ಕನ್ನಡ ಸಾಹಿತ್ಯ ಪರಿಷತ್ತು ಅವ್ಯವಹಾರ, ಸರ್ವಾಧಿಕಾರ: ಜಿಲ್ಲಾ ಅಧ್ಯಕ್ಷರುಗಳಿಗೆ ಬಹಿರಂಗ ಪತ್ರ
– ಆರ್ ಜಿ ಹಳ್ಳಿ ನಾಗರಾಜ, ಸಾಹಿತಿ, ಹಿರಿಯ ಪತ್ರಕರ್ತರು
ಕಸಾಪದ ಎಲ್ಲ ಮಾನ್ಯ ಜಿಲ್ಲಾಧ್ಯಕ್ಷರುಗಳಿಗೆ ನಮಸ್ಕಾರ.
ಕಸಾಪದಲ್ಲಿ ಅವ್ಯವಹಾರ ಪ್ರಕರಣ: ಸದಸ್ಯತ್ವ ರದ್ದು ಕುರಿತು ಕಾನೂನು ಕ್ರಮಕ್ಕೆ ಸಿಎಂ ಸೂಚನೆ
ಕಸಾಪ ಸದಸ್ಯತ್ವ ರದ್ದತಿ ವಿರುದ್ಧ ಕಾನೂನು ಕ್ರಮ ಎಂಬಿತ್ಯಾದಿ ಪತ್ರಿಕಾ ತಲೆಬರಹದ ಸುದ್ದಿ ಓದಿ, ತಾವೆಲ್ಲರೂ ಈ ಸುದ್ದಿ ಗಮನಿಸಿದ್ದೀರಿ ಎಂದು ಭಾವಿಸಿ; ತಮ್ಮಗಳೊಂದಿಗೆ ಕೆಲವು ವಿಚಾರ ಹಂಚಿಕೊಳ್ಳುವ ಮನಸ್ಸಾಗಿ ಈ ಪತ್ರ ಬರೆಯುತ್ತಿರುವೆ.
- ದೇಶದ ರಾಜ್ಯಗಳಲ್ಲಿ ಕೊನೆಯ ಬಾರಿ ಕಾಂಗ್ರೆಸ್ ಸಿಎಂ ಇದ್ದದ್ದು ಯಾವಾಗ?
- ನಮ್ಮ ತಲೆಮಾರಿನ ರಾಜಕಾರಣಿಗಳು, ಭವಿಷ್ಯದ ಯುವ ನಾಯಕರಿಗೆ ಸಿದ್ದರಾಮಯ್ಯ ಸ್ಫೂರ್ತಿ: ಪ್ರಿಯಾಂಕ್ ಖರ್ಗೆ
- ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಸಿದ್ದರಾಮಯ್ಯ ಹೇಳಿದ್ದೇನು?
- ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ: ಯಾರು, ಏನೆಂದರು?
- ಹಣಕಾಸು ಮಂತ್ರಿಗಳಾಗಿ ಸಿದ್ದರಾಮಯ್ಯ ಸಾಧಿಸಿದ ಆರ್ಥಿಕ ಶಿಸ್ತು ಒಂದು ಪಠ್ಯದಂತಿದೆ: ಬಿ ಶ್ರೀಪಾದ ಭಟ್
ಮಾನ್ಯ ಮುಖ್ಯಮಂತ್ರಿಯವರು ಕಸಾಪದಲ್ಲಿ ನಡೆಯುತ್ತಿರುವ ವಿದ್ಯಮಾನಗಳನ್ನು ಗಮನಿಸುತ್ತಿದ್ದು, ಈ ಬೆಳವಣಿಗೆ ಬಗ್ಗೆ ಬೇಸರಿಸಿ, ಕಾನೂನು ಕ್ರಮ ತೆಗೆದುಕೊಳ್ಳಲು ಅಧಿಕಾರಿಗಳಿಗೆ ಆದೇಶಿಸಿರುವುದು ಸ್ವಾಗತಾರ್ಹ ಕ್ರಮ.
