ಬೆಂಗಳೂರು: ಕನ್ನಡದ ಮಹತ್ವದ ಕಾವ್ಯ ಮತ್ತು ನಾಟಕ ಕೃತಿಗಳನ್ನು ಅನುವಾದಿಸಿರುವ ಕೆ.ಎನ್.ವಿಜಯಲಕ್ಷ್ಮಿ ಅವರ ನೆನಪಿನ ನಾಟಕೋತ್ಸವ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭವನ್ನು ಸಂಸ ಥಿಯೇಟರ್ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಆಯೋಜಿಸಿದೆ. ಬೆಂಗಳೂರಿನ ನಯನ ಸಭಾಂಗಣದಲ್ಲಿ ದಿನಾಂಕ 28.06.2023ರಿಂದ 30.06.2023ರವರೆಗೆ ಕಾರ್ಯಕ್ರಮಗಳು ನಡೆಯಲಿವೆ.

ದಿನಾಂಕ: 28.06.2023 ಸಂಜೆ 6:30ಕ್ಕೆ
ಉದ್ಘಾಟನೆ:
ಕೃಷ್ಣಾ ಮನವಲ್ಲಿ, ಇಂಗ್ಲಿಷ್ ಪ್ರಾಧ್ಯಾಪಕರು, ಮೈಸೂರು ವಿಶ್ವವಿದ್ಯಾಲಯ
ಅತಿಥಿಗಳು:
ಡಾ. ಡಿ. ಡಾಮಿನಿಕ್, ಕುಲಸಚಿವರು, ಬೆಂಗಳೂರು ಉತ್ತರ ವಿಶ್ವವಿದ್ಯಾಲಯ
ಡಾ.ಕವನ ಕೆ ಎನ್, ಸಹಾಯಕ ನಿರ್ದೇಶಕರು, ವಾರ್ತಾ ಇಲಾಖೆ
ನಾಟಕ: ಬ್ಲಡ್ ವೆಡ್ಡಿಂಗ್
ತಂಡ: ರಂಗ ಶಾಲ
ಅನುವಾದ: ಕೆ.ಎನ್.ವಿಜಯಲಕ್ಷ್ಮಿ
ನಿರ್ದೇಶನ: ಡಾ.ಉದಯ್ ಸೋಸಲೆ

ದಿನಾಂಕ: 29.06.2023
ಅತಿಥಿಗಳು:
ಡಾ. ಪಿ. ಟಿ. ಶ್ರೀನಿವಾಸ ನಾಯಕ, ಪ್ರಾಂಶುಪಾಲರು, ಸರ್ಕಾರಿ ಕಲಾ ಕಾಲೇಜು, ಬೆಂಗಳೂರು
ಡಾ. ರುದ್ರೇಶ್ ಅದರಂಗಿ, ಸಂಚಾಲಕರು, ಕನ್ನಡ ಸಂಘ, ಸರ್ಕಾರಿ ಕಲಾ ಕಾಲೇಜು, ಬೆಂಗಳೂರು
ಚಂದನ ಕೆ. ಎನ್., ಉಪನ್ಯಾಸಕರು
ನಾಟಕ: ಚಮ್ಮಾರನ ಚಾಲೂಕಿ ಹೆಂಡ್ತಿ
ತಂಡ: ಕನ್ನಡ ಸಂಘ, ಸರ್ಕಾರಿ ಕಲಾ ಕಾಲೇಜು
ಅನುವಾದ: ಕೆ.ಎನ್.ವಿಜಯಲಕ್ಷ್ಮಿ
ನಿರ್ದೇಶನ: ಪ್ರದೀಪ್ ತಿಪಟೂರು

ದಿನಾಂಕ: 30.06.2023
ಸಮಾರೋಪ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭ
ಪ್ರಶಸ್ತಿ ಪ್ರದಾನ:
ಶೂದ್ರ ಶ್ರೀನಿವಾಸ್, ಸಂಸ್ಕೃತಿ ಚಿಂತಕರು
ಕೆ.ಎನ್.ವಿಜಯಲಕ್ಷ್ಮಿ ಅನುವಾದಕಿ – 2023 ಪ್ರಶಸ್ತಿ ಪುರಸ್ಕೃತರು:
