ಬೆಂಗಳೂರು ನಿರ್ಮಾತೃ ನಾಡಪ್ರಭು ಕೆಂಪೇಗೌಡ ಪ್ರತಿಮೆ ಸ್ಥಾಪನೆಯ ಇತಿಹಾಸ

3 years ago

#History #Installation #Bangalore #Builder #Nadaprabhu #Kempegowda #Statue #gtnarendrakumar

ಬೆಂಗಳೂರು ನಿರ್ಮಾತೃ ನಾಡಪ್ರಭು ಕೆಂಪೇಗೌಡರ ಜಯಂತಿಯ ಶುಭಾಶಯಗಳು

ಕೆಂಪೇಗೌಡರ ಈ ಪ್ರತಿಮೆಯನ್ನು  ಪ್ರತಿಷ್ಠಾಪಿಸಿದ್ದು ಬೆಂಗಳೂರು ನಗರ ಸಭೆ. ಸಾಹಿತಿ ನಾಡೋಜ ಸ್ವಾತಂತ್ರ್ಯ ಹೋರಾಟಗಾರ ಜಿ ನಾರಾಯಣರು ಮೇಯರ್ ಆಗಿದ್ದ ಸಂದರ್ಭದಲ್ಲಿ.

ಕೆಂಪೇಗೌಡರ ಹೆಸರನ್ನು ಚಿರಸ್ಥಾಯಿಯಾಗಿ ಉಳಿಸಬೇಕು ಮತ್ತು ಅವನ ನಿತ್ಯ ಸ್ಮರಣೆಯಿಂದ ಈ ನಗರದ ಅಭ್ಯುದಯವನ್ನು ಸಾಧಿಸಲು, ಸ್ಫೂರ್ತಿ ಪಡೆಯಬೇಕು ಎಂಬ ಉದ್ದೇಶದಿಂದಲೇ ನಗರ ಕಾರ್ಪೊರೇಷನ್ ಅನೇಕ ಕಾರ್ಯಕ್ರಮಗಳನ್ನು ಹಾಕಿಕೊಂಡಿತ್ತು. ನಗರಸಭೆ ಮುಂದೆ ಸ್ಥಾಪಿಸಿರುವ ಕೆಂಪೇಗೌಡ ಪ್ರತಿಮೆಯ ಅನಾವರಣ ಕೂಡಾ ಅದರಲ್ಲಿ ಒಂದಾಗಿದೆ. ಮಹಾರಾಜರು ಇದನ್ನು ನೆರವೇರಿಸಿದ್ದು ಸಮಂಜಸವಾಗಿದೆ. ಮೇಯರ್ ಆಗಿದ್ದ ಜಿ ನಾರಾಯಣರವರ ಅಧ್ಯಕ್ಷತೆಯಲ್ಲಿ ಡಾಕ್ಟರ್ ಎಂ.ವಿ.ಕೃಷ್ಣ ರಾವ್ ಮಿಥಿಕ್ ಸೊಸೈಟಿ ಅಧ್ಯಕ್ಷರು, ಶಿವಮೂರ್ತಿಶಾಸ್ತ್ರಿ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷರು, ಎಚ್ ಕೆ ವೀರಣ್ಣಗೌಡ ಮಾಜಿ ಮಂತ್ರಿಗಳು, ಧರಣೇಂದ್ರಯ್ಯ ಸಾಹಿತ್ಯ ಮತ್ತು ಸಂಸ್ಕೃತಿ ಇಲಾಖೆ ವಿಶೇಷ ಅಧಿಕಾರಿ, ಟಿ ಎಂ ಮಲ್ಲಪ್ಪ ನಿವೃತ್ತ ಹೈಕೋರ್ಟ್ ನ್ಯಾಯಾಧೀಶರು, ಮೀರ್ ಇಕ್ಬಾಲ್ ಹುಸೇನ್ ಹೈಕೋರ್ಟ್ ನ್ಯಾಯಾಧೀಶರು, ರೆವರೆಂಡ್ ಫಾದರ್ ಬ್ರೂನೋ, ಶ್ರೀಮತಿ ಇಂದಿರಮ್ಮ ಮಾಜಿ ಮೇಯರ್ ಮತ್ತು ರೂಪ್ಲಾ ನಾಯಕ್ ನಗರಸಭೆ ಕಮಿಷನರ್ ಈ ರೀತಿಯಾಗಿದ್ದ ಹಿರಿಯರ ಸಮಿತಿ ಸತ್ಕಾರ್ಯವನ್ನು ನೆರವೇರಿಸಿತು.