ನಿಮ್ಮ ರಾಜ್ಯಾಧ್ಯಕ್ಷ ಜೋಸಿಯ ಸರ್ವಾಧಿಕಾರಕ್ಕೆ ಎಲ್ಲಾ ಜಿಲ್ಲಾಧ್ಯಕ್ಷರು ಒಗ್ಗಟ್ಟಾಗಿ ಪ್ರತಿರೋಧ ಒಡ್ಡಿದ್ದರೆ ಈ ಮಟ್ಟಕ್ಕೆ ಪರಿಷತ್ತಿನ ಘನತೆ, ಗೌರವ ಹಾಳಾಗುತ್ತಿರಲಿಲ್ಲ. ಆಡಳಿತದಲ್ಲಿ ಆರ್ಥಿಕ ಅಶಿಸ್ತು ಕಾಣುತ್ತಿದೆ. ಹಲವು ಕೋಟಿ ರೂ.ಗಳ ದುರ್ಬಳಕೆ ಆಗಿದೆ ಎಂಬ ಅಂಶ ಮಾಧ್ಯಮಗಳಲ್ಲಿ ವರದಿಯಾಗಿದೆ. ನಿಮ್ಮೆಲ್ಲರ ಒಗ್ಗಟ್ಟಿನ ಶಕ್ತಿ ಪ್ರದರ್ಶನ ಆಗಿದ್ದರೆ ಅವರು ಭ್ರಷ್ಟ ಆಗುತ್ತಿರಲಿಲ್ಲ. ಸನ್ಮಾನ್ಯ ಅಧ್ಯಕ್ಷರು ಈಗ ಏಕಕಾಲಕ್ಕೆ ಎರಡು ವಿಚಾರಣೆ ಎದುರಿಸುತ್ತಿರುವುದು ಏನನ್ನು ಸೂಚಿಸುತ್ತೆ? ಎಲ್ಲದಕ್ಕೂ ಬಾಯಿ ದೊಡ್ಡದುಮಾಡಿ, ಎಲ್ಲರನ್ನೂ ಹೆದರಿಸಿ ತನ್ನ ಹದ್ದುಬಸ್ತಲ್ಲಿ ಇಟ್ಟುಕೊಳ್ಳಲು ಅವಕಾಶ ಮಾಡಿಕೊಟ್ಟಿದ್ದೆ “ಒಗ್ಗಟ್ಟಿಲ್ಲ” ಎಂಬುದಕ್ಕೆ ಆಡುವ ಆಟಗಳೆ ಸಾಕ್ಷಿ. ಅವರಂತೆಯೇ ಕಸಾಪ ಆಜೀವ ಸದಸ್ಯರಿಂದ ಆಯ್ಕೆಯಾದ ಜಿಲ್ಲಾಧ್ಯಕ್ಷರಾದ ತಮಗೆ ಪ್ರಜಾಸತ್ತಾತ್ಮಕವಾದ ಎಲ್ಲಾ ಅಧಿಕಾರ, ಹಕ್ಕುಗಳಿವೆ. ಅವುಗಳನ್ನು ಪ್ರಶ್ನಿಸಿಯಾದರೂ ಪಡೆಯಬಹುದು.
