ಕೆಲವೇ ದಿನಗಳಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯ ಮತ್ತು ಜಿಲ್ಲಾ ಘಟಕಗಳಿಗೆ ಅಧ್ಯಕ್ಷರ ಆಯ್ಕೆಯನ್ನು ಮಾಡುವ ಜವಾಬ್ದಾರಿ ಪರಿಷತ್ತಿನ ಲಕ್ಷಾಂತರ ಸದಸ್ಯರ ಮೇಲಿದೆ. ಇಲ್ಲಿ ನಾವು ಮತದಾರರು ಕೆಲವೇ ಕೆಲವು ಲಕ್ಷ ಮಂದಿ ಇದ್ದರೂ ಸಾಹಿತ್ಯ ಪರಿಷತ್ತು ಸಮಸ್ತ ಕನ್ನಡಿಗರ ಪವಿತ್ರವಾದ ದೇಗುಲವಾಗಿದ್ದು, ನಮ್ಮೆಲ್ಲರ ಧ್ವನಿಯು ಆಗಿರುತ್ತದೆ. ಈ ಹಿನ್ನೆಲೆಯಲ್ಲಿ ಮತದಾರರು ಅಧ್ಯಕ್ಷರನ್ನು ಆಯ್ಕೆ ಮಾಡುವ ಮುನ್ನ ಕೆಲವೊಂದು ವಿಚಾರಗಳನ್ನು ಗಮನದಲ್ಲಿಟ್ಟುಕೊಂಡು ಮತ ಚಲಾಯಿಸುವುದು ಸೂಕ್ತವಾಗಿರುತ್ತದೆ.
ಸಾಹಿತ್ಯ ಪರಿಷತ್ತನ್ನು ನೂರಾರು ವರ್ಷಗಳ ಹಿಂದೆ ಮಹನೀಯರು ಸ್ಥಾಪಿಸಿ, ಕನ್ನಡಿಗರಿಗೆ ದೊಡ್ಡ ಕೊಡುಗೆಯನ್ನು ನೀಡಿರುತ್ತಾರೆ. ಹಲವಾರು ಜ್ಞಾನಿಗಳು, ವಿದ್ವಾಂಸರು, ಕನ್ನಡವನ್ನು ಪ್ರೀತಿಸುವ ಕನ್ನಡಿಗರ ಬಗ್ಗೆ ಕಾಳಜಿವುಳ್ಳ ಶ್ರೇಷ್ಠರು ಪರಿಷತ್ತಿನ ಮೂಲಕ ಕನ್ನಡ ಭಾಷೆಯನ್ನು ಬೆಳೆಸುವ ಮತ್ತು ಉಳಿಸುವ ನಿಟ್ಟಿನಲ್ಲಿ, ಕನ್ನಡಿಗರಲ್ಲಿ ಸ್ವಾಭಿಮಾನವನ್ನು ಮೂಡಿಸುವ ನಿಟ್ಟಿನಲ್ಲಿ, ಪ್ರಾಮಾಣಿಕವಾದ ಕೊಡುಗೆಯನ್ನು ನೀಡಿರುತ್ತಾರೆ.
ಇಷ್ಟೊಂದು ಘನತೆ ಮತ್ತು ಗೌರವವನ್ನು ಹೊಂದಿರುವ ಪರಿಷತ್ತಿನ ಅಧ್ಯಕ್ಷರನ್ನು ಆಯ್ಕೆ ಮಾಡುವ ಸಂದರ್ಭದಲ್ಲಿ ನಾವುಗಳು ಕೆಲವು ದೋಷಗಳಿರುವ ವ್ಯಕ್ತಿಗಳನ್ನು ತಿರಸ್ಕರಿಸುವುದರ ಮೂಲಕ ಜವಾಬ್ದಾರಿಯುತವಾಗಿ ಹಕ್ಕನ್ನು ಚಲಾಯಿಸೋಣ. ಮೊದಲಿಗೆ ಜಾತಿವಾದವನ್ನು ಮಾಡುವ ಅಭ್ಯರ್ಥಿಗಳನ್ನು ತಿರಸ್ಕರಿಸೋಣ, ರಾಜಕೀಯ ಲೇಪನವನ್ನು ಹಚ್ಚಲು ಬಂದಿರುವ ಅಭ್ಯರ್ಥಿಗಳನ್ನು ತಿರಸ್ಕರಿಸೋಣ, ಕುವೆಂಪುರವರ ಸರ್ವಧರ್ಮ ಶಾಂತಿಯ ತೋಟವೆಂಬ ಆಶಯಕ್ಕೆ ಧಕ್ಕೆ ತರಬಲ್ಲ ಸಾಧ್ಯತೆಗಳಿರುವ ಅಭ್ಯರ್ಥಿಗಳನ್ನು ತಿರಸ್ಕರಿಸೋಣ, ಕನ್ನಡಿಗರಿಗೆ ನೋವಾದಾಗ, ಕನ್ನಡ ಭಾಷೆಗೆ ಅಪಮಾನವಾದಾಗ, ಬಾಯಿ ಬಿಡದೆ ಜಾಣ ನಡೆಯನ್ನು ಪ್ರದರ್ಶಿಸುವ ಅವಕಾಶವಾದಿಗಳನ್ನು ತಿರಸ್ಕರಿಸೋಣ, ಕನ್ನಡಕ್ಕಾಗಿ ದುಡಿಯುವ, ಕನ್ನಡಿಗರ ಹಿತಕ್ಕಾಗಿ ಶ್ರಮಿಸುವ, ಕನ್ನಡ ಪರಿಷತ್ತಿನ ಗೌರವವನ್ನು ಎತ್ತಿಹಿಡಿಯುವ, ಹೋರಾಟದ ಮನೋಭಾವವುಳ್ಳ, ಸಾಮಾನ್ಯ ಕನ್ನಡಿಗರೊಂದಿಗೆ ಬೆರೆಯಬಲ್ಲ, ಕನ್ನಡಿಗರ ಧ್ವನಿಯಾಗಿ ಉಳಿಯಬಲ್ಲ ಅಭ್ಯರ್ಥಿಯನ್ನು ಪುರಸ್ಕರಿಸೋಣ.
- ಕೆ.ಎಸ್.ನಾಗರಾಜ್, ಬೆಂಗಳೂರು