ಡಾ.ಶಾಕೀರ ಖಾನಂ, ಅಧ್ಯಾಪಕರು, ಅಲ್ ಅಮಿನ್ ಕಾಲೇಜು, ಬೆಂಗಳೂರು
ಅತಿಥಿಗಳು:
ಪ್ರೊ. ದಂಡಪ್ಪ, ವಿಮರ್ಶಕರು
ಸಹನ ಕೆ ಎನ್, ಉಪನ್ಯಾಸಕರು
ಡಾ.ಪ್ರದೀಪ್ ಮಾಲ್ಗುಡಿ, ಸಂಶೋಧಕ
ವಿಜಯಲಕ್ಷ್ಮೀ ಕೆ.ಎನ್. (28.12.1948 -12.07.2002)
ಅನುವಾದ ಕ್ಷೇತ್ರದಲ್ಲಿ ಕೆಲಸ ಮಾಡುವವರ ಸಂಖ್ಯೆ ವಿರಳ. ಅದರಲ್ಲೂ ಅನುವಾದ ಕ್ಷೇತ್ರಕ್ಕೆ ಮಹಿಳೆಯರು ಕಾಲಿರಿಸುವುದು ಇನ್ನೂ ದುಸ್ತರ. ಇಂತಹ ಕ್ಲಿಷ್ಟಕರ ಕ್ಷೇತ್ರದಲ್ಲಿ ಮಹತ್ವದ ಅನುವಾದಗಳ ಮೂಲಕ ಕನ್ನಡ ಸಂವೇದನೆಯನ್ನು ವಿಸ್ತರಿಸುವ ಕೆಲಸವನ್ನು ವಿಜಯಲಕ್ಷ್ಮೀ ಕೆ.ಎನ್. ಅವರು ನೆರವೇರಿಸಿದ್ದಾರೆ. ಕನ್ನಡಕ್ಕೆ ಅಪರಿಚಿತವಾಗಿದ್ದ ಚೀನೀ ಜಾನಪದ, ನಾಟಕ, ಕತೆ ಮತ್ತು ಕಾವ್ಯಗಳನ್ನು ಅನುವಾದಿಸುವ ಮೂಲಕ ಪಾಶ್ಚಾತ್ಯ ಕಥನ ಮಾದರಿ, ರಂಗಪ್ರಯೋಗ ಮತ್ತು ಕಾವ್ಯದ ಝಲಕನ್ನು ತೋರಿದ್ದಾರೆ.
ಕ್ರಿಸ್ತ ಪೂರ್ವ ಕಾಲದ ಗ್ರೀಕ್ ಕವಯಿತ್ರಿ ಸ್ಯಾಫೋ ರಚಿಸಿರುವ ಕವಿತೆಗಳನ್ನು ‘ಸ್ಯಾಫೋ ಕಾವ್ಯ’ ಹೆಸರಿನಲ್ಲಿ ಕನ್ನಡಕ್ಕೆ ತಂದ ಕೀರ್ತಿ ಇವರಿಗೆ ಸಲ್ಲುತ್ತದೆ. ಲೆಸ್ಬಿಯನ್ ಆಗಿದ್ದ ಸ್ಯಾಫೋಳ ಕಾವ್ಯವನ್ನು ಅನುವಾದಿಸುವ ಮಹತ್ವದ ಕೆಲಸವನ್ನು ಅವರು ಯಶಸ್ವಿಯಾಗಿ ಮಾಡಿದರು. ಮಡಿವಂತಿಕೆಯ ಭಾರತೀಯ ಸಮಾಜದಲ್ಲಿ ಹೊಸ ಚಿಂತನೆಗಳ ಹರಿವಿಗೆ ಈ ಕೃತಿ ಕಾರಣವಾಗಿದೆ. ಈ ಸಂಕಲನದಲ್ಲಿರುವ ‘ಅಫ್ರೋದಿತೆ’ ಮತ್ತು ಇತರ ಕವಿತೆಗಳು ಮಹಿಳಾ ಸಂವೇದನೆಯ ಹೊಸತನಕ್ಕೆ ಉದಾಹರಣೆಯಾಗಿವೆ. ಅನುವಾದಕ್ಕೆ ಬೇಕಾದ ಭಾಷೆಯನ್ನು ಯಶಸ್ವಿಯಾಗಿ ದುಡಿಸಿಕೊಳ್ಳುವ ಕಲೆಗಾರಿಕೆ ಮತ್ತು ಭಾಷೆ ಮತ್ತು ಭಾವಗಳನ್ನು ವಿಶಿಷ್ಟವಾಗಿ ಬೆಸೆಯುವ ಸರಳ ಶೈಲಿಯಿಂದ ಈ ಸಂಕಲನದ ಕವಿತೆಗಳು ಓದುಗರನ್ನು ಆಕರ್ಷಿಸಿವೆ.