ಈಗ ಬೀದಿ ರಂಪಾಟವಾಗಿರೋ ಕನ್ನಡ ಸಾಹಿತ್ಯ ಪರಿಷತ್ತಿನ ಘನತೆ ಗೌರವ ಹಾಳು ಮಾಡಿ, ಕೋರ್ಟಿನಿಂದ ₹1.20 ಲಕ್ಷ ದಂಡ ವಿಧಿಸಿಕೊಂಡ ಈ ಅಧ್ಯಕ್ಷ ಸಾಚಾನಾ? ಈಗ ನಾಡಿನ ಪ್ರತಿಷ್ಠಿತರ ಆಜೀವ ಸದಸ್ಯತ್ವವನ್ನು ವಜಾಗೊಳಿಸುವ ಅಧಿಕಾರವನ್ನು ಇವರಿಗೆ ಕೊಟ್ಟಿದ್ದಾದರೂ ಹೇಗೆ? ಮತ್ತು ಏಕೆ? ಪ್ರಜಾಪ್ರಭುತ್ವದಲ್ಲಿ ಪ್ರಶ್ನೆಯನ್ನೆ ಮಾಡಬಾರದೆ? ಪ್ರಶ್ನೆ ಇಲ್ಲದಕಡೆ ಸರ್ವಾಧಿಕಾರ, ದುರಹಂಕಾರ ಬೆಳೆಯುತ್ತೆ. ಲೇಖಕಿ, ವೈದ್ಯೆ (ಡಾ||) ವಸುಂಧರಾ ಭೂಪತಿ, ಸಾಹಿತಿ, ಪತ್ರಕರ್ತ, ಹೋರಾಗಾರ ಜಾಣಗೆರೆ ವೆಂಕಟರಾಮಯ್ಯ, ಕಸಾಪ ಮಾಜಿ ಜಿಲ್ಲಾಧ್ಯಕ್ಷ, ಸಂಘಟಕ ಸಿ.ಕೆ. ರಾಮೇಗೌಡ, ಕನ್ನಡಪರ ಸಂಘಟಕರಾದ ಹೂಗಾರ, ಹರ್ಷ ಮಂಡ್ಯ, ದೂರದರ್ಶನದ ಅಧಿಕಾರಿಯಾಗಿದ್ದ ನಿರ್ಮಲಾ ಯಲಿಗಾರ ಮೊದಲಾದವರು ಯಾರು ಅಂತ ಭಾವಿಸಿದ್ದಾರೆ? ಇದರಲ್ಲಿ ಖ್ಯಾತ ಸಾಹಿತಿಗಳು, ನಾಡು ನುಡಿಗೆ ಸೇವೆ ಸಲ್ಲಿಸಿದ ಹೋರಾಟಗಾರರು ಇದ್ದಾರೆ. ರಾಜ್ಯೋತ್ಸವದಂಥ ಪ್ರಶಸ್ತಿ, ಪ್ರಾಧಿಕಾರದ ಅಧ್ಯಕ್ಷಸ್ಥಾನ ಹಾಗೂ ಹಲವು ಗೌರವಾನ್ವಿತ ಸ್ಥಾನ ಪಡೆದರನ್ನು ಆಜೀವ ಸದಸ್ಯತ್ವದಿಂದ ತೆಗೆಯುವಾಗ ಯೋಚಿಸಬೇಡವೆ? ತೆಗೆದ ನಂತರವೂ ನೀವೆಲ್ಲ ಏಕೆ ಮೌನವಾದ್ದಿರಿ? ನೀವು ಮಾಡುತ್ತಿರುವುದು ತಪ್ಪು ಎಂದು ಏಕೆ ಪ್ರಶ್ನಿಸಲಿಲ್ಲ. ಮಾತೆತ್ತಿದರೆ ಮಾಧ್ಯಮದವರ ಎದುರು ಪರಿಷತ್ತಿನ ಘನತೆ ಗೌರವ ಹಾಳುಮಾಡಿದವರು, ಅವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಅನ್ನುವುದು