ಬೆಂಗಳೂರು: ಕರ್ನಾಟಕ ಮತ್ತು ಕೇರಳ ರಾಜ್ಯಗಳ ನಡುವೆ ಭೌಗೋಳಿಕವಾದ ಗಡಿರೇಖೆಯಿದ್ದರೂ ಎರಡೂ ರಾಜ್ಯಗಳ ನಡುವೆ ಸಾಂಸ್ಕೃತಿಕವಾದ ಅವಿನಾಭಾವ ಸಂಬಂಧ ಇದೆ. ಗಡಿ ಪ್ರದೇಶದಲ್ಲಿ ಕನ್ನಡಿಗರು ಮತ್ತು ಕೇರಳಿಗರು ಸೋದರ-ಸೋದರಿಯರಂತೆ ಸಹ ಬಾಳ್ವೆ ನಡೆಸುತ್ತಿದ್ದಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಕೇರಳದ ಮಂಜೇಶ್ವರ ಹೆಸರು ಬದಲಿಸುವ ಕುರಿತು ಕೇರಳ ಸಿಎಂ ಪಿಣರಾಯಿ ವಿಜಯನ್ ಅವರಿಗೆ ಪತ್ರ ಬರೆದಿರುವ ಅವರು, ಆದರೆ ಇತ್ತೀಚೆಗೆ ಕಾಸರಗೋಡಿನ ಸ್ಥಳೀಯ ಸಂಸ್ಥೆಗಳು ಅಲ್ಲಿನ ಕೆಲವು ಹಳ್ಳಿಗಳ ಹೆಸರುಗಳನ್ನು ಕನ್ನಡ ಮತ್ತು ತುಳು ಭಾಷೆಯಿಂದ ಮಲೆಯಾಳಿ ಭಾಷೆಗೆ ಬದಲಾಯಿಸುವ ನಿರ್ಣಯ ಕೈಗೊಂಡಿರುವುದು ವಿಷಾದನೀಯ ಬೆಳವಣಿಗೆ ಎಂದಿದ್ದಾರೆ.
ಸಾಮಾನ್ಯವಾಗಿ ಗ್ರಾಮಗಳ ಹೆಸರಿನ ಜೊತೆ ಅಲ್ಲಿನ ಸ್ಥಳೀಯರು ಭಾವನಾತ್ಮಕ ಸಂಬಂಧ ಹೊಂದಿರುತ್ತಾರೆ. ಹೆಸರಿನ ಬದಲಾವಣೆಯಿಂದ ತಾಯ್ನಾಡಿನ ಜೊತೆಗಿನ ಅವರ ಕರುಳಬಳ್ಳಿಯ ಸಂಬಂಧವನ್ನು ಕಿತ್ತುಕೊಂಡ ಹಾಗಾಗುತ್ತದೆ. ಹೀಗಿದ್ದರೂ ಕೆಲ ಗುಂಪುಗಳು ಈ ಸಂಬಂಧವನ್ನು ಕಲಕಲು ಪ್ರಯತ್ನಿಸುತ್ತಿರುವುದು ಖೇದಕರ ಸಂಗತಿ ಎಂದಿದ್ದಾರೆ.
ಮಂಜೇಶ್ವರದ ಕನ್ನಡಪ್ರೇಮಿ ಶಾಸಕ ಎ.ಕೆ.ಎಂ.ಆಶ್ರಫ್ ಮತ್ತು ಕಾಸರಗೋಡು ಜಿಲ್ಲಾಧಿಕಾರಿ ಸಜಿತ್ ಬಾಬು ಅವರು ಈ ಬಗ್ಗೆ ಸ್ಪಷ್ಟೀಕರಣ ನೀಡಿ ಹೆಸರು ಬದಲಾವಣೆಯ ಪ್ರಸ್ತಾಪ ಇಲ್ಲವೆಂದು ತಿಳಿಸಿರುವುದು ಸ್ವಾಗತಾರ್ಹ ಎಂದಿದ್ದಾರೆ.
ಕೇರಳದ ಸನ್ಮಾನ್ಯ ಮುಖ್ಯಮಂತ್ರಿಗಳಾದ ಪಿಣರಾಯಿ ವಿಜಯನ್ ಅವರು ಈ ಬಗ್ಗೆ ತಕ್ಷಣ ಗಮನ ಹರಿಸಿ ಉಭಯ ರಾಜ್ಯಗಳ ನಡುವಿನ ಸಂಬಂಧವನ್ನು ಹಾಳುಗೆಡಹುವ ಪ್ರಯತ್ನವನ್ನು ಮೊಳಕೆಯಲ್ಲಿಯೇ ಚಿವುಟಿಹಾಕಬೇಕೆಂದು ನಾನು ಒತ್ತಾಯಿಸುತ್ತೇನೆ ಎಂದಿದ್ದಾರೆ.




