ಮೈಸೂರು: ಎಲ್ಲಾ ಸರ್ಕಾರಗಳ ಅವಧಿಯಲ್ಲಿ ನಿರ್ಲಕ್ಷ್ಯಕ್ಕೆ ಒಳಗಾಗಿರುವ ಕೊಡಗಿನ ಗಡಿ ಗ್ರಾಮ ಕೊಡ್ಲಿಪೇಟೆಯ ಪೋಲೀಸರ ಸಮಸ್ಯೆ ಮತ್ತು ಉಪ ಠಾಣೆಗೆ ಕಾಯಕಲ್ಪ ನೀಡಲು ಸ್ಥಳೀಯ ಶಾಸಕರಾದ @GowdaMantar ರವರು ಬಜೆಟ್ ಅಧಿವೇಶನದಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿ @DrParameshwara ಮತ್ತು ಸರ್ಕಾರದ ಗಮನ ಸೆಳೆಯಬೇಕು ಎಂದು SDPI ನಾಯಕ ಅಪ್ಸರ್ ಕೊಡ್ಲಿಪೇಟೆ ಆಗ್ರಹಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಒತ್ತಾಯ ಮಾಡಿರುವ ಅವರು, @HMOKarnataka @DrParameshwara @DgpKarnataka @KodaguSp ಟ್ಯಾಗ್ ಮಾಡಿ ಪೋಸ್ಟ್ ಮಾಡಿದ್ದಾರೆ.
ಕೊಡಗು ಜಿಲ್ಲೆಯ ಗಡಿ ಭಾಗದಲ್ಲಿರುವ #ಕೊಡ್ಲಿಪೇಟೆ ಉಪ ಪೊಲೀಸ್ ಠಾಣೆಯನ್ನು ಮೇಲ್ದರ್ಜೇಗೇರಿಸದೆ, ವಸತಿ ಗೃಹಗಳನ್ನೂ ನಿರ್ಮಿಸದೆ ಇರುವುದರಿಂದ ಠಾಣೆಯ ಸಿಬ್ಬಂದಿ ಅತಂತ್ರ ಸ್ಥಿತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
#ಶನಿವಾರಸಂತೆ ಪೊಲೀಸ್ ಠಾಣೆ ಸರಹದ್ದಿನಲ್ಲಿರುವ ಕೊಡ್ಲಿಪೇಟೆ ಉಪ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 40ಕ್ಕೂ ಹೆಚ್ಚಿನ ಗ್ರಾಮಗಳಿವೆ. 130 ವರ್ಷದ ಹಿಂದಿನ ಚಿಕ್ಕ ಕಟ್ಟಡವೊಂದರಲ್ಲಿ ಠಾಣಿ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿದ್ದಾರೆ.
#ಕೊಡಗು_ಹಾಸನ ಗಡಿಭಾಗದಲ್ಲಿರುವ ಕೊಡ್ಲಿಪೇಟೆ ಉಪ ಠಾಣೆಯಲ್ಲಿ ಇದೀಗ ಒಬ್ಬರು ಹೆಡ್ ಕಾನ್‌ಸ್ಟೆಬಲ್ ಹಾಗೂ ಮೂವರು ಕಾನ್‌ಸ್ಟೆಬಲ್‌ಗಳು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಆದರೆ ಇಲ್ಲಿಯ ತನಕ ಅಧಿಕಾರಕ್ಕೆ ಬಂದ ಯಾವುದೇ ಸರ್ಕಾರವೂ ಇಲ್ಲಿಗೆ ಬೇಕಾಗಿರುವ ಸೌಲಭ್ಯಗಳನ್ನು ಕಲ್ಪಿಸಿಲ್ಲ. ಮೇಲ್ದರ್ಜೆಗೇರಿಸಲೂ ಮುಂದಾಗಿಲ್ಲ ಎಂದಿದ್ದಾರೆ.
ಠಾಣೆಯ ಸಮೀಪದ ನಿರ್ಜನ ಸ್ಥಳದಲ್ಲಿ 40 ವರ್ಷಗಳ ಹಿಂದೆಯೇ ಸಿಬ್ಬಂದಿಗೆ ವಸತಿಗೃಹಗಳನ್ನು ನಿರ್ಮಿಸಲಾಗಿತ್ತು. ಆದರೆ ಪೊಲೀಸರು ಈ ವಸತಿಗೃಹದಲ್ಲಿ ಹೆಚ್ಚು ದಿನ ಇರುತ್ತಿರಲಿಲ್ಲ. ಇದೀಗ ವಸತಿಗೃಹಗಳು ಸಂಪೂರ್ಣವಾಗಿ ಕುಸಿದು ಹೋಗಿದೆ. ವಸತಿಗೃಹದ ಸುತ್ತ ಕಾಡು ಬೆಳೆದಿದೆ. ಇದರಿಂದ ಸಿಬ್ಬಂದಿ ಬಾಡಿಗೆ ಮನೆಗಳಲ್ಲಿ ವಾಸ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.