ಆಡಳಿತ ಬಿಗಿ ಇಲ್ಲದ ಭಯೋತ್ಪಾದಕನ ಮಾತು. ಯಾರು ಪರಿಷತ್ತಿನ ಘನತೆ ಗೌರವ ಹಾಳುಮಾಡುತ್ತಿರುವವರು ಸ್ವಾಮಿ, ಹೇಳಿ? ವಕೀಲರ ಮೂಲಕ ನೂರಾರು ಪುಟಗಳ ಎಚ್ಚರಿಕೆ, ಹತ್ತಾರು ಪುಟಗಳ ಕಾನೂನು ಕೊಕ್ಕೆಯ ಡ್ರಾಪ್ಟು ತಯಾರಿಸುವ, ಮಾನ ನಷ್ಟ ಮೊಕದ್ದಮೆ ಹೂಡುವ, ವಕೀಲರಿಗೆ ಪರಿಷತ್ತಿನ ಖಜಾನೆಯಿಂದಲೆ ಲಕ್ಷಾಂತರ ಹಣ ಪಾವತಿಸುವ ಈತ, ಹಗಲು ರಾತ್ರಿ ಬರಿ ನೋಟೀಸು, ಕೋರ್ಟು ಅಂತ ಒದ್ದಾಡುವ, ಕನವರಿಸುವ ಬದಲು ಒಂದೆರಡು ಮೌಲಿಕ ಪುಸ್ತಕ ಓದಿದ್ದರೆ, ವಿಚಾರ ಸಂಕಿರಣಗಳಿಗೆ ಹೋಗಿ ಅಲ್ಲಿನ ವಿದ್ವಾಂಸರ ವಿಚಾರ ಕೇಳಿಸಿಕೊಂಡಿದ್ದರೆ ಜ್ಞಾನವಾದರೂ ಇಮ್ಮಡಿಯಾಗುತ್ತಿತ್ತು. ಸಾಹಿತ್ಯದ ಗಂಧಗಾಳಿ ಇಲ್ಲದ ವ್ಯಕ್ತಿಗೆ ಅಧ್ಯಕ್ಷ ಸ್ಥಾನಕ್ಕೇರಲು ಅವರ ಮುತ್ತಾತ ಗುರು ಗೋವಿಂದ ಭಟ್ಟರು, ಅವರ ಸಾಧಕ ಶಿಷ್ಯ ತತ್ವಪದಗಳ ಹರಿಕಾರ ಶಿಶುನಾಳ ಶರೀಫರ ಹೆಸರು ಬೇಕಿತ್ತು!
ಈ ಮಹಾನುಭಾವ ಬಂದ ಮೂರು ವರ್ಷ ಒಂಬತ್ತು ತಿಂಗಳಲ್ಲಿ ಒಂದೇ ಒಂದು ವಿಚಾರ ಸಂಕಿರಣ, ಯುವ ಬರಹಗಾರರಿಗೆ ಸಾಹಿತ್ಯ ಶಿಬಿರ, ಸಾಂದರ್ಭಿಕ ಕವಿಗೋಷ್ಠಿ, ಮೌಲಿಕ ಪುಸ್ತಕ ಪ್ರಕಟಣೆ, ಕನ್ನಡ ನಿಘಂಟುವಿನ ಪರಿಷ್ಕರಣೆ ಯೋಜನೆ, ಕನ್ನಡ ಸಾಹಿತ್ಯಕ್ಕೆ ಮಹತ್ವದ ಸ್ಥಾನ ತಂದುಕೊಟ್ಟ ಸಾಹಿತಿಗಳ ಸ್ಮರಣೆಯ ಶತಮಾನೋತ್ಸವ, ಕನ್ನಡಪರ ಹೋರಾಟ, ಪ್ರತಿಭಟನೆ ಇದಾವುದನ್ನು ಮಾಡದೆ ಕಾಲಾಹರಣ ಮಾಡಿದ ವ್ಯಕ್ತಿಯ ನಡೆ ಬಗ್ಗೆ ಏಕೆ ಪ್ರಶ್ನೆ ಮಾಡಲಿಲ್ಲ?
