಿದೆ.
ಈ ನಡುವೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ನಾಯಕ ರಣದೀಪ್ ಸಿಂಗ್ ಸುರ್ಜೇವಾಲ ಅವರನ್ನು ಭೇಟಿ ಮಾಡಿರುವ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಕೆಪಿಸಿಸಿಗೆ ಪೂರ್ಣಾವಧಿ ಅಧ್ಯಕ್ಷರನ್ನು ನೇಮಕ ಮಾಡುವಂತೆ ಆಗ್ರಹಿಸಿದ್ದಾರೆ.
ಬೆಂಗಳೂರಿನಲ್ಲಿ ಕಳೆದ ಸೋಮವಾರ ನಡೆದ ಕಾಂಗ್ರೆಸ್ ಶಾಸಕಾಂಗ ಸಭೆಯ ನಂತರ ಸುರ್ಜೇವಾಲ ಅವರನ್ನು ಭೇಟಿ ಮಾಡಿ, ಪಕ್ಷದ ರಾಜ್ಯ ಘಟಕದಲ್ಲಿ ನಡೆಯುತ್ತಿರುವ ವಿದ್ಯಮಾನಗಳ ಬಗ್ಗೆ ಮಾಹಿತಿ ನೀಡಿದ್ದೇನೆ ಎಂದು ಸುದ್ದಿಗಾರರಿಗೆ ತಿಳಿಸಿದರು.
ಈ ವೇಳೆ ಮುಂಬರುವ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆಯ ವಿಷಯವನ್ನು ಪ್ರಸ್ತಾಪಿಸಿದ್ದು, ಪಕ್ಷಕ್ಕೆ ಮತ ತರುವ ಸಾಮರ್ಥ್ಯ ಇರುವವರಿಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ನೀಡಬೇಕೆಂದು ಹೇಳಿದ್ದೇನೆ. ಯಾರನ್ನೇ ಮಾಡಿದರು ಪಕ್ಷ ಸಂಘಟಿಸುವ, ಮತ ತರುವ ಸಾಮರ್ಥ್ಯ ಇರುವವರಿಗೆ ಹುದ್ದೆ ಕೊಡಬೇಕು. ಈ ಬಗ್ಗೆಯೂ ಉಸ್ತುವಾರಿ ಅವರಿಗೆ ವಿವರಿಸಿದ್ದೇನೆ ಎಂದರು.
ಆದಷ್ಟು ಬೇಗ ಹೊಸ ಅಧ್ಯಕ್ಷರ ನೇಮಕ ಮಾಡಬೇಕು ಎಂದೂ ರಣದೀಪ್ ಸಿಂಗ್ ಸುರ್ಜೇವಾಲಾ ಅವರಿಗೆ ಹೇಳಿದ್ದೇನೆ. ಹಾಲಿ ಅಧ್ಯಕ್ಷರನ್ನೇ ಮುಂದುವರಿಸುವುದಾದರೆ ಅದನ್ನೂ ಸ್ಪಷ್ಟಪಡಿಸಿ ಎಂದೂ ಹೇಳಿರುವುದಾಗಿ ತಿಳಿಸಿದರು.
ನಮಗೆ ಪೂರ್ಣ ಪ್ರಮಾಣದ ಅಧ್ಯಕ್ಷರು ಬೇಕು. ಮತ ತರುವವರನ್ನು ಜನಪ್ರಿಯತೆ ಇರುವವರನ್ನು ಅಧ್ಯಕ್ಷ ಮಾಡಿ ಎಂದಿದ್ದೇನೆ. ಅಧ್ಯಕ್ಷರಾಗಿ ಡಿ.ಕೆ ಶಿವಕುಮಾರ್ ಇರಬೇಕೇ ಬೇಡವೇ ಎಂಬ ಬಗ್ಗೆ ಗೊಂದಲಗಳಿವೆ. ಹೀಗಾಗಿ ಎಲ್ಲ ಗೊಂದಲಗಳಿಗೆ ಇತಿ ಶ್ರೀ ಹಾಡುವಂತೆ ಸುರ್ಜೆವಾಲಾಗೆ ಹೇಳಿದ್ದೇನೆ. ಡಿ ಕೆ ಶಿವಕುಮಾರ್ ಅವರನ್ನು ಮುಂದುವರಿಸುವುದು ಹೈಕಮಾಂಡ್ ಗೆ ಬಿಟ್ಟಿದ್ದು ಎಂದರು.
ತಾವು ಕೆಪಿಸಿಸಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಲ್ಲ. ಈ ಹುದ್ದೆಗಾಗಿ ತಾವು ಲಾಬಿ ಮಾಡುತ್ತಿಲ್ಲ. ಆದರೆ ಈ ಹಿಂದೆ ಹೈಕಮಾಂಡ್ ಲೋಕಸಭೆ ಚುನಾವಣೆ ಮುಗಿಯುವವರೆಗೆ ಶಿವಕುಮಾರ್ ಅವರನ್ನೇ ಅಧ್ಯಕ್ಷರನ್ನಾಗಿ ಮುಂದುವರಿಸುವುದಾಗಿ ತಿಳಿಸಿತ್ತು. ಇದೀಗ ಲೋಕಸಭಾ ಚುನಾವಣೆ ಮುಗಿದು ಆರು ತಿಂಗಳು ಕಳೆದಿವೆ. ಇನ್ನೂ ಈ ಬಗ್ಗೆ ಯಾವುದೇ ತೀರ್ಮಾನ ಕೈಗೊಂಡಿಲ್ಲ. ಹೀಗಾಗಿ ಆದಷ್ಟು ಬೇಗ ತೀರ್ಮಾನ ಪ್ರಕಟಿಸುವ ಮೂಲಕ ಗೊಂದಲ ಬಗೆಹರಿಸುವಂತೆ ಹೇಳಿದ್ದೇನೆ ಎಂದರು.