ನಾಲ್ಕನೇ ಆಂಗ್ಲೋ-ಮೈಸೂರು ಯುದ್ಧವನ್ನು ಗೆದ್ದಿದ್ದ ಬ್ರಿಟಿಷರು ಯುದ್ಧ ಸ್ಮಾರಕವನ್ನು ನಿರ್ಮಿಸಿದ್ದರು. ಈ ಸ್ಮಾರಕವು ಬೆಂಗಳೂರು ನಗರ ಸಭೆಯ ಎದುರುಗಡೆಯೇ ಇದ್ದಿತು. ಸ್ವಾತಂತ್ರ್ಯ ಹೋರಾಟಗಾರರಾಗಿದ್ದ ಜಿ ನಾರಾಯಣರಿಗೆ ಇದು ಬೇಸರದ ಸಂಗತಿಯಾಗಿತ್ತು. ಯುದ್ಧ ಸ್ಮಾರಕ ಸ್ತಂಭವನ್ನು ತೆಗೆಸಿ ಅದೇ ಸ್ಥಳದಲ್ಲಿ ಬೆಂಗಳೂರು ನಿರ್ಮಾತೃ ಕೆಂಪೇಗೌಡರ ಪ್ರತಿಮೆಯನ್ನು ಕನ್ನಡ ರಾಜ್ಯೋತ್ಸವದಂದು ಸ್ಥಾಪಿಸಿರುತ್ತಾರೆ. 1/11/1964

ಮಿಥಿಕ್ ಸೊಸೈಟಿಯ ಅಧ್ಯಕ್ಷರು ಮತ್ತು ಖ್ಯಾತ ಇತಿಹಾಸ ತಜ್ಞರಾದ ಡಾ.ಕೃಷ್ಣರಾವ್ ಅವರಿಂದ ಕೆಂಪೇಗೌಡರ ಇತಿಹಾಸವನ್ನು ಬರೆಯಿಸಿ ನಗರಸಭೆಯಿಂದಲೇ ಪ್ರಕಟಿಸಿ ಪ್ರತಿಮೆಯ ಅನಾವರಣದ ದಿನದಂದೇ ಮುಖ್ಯಮಂತ್ರಿಗಳಾದ ನಿಜಲಿಂಗಪ್ಪನವರು ಮತ್ತು ಶ್ರೀ ಜಯಚಾಮರಾಜೇಂದ್ರ ಒಡೆಯರ್ ಅವರ ಸಮ್ಮುಖದಲ್ಲಿ ಬಿಡುಗಡೆ ಮಾಡಿಸಿರುತ್ತಾರೆ.

ಇದೇ ಪುಸ್ತಕವನ್ನು ಮತ್ತೊಮ್ಮೆ ಬೃಹತ್ ಬೆಂಗಳೂರು ಮಹಾನಗರಪಾಲಿಕೆಯ ಮೇಯರ್ ಶ್ರೀ ಎಸ್ ಕೆ ನಟರಾಜ್ ಅವರು ಆಸಕ್ತಿ ವಹಿಸಿ ಪ್ರಕಟಿಸಿರುತ್ತಾರೆ.18/4/2011

ಕೆಂಪೇಗೌಡರ ಗೌರವಾರ್ಥ ಮೆಜೆಸ್ಟಿಕ್ ಬಸ್ ನಿಲ್ದಾಣಕ್ಕೆ ಕೆಂಪೇಗೌಡ ಬಸ್ ನಿಲ್ದಾಣವೆಂದು ಹೆಸರಿಸಲಾಯ್ತು. ನಂತರ ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಹೆಸರನ್ನು ಮಾನ್ಯ ಅಜಿತ್ ಸಿಂಗ್ ರವರು
ಒಕ್ಕೂಟ ಸರ್ಕಾರದಲ್ಲಿ ನಾಗರಿಕ ವಿಮಾನಯಾನ ಖಾತೆ ಸಚಿವರಾಗಿದ್ದಾಗ ನಾಡಿನ ಜನಾಭಿಪ್ರಾಯವನ್ನು ಪುರಸ್ಕರಿಸಿ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವೆಂದು ಬದಲಿಸಿದರು.

ಕರ್ನಾಟಕ ರಾಜ್ಯ ಒಕ್ಕಲಿಗರ ಸಂಘವು ಬೆಂಗಳೂರಿನ ಕೆ ಆರ್ ರಸ್ತೆಯಲ್ಲಿ ಕೆಂಪೇಗೌಡರ ಹೆಸರಿನಲ್ಲಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಾರ್ವಜನಿಕ ಆಸ್ಪತ್ರೆಯನ್ನು ಸ್ಥಾಪಿಸಿರುತ್ತಾರೆ.

ಈ ಚಿತ್ರದಲ್ಲಿ ಹೋರಾಟದ ಸಂದರ್ಭದಲ್ಲಿ, ವರನಟ ಕನ್ನಡದ ಅಸ್ಮಿತೆ ಡಾಕ್ಟರ್ ರಾಜಕುಮಾರ್ ಅವರು, ಬೆಂಗಳೂರು ನಿರ್ಮಾತೃ ಕೆಂಪೇಗೌಡರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವಿಸುತ್ತಿರುವುದು.

– ಜಿ.ಟಿ.ನರೇಂದ್ರ ಕುಮಾರ್, ವಕೀಲರು, ಬೆಂಗಳೂರು.

Leave a Reply