ಮುಂಬರುವ ಬಳ್ಳಾರಿ ಸಾಹಿತ್ಯ ಸಮ್ಮೇಳನ ಯಾವಾಗ ಎಂದು ದಿನಾಂಕ ನಿಗದಿ ಆಗಿಲ್ಲ. ಸ್ಥಳ ಪರಿಶೀಲನೆ ಆಗಲಿಲ್ಲ. ಸಮ್ಮೇಳನ ಸಿದ್ದತೆಯ ಸಮಿತಿ ರಚನೆ ಆಗಲಿಲ್ಲ ಆದರೂ, ತರಾತುರಿಯಲ್ಲಿ ಸಾಹಿತ್ಯ ಸಮ್ಮೇಳನಾಧ್ಯಕ್ಷರನ್ನು ಆಯ್ಕೆ ಮಾಡುವ ಅಗತ್ಯ ಏನಿತ್ತು? ಪ್ರತಿಷ್ಠಿತ “ಬುಕ್ಕರ್ ಪ್ರಶಸ್ತಿ” ಬಂದಾಗ ಬಾನು ಮುಷ್ತಾಕ್ ಅವರನ್ನು ಅಭಿನಂದಿಸದ ಕನ್ನಡ ಸಾಹಿತ್ಯ ಪರಿಷತ್ತು, ಯಾವ ಮುಖ ಇಟ್ಟುಕ್ಕೊಂಡು ಸಮ್ಮೇಳನಾಧ್ಯಕ್ಷೆ ಎಂದು ಘೋಷಿಸಿತು? ಪರಿಷತ್ತು ಅಲ್ಪಸಂಖ್ಯಾತ ಮಹಿಳೆಯನ್ನು ಸಮ್ಮೇಳನಾಧ್ಯಕ್ಷೆ ಮಾಡಿತು ಎಂಬ ಒಣ ಜಂಬಕ್ಕೆ ಇದನ್ನು ಮಾಡಲಾಯಿತೆ?
ಈತ ವರ್ಷಕ್ಕೊಂದು ಬರಿ ವಿವಾದಿತ ಸಾಹಿತ್ಯ ಸಮ್ಮೇಳನ ಮಾಡಲು ಮಾತ್ರ ಬಂದಿದ್ದಾ? ಸರ್ಕಾರಕ್ಕೆ ₹40 ಕೋಟಿಯ ಬೇಡಿಕೆ ಇಟ್ಟಿದ್ದು ಯಾರಪ್ಪನ ಮನೆ ದುಡ್ಡು ಅದು? ಹಿಂದಿನ ಸಮ್ಮೇಳನಗಳ ಲೆಕ್ಕಪತ್ರವನ್ನೆ ಕೊಡದೆ, ಕೇಳಿದವರಿಗೆ ಗುಟುರು ಹಾಕುವುದು ಸಜ್ಜನ ನಡೆಯೆ? ಸಾರ್ವಜನಿಕ ಹಣಕ್ಕೆ ಲೆಕ್ಕ ಕೊಡುವ ಜವಾಬ್ದಾರಿಯಿಂದ ಏಕೆ ನುಣುಚಿಕೊಳ್ಳಬೇಕು? ಅಧ್ಯಕ್ಷನ ಮೇಲೆ ಬಂದ ಹಲವು ಆಪಾದನೆ ಮುಚ್ಚಿಕೊಳ್ಳಲು ಬಾನು ಅವರು ಸಮ್ಮೇಳನಾಧ್ಯಕ್ಷರು ಎಂದು ನಾಟಕ ಆಡಿದ್ದೆಂದು ಎಲ್ಲರಿಗೂ ತಿಳಿದ ವಿಚಾರವೆ.