ಇನ್ನು ಅಮೆರಿಕದ ಕವಯಿತ್ರಿ, ಕಾದಂಬರಿಕಾರ್ತಿ ಮತ್ತು ಕತೆಗಾರ್ತಿ ಸಿಲ್ವಿಯಾ ಪ್ಲಾತ್ ಅವರ ಕೃತಿಗಳನ್ನು, ಮೆಕ್ಸಿಕಾದ ಕವಿ ಆಕ್ಟೇವಿಯಾ ಪಾಜ್ ಮತ್ತು ಸ್ಪೇನ್ ಕವಿ ಹಾಗು ನಾಟಕಕಾರ ಫೆಡ್ರಿಕೋ ಗಾರ್ಸಿಯಾ ಲೋರ್ಕಾನ ಮೂರು ಜಗತ್ಪಸಿದ್ಧ ನಾಟಕಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಬಲಪಂಥೀಯರ ಗುಂಪು ದಾಳಿಗೆ 38ರ ಹರೆಯದಲ್ಲೇ ಬಲಿಯಾದ ಲೋರ್ಕಾನ ಬರವಣಿಗೆಗಳಲ್ಲಿ ಜನಪದ, ನಗರದ ಬರಡುತನ, ಹಳ್ಳಿಗಾಡಿನ ಜೀವಂತಿಕೆ, ವಿವಿಧ ವರ್ಗಗಳ ಸೋಗಲಾಡಿತನ, ಬದುಕಲು ಪಡುವ ಜನರ ಬವಣೆಗಳನ್ನು ಗುರುತಿಸಬಹುದು. ಚೈನೀ, ಗ್ರೀಕ್ ಸೇರಿದಂತೆ ಜಾಗತಿಕ ಸಂದರ್ಭದ ಸಂವೇದನೆಗಳನ್ನು ಕನ್ನಡದ ಸಂವೇದನೆಗೆ ಒಗ್ಗುವ ಹದವರಿತ ಭಾಷೆಯಲ್ಲಿ ಅನುವಾದಿಸಿರುವ ವಿಜಯಲಕ್ಷ್ಮೀ ಅವರ ಕ್ರಮ ಈ ಕ್ಷೇತ್ರಕ್ಕೆ ಒಂದು ಅನುಪಮ ಉದಾಹರಣೆಯಾಗಿದೆ. ಇವರ ಹೆಸರಿನಲ್ಲಿ ಪ್ರತಿ ವರ್ಷ ಅನುವಾದ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿರುವ ಮಹಿಳೆಯರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ.

