ಬೆಂಗಳೂರು: ಪ್ರೇಮಿಯ ಜೊತೆ ಕೈಮಿಲಾಯಿಸಿ ಗಂಡನನ್ನೇ ಕೊಲೆ ಮಾಡಿದ್ದ ಪತ್ನಿಯನ್ನು ಬೆಂಗಳೂರು ಪೊಲೀಸರು ಮಂಡ್ಯದಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮಹೇಶ್ ನನ್ನು ಪ್ರಿಯಕರನ ಜೊತೆ ಸೇರಿ ಕೊಲೆ ಮಾಡಿದ್ದ ಪತ್ನಿ ಶಿಲ್ಪ ಬಂಧನಕ್ಕೆ ಒಳಗಾಗಿದ್ದಾರೆ.
ಮಂಡ್ಯ ಮೂಲದ ಮಹೇಶ್, ಬೆಂಗಳೂರಿನ ಶಿಲ್ಪಾಳನ್ನು ಎಂಟು ವರ್ಷಗಳ ಹಿಂದೆ ಮದುವೆಯಾಗಿದ್ದರು. ನಂತರ ಇಬ್ಬರು ಬೆಂಗಳೂರಿನ ಕೋಣನಕುಂಟೆಯಲ್ಲಿ ವಾಸವಿದ್ದರು. ಕಳೆದ ಗುರುವಾರ ಮಹೇಶ್ ಅವರನ್ನು ಶಿಲ್ಪಾ ಹಾಗೂ ಪ್ರಿಯಕರ ಕೊಲೆಗೈದು ಪಿಡಿಸಿನ ಕಾರಣಕ್ಕೆ ಬಲಿಯಾಗಿದ್ದಾರೆ ಎಂದು ಕತೆ ಕಟ್ಟಿದ್ದರು. ಮಹೇಶ್ ಮೃತದೇಹವನ್ನು ಶಿಲ್ಪಾ ಮಹೇಶ್ ಹುಟ್ಟೂರಿಗೆ ತೆಗೆದುಕೊಂಡು ಹೋಗಿದ್ದರು. ಈ ವೇಳೆ ಅನುಮಾನದಿಂದ ಮಹೇಶ್ ಪಾಲಕರು ಮೃತದೇಹವನ್ನು ಪರೀಕ್ಷಿಸಲು ಒತ್ತಾಯಿಸಿದ್ದರು.
ಮಹೇಶ್ ದೇಹದ ಮೇಲೆ ಗಾಯಗಳನ್ನು ಗುರುತಿಸಿದ ನಂತರ ಮಂಡ್ಯ ಪೊಲೀಸರು ಶಿಲ್ಪಾಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ ನಂತರ ಕೊಲೆ ಮಾಡಿರುವ ಸಂಗತಿ ಬಹಿರಂಗವಾಗಿದೆ. ಇದೀಗ ಪ್ರಕರಣವನ್ನು ಕೋಣನಕುಂಟೆ ಠಾಣೆಗೆ ಮಂಡ್ಯ ಪೊಲೀಸರು ವರ್ಗಾಯಿಸಿದ್ದಾರೆ. ಕೋಣನಕುಂಟೆ ಪೊಲೀಸರು ಶಿಲ್ಪಾ ಮತ್ತು ಆಕೆಯ ಪ್ರೇಮಿಯನ್ನು ವಶಕ್ಕೆ ಪಡೆದಿದ್ದಾರೆ.