54ಕ್ಕು ಹೆಚ್ಚು ಸಿ.ಸಿ. ಕ್ಯಾಮರಾಗಳ ಅಡಿಯಲ್ಲಿ ಕಸಾಪ ಕಾರ್ಯ ನಿರ್ವಹಿಸುವ ಈ ವ್ಯಕ್ತಿ ಎಂಥಾ ಅನುಮಾನಸ್ಥ ಹಾಗೂ ಸರ್ವಾಧಿಕಾರಿ ಎಂಬುದು ತಿಳಿಯುತ್ತದೆ. ಅಲ್ಲಿನ ನೌಕರರನ್ನು ಎಷ್ಟೊಂದು ಗೋಳು ಹೊಯ್ಕೊಂಡು ಹಲವರು ಕೆಲಸ ಬಿಟ್ಟು ಹೋಗುವಂತೆ ಮಾಡಿದ್ದು ಯಾವ ಮಾನವೀಯತೆ? ಇಷ್ಟೊಂದು ಸಿ.ಸಿ. ಕ್ಯಾಮೆರಾಗಳ ಕಣ್ಗಾವಲಿನ ಭಯದಿಂದಲೇ ಕಾರ್ಯನಿರ್ವಹಿಸಬೇಕು. ಅಲ್ಲದೆ ಜನಸಾಮಾನ್ಯರು ಪರಿಷತ್ತಿನ ಆವರಣಕ್ಕು ಕಾಲಿಡುತ್ತಿಲ್ಲ. ಹೀಗಾಗಿ ಅವರುಗಳು ದೂರ ಉಳಿದಿದ್ದಾರೆ. ಹಿಂದೆ ದೂರದರ್ಶನದಲ್ಲೂ ಅಲ್ಲಿನ ನೌಕರರು, ಅಧಿಕಾರಿಗಳಿಗೆ ಗೋಳು ಹುಯ್ದುಕೊಂಡು ಕೋರ್ಟಿಗೂ ಅಲೆಯುವಂತೆ ಮಾಡಿದ್ದಿದೆ. ಕಾನೂನು ಹೋರಾಟ ಮಾಡಿದ ಅಧಿಕಾರಿಗಳು ಜಯಗಳಿಸಿ, ಈತ ಮುಖಭಂಗ ಅನುಭವಿಸುವಂತೆಯೂ ಆಗಿತ್ತು.
ಯಾವುದೇ ನಾಗರಿಕ ಸೌಲಭ್ಯ ಇಲ್ಲದ ಯಾವುದೋ ಮೂಲೆಯ ನೂರಾರು ಜನ ಕೂರುವ ಸ್ಥಳ ಆಯ್ಕೆ ಮಾಡಿ, ಅಲ್ಲಿ “ಸರ್ವ ಸದಸ್ಯರ ಸಭೆ” ಕರೆಯುವುದು ಚಾಳಿಯಾಗಿದೆ! ಅಂಥಲ್ಲಿ “ಪ್ರಶ್ನಿಸುವವರು ಬರುವುದೇ ಬೇಡ” ಎಂಬ ದುರುದ್ದೇಶ ಆತನದ್ದು. ಬಳ್ಳಾರಿಯ ನಂದಿಹಳ್ಳಿ, ಸೊಂಡೂರು, ಬೀದರಿನ ಹಾರುಕೋಡ ಮಠ – ಈ ಸ್ಥಳಗಳ ಬಗ್ಗೆ ನಾವೆಲ್ಲ ಬಲವಾಗಿ ವಿರೋಧಿಸಿ, ಕೆಲವು ಸ್ಥಳಕ್ಕೆ ನ್ಯಾಯಾಲಯದ ಬಾಗಿಲು ತಟ್ಟಿದ್ದರ ಫಲವಾಗಿ ಅಲ್ಲಿ ಸಭೆ ನಡೆಯದಂತಾಗಿ ಜಯ ಗಳಿಸಿದ್ದೇವೆ. ಈಗ, ಯಾವುದೇ ಬಸ್ಸು ಸೌಲಭ್ಯ ಇಲ್ಲದ, ಸಾವಿರಾರು ಸದಸ್ಯರು ಉಳಿದುಕೊಳ್ಳುವ ಸ್ಥಳ ಇಲ್ಲದ, ಸಾವಿರಾರು