ಕೆ.ಎನ್.ವಿಜಯಲಕ್ಷ್ಮಿ ಅನುವಾದಕಿ – 2023 ಪ್ರಶಸ್ತಿ ಪುರಸ್ಕೃತ ಡಾ.ಶಾಕೀರಾ ಖಾನಂ ಪರಿಚಯ
ವೃತ್ತಿಯಲ್ಲಿ ಹಿಂದಿ ಅಧ್ಯಾಪಕಿಯಾಗಿರುವ ಡಾ.ಶಾಕೀರಾ ಖಾನಂ ಅವರು ಕನ್ನಡದಿಂದ ಹಿಂದಿ ಮತ್ತು ಹಿಂದಿಯಿಂದ ಕನ್ನಡಕ್ಕೆ ಮಹತ್ವದ ಕೃತಿಗಳನ್ನು ಅನುವಾದಿಸಿದ್ದಾರೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಬಲ ಭಾಷೆಗಳೆಂದು ಪರಿಗಣಿತವಾಗಿರುವ ಇಂಗ್ಲಿಷ್, ಲ್ಯಾಟಿನ್, ಗ್ರೀಕ್ ಫ್ರೆಂಚ್, ಜರ್ಮನ್, ಸ್ಪ್ಯಾನಿಷ್, ಇಟಾಲಿಯನ್, ಜಪಾನೀ, ಚೈನೀ ಮತ್ತಿತರ ಭಾಷೆಗಳಿಂದ ಕನ್ನಡಕ್ಕೆ ಅನೇಕ ಕೃತಿಗಳು ಅನುವಾದಿತವಾಗಿವೆ. ಅದರಂತೆಯೇ ಭಾರತೀಯ ಭಾಷೆಯಾಗಿರುವ ಹಿಂದಿಯಿಂದ ಕೂಡ ಅನುವಾದಗಳು ನಡೆದಿವೆ. ಇವುಗಳ ನಡುವೆ ಹಿಂದಿಯಿಂದ ಕನ್ನಡಕ್ಕೆ ಮತ್ತು ಕನ್ನಡದಿಂದ ಹಿಂದಿಗೆ ಅನುವಾದ ಕ್ಷೇತ್ರದಲ್ಲಿದ್ದ ಕೊರತೆಯನ್ನು ಡಾ.ಶಾಕೀರಾ ಖಾನಂ ಅವರು ತುಂಬಿದ್ದಾರೆ. ಅವರ ಇಡೀ ಅನುವಾದ ಕ್ಷೇತ್ರದ ಕೊಡುಗೆಯನ್ನು ಪರಿಗಣಿಸಿ, 2023ರ ಸಾಲಿನ ಕೆ.ಎನ್.ವಿಜಯಕ್ಷ್ಮಿ ಅನುವಾದಕಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತಿದೆ.
ಸ್ವತಂತ್ರ ಕೃತಿಗಳು: ನೀಷೆ ಕವನ ಸಂಕಲನ (ಕನ್ನಡ), ಮುಸ್ಲಿಂ ವೆಲ್ಲೂರಿ ಸ್ವಾತಂತ್ರ್ಯ ಹೋರಾಟಗಾರ (ಕನ್ನಡ), ಚಿತ್ರಲೇಖಾ
ಕನ್ನಡದಿಂದ ಹಿಂದಿಗೆ ಅನುವಾದ: ಸ್ವತಂತ್ರ ಸಂಗ್ರಾಮ್ ಮೇ ಮುಸ್ಲಿಂ ಮಹಿಳಾವೋಂಕಾ ಯೋಗದಾನ್, ಸರ್ ಸೈಯದ್ ಅಜ್ಮದ್ ಖಾನ್ ಏಕ್ ಚರಿತ್ರಾ ಚಿರನ್, ಔರಂಗಜೇಬ್ ಏಕ್ ನಾ ಆಲಿಚನಾ, ಮುಸ್ಲಿಂ ಸ್ವಾತಂತ್ರ್ಯ ಹೋರಾಟಗಾರರಿಗೆ ಗಾಂಧೀಜಿಯವರ ಪತ್ರ, ಹಿಂದೂ ಮುಸ್ಲಿಂ ಖುಮಿ ಏಕ್ತಾ
ಕುವೆಂಪು ಭಾಷಾ ಭಾರತಿ ಪ್ರಾಧಿಕಾರದಿಂದ ಪ್ರಕಟಿತ ಕೃತಿಗಳು: ಹಿಂದಿ ಕೆ ಲಘುಕಥಾ, ಹಿಂದಿ ಕೆ ನಿಬಂಧ್, ಹಿಂದಿ ಕೆ ಕಹಾನಿಯಾ