45 ವರ್ಷಗಳ ಹಿಂದೆ ಸಬ್ ಇನ್ಸ್‌ಪೆಕ್ಟರ್‌ಗಳಿಗೆ ಪ್ರತ್ಯೇಕವಾದ ವಸತಿಗೃಹವೊಂದನ್ನು ನಿರ್ಮಿಸಿದ್ದರೂ ಇಲ್ಲಿತನಕ ಯಾರು ಕೂಡ ವಾಸ ಮಾಡಿಲ್ಲ. ಪರಿಣಾಮ ಕಟ್ಟಡದ ಹೆಂಚು, ಕಿಟಿಕಿ ಬಾಗಿಲು ಕಂಡವರ ಪಾಲಾಗಿದೆ. ಗೋಡೆ ನೆಲಕ್ಕುರುಳಿದೆ. ಉಪ ಪೊಲೀಸ್ ಠಾಣಿ ಸುಮಾರು 4 ಎಕರೆಯಷ್ಟು ಜಾಗ ಹೊಂದಿದ್ದರೂ ಸರ್ಕಾರ ಇಲ್ಲಿಯ ತನಕ ಪೊಲೀಸ್‌ಠಾಣಿಗೆ ಪ್ರತ್ಯೇಕ ಕಟ್ಟಡ ಹಾಗೂ ಸಿಬ್ಬಂದಿಗೆ ವಸತಿ ಗೃಹ ನಿರ್ಮಿಸಿ ಕೊಡಲು ಮನಸ್ಸು ಮಾಡಿಲ್ಲ ಎಂದು ಹೇಳಿದ್ದಾರೆ.
ಕೊಡ್ಲಿಪೇಟೆ ಪೊಲೀಸ್ ಠಾಣೆಯನ್ನು ಮೇಲ್ದರ್ಜೆಗೇರಿಸುವಂತೆ ಸರ್ಕಾರಕ್ಕೆ ಮನವಿ ಮಾಡಲಾಗಿದ್ದರೂ ಪ್ರಯೋಜನವಾಗಿಲ್ಲ. ಶಿಥಿಲಗೊಂಡಿರುವ ಹಳೆಯ ಕಟ್ಟಡದಲ್ಲಿ ಪೊಲೀಸರು ಕರ್ತವ್ಯನಿರ್ವಹಿಸುತ್ತಿದ್ದಾರೆ ಎಂದಿದ್ದಾರೆ.
ಎಲ್ಲಾ ಸರ್ಕಾರಗಳ ಅವಧಿಯಲ್ಲಿ ನಿರ್ಲಕ್ಷ್ಯಕ್ಕೆ ಒಳಗಾಗಿರುವ ಗಡಿ ಗ್ರಾಮದ ಸಮಸ್ಯೆಗೆ ಸ್ಪಂದಿಸಿ ಸಮಸ್ಯೆ ಬಗೆಹರಿಸಲು ಸ್ಥಳೀಯ ಶಾಸಕರಾಗಿರುವ ಮಂಥರ್ ಗೌಡ ರವರು ಬಜೆಟ್ ಅಧಿವೇಶನದಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿ ಗೃಹಮಂತ್ರಿಗಳು ಮತ್ತು ಸರ್ಕಾರದ ಗಮನ ಸೆಳೆಯಬೇಕೆಂದು ಆಗ್ರಹಿಸಿದ್ದಾರೆ.
ಹತ್ತು ವರ್ಷದ ಹಿಂದೆ ಇಲ್ಲಿಗೆ ಡಿಜಿಪಿ ಭೇಟಿ ನೀಡಿದ್ದರು. ಆಗ ಸಾರ್ವಜನಿಕರು ಕೊಡ್ಲಿಪೇಟೆ ಪೊಲೀಸ್ ಠಾಣೆಯನ್ನು ಮೇಲ್ದರ್ಜೆಗೇರಿಸುವಂತೆ ಹಾಗೂ ಸಿಬ್ಬಂದಿ ವಸತಿ ಗೃಹ ನಿರ್ಮಾಣ ಸೇರಿದಂತೆ ಕೆಲವು ಬೇಡಿಕೆಗಳ ಕುರಿತು ಮನವಿ ಸಲ್ಲಿಸಿದ್ದರು. ಈ ಬಗ್ಗೆ ಭರವಸೆ ಯನ್ನೂ ನೀಡಲಾಗಿತ್ತು. ಆದರೆ ಅದು ಭರವಸೆಯಾಗೇ ಉಳಿದಿದೆ ಎಂದು ಹೇಳಿದ್ದಾರೆ.
ಈ ಠಾಣೆಯ ಸಿಬ್ಬಂದಿಗೆ ಬೇಕಾಗಿರುವ ವಸತಿಗೃಹದ ಅವಶ್ಯಕತೆ ಇದ್ದು, ಈ ಕುರಿತು ಸರ್ಕಾರಕ್ಕೆ ಮನವಿ ಕಳುಹಿಸಲಾಗಿದೆ. ಕೊಡ್ಲಿಪೇಟೆ ಉಪ ಠಾಣೆ ಹಾಸನ ಜಿಲ್ಲೆ ಗಡಿಭಾಗದಲ್ಲಿರುವುದರಿಂದ ಮೇಲ್ದರ್ಜೆಗೇರಿಸಬೇಕಾಗಿದೆ. ಮಹಿಳಾ ಪೊಲೀಸ್ ಸಿಬ್ಬಂದಿ ಅವಶ್ಯವಿದೆ. ಸರ್ಕಾರ ಈ ಉಪ ಪೊಲೀಸ್ ಠಾಣೆಯನ್ನು ಮೇಲ್ದರ್ಜೆಗೇರಿಸುವುದರ ಜತೆಯಲ್ಲಿ ಸಿಬ್ಬಂದಿಗೆ ವಸತಿಗೃಹ ನಿರ್ಮಿಸಿಕೊಟ್ಟರೆ ಈ ಭಾಗದ ಜನರಿಗೆ ಉಪಯೋಗವಾಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.