ಜನ ಕೂರಲು ಸಭಾಂಗಣ ಇಲ್ಲದ ಬಾಗಲಕೋಟೆ ಜಿಲ್ಲೆಯ ಕಲ್ಲಹಳ್ಳಿಯ “ಸುಮ್ಮನೆ”ಯಲ್ಲಿ ಸಭೆಯನ್ನು ರದ್ದುಪಡಿಸಲು ಪ್ರಯತ್ನಿಸುತ್ತಿದ್ದೇವೆ. ತನ್ನ ಹಠಮಾರಿತನಬಿಟ್ಟು ಹೆಚ್ಚು ಆಜೀವ ಸದಸ್ಯರು ಇರುವಕಡೆ ಸರ್ವಸದಸ್ಯರ ಸಭೆ ಮಾಡಿದರೆ ನಮ್ಮ ಆಕ್ಷೇಪಣೆ ಇಲ್ಲ. ನಾವು ಬಂದು ನಿಮ್ಮ ಸಭೆಯ ಕಲಾಪ ನೋಡಿ ಕಣ್ಣು, ಮನಸ್ಸು ತುಂಬಿಕೊಂಡು ಸಂತೃಪ್ತರಾಗುತ್ತೇವೆ! ತನ್ನಿಚ್ಛೆಯ “ನಿಬಂಧನೆ” (ಬೈಲಾ) ಬರೆದುಕೊಂಡು, ಇದರ ಸಮಿತಿಯ ಮುಖ್ಯರಾದ ನ್ಯಾಯಾಧೀಶ ಮಾನ್ಯ ಅರಳಿ ನಾಗರಾಜರಿಗೂ ಪಂಗನಾಮ ಹಾಕಿದ್ದು ನಿಮ್ಮಲ್ಲಿ ಎಷ್ಟು ಸದಸ್ಯರಿಗೆ ಗೊತ್ತಿದೆಯೋ ತಿಳಿದಿಲ್ಲ. (ಆ ಮಾನ್ಯ ನ್ಯಾಯಾಧೀಶರು ಈಗ ಕಸಾಪ ಕಡೆ ಏಕೆ ಮುಖ ಹಾಕುತ್ತಿಲ್ಲ?) ಮತ್ತೆ ಮತ್ತೆ ನಿಬಂಧನೆಗಳಿಗೆ ಕೈ ಹಾಕದಂತೆ ನಮ್ಮ ಹೋರಾಟ ಸಾಗಿದೆ. ಜನ ವಿರೋಧಿ ನಿಬಂಧನೆಗಳ ಅನುಷ್ಠಾನಕ್ಕೆ ಕಳ್ಳಹಾದಿ ಹಿಡಿದಿರುವುದೂ ನಮಗೆ ಗೊತ್ತು. (ಅದು ಅನುಷ್ಠಾನಕ್ಕೆ ಬಾರದಂತೆ ತಡೆಯುವುದೂ ಗೊತ್ತಿದೆ) ಹಿಂದಿನ ಅವಧಿಯ ರಾಜ್ಯಾಧ್ಯಕ್ಷನ ಸ್ವಾರ್ಥಕ್ಕೆ ಈ ಪರಂಪರಾಗತ ಸಂಸ್ಥೆ ಬಲಿಯಾದದ್ದು; ಕಸಾಪ ಈ ದುಸ್ಥಿತಿಗೆ ಬರಲು ಕಾರಣ.
ಕನ್ನಡ ಸರಸ್ವತಿ ದೇಗುಲ, ಸಾಹಿತ್ಯವಿಲ್ಲದ “ಕಾನೂನುಕಟ್ಟೆ”ಯಾಗಿ ಮಾರ್ಪಟ್ಟಿದ್ದು ಕನ್ನಡಿಗರ ದೌರ್ಭಾಗ್ಯ. ಮುಂದೆ ಅಧ್ಯಕ್ಷರಾಗುವವರು ಅಪ್ಪಟ ಸಾಹಿತ್ಯ ಬಲ್ಲವರಾಗಿ, ಆಡಳಿತದ ಅನುಭವ ಇರುವವರಾದರೆ ನಮಗೂ ಸಂತೋಷ. ಆ ದಿನ ಮತ್ತೆ ನೋಡುವಂತಾಗಲಿ ಎಂದು ಆಶಿಸುವೆ.
ಮಾನ್ಯ ಜಿಲ್ಲಾಧ್ಯಕ್ಷರೆ, ಇನ್ನು ಇರುವಷ್ಟು ಕಾಲವಾದರೂ ಪರಿಷತ್ತಿನ ಘನತೆಯನ್ನು ಎತ್ತಿ ಹಿಡಿದು, ಹೋದ ಮರ್ಯಾದೆಯನ್ನು ಪುನಃ ಮರಳಿ ಪಡೆಯಲು ನೀವೆಲ್ಲ ಶ್ರಮಿಸುವುದಾದರೆ ಸಂತೋಷ. ಇದು ಸಾಧ್ಯವಾದರೆ ನಾಡಿನ ಜನರ ಅಭಿನಂದನೆಗೆ ಪಾತ್ರರಾಗುತ್ತೀರಿ. ಒಗ್ಗಟ್ಟಿನಲ್ಲಿ ಬಲವಿದೆ ಆ ಒಗ್ಗಟ್ಟು ನಿಮ್ಮದಾಗಲಿ. ನಮ್ಮಗಳ ಕಾಳಜಿ 110 ವರ್ಷ ದಾಟಿದ ಕನ್ನಡ ಸಾಹಿತ್ಯ ಪರಿಷತ್ತು ಉಳಿಯಬೇಕು. ವ್ಯಕ್ತಿಯ ಅಹಂ, ದರ್ಪ, ಸರ್ವಾಧಿಕಾರ ಕೊನೆಗಾಣಬೇಕು. ಪ್ರತಿದಿನ ಸಾವಿರಾರು ಕನ್ನಡಿಗರು ಕನ್ನಡ ಸಾಹಿತ್ಯ ಪರಿಷತ್ತು “ನಮ್ಮ ಕನ್ನಡದ ದೇಗುಲ” ಎಂದು ಭಾವಿಸಿ ಬರುವಂತಾಗಬೇಕು. ಅಲ್ಲಿಗೆ ಬಂದು ಹೋಗಲು ಮುಕ್ತ ಅವಕಾಶ ಇರಬೇಕು ಎಂಬುದು ನಮ್ಮ ಆಶಯ. ಇದನ್ನು ಎಲ್ಲಾ ಮಾನ್ಯ ಜಿಲ್ಲಾಧ್ಯಕ್ಷರು ನೆರವೇರಿಸಿ, ಸರ್ವಾಧಿಕಾರಿ ಅಧ್ಯಕ್ಷನ ಹದ್ದುಬಸ್ತಲ್ಲಿಡುತ್ತೀರಿ ಎಂದು ಭಾವಿಸುವೆ.
ಕೊನೆಯದಾಗಿ ಮೈಸೂರಿನ ಜನಪರ ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಆಶಯ ಕನಸು ಈಡೇರಿ, ಪರಿಷತ್ತು ಉಳಿಯಲಿ ಎಂದು ಆಶಿಸುತ್ತೇನೆ.
ನಿಮಗೆಲ್ಲ ಮುಂಬರುವ ದಸರಾ ಹಬ್ಬದ ಶುಭಾಶಯ.
ತಮ್ಮ ವಿಶ್ವಾಸಿ,
– ಆರ್ ಜಿ ಹಳ್ಳಿ ನಾಗರಾಜ, ಕಸಾಪ ಆಜೀವ ಸದಸ್ಯ, ಸಾಹಿತಿ – ಪತ್ರಕರ್ತ, ಬೆಂಗಳೂರು




